ಮುಂಬೈ(ಸೆ.07): ವಿಶ್ವಕಪ್ ಟೂರ್ನಿ ಬಳಿಕ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಟೈಮ್ ಸರಿಯಾಗಿಲ್ಲ. ಟೀಂ ಇಂಡಿಯಾದಲ್ಲಿ ಅವಕಾಶ ಸಿಗುತ್ತಿಲ್ಲ. ವೆಸ್ಟ್ ಇಂಡೀಸ್ ಪ್ರವಾಸದಿಂದ ದೂರ ಉಳಿದ ಕಾರ್ತಿಕ್, ಸೌತ್ ಆಫ್ರಿಕಾ ಸರಣಿಗೂ ಆಯ್ಕೆಯಾಗಿಲ್ಲ. ಇದರ ನಡುವೆ ಸದ್ದಿಲ್ಲದೆ ಕೆರಿಬಿಯನ್ ಪ್ರಿಮಿಯರ್ ಲೀಗ್ ಜೊತೆ ಕಾಣಿಸಿಕೊಂಡ ದಿನೇಶ್ ಕಾರ್ತಿಕ್‌ಗೆ ಇದೀಗ ಬಿಸಿಸಿಐ ಶೋಕಾಸ್ ನೊಟೀಸ್ ನೀಡಿದೆ. ಇದು ಕಾರ್ತಿಕ್‌ಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಇದನ್ನೂ ಓದಿ: ಮೊದಲ ವಿಶ್ವಕಪ್ ಪಂದ್ಯಕ್ಕಾಗಿ 15 ವರ್ಷ ಕಾದ ದಿನೇಶ್ ಕಾರ್ತಿಕ್!

ಐಪಿಎಲ್ ಟೂರ್ನಿಯಲ್ಲಿ ದಿನೇಶ್ ಕಾರ್ತಿಕ್, ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕ. ಬಾಲಿವುಡ್ ನಟ ಶಾರೂಖ್ ಖಾನ್ ಮಾಲೀಕತ್ವದ ಕೆಕೆಆರ್ ಫ್ರಾಂಚೈಸಿ, ಕೆರಿಬಿಯನ್ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಟ್ರಿನಿಬ್ಯಾಗೋ ನೈಟ್ ರೈಡರ್ಸ್ ತಂಡದ ಮಾಲೀಕತ್ವವನ್ನೂ ಹೊಂದಿದೆ. ಹೀಗಾಗಿ ದಿನೇಶ್ ಕಾರ್ತಿಕ್, ಕೆರಿಬಿಯನ್ ಪ್ರಮಿಯರ್ ಲೀಗ್ ಟೂರ್ನಿ ವೇಳೆ ಟ್ರಿನಿಬ್ಯಾಗ್ ನೈಟ್ ರೈಡರ್ಸ್ ತಂಡದ ಜೊತೆ ಕಾಣಿಸಿಕೊಂಡಿದ್ದಾರೆ. ಬ್ರೆಂಡನ್ ಮೆಕಲಂ ಜೊತೆ ಟ್ರಿನಿಬ್ಯಾಗೋ ತಂಡದ ಜರ್ಸಿ ಹಾಕಿಕೊಂಡ ಫೋಟೋ ವೈರಲ್ ಆಗಿದೆ.

ಇದನ್ನೂ ಓದಿ: ಧೋನಿ ನಾನು ಕಲಿಯುತ್ತಿರುವ ಕಾಲೇಜಿನ ಟಾಪರ್

ಟ್ರಿನಿಬ್ಯಾಗ್ ತಂಡದ ಡ್ರೆಸ್ಸಿಂಗ್ ರೂಂನಲ್ಲಿ ಕಾಣಿಸಿಕೊಳ್ಳೋ ಮೂಲಕ ಕಾರ್ತಿಕ್ ಬಿಸಿಸಿಐ ಪ್ರೊಟೊಕಾಲ್ ಉಲ್ಲಂಘಿಸಿದ್ದಾರೆ. ಈ ಕುರಿತು ವಿವರಣೆ ಕೇಳಿರುವ ಬಿಸಿಸಿಐ ನೊಟೀಸ್ ನೀಡಿದೆ. ಈಗಾಗಲೇ ಟೀಂ ಇಂಡಿಯಾದಿಂದ ಹೊರಬಿದ್ದಿರುವ ಕಾರ್ತಿಕ್‌ಗೆ ಇದೀಗ ನೊಟೀಸ್ ಮತ್ತಷ್ಟು  ಸಂಕಷ್ಟ ತರಲಿದೆ.