Asianet Suvarna News Asianet Suvarna News

Asian Games 2023: 4 ದಶಕಗಳ ಬಳಿಕ ಭಾರತಕ್ಕೆ ಬ್ಯಾಡ್ಮಿಂಟನ್‌ನಲ್ಲಿ ಪದಕ ಗೆದ್ದ ಪ್ರಣಯ್‌ ..!

ಸದ್ಯ ಬ್ಯಾಡ್ಮಿಂಟನ್‌ನಲ್ಲಿ ಭಾರತ ಈ ಬಾರಿ ಐತಿಹಾಸಿಕ ಸಾಧನೆ ಮಾಡಿದೆ. ಪುರುಷರ ಸಿಂಗಲ್ಸ್‌ನಲ್ಲಿ ಎಚ್.ಎಸ್.ಪ್ರಣಯ್ ಹಾಗೂ ಡಬಲ್ಸ್‌ನಲ್ಲಿ ಸಾತ್ವಿಕ್ ಸಾಯಿರಾಜ್-ಚಿರಾಗ್ ಶೆಟ್ಟಿ ಸೆಮಿಫೈನಲ್‌ಗೇರಿದ್ದಾರೆ. ಈ ಮೂಲಕ ಎರಡೂ ವಿಭಾಗಗಳಲ್ಲಿ 1982ರ ಬಳಿಕ ಭಾರತಕ್ಕೆ ಪದಕ ತಂದುಕೊಡುವುದು ಖಚಿತವಾಗಿತ್ತು.

Asian Games 2023 HS Prannoy wins first badminton mens singles medal since 1982 kvn
Author
First Published Oct 6, 2023, 12:57 PM IST

ಹಾಂಗ್ಝೂ(ಅ.06): ಏಷ್ಯನ್ ಗೇಮ್ಸ್ ಬ್ಯಾಡ್ಮಿಂಟನ್‌ ಇತಿಹಾಸದಲ್ಲಿ 4 ದಶಕಗಳ ಬಳಿಕ ಭಾರತ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಪುರುಷರ ಸಿಂಗಲ್ಸ್‌ನಲ್ಲಿ ಎಚ್.ಎಸ್.ಪ್ರಣಯ್ ಗುರವಾರವಷ್ಟೇ ಸೆಮೀಸ್‌ ಪ್ರವೇಶಿಸುವ ಮೂಲಕ ಪದಕ ಖಚಿತಪಡಿಸಿಕೊಂಡಿದ್ದರು. ಇದೀಗ ಸೆಮೀಸ್‌ನಲ್ಲಿ ಚೀನಾದ ಲೀ ಶಿಫೆಂಗ್ ವಿರುದ್ದ 16-21, 9-21 ಗೇಮ್‌ಗಳಲ್ಲಿ ಸೋಲು ಕಾಣುವ ಮೂಲಕ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.

ಸದ್ಯ ಬ್ಯಾಡ್ಮಿಂಟನ್‌ನಲ್ಲಿ ಭಾರತ ಈ ಬಾರಿ ಐತಿಹಾಸಿಕ ಸಾಧನೆ ಮಾಡಿದೆ. ಪುರುಷರ ಸಿಂಗಲ್ಸ್‌ನಲ್ಲಿ ಎಚ್.ಎಸ್.ಪ್ರಣಯ್ ಹಾಗೂ ಡಬಲ್ಸ್‌ನಲ್ಲಿ ಸಾತ್ವಿಕ್ ಸಾಯಿರಾಜ್-ಚಿರಾಗ್ ಶೆಟ್ಟಿ ಸೆಮಿಫೈನಲ್‌ಗೇರಿದ್ದಾರೆ. ಈ ಮೂಲಕ ಎರಡೂ ವಿಭಾಗಗಳಲ್ಲಿ 1982ರ ಬಳಿಕ ಭಾರತಕ್ಕೆ ಪದಕ ತಂದುಕೊಡುವುದು ಖಚಿತವಾಗಿತ್ತು. ಗಾಯದಿಂದ ಬಳಲುತ್ತಿದ್ದರೂ ಸಿಂಗಲ್ಸ್ ಕ್ವಾರ್ಟರ್‌ನಲ್ಲಿ ಕಣಕ್ಕಿಳಿದ ವಿಶ್ವ ನಂ.7 ಪ್ರಣಯ್, ಮಲೇಷ್ಯಾದ ಲೀ ಝಿ ಜಿಯಾ ವಿರುದ್ಧ 21-16, 21-23, 22-20 ಅಂತರದಲ್ಲಿ ರೋಚಕ ಗೆಲುವು ಸಾಧಿಸಿದ್ದರು. ಇದರೊಂದಿಗೆ ಪುರುಷರ ಸಿಂಗಲ್ಸ್‌ನಲ್ಲಿ ಪದಕ ಗೆಲ್ಲಲಿರುವ 2ನೇ ಭಾರತೀಯ ಎನಿಸಿಕೊಂಡರು. 1982ರಲ್ಲಿ ಸೈಯದ್ ಮೋದಿ ಕಂಚಿನ ಪದಕ ಜಯಿಸಿದ್ದರು.

ಇನ್ನು, ಡಬಲ್ಸ್‌ನ ವಿಶ್ವ ನಂ.3 ಜೋಡಿ ಸಾತ್ವಿಕ್-ಚಿರಾಗ್, ಕ್ವಾರ್ಟರ್‌ನಲ್ಲಿ ಸಿಂಗಾಪೂರದ ಜೂ ಜೀ-ಜೋಹನ್ ವಿರುದ್ಧ 21-7, 21-9ರಲ್ಲಿ ಸುಲಭ ಜಯ ದಾಖಲಿಸಿದರು. 1982ರಲ್ಲಿ ಲೆರೋಯ್ ಫ್ರಾನ್ಸಿಸ್ -ಪ್ರದೀಪ್ ಗಾಂಧಿ ಕಂಚು ಗೆದ್ದಿದ್ದು ಈವರೆಗೆ ಪುರುಷರ ಡಬಲ್ಸ್‌ನಲ್ಲಿ ಸಿಕ್ಕ ಏಕೈಕ ಪದಕ.

ಇದೇ ವೇಳೆ ಪದಕ ನಿರೀಕ್ಷೆ ಹುಟ್ಟಿಸಿದ್ದ 2 ಬಾರಿ ಒಲಿಂಪಿಕ್ ಪದಕ ವಿಜೇತೆ ಪಿ.ವಿ.ಸಿಂಧು, ಮಹಿಳಾ ಸಿಂಗಲ್ಸ್ ಕ್ವಾರ್ಟರ್ ನಲ್ಲಿ ಚೀನಾದ ಹೆ ಬಿಂಜಿಯಾವೊ ವಿರುದ್ಧ 16-21, 12-21ರಿಂದ ಸೋತು ಹೊರಬಿದ್ದರು.

ಅಥ್ಲೆಟಿಕ್ಸ್‌ನಲ್ಲಿ 29 ಪದಕ:70 ವರ್ಷಗಳಲ್ಲೇ ಗರಿಷ್ಠ ಸಾಧನೆ

ಏಷ್ಯನ್ ಗೇಮ್ಸ್ ಅಥ್ಲೆಟಿಕ್ಸ್‌ನಲ್ಲಿ ಈ ಬಾರಿ ಭಾರತ 29 ಪದಕಗಳೊಂದಿಗೆ ಅಭಿಯಾನ ಕೊನೆಗೊಳಿಸಿದೆ. ಟ್ರ್ಯಾಕ್ ಆ್ಯಂಡ್ ಫೀಲ್ಡ್ ಸ್ಪರ್ಧೆಗಳ ಕೊನೆ ದಿನವಾದ ಗುರುವಾರ ಭಾರತಕ್ಕೆ ಪದಕ ಸಿಗಲಿಲ್ಲ. ಪುರುಷರ ಮ್ಯಾರಥಾನ್‌ನಲ್ಲಿ ಮಾನ್‌ಸಿಂಗ್ ಹಾಗೂ ಕರ್ನಾಟಕದ ಬೆಳ್ಳಿಯಪ್ಪ ಕ್ರಮವಾಗಿ 8 ಮತ್ತು 12ನೇ ಸ್ಥಾನಕ್ಕೆ ತೃಪ್ತಿಪಟ್ಟು ಕೊಂಡರು. 

Asian Games 2023: ಟಾರ್ಗೆಟ್ 100ರತ್ತ ಭಾರತ ದಾಪುಗಾಲು..!

ಭಾರತ ಈ ಬಾರಿ 6 ಚಿನ್ನ, 14 ಬೆಳ್ಳಿ ಹಾಗೂ 9 ಕಂಚು ಗೆದ್ದಿದೆ. ಇದು ಏಷ್ಯಾಡ್ ಕೂಟವೊಂದರಲ್ಲಿ ಭಾರತದ 2ನೇ ಶ್ರೇಷ್ಠ ಪ್ರದರ್ಶನ. ಕಳೆದ 70 ವರ್ಷಗಳಲ್ಲಿ ಶ್ರೇಷ್ಠ ಸಾಧನೆ. 1951ರಲ್ಲಿ ನವದೆಹಲಿಯಲ್ಲಿ ನಡೆದಿದ್ದ ಚೊಚ್ಚಲ ಏಷ್ಯಾಡ್ ಕೂಟದಲ್ಲಿ 34 ಪದಕ ಗೆದ್ದಿರುವುದು ಈಗಲೂ ದಾಖಲೆಯಾಗಿಯೇ ಉಳಿದಿದೆ. ಉಳಿದಂತೆ ಭಾರತ 1982ರಲ್ಲಿ 21 ಹಾಗೂ 2018ರಲ್ಲಿ 20 ಪದಕ ಗೆದ್ದಿತ್ತು.

ಕಬಡ್ಡಿ ಸೆಮೀಸಲ್ಲಿ ಇಂದು ಭಾರತ vs ಪಾಕ್ ಕದನ

7 ಬಾರಿ ಚಾಂಪಿಯನ್ ಭಾರತದ ಪುರುಷರ ತಂಡ ಮತ್ತೆ ಕಬಡ್ಡಿಯಲ್ಲಿ ಪ್ರಾಬಲ್ಯ ಸಾಧಿಸಿದ್ದು, ಅಜೇಯವಾಗಿಯೇ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಗುರುವಾರ ಗುಂಪು ಹಂತದ ಕೊನೆ ಎರಡು ಪಂದ್ಯಗಳಲ್ಲೂ ಭಾರತ ಜಯ ಗಳಿಸಿತು. ದಿನದ ಮೊದಲ ಪಂದ್ಯದಲ್ಲಿ ಚೈನೀಸ್ ತೈಪೆ ವಿರುದ್ಧ 50-27 ಅಂಕ ಗಳಿಂದ ಗೆಲುವು ಸಾಧಿಸಿದ ಭಾರತ, ಜಪಾನ್ ವಿರುದ್ಧ 56-30 ಅಂಕಗಳ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿತು.

Asian Games 2023: ನಾನು ನಂದಿನಿ ಕಂಚು ತಂದಿನಿ ಎಂದ ಬಳ್ಳಾರಿ ಯುವತಿ!

ಇದರೊಂದಿಗೆ ‘ಎ’ ಗುಂಪಿನಿಂದ ಅಗ್ರ ಸ್ಥಾನಿಯಾದ 2018ರ ಏಷ್ಯನ್ ಗೇಮ್ಸ್ ಕಂಚು ವಿಜೇತ ಭಾರತ ತಂಡ ಶುಕ್ರವಾರ ಸೆಮಿಫೈನಲ್‌ನಲ್ಲಿ ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ಸೆಣಸಾಡಲಿದೆ. ಮಹಿಳೆಯರ ವಿಭಾಗದ ಸೆಮಿಫೈನಲ್ ಪಂದ್ಯ ಕೂಡಾ ಶುಕ್ರವಾರ ನಡೆಯಲಿದ್ದು, 2 ಬಾರಿ ಚಾಂಪಿಯನ್, ಕಳೆದ ಬಾರಿ ಬೆಳ್ಳಿ ಪದಕ ಗೆದ್ದಿದ್ದ ಭಾರತಕ್ಕೆ ನೇಪಾಳ ತಂಡದ ಸವಾಲು ಎದುರಾಗಲಿದೆ.

ಚೆಸ್‌ನಲ್ಲಿ ಪದಕ ಸನಿಹಕ್ಕೆ ಭಾರತ

ಚೆಸ್‌ನಲ್ಲಿ 7ನೇ ಸುತ್ತು ಮುಕ್ತಾಯ ಗೊಂಡಿದ್ದು, ಭಾರತದ ಪುರುಷ ಹಾಗೂ ಮಹಿಳಾ ತಂಡಗಳು 2ನೇ ಸ್ಥಾನ ಕಾಯ್ದುಕೊಂಡಿವೆ. ಈ ಮೂಲಕ ಪದಕಕ್ಕೆ ಇನ್ನಷ್ಟು ಹತ್ತಿರವಾಗಿದ್ದಾರೆ. ಶುಕ್ರವಾರ 7ನೇ ಸುತ್ತಿನ ಪಂದ್ಯದಲ್ಲಿ ಅಗ್ರ ಶ್ರೇಯಾಂಕಿತ ಭಾರತದ ಪುರುಷರ ತಂಡ ವಿಯೆಟ್ನಾಂ ವಿರುದ್ಧ 2.5-1.5 ಅಂಕಗಳಿಂದ ಗೆಲುವು ಸಾಧಿಸಿತು.

ಇದೇ ವೇಳೆ 2ನೇ ಶ್ರೇಯಾಂಕಿತ ಮಹಿಳಾ ತಂಡ ಕಜಕಸ್ತಾನ ವಿರುದ್ಧ 2-2 ಅಂಕಗಳಿಂದ ಡ್ರಾಗೆ ತೃಪ್ತಿಪಟ್ಟುಕೊಂಡಿತು. ಎರಡೂ ವಿಭಾಗಗಳಲ್ಲಿ ಇನ್ನೆರಡು ಸುತ್ತಿನ ಪಂದ್ಯಗಳು ಬಾಕಿಯಿದ್ದು, ಭಾರತ ಅಗ್ರಸ್ಥಾನ ಉಳಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.
 

Follow Us:
Download App:
  • android
  • ios