Asianet Suvarna News Asianet Suvarna News

ಕೊಹ್ಲಿ ಪಡೆ ಕಂಡರೆ ಆಸೀಸ್'ಗೆ ಭಯವಂತೆ..!

ಭಾರತ ವಿರುದ್ಧ ಏಕದಿನ ಸರಣಿಯಲ್ಲಿ 1-4ರ ಅಂತರದಲ್ಲಿ ಸೋಲು ಅನುಭವಿಸಿದ ಬಳಿಕ, ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಅಭಿಮಾನಿಗಳು ತಮ್ಮ ತಂಡ ಟಿ20 ಸರಣಿಯಲ್ಲಾದರೂ ಪುಟಿದೇಳಲಿದೆ ಎನ್ನುವ ನಂಬಿಕೆಯಿಟ್ಟುಕೊಂಡಿದ್ದಾರೆ. ಆದರೆ ಸರಣಿ ಆರಂಭಕ್ಕೂ ಮುನ್ನವೇ ಡೇವಿಡ್ ಆಘಾತಕಾರಿ ವಿಷಯವನ್ನು ಬಹಿರಂಗಗೊಳಿಸಿದ್ದಾರೆ.

Australia bit scared of India says coach David Saker

ನವದೆಹಲಿ(ಅ.04): ‘ಭಾರತೀಯ ನೆಲದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾವನ್ನು ಎದುರಿಸಲು ಆಸ್ಟ್ರೇಲಿಯಾ ಆಟಗಾರರು ಭಯ ಪಡುತ್ತಿದ್ದಾರೆ’.ಹೀಗೆಂದು ಹೇಳಿರುವುದು ಆಸ್ಟ್ರೇಲಿಯಾ ತಂಡದ ಹಂಗಾಮಿ ಕೋಚ್ ಡೇವಿಡ್ ಸಾಕೆರ್.

ಭಾರತ ವಿರುದ್ಧ ಏಕದಿನ ಸರಣಿಯಲ್ಲಿ 1-4ರ ಅಂತರದಲ್ಲಿ ಸೋಲು ಅನುಭವಿಸಿದ ಬಳಿಕ, ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಅಭಿಮಾನಿಗಳು ತಮ್ಮ ತಂಡ ಟಿ20 ಸರಣಿಯಲ್ಲಾದರೂ ಪುಟಿದೇಳಲಿದೆ ಎನ್ನುವ ನಂಬಿಕೆಯಿಟ್ಟುಕೊಂಡಿದ್ದಾರೆ. ಆದರೆ ಸರಣಿ ಆರಂಭಕ್ಕೂ ಮುನ್ನವೇ ಡೇವಿಡ್ ಆಘಾತಕಾರಿ ವಿಷಯವನ್ನು ಬಹಿರಂಗಗೊಳಿಸಿದ್ದಾರೆ.

‘ಆಟಗಾರರ ಮನಸ್ಥಿತಿಯೇ ಸೋಲಿಗೆ ಕಾರಣ. ಬಹುತೇಕ ಆಟಗಾರರು ಭಯಗೊಂಡಿದ್ದು, ಅದು ದೂರವಾಗುವವರೆಗೂ ಧನಾತ್ಮಕ ಫಲಿತಾಂಶ ಸಿಗುವುದಿಲ್ಲ. ಆಟಗಾರರು ಹೆಚ್ಚು ಆತ್ಮವಿಶ್ವಾಸದೊಂದಿಗೆ ಆಡಬೇಕು, ನೈಜ ಆಟ ಪ್ರದರ್ಶಿಸಬೇಕು ಎನ್ನುವ ಕಾರಣದಿಂದ ಸಹಾಯಕ ಸಿಬ್ಬಂದಿ ಸಕಲ ಪ್ರಯತ್ನಗಳನ್ನು ನಡೆಸುತ್ತಿದೆ. ಆದರೆ ಸತತವಾಗಿ ಸೋಲುತ್ತಿರುವಾಗ ಮೈದಾನಕ್ಕಿಳಿದಾಗ ಭಯಗೊಳ್ಳುವುದು ಸಹಜ. ಆದಷ್ಟು ಬೇಗ ಸಮಸ್ಯೆಗಳು ಬಗೆಹರಿಯಲಿವೆ’ ಎಂದು ಸಾಕೆರ್ ಕ್ರಿಕೆಟ್ ಆಸ್ಟ್ರೇಲಿಯಾ ವೆಬ್‌'ಸೈಟ್‌'ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

2019ರ ವಿಶ್ವಕಪ್‌'ಗೆ ಅಗ್ರ ತಂಡಗಳು ತಯಾರಿ ಆರಂಭಿಸಿದ್ದು, ಆಸ್ಟ್ರೇಲಿಯಾ ಇನ್ನೂ ಸಮಸ್ಯೆಗಳನ್ನು ಪಟ್ಟಿ ಮಾಡುವುದರಲ್ಲೇ ತೊಡಗಿದೆ ಎನ್ನುವುದಕ್ಕೆ ಪ್ರತಿಕ್ರಿಯಿಸಿರುವ ಸಾಕೆರ್ ‘ಖಂಡಿತವಾಗಿಯೂ ತವರಿನಾಚೆ ನಮ್ಮ ಪ್ರದರ್ಶನ ತೀರಾ ಕಳಪೆಯಾಗಿದೆ. ವಿಶ್ವಕಪ್ ಕೂಡ ತವರಿನಾಚೆಯೇ ನಡೆಯಲಿದ್ದು, ಅದಕ್ಕೆ ತಯಾರಿ ಆರಂಭಿಸಲಿದ್ದೇವೆ. ತಂಡದಲ್ಲಿ ಪ್ರತಿಭಾನ್ವಿತರಿದ್ದಾರೆ. ತಂಡದ ಸಂಯೋಜನೆ ಕುರಿತು ಚಿಂತನೆ ನಡೆಸಬೇಕಾದ ಅನಿವಾರ್ಯತೆ ಇದೆ’ ಎಂದು ಅವರು ಹೇಳಿದ್ದಾರೆ.

Follow Us:
Download App:
  • android
  • ios