ಕ್ರಿಕೆಟಿಗರ ಸಂಸ್ಥೆ ನೋಂದಣಿ- ಇನ್ಮುಂದೆ ಬಿಸಿಸಿಐ ನಿರ್ಧಾರಗಳಲ್ಲಿ ಕ್ರಿಕೆಟಿಗರು ಭಾಗಿ!
ಬಿಸಿಸಿಐ ಪ್ರಮುಖ ನಿರ್ಧಾರಗಳಲ್ಲಿ ಇನ್ಮುಂದೆ ಕ್ರಿಕೆಟಿಗರು ಪಾಲುದಾರರಾಗಲಿದ್ದಾರೆ. ಇದಕ್ಕಾಗಿ ಭಾರತೀಯ ಕ್ರಿಕೆಟಿಗರ ಸಂಸ್ಥೆ ನೋಂದಣಿಗೆ ಅರ್ಜಿ ಹಾಕಲಾಗಿದೆ. ನೂತನ ಕ್ರಿಕೆಟ್ ಸಂಸ್ಥೆ ಕುರಿತು ಹೆಚ್ಚಿನ ವಿವರ ಇಲ್ಲಿದೆ.
ನವದೆಹಲಿ(ಮೇ.09): ಭಾರತೀಯ ಕ್ರಿಕೆಟಿಗರು ಸದ್ಯದಲ್ಲೇ ಬಿಸಿಸಿಐ ತೆಗೆದುಕೊಳ್ಳುವ ಮಹತ್ವದ ನಿರ್ಧಾರಗಳಲ್ಲಿ ಪಾಲುದಾರರಾಗಲಿದ್ದಾರೆ. ಬಹುನಿರೀಕ್ಷಿತ ಆಟಗಾರರ ಸಂಸ್ಥೆ ಮುಂದಿನ 2 ವಾರಗಳಲ್ಲಿ ನೋಂದಣಿಯಾಗಲಿದೆ. ಆದರೆ ಸಂಸ್ಥೆ ಸದ್ಯದ ಮಟ್ಟಿಗೆ ಅಂತಾರಾಷ್ಟ್ರೀಯ ಕ್ರಿಕೆಟಿಗರ ಸಂಸ್ಥೆ (ಎಫ್‌ಐಸಿಎ)ನ ಭಾಗವಾಗಿರುವುದಿಲ್ಲ. ಭಾರತೀಯ ಕ್ರಿಕೆಟಿಗರ ಸಂಸ್ಥೆ ಎನ್ನುವ ಹೆಸರಲ್ಲಿ ನೋಂದಣಿಗೆ ಅರ್ಜಿ ಸಲ್ಲಿಸಲಾಗಿದ್ದು, ಈ ಹೆಸರು ಲಭ್ಯವಿದೆಯೇ ಎನ್ನುವುದನ್ನು ಪರಿಶೀಲಿಸಬೇಕಿದೆ.
ಇದನ್ನೂ ಓದಿ: ಬಿಸಿಸಿಐ ಇತಿಹಾಸದಲ್ಲಿ ಇದೇ ಮೊದಲು - ವಾರ್ಷಿಕ ಸಮಾವೇಶಕ್ಕೆ ಮಹಿಳಾ ಕ್ರಿಕೆಟರ್ಸ್!
‘ಸಂಸ್ಥೆ ನೋಂದಣಿಯಾದ ಬಳಿಕ ಪುರುಷ ಹಾಗೂ ಮಹಿಳಾ ಕ್ರಿಕೆಟಿಗರಿಗೆ ವಿವಿಧ ಜವಾಬ್ದಾರಿ ನೀಡಲಾಗುತ್ತದೆ’ ಎಂದು ಸುಪ್ರೀಂ ಕೋರ್ಟ್ ನೇಮಿತ ಬಿಸಿಸಿಐ ಆಡಳಿತ ಸಮಿತಿ ಮುಖ್ಯಸ್ಥ ವಿನೋದ್ ರಾಯ್ ತಿಳಿಸಿದ್ದಾರೆ. ಈ ಮೂಲಕ ಬಿಸಿಸಿಐ ನಿರ್ಧಾರಗಳಲ್ಲಿ ಕ್ರಿಕೆಟಿಗರು ಪಾಲ್ಗೊಳ್ಳಲಿದ್ದಾರೆ. ಇದರಿಂದ ಭಾರತೀಯ ಕ್ರಿಕೆಟ್ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದಿದ್ದಾರೆ.