ಬೀಜಿಂಗ್ ಒಲಿಂಪಿಕ್ಸ್‌ನಿಂದ ಹಿಡಿದು, ಲಂಡನ್ ಮತ್ತು ರಿಯೊ ಒಲಿಂಪಿಕ್ಸ್ ಕೂಟದಲ್ಲಿ 100 ಹಾಗೂ 200 ಹಾಗೂ 4/100 ಮೀಟರ್ ಓಟದ ಸ್ಪರ್ಧೆಯಲ್ಲಿ ಸತತ ಚಿನ್ನದ ಪದಕ ಗೆದ್ದು ಅಸಾಮಾನ್ಯ ಅಥ್ಲೀಟ್ ಎನಿಸಿರುವ 30 ವರ್ಷದ ಬೋಲ್ಟ್, 2008 ಮತ್ತು 2013ರ ಅವಧಿಯಲ್ಲಿ ಐದು ಬಾರಿ ಐಎಎಎಫ್ ಪ್ರಶಸ್ತಿ ಪಡೆದಿದ್ದಾರೆ.

ಮೊನಾಕೊ(ಡಿ.03): ಮುಂದಿನ ವರ್ಷ ಲಂಡನ್‌ನಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಕೂಟದ ನಂತರ ವೃತ್ತಿಬದುಕಿಗೆ ವಿದಾಯ ಹೇಳಲಿರುವ ಜಮೈಕಾದ ಸ್ಟಾರ್ ಸ್ಪ್ರಿಂಟರ್ ಉಸೇನ್ ಬೋಲ್ಟ್ ಸತತ ಆರನೇ ಬಾರಿಗೆ ಇಂಟರ್‌'ನ್ಯಾಷನಲ್ ಅಸೋಸಿಯೇಷನ್ ಆಫ್ ಅಥ್ಲೆಟಿಕ್ಸ್ ಫೆಡರೇಷನ್ (ಐಎಎಎಫ್)ನ ವರ್ಷದ ಅಥ್ಲೀಟ್ ಗರಿಮೆಗೆ ಭಾಜನವಾಗಿದ್ದಾರೆ.

ಬೀಜಿಂಗ್ ಒಲಿಂಪಿಕ್ಸ್‌ನಿಂದ ಹಿಡಿದು, ಲಂಡನ್ ಮತ್ತು ರಿಯೊ ಒಲಿಂಪಿಕ್ಸ್ ಕೂಟದಲ್ಲಿ 100 ಹಾಗೂ 200 ಹಾಗೂ 4/100 ಮೀಟರ್ ಓಟದ ಸ್ಪರ್ಧೆಯಲ್ಲಿ ಸತತ ಚಿನ್ನದ ಪದಕ ಗೆದ್ದು ಅಸಾಮಾನ್ಯ ಅಥ್ಲೀಟ್ ಎನಿಸಿರುವ 30 ವರ್ಷದ ಬೋಲ್ಟ್, 2008 ಮತ್ತು 2013ರ ಅವಧಿಯಲ್ಲಿ ಐದು ಬಾರಿ ಐಎಎಎಫ್ ಪ್ರಶಸ್ತಿ ಪಡೆದಿದ್ದಾರೆ. ಶುಕ್ರವಾರ ತಡರಾತ್ರಿ ಇಲ್ಲಿನ ಸ್ಪೋರ್ಟಿಂಗ್ ಮಾಂಟೆ ಕಾರ್ಲೊನಲ್ಲಿ ನಡೆದ ಸಮಾರಂಭದಲ್ಲಿ ಬೋಲ್ಟ್‌ಗೆ ಪ್ರತಿಷ್ಠಿತ ಪ್ರಶಸ್ತಿಯನ್ನಿತ್ತು ಸನ್ಮಾನಿಸಲಾಯಿತು.

ಇನ್ನು ಮಹಿಳೆಯರ ವಿಭಾಗದಲ್ಲಿ ಅಲ್ಮಾಜ್ ಅಯಾನ ಪ್ರತಿಷ್ಠಿತ ಐಎಎಎಫ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಇಥಿಯೋಪಿಯಾದ ಅಯಾನ ರಿಯೊ ಕೂಟದ 10,000 ಮೀಟರ್ ಓಟದ ಸ್ಪರ್ಧೆಯಲ್ಲಿ ವಿಶ್ವ ದಾಖಲೆ ನಿರ್ಮಿಸುವುದರೊಂದಿಗೆ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು. ಅಯಾನ 10,000 ಮೀಟರ್ ಸ್ಪರ್ಧೆಯನ್ನು ಕೇವಲ 29:17.45 ಸೆಕೆಂಡ್'ಗಳಲ್ಲಿ ಗುರಿಮುಟ್ಟಿ ಕೂಟದ ದಾಖಲೆ ಬರೆದಿದ್ದರು.