Asianet Suvarna News Asianet Suvarna News

Asian Games 2023: ಅಥ್ಲೆಟಿಕ್ಸ್‌ನಲ್ಲಿ ಮುಂದುವರೆದ ಭಾರತದ ಪದಕ ಬೇಟೆ

ಒಟ್ಟಾರೆ ಭಾರತದ ಪದಕ ಗಳಿಕೆ 60ರ ಗಡಿ ತಲುಪಿದ್ದು, ಈವರೆಗಿನ ಕ್ರೀಡಾಕೂಟಗಳಲ್ಲಿ ಆವೃತ್ತಿಯೊಂದರ 3ನೇ ಶ್ರೇಷ್ಠ ಸಾಧನೆ ಎನಿಸಿಕೊಂಡಿದೆ. ಭಾರತ 2010ರಲ್ಲಿ 65, 2018ರಲ್ಲಿ 70 ಪದಕ ಗೆದ್ದಿದ್ದು, ಈ ದಾಖಲೆಯನ್ನು ಮುರಿಯುವುದು ಬಹುತೇಕ ಖಚಿತವಾಗಿದೆ. ಸದ್ಯ 13 ಚಿನ್ನ, 24 ಬೆಳ್ಳಿ ಹಾಗೂ 23 ಕಂಚು ಗೆದ್ದಿರುವ ಭಾರತ ಪದಕ ಪಟ್ಟಿಯಲ್ಲಿ 4ನೇ ಸ್ಥಾನದಲ್ಲೇ ಮುಂದುವರಿದಿದೆ.

Asian Games 2023 Indian Athletes shine in events eyes on new medal record kvn
Author
First Published Oct 3, 2023, 10:38 AM IST

ಹಾಂಗ್‌ಝೋ(ಅ.03): ಏಷ್ಯನ್‌ ಗೇಮ್ಸ್‌ ಇತಿಹಾಸದಲ್ಲಿ ಭಾರತಕ್ಕೆ ಹೆಚ್ಚಿನ ಯಶಸ್ಸು ತಂದುಕೊಟ್ಟಿರುವ ಅಥ್ಲೆಟಿಕ್ಸ್‌ನಲ್ಲಿ ಈ ಬಾರಿಯೂ ಭಾರತೀಯರು ಮಿಂಚುತ್ತಿದ್ದಾರೆ. ಸೋಮವಾರ ಟ್ರ್ಯಾಕ್‌ ಆ್ಯಂಡ್‌ ಫೀಲ್ಡ್‌ನಲ್ಲಿ ಭಾರತೀಯರು 3 ಬೆಳ್ಳಿ ಹಾಗೂ 1 ಕಂಚಿನ ಪದಕ ಮುಡಿಗೇರಿಸಿಕೊಂಡರು. ಇದರ ಜೊತೆಗೆ ಪದಕ ನಿರೀಕ್ಷೆಯೇ ಇಲ್ಲದ ರೋಲರ್‌ ಸ್ಕೇಟಿಂಗ್‌ನಲ್ಲೂ ದೇಶಕ್ಕೆ ಪದಕಗಳು ಬಂದಿದ್ದು, ಟೇಬಲ್‌ ಟೆನಿಸ್‌ನಲ್ಲೂ ಮಹಿಳೆಯರು ಹೊಸ ಇತಿಹಾಸ ಸೃಷ್ಟಿಸಿದ್ದಾರೆ. 

ಒಟ್ಟಾರೆ ಭಾರತದ ಪದಕ ಗಳಿಕೆ 60ರ ಗಡಿ ತಲುಪಿದ್ದು, ಈವರೆಗಿನ ಕ್ರೀಡಾಕೂಟಗಳಲ್ಲಿ ಆವೃತ್ತಿಯೊಂದರ 3ನೇ ಶ್ರೇಷ್ಠ ಸಾಧನೆ ಎನಿಸಿಕೊಂಡಿದೆ. ಭಾರತ 2010ರಲ್ಲಿ 65, 2018ರಲ್ಲಿ 70 ಪದಕ ಗೆದ್ದಿದ್ದು, ಈ ದಾಖಲೆಯನ್ನು ಮುರಿಯುವುದು ಬಹುತೇಕ ಖಚಿತವಾಗಿದೆ. ಸದ್ಯ 13 ಚಿನ್ನ, 24 ಬೆಳ್ಳಿ ಹಾಗೂ 23 ಕಂಚು ಗೆದ್ದಿರುವ ಭಾರತ ಪದಕ ಪಟ್ಟಿಯಲ್ಲಿ 4ನೇ ಸ್ಥಾನದಲ್ಲೇ ಮುಂದುವರಿದಿದೆ.

Asian Games 2023 ಯಶಸ್ವಿ ಜೈಸ್ವಾಲ್ ಭರ್ಜರಿ ಶತಕ, ನೇಪಾಳ ಮಣಿಸಿ ಸೆಮೀಸ್‌ಗೆ ಲಗ್ಗೆಯಿಟ್ಟ ಟೀಂ ಇಂಡಿಯಾ

ಪಾರುಲ್‌, ಆ್ಯನ್ಸಿಗೆ ರಜತ ಸಂಭ್ರಮ!

ಮಹಿಳೆಯರ 3000 ಮೀ. ಸ್ಟೀಪಲ್‌ಚೇಸ್‌ನಲ್ಲಿ ಪಾರುಲ್‌ ಚೌಧರಿ ಬೆಳ್ಳಿ ಹಾಗೂ ಪ್ರೀತಿ ಕಂಚಿನ ಪದಕ ತಮ್ಮದಾಗಿಸಿಕೊಂಡರು. ಇತ್ತೀಚೆಗೆ ಏಷ್ಯನ್‌ ಅಥ್ಲೆಟಿಕ್ಸ್‌ ಕೂಟದಲ್ಲಿ ಬಂಗಾರ ಗೆದ್ದಿದ್ದ ಪಾರುಲ್‌ ಈ ಬಾರಿ 9 ನಿಮಿಷ 27.63 ಸೆಕೆಂಡ್‌ಗಳಲ್ಲಿ ಕ್ರಮಿಸಿ 2ನೇ ಸ್ಥಾನಿಯಾದರು. ಪ್ರೀತಿ 9 ನಿಮಿಷ 43.22 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ ಕಂಚು ಪಡೆದರು.

ಇನ್ನು ಮಹಿಳೆಯರ ಲಾಂಗ್‌ ಜಂಪ್‌ನಲ್ಲಿ 22 ವರ್ಷದ ಆ್ಯನ್ಸಿ ಸೋಜನ್‌ಗೆ ಬೆಳ್ಳಿ ಪದಕ ಲಭಿಸಿತು. ತಮ್ಮ 5ನೇ ಪ್ರಯತ್ನದಲ್ಲಿ 6.63 ದೂರಕ್ಕೆ ಜಿಗಿದ ಆ್ಯನ್ಸಿ 2ನೇ ಸ್ಥಾನಿಯಾದರು. ಭಾರತದಾಚೆ ಆ್ಯನ್ಸಿ ಸ್ಪರ್ಧಿಸಿದ್ದು ಇದು ಕೇವಲ 2ನೇ ಬಾರಿ. ಆದರೆ ಅನುಭವಿ ಜಪಾನ್‌ ಅಥ್ಲೀಟ್‌ ಅನ್ನು ಹಿಂದಿಕ್ಕಿದ ಕೇರಳದ ಯುವ ಪ್ರತಿಭೆ ಒತ್ತಡಕ್ಕೆ ಒಳಗಾಗದೆ, ಬಹಳ ಲೆಕ್ಕಾಚಾರದೊಂದಿಗೆ ಪದಕ ರೇಸ್‌ನಲ್ಲಿ ಉಳಿದರು. ಆದರೆ ಪದಕ ನಿರೀಕ್ಷೆ ಮೂಡಿಸಿದ್ದ, ಅಂಡರ್‌-20 ವಿಶ್ವ ಚಾಂಪಿಯನ್‌ಶಿಪ್‌ ಬೆಳ್ಳಿ ವಿಜೇತೆ ಶೈಲಿ ಸಿಂಗ್‌ 6.48 ಮೀ. ದೂರಕ್ಕೆ ಜಿಗಿದು 5ನೇ ಸ್ಥಾನಕ್ಕೆ ತೃಪ್ತಿಪಟ್ಟರು.

ಮಂಗಳಮುಖಿಯಿಂದ ನನ್ನ ಪದಕ ಮಿಸ್, ನಂದಿನಿ ವಿರುದ್ದ ಸಪ್ನಾ ಬರ್ಮನ್ ವಿವಾದದ ಕಿಡಿ!

ಇದೇ ವೇಳೆ ಪುರುಷರ 200 ಮೀ. ನಲ್ಲಿ ಅಮ್ಲನ್‌ ಬೊರ್ಗೊಹೈನ್‌ 6ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಪುರುಷರ ಡೆಕಾಥ್ಲಾನ್‌ನಲ್ಲಿ ಸೋಮವಾರ ಲಾಂಗ್‌ಜಂಪ್‌, ಹೈಜಂಪ್‌ ಹಾಗೂ 400 ಮೀ.ನಲ್ಲಿ ತೇಜಸ್ವಿನ್‌ ಶಂಕರ್‌ ಗೆದ್ದಿದ್ದು, ಒಟ್ಟಾರೆ ಸ್ಪರ್ಧೆಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡು ಚಿನ್ನದ ನಿರೀಕ್ಷೆಯಲ್ಲಿದ್ದಾರೆ.

ರಿಲೇ ತಂಡಕ್ಕೆ ಬೆಳ್ಳಿ ‘ಭಾಗ್ಯ’

ಭಾರತಕ್ಕೆ ಸೋಮವಾರ ಮತ್ತೊಂದು ಬೆಳ್ಳಿ ಪದಕ ಲಭಿಸಿದ್ದು 4*400 ಮೀಟರ್‌ ಮಿಶ್ರ ರಿಲೇ ತಂಡ ವಿಭಾಗದಲ್ಲಿ. ಇದರಲ್ಲಿ ಭಾರತೀಯರಿಗೆ ಬೆಳ್ಳಿ ಪದಕ ಸಿಕ್ಕಿತು. ಮುಹಮ್ಮದ್‌ ಅಜ್ಮಲ್‌, ವಿದ್ಯಾ ರಾಮ್‌ರಾಜ್‌, ರಾಜೇಶ್‌ ರಮೇಶ್‌, ಶುಭಾ ವೆಂಕಟೇಶನ್‌ ಅವರಿದ್ದ ತಂಡ 3 ನಿಮಿಷ 14.34 ಸೆಕೆಂಡ್‌ಗಳಲ್ಲಿ ಕ್ರಮಿಸಿ 3ನೇ ಸ್ಥಾನ ಪಡೆಯಿತು. 3 ನಿಮಿಷ 14.02 ಸೆಕೆಂಡ್‌ಗಳಲ್ಲಿ ಕ್ರಮಿಸಿದ ಬಹರೇನ್‌ ತಂಡ ಅಗ್ರಸ್ಥಾನ, 3 ನಿಮಿಷ 14.25 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದ ಶ್ರೀಲಂಕಾ 2ನೇ ಸ್ಥಾನ ಪಡೆದಿತ್ತು. ಆದರೆ ಲಂಕಾದ ಸ್ಪರ್ಧಿ ಟ್ರ್ಯಾಕ್‌ನ ಲೇನ್ ಮೀರಿ ಓಡಿದ್ದರಿಂದ ತಂಡವನ್ನು ಅನರ್ಹಗೊಳಿಸಿ ಭಾರತಕ್ಕೆ ಬೆಳ್ಳಿ ನೀಡಲಾಯಿತು. ಹೀಗಾಗಿ ಕಜಕಸ್ತಾನಕ್ಕೆ ಕಂಚು ಲಭಿಸಿತು.
 

Latest Videos
Follow Us:
Download App:
  • android
  • ios