ಓಟದ ಮೈದಾನದಲ್ಲಿ ಗುರ್ಜಾರ್ ಘರ್ಜನೆ: ರಿಜಿಜು ಅಂದರು ಟ್ರೈನಿಂಗ್ ಕೊಡ್ತೇನೆ!
ಭಾರತದಲ್ಲಿ ಮರಿ ಉಸೇನ್ ಬೋಲ್ಟ್ ಉದಯವಾಗಿದೆ. ಬರಿಗಾಲಿನಲ್ಲೇ ಮಿಂಚಿನ ವೇಗದಲ್ಲಿ ಓಡುವ ಗುರ್ಜಾರ್ ಎನ್ನುವ ಗ್ರಾಮೀಣ ಪ್ರತಿಭೆ, ಸದ್ಯ ಕ್ರೀಡಾ ಸಚಿವರ ಕಣ್ಣಿಗೆ ಬಿದ್ದಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆಲ್ಲುವ ವಿಶ್ವಾಸ ಮೂಡಿಸಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ.
ಬೋಪಾಲ್[ಆ.17] ಭಾರತದಲ್ಲಿ ಪ್ರತಿಭೆಗಳಿಗೇನು ಕೊರತೆಯಿಲ್ಲ. ಅದರಲ್ಲಿಯೂ ಗ್ರಾಮೀಣ ಪ್ರದೇಶದಲ್ಲಂತೂ ಕ್ರೀಡಾ ಪ್ರತಿಭೆಗಳು ಪ್ರತಿ ಮನೆಯಲ್ಲಿಯೂ ಸಿಗುತ್ತಾರೆ. ಆದರೆ, ಅದನ್ನು ಗುರುತಿಸದ ಪೋಷಕರು, ಗುರುತಿಸಿದರೂ ಬೆಳೆಯುವ ಅಗತ್ಯ ಅವಕಾಶಗಳು ಸಿಗದೇ, ಪ್ರತಿಭೆಯೇ ಕಮರಿ ಹೋಗುತ್ತದೆ. ಎಲ್ಲಿಯೋ ಕೆಲವರು ಮಾತ್ರ ಗುರುತಿಸಲ್ಪಟ್ಟು, ದೇಶಕ್ಕೆ ಹೆಮ್ಮೆ ತರುವಂಥ ಗೌರವಕ್ಕೆ ಪಾತ್ರರಾಗುತ್ತಾರೆ.
ಇಂಥ ಬಡ ಗ್ರಾಮೀಣ ಪ್ರತಿಭೆಗಳಿಗೆ ಅಗತ್ಯ ನೆರವು ನೀಡಿದರೆ ದೇಶವೇ ಹೆಮ್ಮೆ ಪಡುವಂಥದ್ದನ್ನು ಸಾಧಿಸುತ್ತಾರೆಂಬುವುದಕ್ಕೆ ಅಸ್ಸಾಂ ಗ್ರಾಮೀಣ ಪ್ರತಿಭೆ ಹಿಮಾ ದಾಸ್ ಜೀವಂತ ಉದಾಹರಣೆ. ಅದೇ ರೀತಿ ಮುಂದೊಂದು ದಿನ ರಾಮೇಶ್ವರ್ ಗುರ್ಜಾರ್ ಹೆಸರು ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ನೋಡಿದರೂ ಅಚ್ಚರಿಪಡಬೇಕಿಲ್ಲ!
ಭಾರತಕ್ಕೆ ಮತ್ತಷ್ಟು ಪದಕ ಗೆದ್ದುಕೊಡುತ್ತೇನೆ: ಮೋದಿಗೆ ಹಿಮಾ ದಾಸ್ ಭರವಸೆ
ಯಾರದ್ದಿದ್ದು, ಹೊಸ ಹೆಸರು? ಆಶ್ಚರ್ಯವಾಗುತ್ತಿದೆ ಅಲ್ಲವೇ? ಇದೀಗ ಅಂತರ್ಜಾಲದಲ್ಲಿ ಸದ್ದು ಮಾಡುತ್ತಿರುವ ಹೆಸರೇ ರಾಮೇಶ್ವರ್ ಗುರ್ಜಾರ್. 100 ಮೀಟರ್ ಓಟವನ್ನು 11 ಸೆಕೆಂಡ್‌ನಲ್ಲಿಯೇ ಪೂರೈಸಿದ ಮರಿ ಉಸೇನ್ ಬೋಲ್ಟ್. ಮಿಂಚಿನಂತೆ ಓಡುವ 19 ವರ್ಷದ ಗುರ್ಜಾರ್ ನೋಡಿ ಎಲ್ಲರೂ ದಂಗಾಗಿರುವುದಂತೂ ಸುಳ್ಳಲ್ಲ.
ಗುರ್ಜಾರ್ ಹೊಣೆ ಹೊತ್ತ ರಿಜಿಜು:
ಮಧ್ಯ ಪ್ರದೇಶದ ಮಾಜಿ ಮುಖ್ಯಮುಂತ್ರಿ ಶಿವರಾಜ್ ಸಿಂಗ್ ಚೌಹ್ಹಾಣ್, ರಾಮೇಶ್ವರ್ ಗುರ್ಜಾರ್ ಬರಿಗಾಲಿನಲ್ಲಿ ಓಡುತ್ತಿರುವ ವಿಡಿಯೋವನ್ನು ಟ್ವಿಟರಿನಲ್ಲಿ ಹಂಚಿಕೊಂಡಿದ್ದರು. ಇದನ್ನು ಗಮನಿಸಿದ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಗುರ್ಜಾರ್ ಎಂಬ ಅದ್ಭುತ ಪ್ರತಿಭೆಗೆ ಸಂಪೂರ್ಣ ತರಬೇತಿ ನೀಡುವ ಹೊಣೆ ವಹಿಸಿಕೊಂಡಿದ್ದಾರೆ.
ಕೃಷಿ ಕುಟುಂಬದ ಹಿನ್ನೆಲೆಯ ರಾಮೇಶ್ವರ್ ಗುರ್ಜಾರ್, ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯವರು. ದೇಶದ ಅಥ್ಲೇಟಿಕ್ಸ್ ಪಾಲಿಗೆ ಹೊಸ ಆಶಾಕಿರಣವೆಂದೇ ಬಿಂಬಿಸಲಾಗುತ್ತಿದೆ. ಮಧ್ಯ ಪ್ರದೇಶದ ಕ್ರೀಡಾ ಮಂತ್ರಿ ಜಿತು ಪತ್ವಾರಿ, ರಾಜಧಾನಿ ಭೂಪಾಲ್‌ಗೆ ಗುರ್ಜಾರಿಯನ್ನು ಆಹ್ವಾನಿದ್ದಾರೆ. ಅಲ್ಲದೆ ಸೂಕ್ತ ತರಬೇತಿ ನೀಡಿದರೆ, ಕೇವಲ 9 ಸೆಕೆಂಡ್‌ಗಳಲ್ಲಿ 100 ಮೀಟರ್ ಓಟವನ್ನು ಗುರ್ಜಾರ್ ಪೂರೈಸುತ್ತಾರೆ ಎನ್ನುವುದು ಅವರೆಲ್ಲರ ವಿಶ್ವಾಸದ ನುಡಿ.
ನೂರು ಮೀಟರ್ ರಾಷ್ಟ್ರೀಯ ದಾಖಲೆ ಸದ್ಯಕ್ಕೆ ಅಮಿಯಾ ಮಲ್ಲಿಕ್ ಹೆಸರಿನಲ್ಲಿದ್ದು, 10.26 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದ್ದಾರೆ. ಇನ್ನು ಕೇವಲ 9.58 ಸೆಕೆಂಡ್‌ಗಳಲ್ಲಿ ಗುರಿ ಪೂರೈಸಿರುವ ಉಸೇನ್ ಬೋಲ್ಟ್ ಹೆಸರಿನಲ್ಲಿ ವಿಶ್ವದಾಖಲೆಯ ಕಿರೀಟವಿದೆ. ಎಲ್ಲ ದಾಖಲೆಗಳನ್ನೂ ಮುರಿದು ಗುರ್ಜಾರ್ ಕೀರ್ತಿ ಉತ್ತುಂಗಕ್ಕೇರಲಿ. ಭಾರತಕ್ಕೆ ಹೆಮ್ಮೆ ತರುವಂಥ ಕ್ರೀಡಾಳುವಾಗಿ ಬೆಳೆಯಲಿ ಎಂಬುವುದು ನಮ್ಮೆಲ್ಲರ ಆಶಯ.