ಏಷ್ಯನ್ ಗೇಮ್ಸ್‌ಗೆ ಭಜರಂಗ್, ವಿನೇಶ್ ಫೊಗಟ್ ನೇರ ಆಯ್ಕೆ! ಇನ್ನುಳಿದ ಕುಸ್ತಿಪಟುಗಳಿಂದ ಆಸಮಾಧಾನ
ಏಷ್ಯನ್ ಗೇಮ್ಸ್‌ಗೆ ಭಜರಂಗ್, ವಿನೇಶ್ ಫೊಗಟ್ ನೇರ ಆಯ್ಕೆ! ಇನ್ನುಳಿದ ಕುಸ್ತಿಪಟುಗಳಿಂದ ಆಸಮಾಧಾನ
ಪುರುಷರ 65 ಕೆ.ಜಿ. ವಿಭಾಗದಲ್ಲಿ ಭಜರಂಗ್, 53 ಕೆ.ಜಿ. ವಿಭಾಗದಲ್ಲಿ ವಿನೇಶ್ ಸ್ಪರ್ಧೆ
ಇನ್ನುಳಿದ ವಿಭಾಗಗಳಿಗೆ ಜು.21, 22ರಂದು ಆಯ್ಕೆ ಟ್ರಯಲ್ಸ್
ನವದೆಹಲಿ(ಜು.19): ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್‌ಐ)ನ ತಾತ್ಕಾಲಿಕ ಆಡಳಿತ ಸಮಿತಿ ತಾರಾ ಕುಸ್ತಿಪಟುಗಳಾದ ಭಜರಂಗ್ ಪೂನಿಯಾ ಹಾಗೂ ವಿನೇಶ್ ಫೋಗಟ್‌ಗೆ ಮುಂಬರುವ ಏಷ್ಯನ್ ಗೇಮ್ಸ್‌ಗೆ ನೇರ ಅರ್ಹತೆ ನೀಡಿದೆ. ಪುರುಷರ 65 ಕೆ.ಜಿ. ವಿಭಾಗದಲ್ಲಿ ಭಜರಂಗ್, 53 ಕೆ.ಜಿ. ವಿಭಾಗದಲ್ಲಿ ವಿನೇಶ್ ಸ್ಪರ್ಧಿಸಲಿದ್ದು, ಇನ್ನುಳಿದ ವಿಭಾಗಗಳಿಗೆ ಜು.21, 22ರಂದು ಆಯ್ಕೆ ಟ್ರಯಲ್ಸ್ ನಡೆಸುವುದಾಗಿ ತಾತ್ಕಾಲಿಕ ಸಮಿತಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಡಬ್ಲ್ಯುಎಫ್‌ಐ ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ವಿರುದ್ಧ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದ ಈ ಇಬ್ಬರು ಕಳೆದ 7 ತಿಂಗಳಿಂದ ಯಾವುದೇ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಪಾಲ್ಗೊಂಡಿಲ್ಲ. ಇದೇ ವೇಳೆ 65 ಕೆ.ಜಿ. ವಿಭಾಗದಲ್ಲಿ ಸುಜೀತ್ ಕಲಾಕಲ್ ಹಾಗೂ 53 ಕೆ.ಜಿ. ವಿಭಾಗದಲ್ಲಿ ಅಂತಿಮ್ ಪಂಘಲ್ ಉತ್ತಮ ಪ್ರದರ್ಶನ ನೀಡಿದ್ದರೂ, ಆಯ್ಕೆಗೆ ಪರಿಗಣಿಸದೆ ಭಜರಂಗ್, ವಿನೇಶ್‌ಗೆ ನೇರ ಪ್ರವೇಶ ನೀಡಿರುವುದು ಭಾರತೀಯ ಕುಸ್ತಿ ವಲಯದಲ್ಲಿ ಭಾರೀ ಟೀಕೆಗೆ ಗುರಿಯಾಗಿದೆ. ಪ್ರತಿಭಟನೆಯಲ್ಲಿ ತೊಡಗಿದ್ದ ಸಾಕ್ಷಿ ಮಲಿಕ್, ಸಂಗೀತಾ ಫೋಗಟ್, ಸತ್ಯವರ್ತ್ ಕಡಿಯಾನ್ ಹಾಗೂ ಜಿತೇಂದರ್ ಕಿನ್ಹಾಗೆ ನೇರ ಪ್ರವೇಶ ನೀಡಿಲ್ಲ.
ಟೆನಿಸ್: ವಿಶ್ವ ನಂ.1 ಸ್ಥಾನ ಉಳಿಸಿಕೊಂಡ ವಿಂಬಲ್ಡನ್ ಚಾಂಪಿಯನ್ ಕಾರ್ಲೊಸ್ ಆಲ್ಕರಜ್..!
ಕೋರ್ಟ್ ಮೆಟ್ಟಿಲೇರುವ ಎಚ್ಚರಿಕೆ!
ತಾತ್ಕಾಲಿಕ ಸಮಿತಿಯ ನಿರ್ಧಾರವು ಹಲವು ಕುಸ್ತಿಪಟುಗಳು, ಕೋಚ್‌ಗಳನ್ನು ಕೆರಳಿಸಿದೆ. 65 ಕೆ.ಜಿ. ಹಾಗೂ 53 ಕೆ.ಜಿ. ವಿಭಾಗಗಳಲ್ಲಿ ಆಯ್ಕೆ ನಿರೀಕ್ಷೆಯಲ್ಲಿದ್ದ ಕುಸ್ತಿಪಟುಗಳ ಪೋಷಕರು, ಕೋಚ್‌ಗಳು ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲೇರುವುದಾಗಿ ಎಚ್ಚರಿಸಿದ್ದಾರೆ. ‘ಪ್ರತಿಭಟನೆ ವೇಳೆ ಭಜರಂಗ್, ವಿನೇಶ್ ಪಾರದರ್ಶಕ ಆಯ್ಕೆ ಪ್ರಕ್ರಿಯೆಗೆ ಆಗ್ರಹಿಸಿದ್ದರು. ಇದೀಗ ಅವರೇ ಟ್ರಯಲ್ಸ್ ಇಲ್ಲದೆ ಆಯ್ಕೆಯಾಗಿದ್ದಾರೆ. ನೇರ ಆಯ್ಕೆಯನ್ನು ಅವರಿಬ್ಬರು ತಿರಸ್ಕರಿಸುತ್ತಾರಾ?’ ಎಂದು ಕೋಚ್ ಒಬ್ಬರು ಪ್ರಶ್ನಿಸಿದ್ದಾರೆ.
ಲೈಂಗಿಕ ಕಿರುಕುಳ ಪ್ರಕರಣ:ಬ್ರಿಜ್‌ಗೆ ಮಧ್ಯಂತರ ಜಾಮೀನು
ನವದೆಹಲಿ: 6 ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣದಲ್ಲಿ ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್‌ಐ) ಮಾಜಿ ಅಧ್ಯಕ್ಷ, ಸಂಸದ ಬ್ರಿಜ್‌ಭೂಷಣ್ ಸಿಂಗ್‌ಗೆ ದೆಹಲಿ ನ್ಯಾಯಾಲಯ ಮಧ್ಯಂತರ ಜಾಮೀನು ನೀಡಿದೆ. ಮಂಗಳವಾರ 2 ದಿನಗಳ ಮಟ್ಟಿಗೆ ಜಾಮೀನು ಮಂಜೂರು ಮಾಡಿದ ನ್ಯಾಯಲಯವು, ರೆಗ್ಯುಲರ್ ಬೇಲ್ ಅರ್ಜಿಯ ವಿಚಾರಣೆಯನ್ನು ಗುರುವಾರ (ಜು.20)ಗೆ ನಿಗದಿಪಡಿಸಿದೆ. ಕುಸ್ತಿಪಟುಗಳಿಂದ ಸುದೀರ್ಘ ಪ್ರತಿಭಟನೆ ಬಳಿಕ ಜೂ.15ರಂದು ದೆಹಲಿ ಪೊಲೀಸರು, ಐಪಿಸಿ ಸೆಕ್ಷನ್ 354(ಮಹಿಳೆಯರ ಮೇಲೆ ಹಲ್ಲೆ), 354ಎ(ಲೈಂಗಿಕ ಕಿರುಕುಳ), 354ಡಿ(ಹಿಂಬಾಲಿಸುವಿಕೆ), 506(ಬೆದರಿಕೆ) ಅಡಿಯಲ್ಲಿ ಬ್ರಿಜ್‌ಭೂಷಣ್ ವಿರುದ್ಧ ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಧೋನಿ ಮನೆಯಲ್ಲಿನ ಬೈಕ್-ಕಾರು ಕಲೆಕ್ಷನ್‌ಗೆ ಮನಸೋತ ವೆಂಕಟೇಶ್ ಪ್ರಸಾದ್..!
ಇದಕ್ಕೂ ಮುನ್ನ ಬ್ರಿಜ್‌ಭೂಷಣ್ ವಿರುದ್ಧ 2 ಪ್ರತ್ಯೇಕ ಎಫ್‌ಐಆರ್ ದಾಖಲಾಗಿತ್ತು. ಪೋಕ್ಸೋ ಕಾಯ್ದೆ ಅಡಿ ದಾಖಲಾಗಿದ್ದ ಒಂದು ಪ್ರಕರಣವನ್ನು ಕೈಬಿಡುವಂತೆ ಪೊಲೀಸರು ನ್ಯಾಯಾಲಯಕ್ಕೆ ಶಿಫಾರಸು ಮಾಡಿದ್ದರು.
2026ರ ಕಾಮನ್‌ವೆಲ್ತ್ ಗೇಮ್ಸ್ ಆತಿಥ್ಯದಿಂದ ಆಸ್ಟ್ರೇಲಿಯಾ ಹಿಂದಕ್ಕೆ!
ಮೆಲ್ಬರ್ನ್: 2026ರ ಕಾಮನ್‌ವೆಲ್ತ್ ಕ್ರೀಡಾಕೂಟದ ಆತಿಥ್ಯದಿಂದ ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯ ಹಿಂದೆ ಸರಿದಿದೆ. ಕೂಟದ ಆಯೋಜನೆಗೆ ಅಗತ್ಯವಿರುವ ಖರ್ಚು ಕೈ ಮೀರುತ್ತಿರುವ ಹಿನ್ನೆಲೆಯಲ್ಲಿ ವಿಕ್ಟೋರಿಯಾ ಸರ್ಕಾರ ನಿರ್ಧಾರ ಕೈಗೊಂಡಿದೆ.
ಆತಿಥ್ಯ ಹಕ್ಕು ಪಡೆದಾಗ ನಿರೀಕ್ಷಿತ ಖರ್ಚು 1.8 ಬಿಲಿಯನ್ ಅಮೆರಿಕನ್ ಡಾಲರ್(ಅಂದಾಜು 14.7 ಸಾವಿರ ಕೋಟಿ ರು.) ಎಂದು ಅಂದಾಜಿಸಲಾಗಿತ್ತು. ಆದರೆ ಇದೀಗ ಆ ಮೊತ್ತ 4.8 ಬಿಲಿಯನ್ ಅಮೆರಿಕನ್ ಡಾಲರ್ (ಅಂದಾಜು 39.3 ಸಾವಿರ ಕೋಟಿ ರು.)ಗೆ ಏರಿಕೆಯಾಗಿದೆ. ಇಷ್ಟೊಂದು ಪ್ರಮಾಣದ ಹಣವನ್ನು ಭರಿಸಲು ಸಾಧ್ಯವಿಲ್ಲ ಎಂದು ವಿಕ್ಟೋರಿಯಾ ರಾಜ್ಯದ ಮುಖ್ಯಸ್ಥ ಡೇನಿಯಲ್ ಆ್ಯಂಡ್ರೂಸ್ ತಿಳಿಸಿದ್ದಾರೆ. ಆಸ್ಟ್ರೇಲಿಯಾದ ನಿರ್ಧಾರಕ್ಕೆ ಆಘಾತ ವ್ಯಕ್ತಪಡಿಸಿರುವ ಕಾಮನ್‌ವೆಲ್ತ್ ಗೇಮ್ಸ್ ಫೆಡರೇಶನ್(ಸಿಜಿಎಫ್) ಆದಷ್ಟು ಬೇಗ ಆತಿಥ್ಯ ವಹಿಸಲಿರುವ ರಾಷ್ಟ್ರದ ಘೋಷಣೆ ಮಾಡುವುದಾಗಿ ತಿಳಿಸಿದೆ.