ಬೆಂಗಳೂರು[ಏ.30]: ಸತತ 2ನೇ ವರ್ಷ ಕಳಪೆ ಪ್ರದರ್ಶನ ತೋರಿರುವ ಆರ್‌ಸಿಬಿ, ಕೊನೆ 2 ಪಂದ್ಯಗಳಲ್ಲಾದರೂ ಗೆದ್ದು 12ನೇ ಆವೃತ್ತಿಗೆ ವಿದಾಯ ಹೇಳಲು ಕಾತರಿಸುತ್ತಿದೆ. ಆದರೆ ಆರ್‌ಸಿಬಿ ಗೆದ್ದರೆ ರಾಜಸ್ಥಾನ ರಾಯಲ್ಸ್‌ನ ಪ್ಲೇ-ಆಫ್‌ ಕನಸು ಭಗ್ನಗೊಳ್ಳಲಿದೆ. ಮಂಗಳವಾರ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಎರಡು ತಂಡಗಳು ಮುಖಾಮುಖಿಯಾಗಲಿದ್ದು, ಒಂದು ತಂಡ ಅಧಿಕೃತವಾಗಿ ಪ್ಲೇ-ಆಫ್‌ ರೇಸ್‌ನಿಂದ ಹೊರಬೀಳಲಿದೆ.

12 ಪಂದ್ಯಗಳಿಂದ 10 ಅಂಕ ಗಳಿಸಿರುವ ರಾಜಸ್ಥಾನ, 12 ಪಂದ್ಯಗಳಿಂದ 8 ಅಂಕ ಗಳಿಸಿರುವ ಆರ್‌ಸಿಬಿಗಿಂತ ಉತ್ತಮ ಸ್ಥಿತಿಯಲ್ಲಿದೆ. ಸ್ಟೀವ್‌ ಸ್ಮಿತ್‌ ಪಡೆ ಉಳಿದಿರುವ 2 ಪಂದ್ಯಗಳಲ್ಲಿ ಗೆದ್ದರೆ, 14 ಅಂಕ ತಲುಪಲಿದ್ದು, ಉತ್ತಮ ನೆಟ್‌ ರನ್‌ರೇಟ್‌ ಕಾಯ್ದುಕೊಂಡರೆ ಪ್ಲೇ-ಆಫ್‌ಗೇರಬಹುದು. ಜತೆಗೆ ಚೆನ್ನೈ ಸೂಪರ್‌ ಕಿಂಗ್ಸ್‌, ಮುಂಬೈ ಇಂಡಿಯನ್ಸ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ತಮ್ಮ ಎದುರಾಳಿಗಳನ್ನು ಸೋಲಿಸಬೇಕಿದೆ. ಆರ್‌ಸಿಬಿ ಇನ್ನುಳಿದ 2 ಪಂದ್ಯಗಳಲ್ಲೂ ಗೆದ್ದರೆ ಪ್ಲೇ-ಆಫ್‌ಗೇರುವ ಸಾಧ್ಯತೆ ತೀರಾ ಕಡಿಮೆ. ಆದರೆ ಆರ್‌ಸಿಬಿಯ ಗೆಲುವು ಪ್ಲೇ-ಆಫ್‌ ಸ್ಥಾನಕ್ಕಾಗಿ ಪೈಪೋಟಿಯಲ್ಲಿರುವ ಇನ್ನುಳಿದ ತಂಡಗಳಿಗೆ ಮಾರಕವಾಗಲಿದೆ.

RCB ಪ್ಲೇ ಆಫ್ ಕನಸು ಸಾಧ್ಯವಾಗುವುದು ಹೀಗೆ: ನಿರಾಸೆ ಬೇಡ; RCB ಅಭಿಮಾನಿಗಳಿಗಿದು ಗುಡ್ ನ್ಯೂಸ್!

ಆರ್‌ಸಿಬಿ ಇನ್ನುಳಿದ 2 ಪಂದ್ಯಗಳನ್ನು ತವರು ಮೈದಾನದಲ್ಲೇ ಆಡಲಿದ್ದು, ತಂಡದ ಇಬ್ಬರು ಸೂಪರ್‌ಸ್ಟಾರ್‌ಗಳಾದ ವಿರಾಟ್‌ ಕೊಹ್ಲಿ ಹಾಗೂ ಎಬಿ ಡಿವಿಲಿಯ​ರ್ಸ್ ಅಬ್ಬರದ ಆಟವನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ರಾಜಸ್ಥಾನದ ಪ್ರಮುಖ ಸ್ಪಿನ್ನರ್‌ ಕರ್ನಾಟಕದ ಶ್ರೇಯಸ್‌ ಗೋಪಾಲ್‌, ಮೊದಲ ಮುಖಾಮುಖಿಯಲ್ಲಿ ಕೊಹ್ಲಿ ಹಾಗೂ ಎಬಿಡಿಯನ್ನು ಕಟ್ಟಿಹಾಕಿದ್ದರು. ಬೆಂಗಳೂರು ಹುಡುಗ, ಬೆಂಗಳೂರಿನ ಪ್ರೇಕ್ಷಕರ ಮುಂದೆ ಆರ್‌ಸಿಬಿಯ ಇಬ್ಬರು ದಿಗ್ಗಜರನ್ನು ನಿಯಂತ್ರಿಸುತ್ತಾರಾ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ.

ಪಿಚ್‌ ರಿಪೋರ್ಟ್‌

ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್‌ ಬ್ಯಾಟಿಂಗ್‌ ಸ್ನೇಹಿಯಾಗಿದ್ದು, ರನ್‌ ಹೊಳೆ ಹರಿಯಲಿದೆ. ವೇಗಿಗಳಿಗೆ ತಕ್ಕಮಟ್ಟಿಗಿನ ಯಶಸ್ಸು ಸಿಗುವ ಸಾಧ್ಯತೆ ಇದೆ. ಕಳೆದೆರಡು ಪಂದ್ಯಗಳಲ್ಲಿ ಮೊದಲು ಬ್ಯಾಟ್‌ ಮಾಡಿದ ತಂಡ ಗೆದ್ದಿದ್ದು, ಟಾಸ್‌ ಪ್ರಮುಖ ಪಾತ್ರ ವಹಿಸಲಿದೆ.

ಒಟ್ಟು ಮುಖಾಮುಖಿ: 19

ಆರ್‌ಸಿಬಿ: 08

ರಾಜಸ್ಥಾನ: 10

ಸಂಭವನೀಯ ಆಟಗಾರರ ಪಟ್ಟಿ

ಆರ್‌ಸಿಬಿ: ಪಾರ್ಥೀವ್‌, ಕೊಹ್ಲಿ(ನಾಯಕ), ಡಿವಿಲಿಯರ್ಸ್, ಕ್ಲಾಸೆನ್‌, ಸ್ಟೋಯ್ನಿಸ್‌, ಗುರ್‌ಕೀರತ್‌,ದುಬೆ, ವಾಷಿಂಗ್ಟನ್‌, ಉಮೇಶ್‌, ಸೈನಿ, ಚಹಲ್‌.

ರಾಜಸ್ಥಾನ: ರಹಾನೆ, ಲಿವಿಂಗ್‌ಸ್ಟೋನ್‌, ಸ್ಯಾಮ್ಸನ್‌, ಸ್ಮಿತ್‌ (ನಾಯಕ), ಟರ್ನರ್‌, ರಿಯಾನ್‌, ಬಿನ್ನಿ, ಶ್ರೇಯಸ್‌, ಉನಾದ್ಕತ್‌, ಆರ್ಯೋನ್‌, ಥಾಮಸ್‌.