ಭಾರತ ಪ್ರವಾಸದ ವೇಳೆ ಗಮನಾರ್ಹ ಪ್ರದರ್ಶನ ತೋರಿದ್ದ ಸ್ಟೀವ್ ಓ ಕೀಫ್, ಪುಣೆ ಟೆಸ್ಟ್'ನಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶಿಸುವ ಮೂಲಕ ಆಸ್ಟ್ರೇಲಿಯಾ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆ ಬಳಿಕ ಅಷ್ಟೇನು ಮೊನಚಾದ ದಾಳಿ ಸಂಘಟಿಸದ ಹಿನ್ನಲೆಯಲ್ಲಿ ಅವರನ್ನು ತಂಡದಿಂದ ಕೈಬಿಡಲಾಗಿದೆ.

ಮೆಲ್ಬೋರ್ನ್(ಜೂ.16): ಮುಂಬರುವ ಬಾಂಗ್ಲಾದೇಶ ಪ್ರವಾಸಕ್ಕಾಗಿ ಬಲಿಷ್ಟ ಆಸೀಸ್ ತಂಡವನ್ನು ಪ್ರಕಟಿಸಲಾಗಿದ್ದು, ಸ್ಟೀವ್ ಸ್ಮಿತ್ ತಂಡವನ್ನು ಮುನ್ನಡೆಸಲಿದ್ದಾರೆ.

ಬಾಂಗ್ಲಾದೇಶ ಪ್ರವಾಸಕ್ಕಾಗಿ ಪ್ರಕಟಿಸಲಾದ ತಂಡದಲ್ಲಿ ಆಸೀಸ್ ಪಡೆಯ ಪ್ರಮುಖ ವೇಗಿ ಮಿಚೆಲ್ ಸ್ಟಾರ್ಕ್ ಹಾಗೂ ಪ್ರತಿಭಾನ್ವಿತ ಆಫ್'ಸ್ಪಿನ್ನರ್ ಸ್ಟೀವ್ ಓ ಕೀಫ್ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಸ್ಟೀವ್ ಓ ಕೀಪ್ ಬದಲು ಮತ್ತೋರ್ವ ಸ್ಪಿನ್ನರ್ ಆಸ್ಟನ್ ಅಗರ್ ತಂಡದಲ್ಲಿ ಸ್ಥಾನಪಡೆಯಲು ಸಫಲರಾಗಿದ್ದಾರೆ.

ಡಾಕಾ ಮತ್ತು ಚಿತ್ತಗಾಂಗ್‌'ನಲ್ಲಿ ಬಾಂಗ್ಲಾದೇಶ ವಿರುದ್ಧ ಎರಡು ಟೆಸ್ಟ್ ಪಂದ್ಯವನ್ನಾಡಲು ಆಸ್ಟ್ರೇಲಿಯಾ ಈ ಹಿಂದೆ ಅಕ್ಟೋಬರ್ 2015ರಲ್ಲಿ ವೇಳಾಪಟ್ಟಿಯನ್ನು ನಿಗದಿಪಡಿಸಿತ್ತು. ಆದರೆ ಭದ್ರತೆಯ ದೃಷ್ಟಿಯಿಂದ ಆಸೀಸ್ ತಂಡ, ಬಾಂಗ್ಲಾ ಪ್ರವಾಸ ಕೈಗೊಂಡಿರಲಿಲ್ಲ.

ಭಾರತ ಪ್ರವಾಸದ ವೇಳೆ ಗಮನಾರ್ಹ ಪ್ರದರ್ಶನ ತೋರಿದ್ದ ಸ್ಟೀವ್ ಓ ಕೀಫ್, ಪುಣೆ ಟೆಸ್ಟ್'ನಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶಿಸುವ ಮೂಲಕ ಆಸ್ಟ್ರೇಲಿಯಾ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆ ಬಳಿಕ ಅಷ್ಟೇನು ಮೊನಚಾದ ದಾಳಿ ಸಂಘಟಿಸದ ಹಿನ್ನಲೆಯಲ್ಲಿ ಅವರನ್ನು ತಂಡದಿಂದ ಕೈಬಿಡಲಾಗಿದೆ. ಇನ್ನು ಗಾಯದ ಸಮಸ್ಯೆಯಿಂದಾಗಿ ಮಿಚೆಲ್ ಸ್ಟಾರ್ಕ್ ತಂಡದಿಂದ ಹೊರಗುಳಿದಿದ್ದಾರೆ.

ಆಸ್ಟ್ರೇಲಿಯಾ ತಂಡ ಇದುವರೆಗೂ ಬಾಂಗ್ಲಾದೇಶದಲ್ಲಿ ಒಂದೇಒಂದು ಟೆಸ್ಟ್ ಪಂದ್ಯವನ್ನಾಡಿಲ್ಲ. ಆದರೆ 2011ರಲ್ಲಿ ಆಸೀಸ್ ಸೀಮಿತ ಓವರ್‌'ಗಳ 3 ಪಂದ್ಯಗಳ ಸರಣಿಯನ್ನು ಡಾಕಾದಲ್ಲಿ ಆಡಿತ್ತು. ಆಗಸ್ಟ್ 27ರಂದು ಢಾಕಾದಲ್ಲಿ ಮೊದಲ ಪಂದ್ಯ, ಸೆಪ್ಟೆಂಬರ್ 4ರಂದು ಚಿತ್ತಾಗಾಂಗ್‌'ನಲ್ಲಿ 2ನೇ ಟೆಸ್ಟ್ ಪಂದ್ಯವನ್ನಾಡಲಿದೆ.

ಬಾಂಗ್ಲಾದೇಶ ಕ್ರಿಕೆಟ್ ಸಂಸ್ಥೆ ಮತ್ತು ಬಾಂಗ್ಲಾ ಸರ್ಕಾರ, ಆಸ್ಟ್ರೇಲಿಯಾ ತಂಡಕ್ಕೆ ಉತ್ತಮ ಭದ್ರತೆ ಒದಗಿಸಲಾಗುವುದು ಎಂದು ಭರವಸೆ ನೀಡಿದ ನಂತರವೇ ಆಸೀಸ್ ಪ್ರವಾಸಕ್ಕೆ ಒಪ್ಪಿಗೆ ಸೂಚಿಸಲಾಗಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಕಾರ್ಯನಿರ್ವಾಹಕ ವ್ಯವಸ್ಥಾಪಕ ಪ್ಯಾಟ್ ಹೋವಾರ್ಡ್ ಹೇಳಿದ್ದಾರೆ.

ಆಸ್ಟ್ರೇಲಿಯಾ ತಂಡ:

ಸ್ಟೀವ್ ಸ್ಮಿತ್ (ನಾಯಕ), ಡೇವಿಡ್ ವಾರ್ನರ್, ಮ್ಯಾಟ್ ರೆನ್ಶೋ, ಉಸ್ಮಾನ್ ಖವಾಜ, ಪೀಟರ್ ಹ್ಯಾಂಡ್ಸ್‌'ಕಂಬ್, ಗ್ಲೆನ್ ಮ್ಯಾಕ್ಸ್‌'ವೆಲ್, ಹಿಲ್ಟನ್ ಕಾರ್ಟ್‌ರೈಟ್, ಮ್ಯಾಥ್ಯೂ ವೇಡ್, ಪ್ಯಾಟ್ ಕಮಿನ್ಸ್, ಜೇಮ್ಸ್ ಪ್ಯಾಟಿನ್ಸನ್, ಜೋಶ್ ಹ್ಯಾಜಲ್‌'ವುಡ್, ನಥಾನ್ ಲಿಯೊನ್, ಆಸ್ಟನ್ ಅಗರ್