ಕಾಶ್ಮೀರದಲ್ಲಿ ಇಂದಿನಿಂದ ಗಸ್ತು ತಿರುಗಲಿದ್ದಾರೆ ಕ್ರಿಕೆಟಿಗ ಧೋನಿ!
ಅರೆಸೇನಾ ಪಡೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಗೌರವ ಹುದ್ದೆ ಹೊಂದಿರುವ ಭಾರತೀಯ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ| ಕಾಶ್ಮೀರದಲ್ಲಿ ಇಂದಿನಿಂದ ಕ್ರಿಕೆಟಿಗ ಧೋನಿ ಪಹರೆ
ನವದೆಹಲಿ[ಜು.31]: ಅರೆಸೇನಾ ಪಡೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಗೌರವ ಹುದ್ದೆ ಹೊಂದಿರುವ ಭಾರತೀಯ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರು ಬುಧವಾರದಿಂದ ಜಮ್ಮು-ಕಾಶ್ಮೀರದಲ್ಲಿ ಪಹರೆ ಮಾಡುವ ಜವಾಬ್ದಾರಿ ನಿರ್ವಹಿಸಲಿದ್ದಾರೆ.
ಕಾಶ್ಮೀರದಲ್ಲಿ ಸೇವೆ ಸಲ್ಲಿಸುವ ಅವಕಾಶ ಕೋರಿದ್ದ ಧೋನಿ ಬೇಡಿಕೆಯನ್ನು ಇತ್ತೀಚೆಗಷ್ಟೇ ಮಾನ್ಯ ಮಾಡಿದ್ದ ಭಾರತೀಯ ಸೇನೆ, ಧೋನಿಯನ್ನು ಜುಲೈ 31ರಿಂದ ಆ.15ವರೆಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಕರ್ತವ್ಯಕ್ಕೆ ನಿಯೋಜಿಸಿತ್ತು. ಹೀಗಾಗಿ ಮುಂದಿನ 15 ದಿನಗಳ ಅವಧಿಯಲ್ಲಿ ಧೋನಿ ಅರೆಸೇನಾಪಡೆಯ ವಿಕ್ಟರ್ ಫೆäರ್‍ಸ್ನೊಂದಿಗೆ ಗಸ್ತು ತಿರುಗುವುದು, ಪಹರೆ ವಹಿಸುವುದನ್ನು ಮಾಡಲಿದ್ದಾರೆ. ಈ ಪಡೆಯ ಸೈನಿಕರ ಜೊತೆಜೊತೆಗೇ ಇದ್ದು, ಅವರು ನಿರ್ವಹಿಸುವ ಎಲ್ಲಾ ಕೆಲಸಗಳನ್ನೂ ಮಾಡಲಿದ್ದಾರೆ. ಧೋನಿಯನ್ನು 2011 ರಲ್ಲಿ ಗೌರವ ಲೆಫ್ಟಿನೆಂಟ್ ಕರ್ನಲ್ ಆಗಿ ನೇಮಕಗೊಳಿಸಲಾಗಿತ್ತು.
2015ರಲ್ಲಿ ಧೋನಿ ಆಗ್ರಾದಲ್ಲಿ ಪ್ಯಾರಾಚೂಟ್ ತರಬೇತಿ ಕೇಂದ್ರದಲ್ಲಿ 5 ತರಬೇತಿ ಪೂರ್ಣಗೊಳಿಸುವ ಮೂಲಕ ಅರ್ಹತೆ ಪಡೆದ ಪ್ಯಾರಾಟ್ರೂಪರ್ ಆಗಿ ಹೊರಹೊಮ್ಮಿದ್ದರು.