ಬೆಂಗಳೂರು[ಅ.07] ಕಂಠೀರವ ಕ್ರೀಡಾಂಗಣದಲ್ಲಿನ ಫುಟ್ಬಾಲ್ ಮೈದಾನದಲ್ಲಿ ಇಂಡಿಯನ್ ಸೂಪರ್ ಲೀಗ್(ಐಎಸ್‌ಎಲ್) ಸೇರಿದಂತೆ ಎಲ್ಲಾ ತರಹದ ಲೀಗ್ ಗಳನ್ನು ಆಯೋಜಿಸಲು, ಬೆಂಗಳೂರು ಫುಟ್ಬಾಲ್ ಕ್ಲಬ್ (ಬಿಎಫ್‌ಸಿ) ಯಶಸ್ವಿಯಾಗಿದೆ. 

ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆ (ಕೆಎಎ) ಹಾಗೂ ಸ್ಥಳೀಯ ಅಥ್ಲೆಟಿಕ್ಸ್ ಕೋಚ್‌ಗಳ ಪ್ರಬಲ ವಿರೋಧದ ನಡುವೆಯೂ ಕಂಠೀರವ ಕ್ರೀಡಾಂಗಣದಲ್ಲಿ ಫುಟ್ಬಾಲ್ ಪಂದ್ಯಗಳನ್ನು ಆಡಿಸಲು ಜೆಎಸ್‌ಡಬ್ಲ್ಯೂ ಸಂಸ್ಥೆ ರಾಜ್ಯ ಕ್ರೀಡಾ ಇಲಾಖೆಯ ಅನುಮತಿ ಪಡೆಯಲಾಗಿದೆ ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿ ಸುವರ್ಣ ನ್ಯೂಸ್.ಕಾಂ ಸೋದರ ಸಂಸ್ಥೆ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಕಂಠೀರವದಲ್ಲಿ ಫುಟ್ಬಾಲ್‌ ವಿರೋಧಿಸಿ ಪ್ರತಿಭಟನೆ

ಮೈದಾನಕ್ಕಾಗಿ ಜೆಎಸ್‌ಡಬ್ಲ್ಯೂ ಲಾಬಿ ಕಳೆದ ಆವೃತ್ತಿಯ ಐಎಸ್‌ಎಲ್ ಟೂರ್ನಿ ನಡೆಯುವ ವೇಳೆಯೂ ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆ ಹಾಗೂ ಕೋಚ್ ಗಳು ವಿರೋಧ ವ್ಯಕ್ತಪಡಿಸಿದ್ದರು. ರಾಜ್ಯ ಸರ್ಕಾರದೊಂದಿಗೆ ಜೆಎಸ್‌ಡಬ್ಲ್ಯೂ ಹೊಂದಿದ್ದ ಗುತ್ತಿಗೆ ಮುಗಿದರೂ ಕ್ರೀಡಾಂಗಣ ಬಳಸಲು ಇಲಾಖೆಯಿಂದ ಅವಕಾಶ ಮಾಡಿಕೊಡಲಾಗಿತ್ತು. ಈ ಹಿಂದೆ ಅವಧಿ ಮುಗಿದರೂ ಜೆಎಸ್‌ಡಬ್ಲ್ಯೂ ಸಂಸ್ಥೆ 8 ತಿಂಗಳು ಹೆಚ್ಚುವರಿಯಾಗಿ ಕ್ರೀಡಾಂಗಣವನ್ನು ಬಳಸಿತ್ತು. ಬಳಿಕ ಜೆಎಸ್‌ಡಬ್ಲ್ಯೂ ಕ್ರೀಡಾಂಗಣವನ್ನು ತೊರೆದಿತ್ತು. ಆಗಿನಿಂದಲೂ ಇಲ್ಲಿಯವರೆಗೂ ಕಂಠೀರವ ಕ್ರೀಡಾಂಗಣವನ್ನು ಮತ್ತೆ ಪಡೆಯಲು ಜೆಎಸ್’ಡಬ್ಲ್ಯೂ ಸಂಸ್ಥೆ ಒಳಗೊಳಗೆ ಸ್ಥಳೀಯ ರಾಜಕೀಯ ನಾಯಕರನ್ನು ಸಂಪರ್ಕಿಸಿ ಲಾಬಿ ನಡೆಸಿದೆ.

ಪ್ರೊ ಕಬ​ಡ್ಡಿಗೆ ಕಂಠೀ​ರವ ಕ್ರೀಡಾಂಗ​ಣ ಸಿಕ್ಕಿ​ದ್ದೇಗೆ?

ಅಲ್ಲದೇ ಜೆಎಸ್‌ಡಬ್ಲ್ಯೂ ನ್ಯಾಯಾಲಯಕ್ಕೆ ಅರ್ಜಿ ಕೂಡ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ಸೆಪ್ಟೆಂಬರ್ 26 ರಂದು ನಡೆದಿದೆ. ನ್ಯಾಯಾಲಯದ ಆದೇಶದ ಪ್ರಕಾರ ಪಂದ್ಯಗಳು ನಡೆಯುವ ದಿನದಂದು ಕ್ರೀಡಾಂಗಣವನ್ನು ಜೆಎಸ್ ಡಬ್ಲ್ಯೂ ಸಂಸ್ಥೆಗೆ ನೀಡಲು ನಿರ್ಧರಿಸಲಾಗಿದೆ. ಇತರೆ ಕ್ರೀಡೆಗಳಿಗೆ ಕ್ರೀಡಾಂಗಣವನ್ನು ಬಾಡಿಗೆ ರೂಪದಲ್ಲಿ ನೀಡುವಂತೆ ಫುಟ್ಬಾಲ್‌ಗೂ ಅವಕಾಶ ಕಲ್ಪಿಸಲಾಗಿದೆ ಎಂದು ಕ್ರೀಡಾ ಇಲಾಖೆ ಜಂಟಿ ನಿದೇರ್ಶಕ ರಮೇಶ್ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಹೆಚ್ಚುವರಿ ಬಾಡಿಗೆ ನಿಗದಿ:

ಪ್ರತಿ ಪಂದ್ಯಕ್ಕೆ ₹2.5 ಲಕ್ಷ ಮೊತ್ತ, ಪಾರ್ಕಿಂಗ್, ಬ್ಯಾನರ್ ಅಳವಡಿಸಲು ಹೆಚ್ಚುವರಿ ಹಣವನ್ನು ನಿಗದಿಪಡಿಸಲಾಗಿದೆ. ಪಂದ್ಯ ನಡೆಯುವ ದಿನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಈ ಹಿಂದೆ ಇದ್ದ ಹಾಗೆ ಒಪ್ಪಂದ ಮಾಡಿಕೊಂಡಿಲ್ಲ ಎಂದು ಮೂಲಗಳಿಂದ ತಿಳಿದು ಬಂದಿದೆ. ಕಂಠೀರವದ ಹೊರಾಂಗಣ ಕ್ರೀಡಾಂಗಣದಲ್ಲಿ ಫುಟ್ಬಾಲ್ ನಡೆಸಲು ಅವಕಾಶ ನೀಡಬಾರದು ಎಂದು ಅಥ್ಲೆಟಿಕ್ಸ್ ಸಂಸ್ಥೆ ಹಾಗೂ ಸ್ಥಳೀಯ ಅಥ್ಲೆಟಿಕ್ಸ್ ಕೋಚ್‌ಗಳು ನ್ಯಾಯಾಲಯದ ಮೊರೆ ಹೋಗಿದ್ದರು. ರಾಜ್ಯಾದ್ಯಂತ ಜಯ ಕರ್ನಾಟಕ ಸಂಘಟನೆ ಜತೆ ಸೇರಿ ಪ್ರತಿಭಟನೆಯನ್ನು ನಡೆಸಿ ವಿರೋಧ ವ್ಯಕ್ತಪಡಿಸಿದ್ದರು.

ಐಎಸ್‌ಎಲ್ ವೇಳಾಪಟ್ಟಿ ಬಿಡುಗಡೆಯಾದ ಸಂದರ್ಭದಲ್ಲಿ ಜೆಎಸ್‌ಡಬ್ಲ್ಯೂ ಪುಣೆಯ ಶಿವ ಛತ್ರಪತಿ ಕ್ರೀಡಾಂಗಣವನ್ನು ತವರು ಕ್ರೀಡಾಂಗಣವನ್ನಾಗಿ ಘೋಷಿಸಿಕೊಂಡಿತ್ತು. ಆದರೂ ಕಂಠೀರವ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ಆಡಿಸುವ ಪ್ರಯತ್ನ ಮಾತ್ರ ನಿಲ್ಲಿಸಿರಲಿಲ್ಲ. ಈ ವೇಳೆಯಲ್ಲಿ ಅಥ್ಲೆಟಿಕ್ಸ್ ಸಂಸ್ಥೆ ಹಾಗೂ ಕೋಚ್‌ಗಳು ನಿರಾಳರಾಗಿದ್ದರು. ಪ್ರತಿಭಟನೆಗೆ ಸಂದ ಜಯ ಎಂದೇ ಬೀಗಿದ್ದರು. ಆದರೆ ಇದೀಗ ಕಂಠೀರವ ಕ್ರೀಡಾಂಗಣಕ್ಕೆ ಮತ್ತೆ ಫುಟ್ಬಾಲ್ ಕಾಲಿಟ್ಟಿರುವುದರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಕೋಚ್‌ಗಳಿಂದ ವಿರೋಧ

ನ. 4 ರಂದು ಕಿರಿಯರ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಇದೆ. ಅ.28 ರಿಂದ ಅಂತರ ಜಿಲ್ಲಾ ರಾಷ್ಟ್ರೀಯ ಅಥ್ಲೆಟಿಕ್ಸ್ ಕೂಟ ನಡೆಯಲಿದೆ. ಶೀಘ್ರದಲ್ಲೇ ಆಲ್ ಇಂಡಿಯಾ ವಿಶ್ವ ವಿದ್ಯಾಲಯ ಅಥ್ಲೆಟಿಕ್ಸ್ ಕೂಟ ಇದೆ. ಈ ಎಲ್ಲಾ ಕೂಟಗಳಿಗೆ ಕ್ರೀಡಾಪಟುಗಳು ಅಭ್ಯಾಸ ನಡೆಸಲು ಕಂಠೀರವ ಕ್ರೀಡಾಂಗಣವನ್ನು ನೆಚ್ಚಿಕೊಳ್ಳಲಾಗಿದೆ. ಯಾವುದೇ ಕಾರಣಕ್ಕೂ ಕಂಠೀರವ ಕ್ರೀಡಾಂಗಣದಲ್ಲಿ ಫುಟ್ಬಾಲ್‌ಗೆ ಅವಕಾಶ ನೀಡಲು ಬಿಡುವುದಿಲ್ಲ ಎಂದು ಕ್ರೀಡಾ ಇಲಾಖೆಯ ನಿರ್ಧಾರ ನೋವು ತಂದಿದೆ. ಈ ಸಂಬಂಧ ಇತರ ಕೋಚ್‌ಗಳು ಹಾಗೂ ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆ ಪದಾಧಿಕಾರಿಗಳ ಜೊತೆ ಚರ್ಚಿಸಿ ಶೀಘ್ರ ನಿರ್ಧಾರಕ್ಕೆ ಬರಲಿದ್ದೇವೆ ಎಂದು ಅಥ್ಲೆಟಿಕ್ಸ್ ಕೋಚ್ ರಮೇಶ್ ಹೇಳಿದರು

ವರದಿ: ಧನಂಜಯ್ ಎಸ್. ಹಕಾರಿ