Asianet Suvarna News Asianet Suvarna News

Asian Games 2023: ಕಬಡ್ಡಿಯಲ್ಲಿ ಭಾರತೀಯರ ಸ್ವರ್ಣ ಸಾಧನೆ.! ರಣರಂಗವಾದ ಕಬಡ್ಡಿ ಅಂಕಣ! ನಿಯಮದಲ್ಲಿ ಏನಿದೆ?

ಶನಿವಾರ ಪುರುಷರ ಫೈನಲ್‌ ಪಂದ್ಯ ಅಕ್ಷರಶ ರಣರಂಗವಾಗಿ ಮಾರ್ಪಟ್ಟಿತ್ತು. ಇದಕ್ಕೆ ಕಾರಣವಾಗಿದ್ದು ‘ಲಾಬಿ’ ನಿಮಯ ವಿಚಾರದಲ್ಲಿ ರೆಫ್ರಿಗಳು ಮಾಡಿದ ಎಡವಟ್ಟು. ಪಂದ್ಯ ಮುಗಿಯಲು 80 ಸೆಕೆಂಡ್‌ ಬಾಕಿ ಇರುವಾಗ ಭಾರತ ಹಾಗೂ ಇರಾನ್‌ 28-28ರಲ್ಲಿ ಸಮಬಲ ಸಾಧಿಸಿದ್ದವು.

Asian Games 2023 Kabaddi Final India vs Iran Controversy all fans need to know kvn
Author
First Published Oct 8, 2023, 10:41 AM IST | Last Updated Oct 8, 2023, 10:41 AM IST

ಹಾಂಗ್ಝೂ(ಅ.08): ಏಷ್ಯಾಡ್‌ ಇತಿಹಾಸದಲ್ಲೇ ಭಾರತದ ಕಬಡ್ಡಿ ಪುರುಷರ, ಮಹಿಳಾ ತಂಡಗಳದ್ದೇ ಅಧಿಪತ್ಯ ಇದ್ದರೂ ಕಳೆದ ಆವೃತ್ತಿಯಲ್ಲಿ ಎರಡೂ ತಂಡಗಳ ಚಿನ್ನದ ಬೇಟೆಗೆ ಬ್ರೇಕ್‌ ಬಿದ್ದಿತ್ತು. ಆದರೆ ಈ ಬಾರಿ ಮತ್ತೊಮ್ಮೆ ಎರಡೂ ತಂಡಗಳು ಚಾಂಪಿಯನ್‌ ಆಗಿ ಹೊರಹೊಮ್ಮಿವೆ. ರೋಚಕ ಅಂತ್ಯ ಕಂಡ ಎರಡೂ ಫೈನಲ್‌ಗಳಲ್ಲಿ ಎದುರಾಳಿ ತಂಡಗಳಿಗೆ ಭಾರತೀಯರು ಆಘಾತ ನೀಡಲು ಯಶಸ್ವಿಯಾದರು.

ಶನಿವಾರ ನಡೆದ ಫೈನಲ್‌ನಲ್ಲಿ ಮಹಿಳಾ ತಂಡ ಚೈನೀಸ್‌ ತೈಪೆ ವಿರುದ್ಧ 29-28ರಲ್ಲಿ ರೋಚಕ ಗೆಲುವು ಸಾಧಿಸಿತು. ಗುಂಪು ಹಂತದ ಮೊದಲ ಪಂದ್ಯದಲ್ಲಿ ಚೈನೀಸ್‌ ತೈಪೆ ವಿರುದ್ಧ ಟೈ ಮಾಡಿಕೊಂಡಿದ್ದ ಭಾರತ ಚಿನ್ನದ ಪದಕದ ಸೆಣಸಾಟದಲ್ಲಿ ತಪ್ಪು ಮಾಡಲಿಲ್ಲ. ಈ ಮೊದಲು 2010, 2014ರಲ್ಲಿ ಚಿನ್ನ ಗೆದ್ದಿದ್ದ ಭಾರತ, 2018ರಲ್ಲಿ ಇರಾನ್‌ ವಿರುದ್ಧ ಫೈನಲ್‌ನಲ್ಲಿ ಸೋತು ರನ್ನರ್‌-ಅಪ್‌ ಆಗಿತ್ತು. ಈ ಬಾರಿ 3ನೇ ಚಿನ್ನವನ್ನು ಕೊರಳಿಗೇರಿಸಿಕೊಂಡಿದೆ.

ಇದೇ ವೇಳೆ ಪುರುಷರ ತಂಡ ಫೈನಲ್‌ನಲ್ಲಿ ಕಳೆದ ಆವೃತ್ತಿಯ ಚಾಂಪಿಯನ್‌ ಇರಾನ್‌ ವಿರುದ್ಧ 33-29ರಲ್ಲಿ ಗೆಲುವು ಸಾಧಿಸಿ 8ನೇ ಬಾರಿಗೆ ಚಿನ್ನ ಹೆಕ್ಕಿತು. ಟೂರ್ನಿಯುದ್ದಕ್ಕೂ ಪ್ರಾಬಲ್ಯ ಮೆರೆದಿದ್ದ ಪವನ್‌ ಶೆರಾವತ್‌ ನೇತೃತ್ವದ ಭಾರತ ತಂಡಕ್ಕೆ ಫೈನಲ್‌ನಲ್ಲಿ ಪ್ರಬಲ ಪೈಪೋಟಿ ಎದುರಾಯಿತಾದರೂ, ಚಿನ್ನ ಕೈ ತಪ್ಪಲಿಲ್ಲ.

ಏಷ್ಯಾಡ್‌ನಲ್ಲಿ ಭಾರತ ಐತಿಹಾಸಿಕ ಶತಕಪದಕೋತ್ಸವ..!

ಆರಂಭದಲ್ಲಿ ಭಾರತ 6-10ರಿಂದ ಹಿನ್ನಡೆ ಅನುಭವಿಸಿದರೂ ಮೊದಲಾರ್ಧದ ಮುಕ್ತಾಯಕ್ಕೆ ಒಂದು ನಿಮಿಷ ಬಾಕಿ ಇದ್ದಾಗ ಇರಾನನ್ನು ಆಲೌಟ್‌ ಮಾಡಿ ಭಾರತ ಮುನ್ನಡೆ ಪಡೆಯಿತು. ದ್ವಿತೀಯಾರ್ಧದ ಮೊದಲ 10 ನಿಮಿಷ ಮುನ್ನಡೆ ಕಾಯ್ದುಕೊಂಡಿದ್ದ ಭಾರತ ಮತ್ತೆ ಮಂಕಾಯಿತು. ನಿರ್ಣಾಯಕ ಹಂತದಲ್ಲಿ ಭಾರತವನ್ನು ಆಲೌಟ್‌ ಮಾಡಿ ಸಮಬಲ ಸಾಧಿಸಿದ ಇರಾನ್‌, ನಿಯಮದಲ್ಲಿರುವ ಲೋಪದಿಂದಾಗಿ ಕೊನೆಯ 80 ಸೆಕೆಂಡ್‌ ಬಾಕಿ ಇದ್ದಾಗ 3 ಅಂಕ ಕಳೆದುಕೊಂಡು ಭಾರತದ ಹಾದಿಯನ್ನು ಸುಗಮಗೊಳಿಸಿತು. 1990ರಿಂದ ಸತತ 7 ಬಾರಿ ಚಿನ್ನ ಗೆದ್ದಿದ್ದ ಭಾರತ ಕಳೆದ ಬಾರಿ ಕಂಚಿನ ಪದಕಕ್ಕೆ ತೃಪ್ತಿಪಟ್ಟಿತ್ತು.

ರಣರಂಗವಾದ ಕಬಡ್ಡಿ ಅಂಕಣ!

ಶನಿವಾರ ಪುರುಷರ ಫೈನಲ್‌ ಪಂದ್ಯ ಅಕ್ಷರಶ ರಣರಂಗವಾಗಿ ಮಾರ್ಪಟ್ಟಿತ್ತು. ಇದಕ್ಕೆ ಕಾರಣವಾಗಿದ್ದು ‘ಲಾಬಿ’ ನಿಮಯ ವಿಚಾರದಲ್ಲಿ ರೆಫ್ರಿಗಳು ಮಾಡಿದ ಎಡವಟ್ಟು. ಪಂದ್ಯ ಮುಗಿಯಲು 80 ಸೆಕೆಂಡ್‌ ಬಾಕಿ ಇರುವಾಗ ಭಾರತ ಹಾಗೂ ಇರಾನ್‌ 28-28ರಲ್ಲಿ ಸಮಬಲ ಸಾಧಿಸಿದ್ದವು.

ಡು ಆರ್‌ ಡೈ ರೈಡ್‌ಗೆ ತೆರಳಿದ ಪವನ್‌, ಇರಾನ್‌ನ ಅಂಕಣದಾಳಕ್ಕೆ ನುಗ್ಗಿದರು. ಸಮಯದ ಅಭಾವದಿಂದಾಗಿ ಅಂಕ ಗಳಿಸಲು ಸಾಧ್ಯವಿಲ್ಲ ಎನ್ನುವುದು ಗೊತ್ತಾಗುತ್ತಲೇ ಪವನ್‌ ‘ಲಾಬಿ’ ನಿಯಮದ ಲಾಭವೆತ್ತಲು ಇರಾನಿ ಡಿಫೆಂಡರ್‌ಗಳನ್ನು ಮುಟ್ಟದೆ ಲಾಬಿ ಪ್ರವೇಶಿಸಿದರು.

ಆಸೀಸ್ ಎದುರಿನ ಪಂದ್ಯಕ್ಕೂ ಮುನ್ನ ಗಿಲ್ ಬಗ್ಗೆ ಮಹತ್ವದ ಹೆಲ್ತ್ ಅಪ್ಡೇಟ್ ಕೊಟ್ಟ ಕೋಚ್ ರಾಹುಲ್ ದ್ರಾವಿಡ್..!

ಈ ವೇಳೆ ಇರಾನ್‌ನ ರೈಟ್‌ ಕಾರ್ನರ್‌ ಡಿಫೆಂಡರ್‌ ಅಮೀರ್‌ಹೊಸೈನ್‌ ಬಸ್ತಾಮಿ ಅಂಕಣದಿಂದ ಹೊರಕ್ಕೆ ಕಾಲಿಟ್ಟಿದ್ದರಿಂದ ಪವರ್‌ ಜೊತೆಗೆ ಅವರನ್ನೂ ಔಟ್‌ ಎಂದು ಲೈನ್‌ ಅಂಪೈರ್‌ಗಳು ನಿರ್ಧರಿಸಿದರು. ಆದರೆ ಪವನ್‌ ಡಿಫೆಂಡರ್‌ ಅನ್ನು ಮುಟ್ಟದೆ ಲಾಬಿ ಪ್ರವೇಶಿಸಿದಾಗ, ಇತರೆ ನಾಲ್ವರು ಡಿಫೆಂಡರ್‌ಗಳು ಸಹ ಪವನ್‌ರನ್ನು ಹಿಂಬಾಲಿಸಿ ಲಾಬಿ ಪ್ರವೇಶಿಸಿದ್ದರು. ಹೊಸ ನಿಯಮದ ಪ್ರಕಾರ ತಲಾ ಒಂದು ಅಂಕ ನೀಡಬೇಕೋ ಅಥವಾ ಹಳೆಯ ನಿಯಮದ ಪ್ರಕಾರ ಭಾರತಕ್ಕೆ 4 ಅಂಕ, ಇರಾನ್‌ಗೆ 1 ಅಂಕ ನೀಡಬೇಕೋ ಎನ್ನುವುದು ರೆಫ್ರಿಗಳಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿತು. ನಿಯಮದ ಬಗ್ಗೆ ಯಾರೊಬ್ಬರಿಗೂ ಸ್ಪಷ್ಟತೆ ಇರಲಿಲ್ಲ.

ಈ ನಡುವೆ ತಾಳ್ಮೆ ಕಳೆದುಕೊಂಡ ಎರಡೂ ತಂಡಗಳ ಆಟಗಾರರು, ಕೋಚ್‌ಗಳು ರೆಫ್ರಿಗಳ ಜೊತೆ ಹಾಗೂ ಪರಸ್ಪರ ವಾಗ್ವಾದಕ್ಕಿಳಿದರು. ಏಷ್ಯನ್‌ ಕಬಡ್ಡಿ ಫೆಡರೇಶನ್‌ ಅಧಿಕಾರಿಗಳು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದರೂ, ಎರಡೂ ತಂಡಗಳು ಅಂಕ ಕಳೆದುಕೊಳ್ಳಲು ಸಿದ್ಧರಿರಲಿಲ್ಲ. ಕೊನೆಗೆ ಅಂತಾರಾಷ್ಟ್ರೀಯ ಕಬಡ್ಡಿ ಫೆಡರೇಶನ್‌ ಅಧಿಕಾರಿಗಳನ್ನು ಸಂಪರ್ಕಿಸಿ ನಿಯಮದ ಬಗ್ಗೆ ಸ್ಪಷ್ಟನೆ ಕೇಳಿ ಬಳಿಕ ಭಾರತಕ್ಕೆ 3, ಇರಾನ್‌ಗೆ 1 ಅಂಕ ನೀಡಲಾಯಿತು. ಇದು ಭಾರತದ ಚಿನ್ನದ ಹಾದಿಯನ್ನು ಸಲೀಸಾಗಿಸಿತು.

ನಿಯಮದಲ್ಲಿ ಏನಿದೆ?

1. ಪ್ರೊ ಕಬಡ್ಡಿಯಲ್ಲಿ ಹಿಂದೊಮ್ಮೆ ಇದೇ ಸನ್ನಿವೇಶ ಎದುರಾಗಿ ಬೆಂಗಳೂರು ವಿರುದ್ಧ ಬೆಂಗಾಲ್‌ ಒಂದೇ ರೈಡ್‌ನಲ್ಲಿ 8 ಅಂಕ ಪಡೆದಿತ್ತು. ಆ ನಂತರ ಈ ವಿವಾದಾತ್ಮಕ ನಿಯಮವನ್ನು ಪ್ರೊ ಕಬಡ್ಡಿಯಿಂದ ತೆಗೆದು ಹಾಕಲಾಯಿತು. ಲೀಗ್‌ನಲ್ಲಿರುವ ಸದ್ಯದ ನಿಯಮದ ಪ್ರಕಾರ, ರೈಡರ್‌ ಲಾಬಿ ಪ್ರವೇಶಿಸಿದ ತಕ್ಷಣ ಆ ರೈಡ್‌ ಅಂತ್ಯಗೊಳ್ಳಲಿದೆ. ಒಂದು ವೇಳೆ ರೈಡರ್‌ ಎದುರಾಳಿ ಡಿಫೆಂಡರ್‌ಗಳನ್ನು ಮುಟ್ಟದೆ ಲಾಬಿ ಪ್ರವೇಶಿಸಿದಾಗ ಆತನನ್ನು ಲಾಬಿಗೆ ಹಿಂಬಾಲಿಸುವ ಡಿಫೆಂಡರ್‌ಗಳು ಔಟ್‌ ಎಂದು ಪರಿಗಣಿಸಲಾಗುವುದಿಲ್ಲ.

2. ಪ್ರೊ ಕಬಡ್ಡಿಯಲ್ಲಿ ಬದಲಾಗಿರುವ ನಿಯಮವನ್ನು ಅಂತಾರಾಷ್ಟ್ರೀಯ ಕಬಡ್ಡಿ ಫೆಡರೇಶನ್‌ ಇನ್ನೂ ಅಳವಡಿಸಿಕೊಂಡಿಲ್ಲ. ರೈಡರ್‌, ಡಿಫೆಂಡರ್‌ ಅನ್ನು ಮುಟ್ಟದೆ ಲಾಬಿ ಪ್ರವೇಶಿಸಿದಾಗ ಆತನನ್ನು ಹಿಂಬಾಲಿಸುವ ಡಿಫೆಂಡರ್‌ಗಳೂ ಔಟಾಗಲಿದ್ದಾರೆ. ಉದಾಹರಣೆಗೆ ಐಪಿಎಲ್‌ನಲ್ಲಿ ಇಂಪ್ಯಾಕ್ಟ್‌ ಆಟಗಾರ ನಿಯಮವಿದೆ, ಆದರೆ ಅಂ.ರಾ. ಟಿ20ಯಲ್ಲಿ ಈ ನಿಯಮವಿಲ್ಲ. ನಿಯಮದ ಸಂಪೂರ್ಣ ಅರಿವಿದ್ದ ಭಾರತ, ನಿಯಮಾನುಸಾರ ತನಗೆ ಸಿಗಬೇಕಿರುವ ಅಂಕಗಳಿಗೆ ಹೋರಾಡಿತು.
 

Latest Videos
Follow Us:
Download App:
  • android
  • ios