ಐಪಿಎಲ್ ಉದ್ಘಾಟನಾ ಸಮಾರಂಭ ರದ್ದು - ಭಾರತೀಯರ ಹೃದಯ ಗೆದ್ದ ಬಿಸಿಸಿಐ!
ಪುಲ್ವಾಮಾ ದಾಳಿಯಿಂದ ಇಡೀ ಭಾರತವೇ ಶೋಕಸಾಗರಲ್ಲಿ ಮುಳುಗಿದೆ. ಹೀಗಾಗಿ 12ನೇ ಆವೃತ್ತಿ ಐಪಿಎಲ್ ಟೂರ್ನಿ ಉದ್ಘಾಟನಾ ಸಮಾರಂಭವನ್ನು ರದ್ದು ಮಾಡಲಾಗಿದೆ. ಬಿಸಿಸಿಐ ಈ ಮಹತ್ವದ ನಿರ್ಧಾರಕ್ಕೆ ಇದೀಗ ಮೆಚ್ಚುಗೆ ವ್ಯಕ್ತವಾಗಿದೆ.
ಮುಂಬೈ(ಫೆ.22): ಐಪಿಎಲ್ ಟೂರ್ನಿಗೆ ಬಿಸಿಸಿಐ ತಯಾರಿ ಆರಂಭಿಸಿದೆ. ಇದರ ಬೆನ್ನಲ್ಲೇ 2019ರ ಐಪಿಎಲ್ ಟೂರ್ನಿಯ ಅದ್ಧೂರಿ ಉದ್ಘಾಟನಾ ಸಮಾರಂಭವನ್ನು ರದ್ದು ಮಾಡಿದೆ. ಐಪಿಎಲ್ ಉದ್ಘಾಟನೆ ಹಣವನ್ನು ಪುಲ್ವಾಮಾ ದಾಳಿಯಿಂದ ಹುತಾತ್ಮರಾದ 40ಕ್ಕೂ ಹೆಚ್ಚು CRPF ಯೋಧರಿಗೆ ನೀಡಲಾಗುವುದು ಎಂದು ಬಿಸಿಸಿಐ ಹೇಳಿದೆ.
ಇದನ್ನೂ ಓದಿ: ಬಿಸಿಸಿಐ ಕಚೇರಿಯಲ್ಲೂ ಪಾಕ್ ಕ್ರಿಕೆಟಿಗರ ಫೋಟೋ ತೆರವು
ಸುಪ್ರೀಂ ಕೋರ್ಟ್ ನೇಮಿಸಿದ ಬಿಸಿಸಿಐ ಆಡಳಿತ ಸಮಿತಿ ಹಾಗೂ ಐಪಿಎಲ್ ಗರ್ವನಿಂಗ್ ಕೌನ್ಸಿಲ್ ಅಧಿಕಾರಿಗಳು ಈ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಪುಲ್ವಾಮಾ ದಾಳಿಯಿಂದ ಭಾರತೀಯ CRPF ಯೋಧರು ಹುತಾತ್ಮರಾಗಿದ್ದಾರೆ. ಹೀಗಿರುವಾಗ ಉದ್ಘಾಟನಾ ಸಮಾರಂಭ ಆಯೋಜಿಸುವುದು ಸೂಕ್ತವಲ್ಲ. ಹೀಗಾಗಿ ಈ ಉದ್ಘಾಟನಾ ಸಮಾರಂಭದ ಹಣವನ್ನೂ ಹುತಾತ್ಮ ಯೋಧರ ಕುಟುಂಬಕ್ಕೆ ನೀಡುವುದಾಗಿ ಬಿಸಿಸಿಐ ಹೇಳಿದೆ.
ಇದನ್ನೂ ಓದಿ: ಪಾಕ್ ಜೊತೆ ಕ್ರಿಕೆಟ್ ಮಾತ್ರವಲ್ಲ ಯಾವುದೇ ಕ್ರೀಡೆ ಬೇಡ: ಗಂಗೂಲಿ!
ಪಾಕಿಸ್ತಾನ ಮೂಲದ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆ ಭಾರತೀಯ CRPF ಯೋಧರ ಮೇಲೆ ದಾಳಿ ನಡೆಸಿತ್ತು. ಇದರಲ್ಲಿ 40ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದಾರೆ. ಅತ್ಯಂತ ಭೀಕರ ದಾಳಿಯಿಂದ ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಬಂಧ ಕೂಡ ಮತ್ತಷ್ಟು ಹದಗೆಟ್ಟಿದೆ.