Asian Para Games 2023: ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲೂ ಭಾರತಕ್ಕೆ 100 ಪದಕಗಳು ಖಾತ್ರಿ..!
ಎರಡೂ ಕೈಗಳಿಲ್ಲದಿದ್ದರೂ ಆರ್ಚರಿಯಲ್ಲಿ ಸ್ಪರ್ಧಿಸುತ್ತಿರುವ ಶೀತಲ್ ದೇವಿ ಕೂಟದಲ್ಲಿ 2ನೇ ಚಿನ್ನ ಗೆದ್ದಿದ್ದು, ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳೆ ಎನಿಸಿದ್ದಾರೆ.
ಹಾಂಗ್‌ಝೋ(ಅ.28): ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಈ ಬಾರಿ ಪದಕದಲ್ಲಿ ‘ಟಾರ್ಗೆಟ್ 100’ ತಲುಪುವುದು ಖಚಿತವಾಗಿದೆ. ಪದಕ ಬೇಟೆ ನಾಗಾಲೋಟ ಮುಂದುವರಿಸಿರುವ ಭಾರತೀಯರು ಶನಿವಾರ ಮತ್ತೆ ಸೇರಿ 17 ಪದಕಗಳನ್ನು ಕೊರಳಿಗೇರಿಸಿಕೊಂಡಿದ್ದು, ಒಟ್ಟಾರೆ ಪದಕ ಗಳಿಕೆ 25 ಚಿನ್ನ ಸೇರಿ 99ಕ್ಕೆ ಹೆಚ್ಚಳವಾಗಿದೆ. ಕೊನೆ ದಿನವಾದ ಶನಿವಾರ ಭಾರತಕ್ಕೆ ಕೆಲ ಸ್ಪರ್ಧೆಗಳಲ್ಲಿ ಪದಕ ಖಚಿತವಾಗಿದ್ದು, 100ರ ಗಡಿ ದಾಟಲಿದೆ. ಸದ್ಯ ಭಾರತ ಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದೆ. ಪ್ರಾಬಲ್ಯ ಮುಂದುವರಿಸಿರುವ ಚೀನಾ 195 ಚಿನ್ನ ಸೇರಿ ಬರೋಬ್ಬರಿ 492 ಪದಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದೆ.
ಶುಕ್ರವಾರ ಭಾರತಕ್ಕೆ 7 ಚಿನ್ನದ ಪದಕ ಒಲಿಯಿತು. ಬ್ಯಾಡ್ಮಿಂಟನ್‌ನಲ್ಲೇ 4 ಬಂಗಾರ ಭಾರತದ ಪಾಲಾಯಿತು. ಪ್ಯಾರಾಲಿಂಪಿಕ್ ಚಾಂಪಿಯನ್ ಪ್ರಮೋದ್ ಭಗತ್ ಪುರುಷರ ಸಿಂಗಲ್ಸ್ ಎಸ್‌ಎಲ್3 ವಿಭಾಗದಲ್ಲಿ, ತುಳಸ್ಮತಿ ಮಹಿಳಾ ಸಿಂಗಲ್ಸ್ ಎಸ್‌ಯು5 ವಿಭಾಗದಲ್ಲಿ, ನಿತೇಶ್-ತರುಣ್ ಪುರುಷರ ಡಬಲ್ಸ್ ಎಸ್‌ಎಲ್3-ಎಸ್ಎಲ್‌ಎಫ್4 ವಿಭಾಗದಲ್ಲಿ ಚಿನ್ನ ಸಂಪಾದಿಸಿದರು. 1500 ಮೀ. ಟಿ28 ವಿಭಾಗದಲ್ಲಿ ರಮನ್ ಶರ್ಮಾ ಏಷ್ಯನ್ ದಾಖಲೆ(4 ನಿಮಿಷ 20.80 ಸೆಕೆಂಡ್) ಯೊಂದಿಗೆ ಚಿನ್ನ ಗೆದ್ದರು. ಪುರುಷರ ಲಾಂಗ್‌ಜಂಪ್ ಟಿ64 ವಿಭಾಗದಲ್ಲಿ ಧರ್ಮರಾಜ್ ಬಂಗಾರದ ಸಾಧನೆ ಮಾಡಿದರು.
ನನ್ನ ಗರ್ಲ್‌ಫ್ರೆಂಡ್___!ಬ್ಯಾಚುಲರ್ ಹುಡುಗರಿಗೆ ಒಂದೇ ವಾಕ್ಯದಲ್ಲಿ ಪ್ರೀತಿ ಪಾಠ ಹೇಳಿದ ಧೋನಿ!
ಎರಡೂ ಕೈಗಳಿಲ್ಲದ ಶೀತಲ್‌ಗೆ 2 ಚಿನ್ನ!
ಎರಡೂ ಕೈಗಳಿಲ್ಲದಿದ್ದರೂ ಆರ್ಚರಿಯಲ್ಲಿ ಸ್ಪರ್ಧಿಸುತ್ತಿರುವ ಶೀತಲ್ ದೇವಿ ಕೂಟದಲ್ಲಿ 2ನೇ ಚಿನ್ನ ಗೆದ್ದಿದ್ದು, ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳೆ ಎನಿಸಿದ್ದಾರೆ. ಶುಕ್ರವಾರ ಜಮ್ಮು-ಕಾಶ್ಮೀರದ 16ರ ಶೀತಲ್ ವೈಯಕ್ತಿಕ ಕಾಂಪೌಂಡ್ ವಿಭಾಗದಲ್ಲಿ ಚಿನ್ನ ಗೆದ್ದರು. ಇದಕ್ಕೂ ಮುನ್ನ ಕಾಂಪೌಂಡ್ ಮಿಶ್ರ ತಂಡ ವಿಭಾಗದಲ್ಲಿ ಚಿನ್ನ, ಮಹಿಳೆಯರ ಡಬಲ್ಸ್‌ನಲ್ಲಿ ಬೆಳ್ಳಿ ಸಂಪಾದಿಸಿದ್ದರು. ಅಂದ ಹಾಗೆ ಶೀತಲ್ ಎರಡೂ ಕೈಗಳಿಲ್ಲದೇ ಅಂತಾರಾಷ್ಟ್ರೀಯ ಮಟ್ಟದ ಆರ್ಚರಿಯಲ್ಲಿ ಸ್ಪರ್ಧಿಸುತ್ತಿರುವ ಏಕೈಕ ಮಹಿಳಾ ಸ್ಪರ್ಧಿ.
ಐಎಎಸ್ ಅಧಿಕಾರಿ ಸುಹಾಸ್‌ಗೆ ಬಂಗಾರ
ಕರ್ನಾಟಕ ಮೂಲದ ಉ.ಪ್ರದೇಶ ಕೇಡರ್ ಐಎಎಸ್ ಅಧಿಕಾರಿ ಸುಹಾಸ್ ಈ ಬಾರಿ ಬ್ಯಾಡ್ಮಿಂಟನ್‌ನಲ್ಲಿ ನಿರೀಕ್ಷೆಯಂತೆಯೇ ಚಿನ್ನ ಗೆದ್ದಿದ್ದಾರೆ. ಪ್ಯಾರಾಲಿಂಪಿಕ್ ಬೆಳ್ಳಿ ಗೆದ್ದಿದ್ದ ಸುಹಾಸ್, ಕಳೆದ ಏಷ್ಯಾಡ್‌ನಲ್ಲಿ ತಂಡ ವಿಭಾಗದಲ್ಲಿ ಕಂಚು ಗೆದ್ದಿದ್ದರು. ಸುಹಾಸ್ ಅವರು ಸದ್ಯ ಉ.ಪ್ರದೇಶ ಸರ್ಕಾರದ ಕ್ರೀಡಾ ಇಲಾಖೆ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ದ್ರಾವಿಡ್ ಕೋಚ್ ಅವಧಿ ಶೀಘ್ರದಲ್ಲೇ ಅಂತ್ಯ, ಆಸ್ಟ್ರೇಲಿಯಾ ಸರಣಿಗೆ ವಿವಿಎಸ್ ಲಕ್ಷ್ಮಣ್‌ಗೆ ಜವಾಬ್ದಾರಿ!
ಕ್ರೀಡಾಕೂಟಕ್ಕೆ ಇಂದು ತೆರೆ
ಅ.22ರಂದು ಅಧಿಕೃತವಾಗಿ ಚಾಲನೆ ದೊರೆತಿದ್ದ ಕ್ರೀಡಾಕೂಟಕ್ಕೆ ಶನಿವಾರ ತೆರೆ ಬೀಳಲಿದೆ. ಅದ್ಧೂರಿ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿದ್ದ ಆಯೋಜಕರು ಸಮಾರೋಪ ಸಮಾರಂಭವನ್ನೂ ವಿಧ್ಯುಕ್ತವಾಗಿ ನಡೆಸಲು ನಿರ್ಧರಿಸಿದ್ದಾರೆ.
ರಾಜ್ಯದ ರಕ್ಷಿತಾಗೆ ಸಿಎಂ ಅಭಿನಂದನೆ
ಕೂಟದಲ್ಲಿ ಮಹಿಳೆಯರ 1500ಮೀ.ನಲ್ಲಿ ಚಿನ್ನ ಗೆದ್ದ ರಕ್ಷಿತಾ ರಾಜುಗೆ ಕರ್ನಾಟಕ ಸಿಎಂ ಸಿದ್ದರಾಮಯ್ಯ ಅಭಿನಂದನೆ ಸಲ್ಲಿಸಿದ್ದಾರೆ. ರಕ್ಷಿತಾ ಸಾಧನೆ ಕರ್ನಾಟಕಕ್ಕೆ ಹೆಮ್ಮೆ ತಂದಿದೆ ಎಂದು ಟ್ವೀಟ್ ಮೂಲಕ ಕೊಂಡಾಡಿದ್ದಾರೆ.