ಆಸೀಸ್ ಎದುರಿನ ಪಂದ್ಯಕ್ಕೂ ಮುನ್ನ ಗಿಲ್ ಬಗ್ಗೆ ಮಹತ್ವದ ಹೆಲ್ತ್ ಅಪ್ಡೇಟ್ ಕೊಟ್ಟ ಕೋಚ್ ರಾಹುಲ್ ದ್ರಾವಿಡ್..!
ಚೆನ್ನೈ: 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ತನ್ನ ಅಭಿಯಾನ ಆರಂಭಿಸಲು ಸಜ್ಜಾಗಿದೆ. ಹೀಗಿರುವಾಗಲೇ ಟೀಂ ಇಂಡಿಯಾ ಸ್ಪೋಟಕ ಆರಂಭಿಕ ಬ್ಯಾಟರ್ ಶುಭ್‌ಮನ್ ಗಿಲ್‌ಗೆ ಡೆಂಗ್ಯೂ ತಗುಲಿರುವುದು ದೃಢಪಟ್ಟಿದೆ. ಇದು ಟೀಂ ಇಂಡಿಯಾ ಪಾಳಯದಲ್ಲಿ ಆತಂಕ ಮನೆ ಮಾಡುವಂತೆ ಮಾಡಿದೆ. ಹೀಗಿರುವಾಗಲೇ ಟೀಂ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್, ಗಿಲ್ ಆರೋಗ್ಯದ ಕುರಿತಂತೆ ಮಹತ್ವದ ಅಪ್‌ಡೇಟ್ ನೀಡಿದ್ದಾರೆ.
ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಅಕ್ಟೋಬರ್ 08ರಂದು ಚೆನ್ನೈನ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ 5 ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ದ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.
ಭಾರತ ಆಡಲಿರುವ ಮೊದಲ ಪಂದ್ಯಕ್ಕೂ ಮುನ್ನ ರೋಹಿತ್ ಪಡೆಗೆ ಬಿಗ್ ಶಾಕ್ ಎದುರಾಗಿದ್ದು, ತಂಡದ ಸ್ಪೋಟಕ ಆರಂಭಿಕ ಬ್ಯಾಟರ್ ಗಿಲ್‌ಗೆ ಡೆಂಗ್ಯೂ ಬಂದಿರುವುದು ದೃಢ ಪಟ್ಟಿದೆ. ಇದು ಟೀಂ ಮ್ಯಾನೇಜ್‌ಮೆಂಟ್ ತಲೆನೋವು ಹೆಚ್ಚುವಂತೆ ಮಾಡಿದೆ.
ಯಾಕೆಂದರೆ 2023ರಲ್ಲಿ ಏಕದಿನ ಕ್ರಿಕೆಟ್ ಮಾದರಿಯಲ್ಲಿ ಟೀಂ ಇಂಡಿಯಾ ಪರ ಗರಿಷ್ಠ ರನ್ ಬಾರಿಸಿ ಮಿಂಚಿರುವ ಗಿಲ್, ಸದ್ಯ ರೆಡ್ ಹಾಟ್ ಫಾರ್ಮ್‌ನಲ್ಲಿದ್ದಾರೆ. ಕಳೆದ 4 ಏಕದಿನ ಪಂದ್ಯಗಳಲ್ಲಿ ಗಿಲ್ 2 ಶತಕ ಹಾಗೂ ಒಂದು ಅರ್ಧಶತಕ ಚಚ್ಚಿದ್ದರು.
ಶುಭ್‌ಮನ್ ಗಿಲ್‌ಗೆ ಡೆಂಗ್ಯೂ ದೃಢಪಟ್ಟಿರುವುದರಿಂದ, ಆಸ್ಟ್ರೇಲಿಯಾ ಎದುರಿನ ಹೈವೋಲ್ಟೇಜ್ ಪಂದ್ಯದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವುದು ಅನುಮಾನ ಎನಿಸಿದೆ. ಹೀಗಿರುವಾಗಲೇ ಗಿಲ್ ಆರೋಗ್ಯದ ಕುರಿತಂತೆ ರಾಹುಲ್ ದ್ರಾವಿಡ್ ಮಹತ್ವದ ಅಪ್‌ಡೇಟ್ ನೀಡಿದ್ದಾರೆ.
ಈ ಕುರಿತಂತೆ ಮಾಧ್ಯಮದವರ ಜತೆಗೆ ಮಾತನಾಡಿರುವ ರಾಹುಲ್ ದ್ರಾವಿಡ್, ಶುಭ್‌ಮನ್ ಗಿಲ್ ಅವರು ತುಂಬಾ ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಪ್ರತಿನಿತ್ಯ ಬಿಸಿಸಿಐ ವೈದ್ಯಕೀಯ ಸಿಬ್ಬಂದಿ ಅವರ ಆರೋಗ್ಯದ ಮೇಲೆ ನಿಗಾ ಇಟ್ಟಿದ್ದಾರೆ ಎಂದು ಹೇಳಿದ್ದಾರೆ.
ಇನ್ನೂ ಸಾಕಷ್ಟು ಸಮಯ ಇರುವುದರಿಂದ ಈಗಲೇ ಅವರು ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ವೈದ್ಯಕೀಯ ಸಿಬ್ಬಂದಿಗಳು ಕೂಡಾ ಅವರು ಮೊದಲ ಪಂದ್ಯದಿಂದ ಹೊರಬಿದ್ದಿದ್ದಾರೆ ಎಂದು ಹೇಳಿಲ್ಲ. ಹೀಗಾಗಿ ಇನ್ನು ಕೆಲಕಾಲ ಕಾದು ನೋಡಿ ಸೂಕ್ತ ನಿರ್ಧಾರವನ್ನು ಕೈಗೊಳ್ಳಲಿದ್ದೇವೆ ಎಂದು ದ್ರಾವಿಡ್ ಹೇಳಿದ್ದಾರೆ.
ದ್ರಾವಿಡ್ ಅವರ ಈ ಮಾತು ಟೀಂ ಇಂಡಿಯಾ ಅಭಿಮಾನಿಗಳ ಪಾಲಿಗೆ ಆಶಾದಾಯಕ ಬೆಳವಣಿಗೆ ಎನಿಸಿದೆ. ಶುಭ್‌ಮನ್ ಗಿಲ್ ಹಾಗೂ ರೋಹಿತ್ ಶರ್ಮಾ ಉತ್ತಮ ಆರಂಭ ಒದಗಿಸಿಕೊಟ್ಟರೇ ಕಾಂಗರೂ ಎದುರು ಗೆಲುವು ಸಾಧಿಸೋದು ಕಷ್ಟದ ಮಾತಲ್ಲ.
ಆಸ್ಟ್ರೇಲಿಯಾ ಎದುರಿನ ಪಂದ್ಯಕ್ಕೂ ಮುನ್ನ ಶುಭ್‌ಮನ್ ಗಿಲ್ ಸಂಪೂರ್ಣ ಫಿಟ್ ಆಗಿ ಕಣಕ್ಕಿಳಿಯುತ್ತಾರಾ ಅಥವಾ ಗಿಲ್ ಬದಲಿಗೆ ರೋಹಿತ್ ಶರ್ಮಾ ಜತೆ ಇಶಾನ್ ಕಿಶನ್ ಇನಿಂಗ್ಸ್ ಆರಂಭಿಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.