ಬೆಂಗಳೂರು(ಫೆ.11): ಪ್ರತಿಯೊಬ್ಬರಿಗೂ ತಮ್ಮ ಜೀವನದಲ್ಲಿ ಗುರಿ ಅಥವಾ ಕನಸು ಇದ್ದೇ ಇರುತ್ತದೆ. ಈ ಕನಸು ಅಥವಾ ಗುರಿ ಸಾಧನೆಗೆ ಎದುರಾಗುವ ಎಲ್ಲ ಸಮಸ್ಯೆ, ಅಡೆತಡೆಗಳನ್ನು ಮೀರಿ ಪ್ರಯತ್ನಿಸಿ ಸಾಧಿಸಿರುವವರು ಸಾಕಷ್ಟು ಮಂದಿಯಿದ್ದಾರೆ. ಈಗ ಅಂತಹದೇ ಕನಸು ಕಾಣುತ್ತಿರುವ ರಾಜ್ಯದ ಅಥ್ಲೀಟ್ ಶ್ರುತಿ ಕೆ.ಎಸ್. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆಲ್ಲುವ ಗುರಿ ಹೊಂದಿದ್ದಾರೆ. ಅಲ್ಲದೆ ಅಂ.ರಾ. ಪದಕ ಗೆದ್ದ ಮೇಲೇಯೇ ಮದುವೆಯಾಗುವುದಾಗಿ ಹೇಳಿದ್ದಾರೆ. ಅವರು ತಮ್ಮ ಗುರಿಯ ಕುರಿತು ಸುವರ್ಣನ್ಯೂಸ್’ನ ಸಹೋದರ ಸಂಸ್ಥೆಯಾದ ‘ಕನ್ನಡಪ್ರಭ’ ದೊಂದಿಗೆ ಅನುಭವ ಹಂಚಿಕೊಂಡಿದ್ದಾರೆ.

‘ಅಥ್ಲೀಟ್ ಆಗುವುದಕ್ಕೆ ಬಹಳಷ್ಟು ಕಷ್ಟಪಟ್ಟಿದ್ದೇನೆ. ನಮ್ಮದು ಹಳ್ಳಿಯಾಗಿದ್ದರಿಂದ ಸೌಲಭ್ಯಗಳು ಕಡಿಮೆ ಇರುತ್ತಿದ್ದವು. ಮಣ್ಣಿನ ಮೈದಾನದಲ್ಲಿ ಓಡಿದ್ದೇನೆ. ಎಷ್ಟೋ ಸಾರಿ ಕಾಲು ನೋವು ಬಂದು ಹುಷಾರು ತಪ್ಪಿದ್ದೂ ಇದೆ. ಅಷ್ಟೆಲ್ಲ ಕಷ್ಟಗಳನ್ನು ಎದುರಿಸಿ ಈ ಹಂತದವರೆಗೆ ಬಂದಿದ್ದೇನೆ. ಹಲವು ಬಾರಿ ಅಂತಾರಾಷ್ಟ್ರೀಯ ಮಟ್ಟದ ಕೂಟಗಳಿಗೆ ಆಯ್ಕೆಯಾಗುವುದರಿಂದ ಕೊಂಚದರಲ್ಲೆ ತಪ್ಪಿಸಿಕೊಂಡಿದ್ದೇನೆ. ಹೀಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆಲ್ಲುವುದು ನನ್ನ ಗುರಿ. ಈ ಗುರಿ ಪೂರೈಸಿದ ಮೇಲೆಯೇ ಮದುವೆಯಾಗಬೇಕೆಂದು ನಿರ್ಧರಿಸಿದ್ದೇನೆ’ ಎಂದು 28 ವರ್ಷದ ಅಥ್ಲೀಟ್ ದಾವಣಗೆರೆಯ ಶ್ರುತಿ ಕೆ. ಎಸ್. ವಿಶ್ವಾಸದ ಮಾತುಗಳನ್ನಾಡಿದ್ದಾರೆ.

800 ಮೀ. ಮತ್ತು 1500 ಮೀ. ಅಥ್ಲೀಟ್ ಆಗಿರುವ ಶ್ರುತಿ, ದಾವಣಗೆರೆ ಜಿಲ್ಲೆಯ ಹೊನ್ನಳ್ಳಿ ತಾಲೂಕಿನ ತುಗ್ಗಲಹಳ್ಳಿ ಗ್ರಾಮದವರಾಗಿದ್ದು ಮಧ್ಯಮ ವರ್ಗದ ಕುಟುಂಬದಿಂದ ಬಂದಿದ್ದಾರೆ. ತಂದೆ ಶಿಕ್ಷಕರಾಗಿದ್ದು, ತಾಯಿ ಗೃಹಿಣಿಯಾಗಿದ್ದಾರೆ. 3 ಎಕರೆ ಜಮೀನು ಇದ್ದರೂ, ಉತ್ಪನ್ನ ಕಡಿಮೆ. ಸದ್ಯ ಬೆಂಗಳೂರಿನ ಸಾಯ್‌ನಲ್ಲಿ ತರಬೇತಿ ಪಡೆಯುತ್ತಿರುವ ಶ್ರುತಿ, ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದಲ್ಲಿ ಸಾಕಷ್ಟು ಪದಕಗಳನ್ನು ಗೆದ್ದಿದ್ದಾರೆ. ಸದ್ಯ ಮಾರ್ಚ್‌ನಲ್ಲಿ ನಡೆಯಲಿರುವ ಫೆಡರೇಷನ್ ಕಪ್'ನಲ್ಲಿ ಭಾಗವಹಿಸುವುದಕ್ಕಾಗಿ ಸಿದ್ಧತೆ ನಡೆಸಿದ್ದು, ಕೋಚ್ ಶಿವಾನಂದ್ ಬಳಿ ತರಬೇತಿ ಪಡೆಯುತ್ತಿದ್ದಾರೆ. 

‘ಚಿಕ್ಕವಳಿದ್ದಾಗ ಅಥ್ಲೀಟ್ ಆಗುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಆದರೆ ನನ್ನಲ್ಲಿರುವ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸಿದ್ದು ಗುರುಗಳಾದ ಮಂಜುನಾಥ್. ಅವರು ನನಗೆ ಅಗತ್ಯವಿರುವ ತರಬೇತಿ ನೀಡಿ ಪ್ರೋತ್ಸಾಹಿಸಿದರು. ಬಳಿಕ ಶಾಲಾ ಹಾಗೂ ಕಾಲೇಜು ಹಂತದಲ್ಲಿ ಪದಕಗಳನ್ನು ಗೆಲ್ಲುತ್ತಾ ಬಂದೆ. ಸದ್ಯ ಸಾಯ್‌ನಲ್ಲಿ ತರಬೇತಿ ಪಡೆಯುತ್ತಿದ್ದು, ಕೋಚ್ ಶಿವಾನಂದ್ ತರಬೇತಿ ನೀಡುತ್ತಿದ್ದಾರೆ. ಫೆಡರೇಷನ್ ಕಪ್‌ನಲ್ಲಿ ಪದಕ ಗೆಲ್ಲುವ ಭರವಸೆಯಿದೆ’ ಎಂದು ಶ್ರುತಿ ಹೇಳಿದ್ದಾರೆ.

ಪೋಷಕರಿಂದ ಮದುವೆಗೆ ಒತ್ತಾಯ: ಮನೆಯಲ್ಲಿ ಮದುವೆಯಾಗಲು ಒತ್ತಾಯಿಸುತ್ತಿದ್ದಾರೆ. ಆದರೆ ನಾನು ಗುರಿ ತಲುಪಿದ ಮೇಲೆಯೇ ಮದುವೆಯಾಗುತ್ತೇನೆ ಎಂದು ಹೇಳಿದ್ದಕ್ಕೆ ಅಮ್ಮ ವಿರೋಧ ವ್ಯಕ್ತಪಡಿಸಿದರು. ಆದರೆ ತಂದೆ ನನ್ನ ಸಹಾಯಕ್ಕೆ ನಿಂತರು. ಅಮ್ಮ ಈಗಲೂ ಮದುವೆಯಾಗುವುದಕ್ಕೆ ಒತ್ತಾಯಿಸುತ್ತಾರೆ. ಆದರೆ ಮದುವೆಯಾದ ಮೇಲೆ ಜವಾಬ್ದಾರಿಗಳು ಹೆಚ್ಚುವುದರಿಂದ ಗುರಿ ತಲುಪುವುದಕ್ಕೆ ಸಾಧನೆ ಮಾಡುವುದಕ್ಕೆ ಸಾಕಷ್ಟು ಅಡ್ಡಿಯಾಗುತ್ತದೆ. ಹೀಗಾಗಿ ನಾನು ಮದುವೆಗೆ ಮುಂಚೆಯೇ ಸಾಧನೆ ಮಾಡಬೇಕು ಎಂದುಕೊಂಡಿದ್ದೇನೆ ಎಂದು ಶ್ರುತಿ ಹೇಳಿದರು.

4 ವರ್ಷದ ಹಿಂದೆ ಅಪಘಾತ: ನಾಲ್ಕು ವರ್ಷಗಳ ಹಿಂದೆ ಶ್ರುತಿ ಅಪಘಾತಕ್ಕೀಡಾಗಿದ್ದರು. ಇದರಿಂದಾಗಿ ಬೆನ್ನುನೋವಿಗೆ ತುತ್ತಾದ ಅವರಿಗೆ ನಡೆಯಲು ಸಹ ಆಗುತ್ತಿರಲಿಲ್ಲ. ಇದು ಅವರ ಅಥ್ಲೀಟ್ ಜೀವನಕ್ಕೆ ಭಾರೀ ಹಿನ್ನಡೆಯನ್ನುಂಟು ಮಾಡಿತು. ನೋವಿನಿಂದ ಸಂಪೂರ್ಣ ಚೇತರಿಸಿಕೊಳ್ಳಲು 4 ವರ್ಷ ಬೇಕಾಯಿತು. ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಒಂದು ವರ್ಷದಿಂದ ಅಭ್ಯಾಸ ಮಾಡುತ್ತಿದ್ದಾರೆ.

ವರದಿ: ಮಲ್ಲಪ್ಪ ಸಿ. ಪಾರೇಗಾಂವ, ಕನ್ನಡಪ್ರಭ