‘‘ನ್ಯಾ. ಲೋಧಾ ಸಮಿತಿಯ ಶಿಫಾರಸುಗಳನ್ನು ಚರ್ಚಿಸಲು ಅ. 1ರಂದು ಕರೆಯಲಾಗಿದ್ದ ವಿಶೇಷ ಸಭೆಯಲ್ಲಿ ಯಾವ ನಿರ್ಧಾರ ಕೈಗೊಳ್ಳಲಾಗಿತ್ತೋ ಅದೇ ನಿರ್ಧಾರಕ್ಕೇ ಮಂಡಳಿ ಈಗಲೂ ಬದ್ಧ’’- ಅಜಯ್ ಶಿರ್ಕೆ
ನವದೆಹಲಿ(ಡಿ.02): ನ್ಯಾ. ಲೋಧಾ ಸಮಿತಿಯ ಶಿಫಾರಸುಗಳಲ್ಲಿನ ಕೆಲ ಅಂಶಗಳನ್ನು ವಿರೋಧಿಸುವ ತನ್ನ ನಿಲುವಿಗೆ ತಾನು ಈಗಲೂ ಬದ್ಧ ಎಂದು ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಪುನರುಚ್ಛರಿಸಿದೆ.
ಇಂದು ನಡೆದ ಬಿಸಿಸಿಐ ವಿಶೇಷ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಂಡಳಿಯ ಕಾರ್ಯದರ್ಶಿ ಅಜಯ್ ಶಿರ್ಕೆ, ‘‘ನ್ಯಾ. ಲೋಧಾ ಸಮಿತಿಯ ಶಿಫಾರಸುಗಳನ್ನು ಚರ್ಚಿಸಲು ಅ. 1ರಂದು ಕರೆಯಲಾಗಿದ್ದ ವಿಶೇಷ ಸಭೆಯಲ್ಲಿ ಯಾವ ನಿರ್ಧಾರ ಕೈಗೊಳ್ಳಲಾಗಿತ್ತೋ ಅದೇ ನಿರ್ಧಾರಕ್ಕೇ ಮಂಡಳಿ ಈಗಲೂ ಬದ್ಧ’’ ಎಂದರು.
ಪ್ರಕರಣದ ಮುಂದಿನ ವಿಚಾರಣೆಯು ಡಿ. 5ರಂದು ನಡೆಯಲಿರುವುದರಿಂದ, ಸಮಿತಿ ಶಿಫಾರಸುಗಳನ್ನು ಅಳವಡಿಸಿಕೊಳ್ಳಲು ಕೈಗೊಳ್ಳಲಾದ ಕ್ರಮದ ವಿವರವನ್ನು ಡಿ. 3ರಂದು ಸುಪ್ರೀಂ ಕೋರ್ಟ್‌ನಲ್ಲಿ ಬಿಸಿಸಿಐ ಸಲ್ಲಿಸಲಿದೆ. ಡಿ. 5ರ ವಿಚಾರಣೆಯಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡುವ ಮಾರ್ಗದರ್ಶಿಗಳನ್ನು ಅವಲೋಕಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಶಿರ್ಕೆ ಇದೇ ವೇಳೆ ತಿಳಿಸಿದರು.
ತನ್ನ ಶಿಫಾರಸುಗಳ ಅನುಷ್ಠಾನ ವಿಷಯದಲ್ಲಿ ಅಸಡ್ಡೆ ತೋರುತ್ತಿರುವ ಬಿಸಿಸಿಐ ಮತ್ತು ರಾಜ್ಯ ಕ್ರಿಕೆಟ್ ಸಂಸ್ಥೆಗಳ ಪದಾಧಿಕಾರಿಗಳನ್ನು ವಜಾಗೊಳಿಸಬೇಕೆಂದು ಈಗಾಗಲೇ ಲೋಧಾ ಸಮಿತಿ ನ್ಯಾಯಾಲಯದಲ್ಲಿ ಮನವಿ ಮಾಡಿದ್ದು ಸೋಮವಾರ ಸರ್ವೋಚ್ಚ ನ್ಯಾಯಾಲಯ ತಳೆಯುವ ನಿರ್ಧಾರ ಕೌತುಕ ಕೆರಳಿಸಿದೆ.
