ನವದೆಹಲಿ(ಜು.31): ಭಾರತ ಕ್ರಿಕೆಟ್‌ ತಂಡದ ಪ್ರತಿಭಾನ್ವಿತ ಆರಂಭಿಕ ಆಟಗಾರ ಪೃಥ್ವಿ ಶಾ ಡೋಪಿಂಗ್‌ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಹಿನ್ನೆಲೆಯಲ್ಲಿ 8 ತಿಂಗಳ ಅವಧಿಗೆ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ಅವರನ್ನು ನಿಷೇಧಿಸಲಾಗಿದೆ ಎಂದು ಮಂಗಳವಾರ ಬಿಸಿಸಿಐ ತಿಳಿಸಿದೆ. ತಿಳಿಯದೇ ತಪ್ಪಾಗಿದೆ. ಬಿಸಿಸಿಐ ನಿರ್ಧಾರವನ್ನು ಗೌರವಿಸುತ್ತೇನೆ ಎಂದು ಪೃಥ್ವಿ ಶಾ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ಕಾಶ್ಮೀರದಲ್ಲಿ ಇಂದಿನಿಂದ ಗಸ್ತು ತಿರುಗಲಿದ್ದಾರೆ ಕ್ರಿಕೆಟಿಗ ಧೋನಿ!

19 ವರ್ಷ ಮುಂಬೈ ಆಟಗಾರ ಭಾರತ ಪರ 2 ಟೆಸ್ಟ್‌ ಪಂದ್ಯಗಳನ್ನು ಆಡಿದ್ದು, ಸದ್ಯ ಸೊಂಟದ ಗಾಯದಿಂದ ಬಳಲುತ್ತಿದ್ದು ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿ ವೇಳೆ ನಿಷೇಧಿತ ಟೆರ್ಬುಟಾಲಿನ್‌ ಅಂಶವುಳ್ಳ ಕೆಮ್ಮಿನ ಸಿರಪ್‌ ಸೇವಿಸಿದ್ದು ಪರೀಕ್ಷೆ ವೇಳೆ ದೃಢಪಟ್ಟಿದೆ. ಉದ್ದೇಶಪೂರ್ವಕವಾಗಿ ಅವರು ನಿಷೇಧಿತ ಮದ್ದು ಸೇವಿಸಿಲ್ಲ ಎನ್ನುವುದು ವಿಚಾರಣೆ ವೇಳೆ ಸಾಬೀತಾದ ಕಾರಣ, ಕೇವಲ 8 ತಿಂಗಳ ಅವಧಿಗೆ ಅವರನ್ನು ನಿಷೇಧಿಸಲಾಗಿದೆ ಎಂದು ಬಿಸಿಸಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಪೃಥ್ವಿ ಜತೆ ಇನ್ನೂ ಇಬ್ಬರು ದೇಸಿ ಕ್ರಿಕೆಟಿಗರನ್ನು ನಿಷೇಧಿತ ಮದ್ದು ಸೇವನೆ ಪ್ರಕರಣದಲ್ಲಿ ಬಿಸಿಸಿಐ ನಿಷೇಧಕ್ಕೊಳಪಡಿಸಿದೆ. ವಿದರ್ಭದ ಅಕ್ಷಯ್‌ ದುಲ್ಲಾರ್‌ವರ್‌ ಹಾಗೂ ರಾಜಸ್ಥಾನದ ದಿವ್ಯಾ ಗಜರಾತ್‌ ನಿಷೇಧಗೊಂಡಿರುವ ಆಟಗಾರರು.

ಪೃಥ್ವಿ ನಿಷೇಧ ಅವಧಿ ಮಾ.16ರಿಂದಲೇ ಆರಂಭಗೊಂಡಿದ್ದು ನವೆಂಬರ್‌ 15ಕ್ಕೆ ಮುಕ್ತಾಯಗೊಳ್ಳಲಿದೆ. ಆ ವರೆಗೂ ಅವರು ಕ್ರಿಕೆಟ್‌ ಚಟುವಟಿಕೆಯಿಂದ ದೂರ ಉಳಿಯಬೇಕಿದೆ. ಇದರೊಂದಿಗೆ ತವರಿನಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ಹಾಗೂ ಬಾಂಗ್ಲಾದೇಶ ವಿರುದ್ಧದ ಸರಣಿಗೆ ಶಾ ಅಲಭ್ಯರಾಗಲಿದ್ದಾರೆ.

ಆಗಿದ್ದೇನು?
ಕಳೆದ ವರ್ಷ ಡಿಸೆಂಬರ್‌ನಲ್ಲಿ ಭಾರತದ ಆಸ್ಪ್ರೇಲಿಯಾ ಪ್ರವಾಸದ ವೇಳೆ ಅಭ್ಯಾಸ ಪಂದ್ಯದಲ್ಲಿ ಪೃಥ್ವಿ ಗಾಯಗೊಂಡಿದ್ದರು. ತವರಿಗೆ ವಾಪಸಾದ ಬಳಿಕ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡು ಚೇತರಿಕೆ ಕಂಡಿದ್ದ ಪೃಥ್ವಿ, ಮುಂಬೈ ಪರ ಮುಷ್ತಾಕ್‌ ಅಲಿ ಟಿ20 ಟೂರ್ನಿಯಲ್ಲಿ ಆಡುವ ಮೂಲಕ ಕ್ರಿಕೆಟ್‌ಗೆ ವಾಪಸಾಗಲು ಬಯಸಿದ್ದರು. ಜತೆಗೆ ಐಪಿಎಲ್‌ ವೇಳೆಗೆ ಸಂಪೂರ್ಣ ಗುಣಮುಖರಾಗುವ ಗುರಿ ಹೊಂದಿದ್ದರು. ಮುಷ್ತಾಕ್‌ ಅಲಿ ಟೂರ್ನಿಯಲ್ಲಿ ಆಡಲು ಇಂದೋರ್‌ಗೆ ತೆರಳಿದ ಬಳಿಕ ಕೆಮ್ಮು ಕಾಣಿಸಿಕೊಂಡ ಕಾರಣ ತಂದೆಗೆ ಕರೆ ಮಾಡಿದ್ದಾರೆ. ತಂದೆಯ ಸಲಹೆಯಂತೆ ತಾವು ಉಳಿದುಕೊಂಡಿದ್ದ ಹೋಟೆಲ್‌ ಸಮೀಪದಲ್ಲಿದ್ದ ಔಷಧಿ ಅಂಗಡಿಗೆ ತೆರಳಿ ಕೆಮ್ಮಿಗೆ ಸಿರಪ್‌ ಪಡೆದಿದ್ದಾರೆ. ಫೆ.21ರಂದು ಸಿಕ್ಕಿಂ ವಿರುದ್ಧ ಪೃಥ್ವಿ ಮೊದಲ ಪಂದ್ಯವನ್ನಾಡಿದ್ದರು. ಮರು ದಿನ ಅವರನ್ನು ಡೋಪಿಂಗ್‌ ಪರೀಕ್ಷೆಗೆ ಒಳಪಡಿಸಲಾಗಿತ್ತು. ಪರೀಕ್ಷೆ ಸಮಯದಲ್ಲಿ ಕಳೆದ 7 ದಿನಗಳಲ್ಲಿ ತಾವು ‘ಆ್ಯಂಟಿಬಯೋಟಿಕ್ಸ್‌’ ಸೇವಿಸಿರುವುದಾಗಿ ಅವರು ತಿಳಿಸಿದ್ದರು.

ಏನಿದು ಟೆರ್ಬುಟಾಲಿನ್‌?
ಟೆರ್ಬುಟಾಲಿನ್‌ ಶ್ವಾಸನಾಳ ತೊಂದರೆ, ಕೆಮ್ಮು ಗುಣಪಡಿಸಲು ಸೇವಿಸುವ ಔಷಧಿ. ಈ ಔಷಧಿ ಸೇವನೆಯಿಂದ ಉಸಿರಾಟದ ಸಮಸ್ಯೆ ಬಗೆಹರಿಯುತ್ತದೆ. ಟೆರ್ಬುಟಾಲಿನ್‌ ಅನ್ನು ವಿಶ್ವ ಉದ್ದೀಪನ ಮದ್ದು ಸೇವನೆ ನಿಗ್ರಹ ಘಟಕ (ವಾಡಾ) ನಿಷೇಧಿತ ಮದ್ದುಗಳ ಪಟ್ಟಿಗೆ ಸೇರಿಸಿದೆ.

ತಾವು ಸೇವಿಸಿದ ಸಿರಪ್‌ನಲ್ಲಿ ನಿಷೇಧಿತ ಟೆರ್ಬುಟಾಲಿನ್‌ ಅಂಶವಿದೆ ಎನ್ನುವುದು ತಮಗೆ ತಿಳಿದಿರಲಿಲ್ಲ ಎಂದು ಪೃಥ್ವಿ ಬಿಸಿಸಿಐನ ಡೋಪಿಂಗ್‌ ವಿರೋಧಿ ಘಟಕದ ಅಧಿಕಾರಿಗಳು ನಡೆಸಿದ ತನಿಖೆ ವೇಳೆ ಒಪ್ಪಿಕೊಂಡಿದ್ದಾರೆ. ಸಿರಪ್‌ ಸೇವನೆಯಿಂದಲೇ ಅವರ ದೇಹದಲ್ಲಿ ಟೆರ್ಬುಟಾಲಿನ್‌ ಸೇರಿದ್ದು, ಉದೇಶಪೂರ್ವಕವಾಗಿ ಸೇವಿಸಿರುವುದಲ್ಲ ಎನ್ನುವುದು ದೃಢಪಟ್ಟಿದ್ದರಿಂದ ಪೃಥ್ವಿಗೆ ಕೇವಲ 8 ತಿಂಗಳ ನಿಷೇಧ ಹೇರಲಾಗಿದೆ. ಒಂದೊಮ್ಮೆ ಉದ್ದೇಶಪೂರ್ವಕವಾಗಿ ಸೇವಿಸಿದ್ದಾರೆ ಎನ್ನುವುದು ಖಚಿತವಾಗಿದ್ದರೆ 2ರಿಂದ 4 ವರ್ಷಗಳ ನಿಷೇಧ ಶಿಕ್ಷೆಗೆ ಗುರಿಯಾಗಬೇಕಿತ್ತು.

ಚೊಚ್ಚಲ ಟೆಸ್ಟ್‌ನಲ್ಲೇ ಶತಕ ಬಾರಿಸಿದ್ದ ‘ರನ್‌ ಮಷಿನ್‌’!
sಶಾಲಾ ಕ್ರಿಕೆಟ್‌ ದಿನಗಳಿಂದಲೇ ಭಾರೀ ಸದ್ದು ಮಾಡುತ್ತಿದ್ದ ಪೃಥ್ವಿ 14 ವರ್ಷವಿದ್ದಾಗ 546 ರನ್‌ ಗಳಿಸಿ ಗಮನ ಸೆಳೆದಿದ್ದರು. 2016ರಲ್ಲಿ ಕಿರಿಯರ ಏಷ್ಯಾ ಕಪ್‌ ಗೆದ್ದ ಭಾರತ ಅಂಡರ್‌-19 ತಂಡದಲ್ಲಿದ್ದ ಪೃಥ್ವಿ, 2017ರಲ್ಲಿ ಮುಂಬೈ ರಣಜಿ ತಂಡದಲ್ಲಿ ಸ್ಥಾನ ಪಡೆದು, ಚೊಚ್ಚಲ ಪಂದ್ಯದಲ್ಲೇ ಶತಕ ಬಾರಿಸಿದ್ದರು. 2017ರ ನವೆಂಬರ್‌ನಲ್ಲಿ 17 ವರ್ಷದ ಪೃಥ್ವಿ ತಮ್ಮ ಚೊಚ್ಚಲ ದುಲೀಪ್‌ ಟ್ರೋಫಿ ಪಂದ್ಯದಲ್ಲೇ ಶತಕ ಸಿಡಿಸಿ, ಸಚಿನ್‌ ದಾಖಲೆ ಮುರಿದಿದ್ದರು. 2018ರ ಅಂಡರ್‌-19 ವಿಶ್ವಕಪ್‌ ಗೆದ್ದ ಭಾರತ ತಂಡದ ನಾಯಕರಾಗಿದ್ದ ಪೃಥ್ವಿ, ಅಕ್ಟೋಬರ್‌ನಲ್ಲಿ ಭಾರತ ಟೆಸ್ಟ್‌ ತಂಡಕ್ಕೆ ಕಾಲಿಟ್ಟರು. ವಿಂಡೀಸ್‌ ವಿರುದ್ಧ ರಾಜ್‌ಕೋಟ್‌ನಲ್ಲಿ ನಡೆದ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲೇ ಶತಕ ಬಾರಿಸಿ ದಾಖಲೆ ಬರೆದರು.

ಸಣ್ಣ ವಯಸ್ಸಿನಲ್ಲೇ ಹಲವು ಸಾಧನೆಗಳನ್ನು ಮಾಡಿದ ಪೃಥ್ವಿ ವೃತ್ತಿಬದುಕಿನ ಮೇಲೆ ಕಪ್ಪು ಚುಕ್ಕೆ ಬಿದ್ದಿದೆ. ಪ್ರತಿಭಾನ್ವಿತ ಆಟಗಾರನಿಂದ ಆದ ಸಣ್ಣ ತಪ್ಪಿಗೆ ಬಿಸಿಸಿಐ ಕಠಿಣ ಕ್ರಮ ಕೈಗೊಂಡಿದೆ. ಪೃಥ್ವಿ ಪ್ರಕರಣ ಯುವ ಕ್ರಿಕೆಟಿಗರಿಗೆ ಮಾದರಿಯಾಗಲಿದೆ.