Asianet Suvarna News Asianet Suvarna News

ಆಸೀಸ್‌ ಚೆಂಡು ವಿರೂಪ ಪತ್ತೆ ಹಚ್ಚಿದ್ದು ಯಾರು ಗೊತ್ತಾ..?

ದಕ್ಷಿಣ ಆಫ್ರಿಕಾ ವಿರುದ್ಧ ಕೇಪ್‌ಟೌನ್‌ ಟೆಸ್ಟ್‌ನಲ್ಲಿ ಆಸ್ಪ್ರೇಲಿಯಾ ಕ್ರಿಕೆಟಿಗರು ಚೆಂಡು ವಿರೂಪಗೊಳಿಸುತ್ತಿದ್ದಾರೆ ಎನ್ನುವುದನ್ನು ಕ್ಯಾಮರಾಮನ್‌ಗಳಿಗೆ ತಿಳಿಸಿದ್ದು ಯಾರು ಗೊತ್ತಾ? ಅದು ದಕ್ಷಿಣ ಆಫ್ರಿಕಾದ ಮಾಜಿ ವೇಗದ ಬೌಲರ್‌ ಫ್ಯಾನಿ ಡಿವಿಲಿಯ​ರ್.

Australian Ball tampering News

ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧ ಕೇಪ್‌ಟೌನ್‌ ಟೆಸ್ಟ್‌ನಲ್ಲಿ ಆಸ್ಪ್ರೇಲಿಯಾ ಕ್ರಿಕೆಟಿಗರು ಚೆಂಡು ವಿರೂಪಗೊಳಿಸುತ್ತಿದ್ದಾರೆ ಎನ್ನುವುದನ್ನು ಕ್ಯಾಮರಾಮನ್‌ಗಳಿಗೆ ತಿಳಿಸಿದ್ದು ಯಾರು ಗೊತ್ತಾ? ಅದು ದಕ್ಷಿಣ ಆಫ್ರಿಕಾದ ಮಾಜಿ ವೇಗದ ಬೌಲರ್‌ ಫ್ಯಾನಿ ಡಿವಿಲಿಯ​ರ್.

ಪಂದ್ಯವನ್ನು ಪ್ರಸಾರ ಮಾಡುತ್ತಿದ್ದ ವಾಹಿನಿಯೊಂದಕ್ಕೆ ವೀಕ್ಷಕ ವಿವರಣೆಗಾರನಾಗಿ ಕಾರ್ಯನಿರ್ವಹಿಸುತ್ತಿದ್ದ ಫ್ಯಾನಿ, ರೇಡಿಯೋ ಸಂದರ್ಶನದಲ್ಲಿ ಆಸ್ಪ್ರೇಲಿಯನ್ನರು ಮೋಸ ಮಾಡುತ್ತಿದ್ದಾರೆ ಎಂದು ಏಕೆ ಅನಿಸಿತು, ಕ್ಯಾಮರಾಮನ್‌ಗಳಿಗೆ ಹೇಗೆ ಮಾಹಿತಿ ಒದಗಿಸಿದರು ಎನ್ನುವ ವಿವರವನ್ನು ಬಹಿರಂಗಗೊಳಿಸಿದ್ದಾರೆ.

‘ಚೆಂಡು 26, 27, 28ನೇ ಓವರ್‌ನಲ್ಲೇ ರಿವರ್ಸ್‌ ಸ್ವಿಂಗ್‌ ಆಗುತ್ತಿದೆ ಎನ್ನುವುದನ್ನು ಗಮನಿಸಿದ ನನಗೆ, ಏನೋ ಮೋಸ ನಡೆಯುತ್ತಿದೆ ಎನ್ನುವ ಅನುಮಾನ ಬಂತು. ಸಹಜವಲ್ಲದ ಕಾರ್ಯದಲ್ಲಿ ಸ್ಮಿತ್‌ ಹಾಗೂ ತಂಡ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎನಿಸಿತು. ತಕ್ಷಣ ಕ್ಯಾಮರಾಮನ್‌ಗಳಿಗೆ ಆಸ್ಪ್ರೇಲಿಯನ್ನರ ನಡೆ ಮೇಲೆ ಸೂಕ್ಷ್ಮ ಕಣ್ಣಿಡುವಂತೆ ಸೂಚಿಸಿದೆ. ಒಂದೂವರೆ ಗಂಟೆಗಳ ಹುಡುಕಾಟದ ಬಳಿಕ ಅನುಮಾನ ನಿಜವಾಯಿತು. ಬ್ಯಾನ್‌ಕ್ರಾಫ್ಟ್‌ ಮೇಲೆಯೇ ಕ್ಯಾಮರಾಗಳನ್ನು ಕೇಂದ್ರೀಕರಿಸಲಾಯಿತು. ಕೊನೆಗೂ ಅವರು ಸಿಕ್ಕಿಬಿದ್ದರು’ ಎಂದು ಡಿವಿಲಿಯ​ರ್‍ಸ್ ಹೇಳಿದ್ದಾರೆ.

ಅನುಮಾನಕ್ಕೆ ಕಾರಣವೇನು?: ವೀಕ್ಷಕ ವಿವರಣೆಗಾರ ಫ್ಯಾನಿ ಡಿವಿಲಿಯ​ರ್‍ಸ್ ತಮಗೆ ಆಸ್ಪ್ರೇಲಿಯನ್ನರ ಮೇಲೆ ಅನುಮಾನ ಬರಲು ಕಾರಣವೇನು ಎನ್ನುವುದನ್ನೂ ವಿವರಿಸಿದ್ದಾರೆ. ‘ಹಸಿರು ಪಿಚ್‌ನಲ್ಲಿ ಚೆಂಡು ಅಷ್ಟುಬೇಗ ಹಾಳಾಗಲು ಸಾಧ್ಯವೇ ಇಲ್ಲ. ಪಾಕಿಸ್ತಾನದ ಪಿಚ್‌ಗಳಲ್ಲಂತೆ ಈ ಪಿಚ್‌ ಹೆಚ್ಚಾಗಿ ಬಿರುಕು ಬಿಟ್ಟಿರಲಿಲ್ಲ. ಹೀಗಾಗಿ ಚೆಂಡು ರಿವರ್ಸ್‌ ಸ್ವಿಂಗ್‌ ಆಗಬೇಕಿದ್ದರೆ ಏನೋ ವಿಭಿನ್ನ ಮಾರ್ಗ ಅನುಸರಿಸುತ್ತಿದ್ದಾರೆ ಎನಿಸಿತು’ ಎಂದು ಡಿವಿಲಿಯ​ರ್‍ಸ್ ಹೇಳಿದ್ದಾರೆ.

ಬ್ಯಾನ್‌ಕ್ರಾಫ್ಟ್‌ ಗಾಬರಿಯಾಗಿದ್ದೇ ಕಾರಣ!

ಚೆಂಡು ವಿರೂಪ ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ ಎನ್ನುವುದನ್ನು ಪಂದ್ಯ ಪ್ರಸಾರ ಹಕ್ಕು ಹೊಂದಿರುವ ಸೂಪರ್‌ಸ್ಪೋರ್ಟ್‌ ವಾಹಿನಿಯ ಮುಖ್ಯಸ್ಥ ಆಲ್ವಿನ್‌ ನಾಯ್ಕರ್‌ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಫ್ಯಾನಿ ಡಿವಿಲಿಯ​ರ್‍ಸ್ರಿಂದ ಸೂಚನೆ ಬಂದ ಬಳಿಕ ಬ್ಯಾನ್‌ಕ್ರಾಫ್ಟ್‌ ಮೇಲೆ ಕ್ಯಾಮರಾಗಳನ್ನು ಕೇಂದ್ರೀಕರಿಸಲಾಗಿತ್ತು. ಒಮ್ಮೆ ಬ್ಯಾನ್‌ಕ್ರಾಫ್ಟ್‌ ತಮ್ಮ ಜೇಬಿನೊಳಕ್ಕೆ ವಸ್ತುವೊಂದನ್ನು ಇರಿಸಿಕೊಳ್ಳುತ್ತಿರುವ ದೃಶ್ಯಗಳನ್ನು ಕ್ರೀಡಾಂಗಣದಲ್ಲಿದ್ದ ದೊಡ್ಡ ಪರದೆ ಮೇಲೆ ತೋರಿಸುತ್ತಿದ್ದಂತೆ, ಯುವ ಆಟಗಾರನ ಮುಖದಲ್ಲಿ ಗಾಬರಿ ಕಂಡಾಗ ಏನೋ ದೊಡ್ಡ ಪ್ರಕರಣ ನಡೆಯುತ್ತಿದೆ ಎನ್ನುವುದು ಖಚಿತವಾಯಿತು.

ಬ್ಯಾನ್‌ಕ್ರಾಫ್ಟ್‌ ದೃಶ್ಯಗಳನ್ನು ದೊಡ್ಡ ಪರದೆ ಮೇಲೆ ನೋಡುತ್ತಿದ್ದಂತೆ ಕೋಚ್‌ ಡರೆನ್‌ ಲೆಹ್ಮನ್‌, ವಾಕಿ ಟಾಕಿ ಬಳಸಿ ಡಗೌಟ್‌ನಲ್ಲಿದ್ದ ಆಟಗಾರ (ಪೀಟರ್‌ ಹ್ಯಾಂಡ್ಸ್‌ಕಂಬ್‌)ನಿಗೆ ಮಾಹಿತಿ ರವಾನಿಸಿದರು. ಹ್ಯಾಂಡ್ಸ್‌ಕಂಬ್‌ ನೀರು ಒದಗಿಸುವ ನೆಪದಲ್ಲಿ ಮೈದಾನಕ್ಕೆ ಬಂದು ವಿಷಯ ತಿಳಿಸಿದಾಗ, ಬ್ಯಾನ್‌ಕ್ರಾಫ್ಟ್‌ ಹಳದಿ ಟೇಪ್‌ ಅನ್ನು ಒಳ ಉಡುಪಿನೊಳಕ್ಕೆ ಇರಿಸಿಕೊಂಡರು.

‘ಮೊದಲಿಗೆ ನಮಗೆ ಏನಾಗುತ್ತಿದೆ ಎಂದು ಅರ್ಥವಾಗಿರಲಿಲ್ಲ. ಡ್ರೆಸ್ಸಿಂಗ್‌ ಕೊಠಡಿಯಿಂದ ಮಾಹಿತಿ ಬಂದ ಬಳಿಕ ತಮ್ಮ ಕೈಯಲ್ಲಿದ್ದ ಹಳದಿ ಟೇಪ್‌ ಅನ್ನು ಒಳ ಉಡುಪಿನೊಳಕ್ಕೆ ಇರಿಸಿಕೊಂಡಾಗ ಮೋಸ ನಡೆಯುತ್ತಿದೆ ಎನ್ನುವುದು ದೃಢವಾಯಿತು’ ಎಂದು ಆಲ್ವಿನ್‌ ಹೇಳಿದ್ದಾರೆ.

ಚೆಂಡಿನ ಮೇಲೆ 7 ಕ್ಯಾಮರಾ ಕಣ್ಣು!

ಪಂದ್ಯ ಪ್ರಸಾರ ಮಾಡುವ ಸೂಪರ್‌ ಸ್ಪೋರ್ಟ್‌ ಸಂಸ್ಥೆ, ನ್ಯೂಲ್ಯಾಂಡ್ಸ್‌ ಟೆಸ್ಟ್‌ ವೇಳೆ 30 ಕ್ಯಾಮರಾಗಳನ್ನು ಬಳಸಲಾಗಿತ್ತು ಎಂದು ತಿಳಿಸಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಂಸ್ಥೆಯ ಮುಖ್ಯಸ್ಥ ಆಲ್ವಿನ್‌, ‘30 ಕ್ಯಾಮರಾಗಳ ಪೈಕಿ 7 ಕ್ಯಾಮರಾಗಳು ಸದಾ ಚೆಂಡಿನ ಮೇಲೇ ಕೇಂದ್ರೀಕರಿಸಲಾಗಿರುತ್ತದೆ. ಆಸ್ಪ್ರೇಲಿಯಾ ಆಟಗಾರರು ಪ್ರಕರಣದಲ್ಲಿ ಭಾಗಿಯಾಗಿರುವ ಕಾರಣ, ದೃಶ್ಯಗಳನ್ನು ದೊಡ್ಡ ಪರದೆ ಮೇಲೆ ತೋರಿಸಲಾಯಿತು ಎಂದು ಆರೋಪಿಸಲಾಗುತ್ತಿದೆ. ಒಂದೊಮ್ಮೆ ದ.ಆಫ್ರಿಕಾ ಆಟಗಾರರು ಈ ರೀತಿ ಮಾಡಿದ್ದರೂ, ಅದರ ದೃಶ್ಯಗಳನ್ನು ಪ್ರಸಾರ ಮಾಡುತ್ತಿದ್ದೆವು’ ಎಂದು ಆಲ್ವಿನ್‌ ಸಮರ್ಥನೆ ನೀಡಿದ್ದಾರೆ.

ಯಾರೀ ಫ್ಯಾನಿ ಡಿವಿಲಿಯ​ರ್ಸ್

ಫ್ಯಾನಿ ಡಿ ವಿಲಿಯ​ರ್ಸ್ ದ.ಆಫ್ರಿಕಾದ ಮಾಜಿ ವೇಗದ ಬೌಲರ್‌. ಕರಾರುವಾಕ್‌ ಬೌಲಿಂಗ್‌ ಮಾಡಬಲ್ಲ ಪ್ರಚಂಡ ವೇಗಿ ಎಂದೇ ಕರೆಸಿಕೊಳ್ಳುತ್ತಿದ್ದ ಅವರು, ಆಫ್ರಿಕಾ ಪರ 18 ಟೆಸ್ಟ್‌, 83 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ವೇಗ ಹಾಗೂ ನಿಖರತೆಗೆ ಹೆಚ್ಚು ಜನಪ್ರಿಯವಾಗಿದ್ದ ಫ್ಯಾನಿ, 1993-94ರ ಆಸ್ಪ್ರೇಲಿಯಾ ಪ್ರವಾಸದಲ್ಲಿ, ಆಫ್ರಿಕಾ ಸಿಡ್ನಿ ಟೆಸ್ಟ್‌ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ತಮ್ಮ ಮಾರಕ ಬೌಲಿಂಗ್‌ ದಾಳಿಯಿಂದ ಕಾಂಗರೂಗಳನ್ನು ನೆಲಕ್ಕೆ ಕೆಡವಿದ್ದ ಫ್ಯಾನಿ, ಇದೀಗ ಬಾಲ್‌ ಟ್ಯಾಂಪರಿಂಗ್‌ ಪ್ರಕರಣವನ್ನು ಬಯಲು ಮಾಡುವುದರೊಂದಿಗೆ ಆಸ್ಪ್ರೇಲಿಯನ್ನರನ್ನು ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿಸಿದ್ದಾರೆ.

ಚೆಂಡು 26, 27, 28ನೇ ಓವರ್‌ನಲ್ಲೇ ರಿವರ್ಸ್‌ ಸ್ವಿಂಗ್‌ ಆಗುತ್ತಿದೆ ಎನ್ನುವುದನ್ನು ಗಮನಿಸಿದ ನನಗೆ, ಏನೋ ಮೋಸ ನಡೆಯುತ್ತಿದೆ ಎನ್ನುವ ಅನುಮಾನ ಬಂತು. ತಕ್ಷಣ ಕ್ಯಾಮರಾಮನ್‌ಗಳಿಗೆ ಆಸ್ಪ್ರೇಲಿಯನ್ನರ ನಡೆ ಮೇಲೆ ಸೂಕ್ಷ್ಮ ಕಣ್ಣಿಡುವಂತೆ ಸೂಚಿಸಿದೆ. ಒಂದೂವರೆ ಗಂಟೆಗಳ ಹುಡುಕಾಟದ ಬಳಿಕ ಅನುಮಾನ ನಿಜವಾಯಿತು. ಬ್ಯಾನ್‌ಕ್ರಾಫ್ಟ್‌ ಮೇಲೆಯೇ ಕ್ಯಾಮರಾಗಳನ್ನು ಕೇಂದ್ರೀಕರಿಸಲಾಯಿತು. ಕೊನೆಗೂ ಅವರು ಸಿಕ್ಕಿಬಿದ್ದರು.

- ಫ್ಯಾನಿ ಡಿವಿಲಿಯ​ರ್ಸ್, ಆಫ್ರಿಕಾ ಮಾಜಿ ವೇಗಿ

Follow Us:
Download App:
  • android
  • ios