ಹೊಸ ಕ್ರಿಕೆಟ್ ಪ್ರತಿಭೆಗಳ ಶೋಧದಲ್ಲಿ ತೊಡಗಿದ್ದ ಬಿಸಿಸಿಐ ಹಾಗೂ ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ) ಜಂಟಿಯಾಗಿ ಅನೇಕಾನೇಕ ಕ್ರಿಕೆಟ್ ಶಿಬಿರಗಳನ್ನು ಆಯೋಜಿಸಿದ್ದವು. ಇಂಥ ಅನೇಕ ಕ್ರಮಗಳು, ದೇಶದಲ್ಲಿ ಕ್ರಿಕೆಟ್ ಅಗಾಧವಾಗಿ ಬೆಳೆಯಲು ಸಹಕಾರಿಯಾಯಿತು.- ಸಚಿನ್ ತೆಂಡೂಲ್ಕರ್

ನವದೆಹಲಿ(ಡಿ.03): ಭಾರತದಲ್ಲಿ ಕ್ರಿಕೆಟ್ ಕ್ರೀಡೆಯ ಬೆಳವಣಿಗೆಗಾಗಿ ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಮಾಡಿದ ಸೇವೆ ಅತೀ ಮಹತ್ವದ್ದು ಎಂದು ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.

ಹಿಂದೂಸ್ತಾನ್ ಲೀಡರ್‌'ಶಿಪ್ ಶೃಂಗಸಭೆಯಲ್ಲಿ ಮಾತನಾಡಿದ ಅವರು, ‘‘ನಾನು ಕ್ರಿಕೆಟ್‌'ನಲ್ಲಿನ್ನೂ ಬೆಳವಣಿಗೆಯ ಹಂತದಲ್ಲಿದ್ದಾಗ ಬಿಸಿಸಿಐ ವತಿಯಿಂದ ಕ್ರೀಡೆಯ ಬೆಳವಣಿಗೆ ವಿಚಾರದಲ್ಲಿ ಮಾಡಿದ ಕೈಂಕರ್ಯವನ್ನು ಕಣ್ಣಾರೆ ಕಂಡಿದ್ದೇನೆ. ಆ ದಿನಗಳಲ್ಲಿ ಹೊಸ ಕ್ರಿಕೆಟ್ ಪ್ರತಿಭೆಗಳ ಶೋಧದಲ್ಲಿ ತೊಡಗಿದ್ದ ಬಿಸಿಸಿಐ ಹಾಗೂ ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ) ಜಂಟಿಯಾಗಿ ಅನೇಕಾನೇಕ ಕ್ರಿಕೆಟ್ ಶಿಬಿರಗಳನ್ನು ಆಯೋಜಿಸಿದ್ದವು. ಇಂಥ ಅನೇಕ ಕ್ರಮಗಳು, ದೇಶದಲ್ಲಿ ಕ್ರಿಕೆಟ್ ಅಗಾಧವಾಗಿ ಬೆಳೆಯಲು ಸಹಕಾರಿಯಾಯಿತು’’ ಎಂದು ಅವರು ವಿವರಿಸಿದರು.

ನ್ಯಾ. ಲೋಧಾ ಸಮಿತಿಯ ಶಿಫಾರಸುಗಳನ್ನು ಸಂಪೂರ್ಣವಾಗಿ ಅಳವಡಿಸಿಕೊಳ್ಳಲು ಬಿಸಿಸಿಐ ಹಿಂದೇಟು ಹಾಕುತ್ತಿರುವ ವಿಚಾರಕ್ಕೆ ಸಂಬಂಧಪಟ್ಟ ಪ್ರಶ್ನೆಯೊಂದಕ್ಕೆ ಉತ್ತರಿಸಲು ನಿರಾಕರಿಸಿದ ಅವರು, ‘‘ಈ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿರುವುದರಿಂದ ಆ ಬಗ್ಗೆ ಪ್ರತಿಕ್ರಿಯೆ ನೀಡಲಾರೆ’’ ಎಂಬ ಸಿದ್ಧ ಹಾಗೂ ಜಾಣ ಉತ್ತರವನ್ನು ನೀಡಿದರು.

ಎರಡು ಪಿಚ್ ಉಪಯೋಗವಾಗಲಿ

ದೇಶೀಯ ಮಟ್ಟದಲ್ಲಿ ಮಹತ್ವದ ಪಂದ್ಯಾವಳಿಯಾದ ರಣಜಿ ಟೂರ್ನಿಯಲ್ಲಿನ ಪ್ರತಿಯೊಂದು ಪಂದ್ಯದಲ್ಲೂ ಎರಡು ರೀತಿಯ ಪಿಚ್‌ಗಳು ಬಳಕೆಯಾಗಲಿ ಎಂದು ಸಚಿನ್ ತೆಂಡೂಲ್ಕರ್ ಸಲಹೆ ನೀಡಿದ್ದಾರೆ. ಒಂದೇ ಪಂದ್ಯದಲ್ಲಿ ಆಟಗಾರರು ಎರಡು ಪಿಚ್‌'ಗಳಲ್ಲಿ ಆಡಿದಾಗ ಸಿಗುವ ಅನುಭವ ಮುಂದೆ ಅವರು ಹೊರದೇಶಗಳಲ್ಲಿ ಆಡುವಾಗ ಉಪಯೋಗಕ್ಕೆ ಬರಲಿದೆ ಎಂದು ಸಚಿನ್ ಹೇಳಿದ್ದಾರೆ.