ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಪ್ಯಾರಾ ಅಥ್ಲೀಟ್‌ ಶರ್ಮಿಳಾ ಧನ್ಕರ್, ಮಹಿಳೆಯರ ಶಾಟ್‌ಪುಟ್‌ ಎಫ್‌57 ವಿಭಾಗದಲ್ಲಿ ಚಾಂಪಿಯನ್‌ ಆಗಿದ್ದಾರೆ. ಪೋಲಿಯೋ, ಕೌಟುಂಬಿಕ ದೌರ್ಜನ್ಯದಂತಹ ಅನೇಕ ಸಂಕಷ್ಟಗಳನ್ನು ಎದುರಿಸಿದ ಅವರು, ಕ್ರೀಡೆಯ ಮೂಲಕ ತಮ್ಮ ಬದುಕನ್ನು ಮರುರೂಪಿಸಿಕೊಂಡು ಸ್ಪೂರ್ತಿದಾಯಕ ಸಾಧನೆ ಮಾಡಿದ್ದಾರೆ.

ಗ್ಲಾಸ್ಗೋ: ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಪ್ಯಾರಾ ಅಥ್ಲೀಟ್‌ ಎಂಬ ಖ್ಯಾತಿಗೆ ಶರ್ಮಿಳಾ ಧನ್ಕರ್ ಪಾತ್ರರಾಗಿದ್ದಾರೆ. ಅವರು ಮಹಿಳೆಯರ ಶಾಟ್‌ಪುಟ್‌ ಎಫ್‌57 ವಿಭಾಗದಲ್ಲಿ 9.81 ಮೀ. ದೂರ ದಾಖಲಿಸಿ ಚಾಂಪಿಯನ್‌ ಆದರು. ಇದೇ ಸ್ಪರ್ಧೆಯಲ್ಲಿ ಕರ್ನಾಟಕದ ಶಿಲ್ಪಾಗೆ ಕಂಚು ಲಭಿಸಿತು.

ಶರ್ಮಿಳಾ ಬದುಕಿನ ದುರಂತ ಅಧ್ಯಾಯ

ಶರ್ಮಿಳಾ ಅವರು ಪದಕ ಗೆದ್ದು ಪೋಡಿಯಂ ಮೇಲೆ ನಗುತ್ತಾ ನಿಂತಿದ್ದರೂ, ಅವರ ಬದುಕಿನ ಪುಟ ತಿರುವಿದರೆ ಅಲ್ಲೆಲ್ಲಾ ಕಾಣ ಸಿಗುವುದು ದುರಂತ ಅಧ್ಯಾಯಗಳು ಮಾತ್ರ. ಹರ್ಯಾಣದ ಶರ್ಮಿಳಾ 2ನೇ ವಯಸ್ಸಿನಲ್ಲೇ ಪೋಲಿಯೋಗೆ ತುತ್ತಾಗಿ ಕಾಲಿನ ಬಲ ಕಳೆದುಕೊಂಡಿದ್ದರು. ಆದರೆ ಕಲಿಕೆಯಲ್ಲಿ ಮುಂದಿದ್ದರು. ಪ್ರತಿ ಒಂದು ರುಪಾಯಿಗೂ ಕಷ್ಟ ಪಡುತ್ತಿದ್ದ ಕುಟುಂಬದ ಕುಡಿ ಶರ್ಮಿಳಾರನ್ನು ಅವರ 19ನೇ ವಯಸ್ಸಿನಲ್ಲಿ, ಅವರಿಗಿಂತ 20 ವರ್ಷ ಹೆಚ್ಚು ಪ್ರಾಯದವನ ಜೊತೆ ಮದುವೆ ಮಾಡಿಸಲಾಗಿತ್ತು. ಆದರೆ ಅಲ್ಲಿ ಆಕೆಗೆ ಮತ್ತಷ್ಟು ಆಘಾತ ಕಾದಿತ್ತು.

ಕುಡಿತದ ಚಟ ಹೊಂದಿದ್ದ ಗಂಡ, ಶರ್ಮಿಳಾಗೆ ಕೊಟ್ಟ ಕಾಟ ಅಷ್ಟಿಷ್ಟಲ್ಲ. ಹುಟ್ಟಿದ ಇಬ್ಬರೂ ಮಕ್ಕಳು ಹೆಣ್ಣಾಗಿದ್ದಕ್ಕೆ ಶರ್ಮಿಳಾಗೆ ದೈಹಿಕವಾಗಿ ಹಲ್ಲೆ ನಡೆಸುತ್ತಿದ್ದ. ಈ ಬಗ್ಗೆ ಇತ್ತೀಚೆಗೆ ಮಾತನಾಡಿದ್ದ ಶರ್ಮಿಳಾ, ‘ನನ್ನ ಪತಿ ಪ್ರತಿದಿನ ಹೊಡೆಯುತ್ತಿದ್ದರು. ಒಂದು ದಿನ ರಾತ್ರಿ 11 ಗಂಟೆಯಿಂದ 3ರ ವರೆಗೆ ನಿರಂತರವಾಗಿ ಹಲ್ಲೆ ಮಾಡಿದ್ದರು. ಮಧ್ಯರಾತ್ರಿ ನನ್ನನ್ನು ನಗ್ನವಾಗಿ, ಇಬ್ಬರು ಮಕ್ಕಳ ಜೊತೆ ಮನೆಯಿಂದ ಹೊರಹಾಕಿದ್ದರು. ನೆರೆಹೊರೆಯವರು ನನ್ನನ್ನು ಹೊದಿಕೆಯಲ್ಲಿ ಸುತ್ತಿದರು. ಬಳಿಕ ನನ್ನ ಪೋಷಕರು ಬಂದು ನಮ್ಮನ್ನು ಕರೆದೊಯ್ದರು. ಆ ಬಳಿಕ ನಾನು ಗಂಡನ ಮನೆಗೆ ಹೋಗಿಲ್ಲ’ ಎಂದಿದ್ದಾರೆ. 

ಅದಾಗಿ ಕೆಲ ವರ್ಷದ ಬಳಿಕ ಬೇರೊಂದು ಮದುವೆ ಆದ ಬಳಿಕ ಶರ್ಮಿಳಾ ಬದುಕು ಬದಲಾಗಿದೆ. ‘ನನ್ನ 2ನೇ ಗಂಡ ನನ್ನನ್ನು ಕ್ರೀಡೆಯತ್ತ ಕರೆತಂದರು. ಅವರಲ್ಲಿರುವ ಎಲ್ಲವನ್ನೂ ನನಗಾಗಿ ಕೊಟ್ಟರು. ಕ್ರೀಡೆಯ ಮೂಲಕ ನನಗೆ ಪುನರ್ಜನ್ಮ ಸಿಕ್ಕಿತು’ ಎಂದು ಅವರು ಭಾವುಕರಾಗಿದ್ದಾರೆ.

2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಜಸ್ಟ್‌ ಮಿಸ್

2022ರ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ 4ನೇ ಸ್ಥಾನಿಯಾಗಿದ್ದ ಶರ್ಮಿಳಾ ಅವರು ಈ ಬಾರಿ ಪದಕ ತಪ್ಪಿಸಿಕೊಳ್ಳಲಿಲ್ಲ. ಅವರ ಇಬ್ಬರು ಮಕ್ಕಳೂ ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದು, 2030ರ ಕಾಮನ್‌ವೆಲ್ತ್‌ನಲ್ಲಿ ಮೂವರೂ ಒಟ್ಟಾಗಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಒಲಿಂಪಿಕ್ಸ್‌ವರೆಗೂ ಸ್ವೀಟ್ಸ್, ಚಾಕಲೇಟ್‌ ತಿನ್ನಲ್ಲ: ಹಾಕಿ ತಂಡದ ನಾಯಕಿ ಸವಿತಾ

ನವದೆಹಲಿ: ಮುಂಬರುವ ವಿಶ್ವಕಪ್‌ ಹಾಗೂ ಏಷ್ಯನ್‌ ಗೇಮ್ಸ್‌ಗೆ ಸಿದ್ಧಗೊಳ್ಳುತ್ತಿರುವ ಭಾರತ ಮಹಿಳಾ ಹಾಕಿ ತಂಡ, ಅದರ ಜೊತೆಗೆ 2028ರ ಒಲಿಂಪಿಕ್ಸ್‌ ಮೇಲೂ ಕಣ್ಣಿಟ್ಟಿದೆ. ಇದಕ್ಕಾಗಿ ಆಹಾರ ಪದ್ಧತಿಯಲ್ಲಿ ಶಿಸ್ತು ಪಾಲಿಸಲು ನಿರ್ಧರಿಸಿದೆ. ಈ ಬಗ್ಗೆ ಮಾತನಾಡಿರುವ ತಂಡದ ನಾಯಕಿ ಸವಿತಾ ಪೂನಿಯಾ, ‘ಒಲಿಂಪಿಕ್ಸ್‌ವರೆಗೆ ಸ್ವೀಟ್ಸ್‌, ಚಾಕಲೇಟ್‌, ಫಾಸ್ಟ್‌ಫುಟ್‌ ತಿನ್ನದಿರಲು ನಿರ್ಧರಿಸಿದ್ದೇವೆ. ಇತ್ತೀಚೆಗೆ ನೇಷನ್ಸ್‌ ಕಪ್‌ನಲ್ಲಿ ಗೆದ್ದ ಬಳಿಕ ಹೋಟಲ್ ಕೋಣೆಗೆ ಕೇಕ್‌ ತರಲಾಗಿತ್ತು. ಆದರೆ ನಮ್ಮಲ್ಲಿ ಯಾರೂ ತಿಂದಿಲ್ಲ’ ಎಂದಿದ್ದಾರೆ.