Asian Games 2023: ಸ್ಕ್ವ್ಯಾಶ್ ಡಬಲ್ಸ್‌ನಲ್ಲಿ ದೀಪಿಕಾ ಪಲ್ಲಿಕಲ್ -ಹರೀಂದರ್ ಸಿಂಗ್ ಸ್ವರ್ಣ ಸಿಂಗಾರ
ಸೌರವ್ ಘೋಷಲ್ ಸತತ 5ನೇ ಏಷ್ಯಾಡ್‌ನಲ್ಲೂ ಸಿಂಗಲ್ಸ್ ಸ್ಪರ್ಧೆಯ ಚಿನ್ನ ವಂಚಿತರಾದರು. ಸಿಂಗಲ್ಸ್‌ನಲ್ಲಿ 2006, 2010, 2018ರಲ್ಲಿ ಕಂಚು, 2014ರಲ್ಲಿ ಬೆಳ್ಳಿ ಗೆದ್ದಿದ್ದ ಸೌರವ್, ಗುರುವಾರ ಫೈನಲ್‌ನಲ್ಲಿ ಮಲೇಷ್ಯಾದ ಯೀನ್ ಯೊವ್ ವಿರುದ್ಧ ಸೋತು ಬೆಳ್ಳಿಗೆ ತೃಪ್ತಿಪಟ್ಟರು.
ಹಾಂಗ್‌ಝೋ(ಅ.06): ಸ್ಕ್ವ್ಯಾಶ್ ಸ್ಪರ್ಧೆಯಲ್ಲಿ ಭಾರತ ಮತ್ತೆ ಐತಿಹಾಸಿಕ ದಾಖಲೆ ಬರೆದಿದೆ. ಗುರುವಾರ ಮಿಶ್ರ ಡಬಲ್ಸ್‌ನಲ್ಲಿ ದೀಪಿಕಾ ಪಲ್ಲಿಕಲ್ -ಹರೀಂದರ್ ಸಿಂಗ್ ಚಿನ್ನ ಜಯಿಸಿದರು. ಭಾರತೀಯ ಜೋಡಿಯು ಮಲೇಷ್ಯಾದ ಐಫಾ-ಮೊಹಮದ್ ಶಫಿಕ್ ವಿರುದ್ಧ 2-0 (11-10, 11-10) ಅಂತರದಲ್ಲಿ ಜಯಿಸಿತು. ಇದು ಏಷ್ಯಾಡ್ ಮಿಶ್ರ ಡಬಲ್ಸ್‌ನಲ್ಲಿ ಭಾರತಕ್ಕೆ ದೊರೆತ ಚೊಚ್ಚಲ ಚಿನ್ನ.
ಇನ್ನು ಸೌರವ್ ಘೋಷಲ್ ಸತತ 5ನೇ ಏಷ್ಯಾಡ್‌ನಲ್ಲೂ ಸಿಂಗಲ್ಸ್ ಸ್ಪರ್ಧೆಯ ಚಿನ್ನ ವಂಚಿತರಾದರು. ಸಿಂಗಲ್ಸ್‌ನಲ್ಲಿ 2006, 2010, 2018ರಲ್ಲಿ ಕಂಚು, 2014ರಲ್ಲಿ ಬೆಳ್ಳಿ ಗೆದ್ದಿದ್ದ ಸೌರವ್, ಗುರುವಾರ ಫೈನಲ್‌ನಲ್ಲಿ ಮಲೇಷ್ಯಾದ ಯೀನ್ ಯೊವ್ ವಿರುದ್ಧ ಸೋತು ಬೆಳ್ಳಿಗೆ ತೃಪ್ತಿಪಟ್ಟರು. ಇದರೊಂದಿಗೆ ಭಾರತ ಈ ಬಾರಿ 2 ಚಿನ್ನ, 1 ಬೆಳ್ಳಿ, 2 ಕಂಚಿನ ಪದಕದೊಂದಿಗೆ ಅಭಿಯಾನ ಮುಕ್ತಾಯಗೊಳಿಸಿದೆ. ಈ ಮೊದಲು ಭಾರತ 2014ರಲ್ಲಿ 4 ಹಾಗೂ 2018ರಲ್ಲಿ 5 ಪದಕ ಗೆದ್ದಿತ್ತು.
ಅಂತಿಮ್‌ಗೆ ಕಂಚಿನ ಗರಿ
ಇತ್ತೀಚಿನ ವರ್ಷಗಳಲ್ಲಿ ಕುಸ್ತಿಯಲ್ಲಿ ಹೆಚ್ಚಿನ ಸದ್ದು ಮಾಡುತ್ತಿರುವ ಯುವ ತಾರೆ ಅಂತಿಮ್ ಪಂಘಲ್ ಭಾರತಕ್ಕೆ ಗುರುವಾರ ಕಂಚಿನ ಪದಕ ತಂದುಕೊಟ್ಟಿದ್ದಾರೆ. ಮಹಿಳೆಯರ 53 ಕೆ.ಜಿ. ವಿಭಾಗದಲ್ಲಿ, ಟೋಕಿಯೋ ಒಲಿಂಪಿಕ್ ಪದಕ ವಿಜೇತೆ, ಮಂಗೋಲಿಯಾದ ಬೊಲೊರ್ಟುಯ ವಿರುದ್ಧ 19ರ ಅಂತಿಮ್ 3-1ರಲ್ಲಿ ಜಯಭೇರಿ ಬಾರಿಸಿದರು. ಈಗಾಗಲೇ 2 ಬಾರಿ ಅಂಡರ್-20 ವಿಶ್ವ ಚಾಂಪಿಯನ್, 2023ರ ಏಷ್ಯನ್ ಚಾಂಪಿಯನ್‌ಶಿಪ್ ಬೆಳ್ಳಿ ಹಾಗೂ ವಿಶ್ವ ಚಾಂಪಿಯನ್‌ಶಿಪ್ ಕಂಚು ಗೆದ್ದಿರುವ ಅಂತಿಮ್‌ಗೆ ಇದು ಚೊಚ್ಚಲ ಏಷ್ಯಾಡ್ ಪದಕ.
Asian Games 2023: ನಾನು ನಂದಿನಿ ಕಂಚು ತಂದಿನಿ ಎಂದ ಬಳ್ಳಾರಿ ಯುವತಿ!
ಇದೇ ವೇಳೆ ಮಹಿಳೆಯರ 50 ಕೆ.ಜಿ. ವಿಭಾಗದ ಕಂಚಿನ ಪದಕದ ಪಂದ್ಯದಲ್ಲಿ ಪೂಜಾ ಗೆಹಲೋಟ್ ಸೋಲನುಭವಿಸಿದರು. ಪದಕ ನಿರೀಕ್ಷೆ ಮೂಡಿಸಿದ್ದ ಮಾನ್ಸಿ ಅಹ್ಲಾವಟ್ ಮಹಿಳೆಯರ 57 ಕೆ.ಜಿ. ವಿಭಾಗದ ಕಂಚಿನ ಪದಕ ಪ್ಲೇ-ಆಫ್‌ನಲ್ಲಿ ಪರಾಭವಗೊಂಡರು. ಪುರುಷರ ಗ್ರೀಕೊ ರೋಮನ್ ವಿಭಾಗದ 97 ಕೆ.ಜಿ. ಸ್ಪರ್ಧೆಯಲ್ಲಿ ನರೀಂದರ್ ಚೀಮಾ, 130 ಕೆ.ಜಿ. ಸ್ಪರ್ಧೆಯಲ್ಲಿ ನವೀನ್ ಕೂಡಾ ಪದಕ ಗೆಲ್ಲಲಿಲ್ಲ. ಶುಕ್ರವಾರ ಭಜರಂಗ್ ಪೂನಿಯಾ(65 ಕೆ.ಜಿ.), ಅಮನ್ ಶೆಹ್ರಾವತ್(56 ಕೆ.ಜಿ.) ಕಣಕ್ಕಿಳಿಯಲಿದ್ದು, ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.
ಒಂದೂ ಅಂಕ ಬಿಡದೆ ಚಿನ್ನ ಗೆದ್ದ ಜಪಾನ್‌ನ ಕುಸ್ತಿಪಟು ಫೂಜಿನಾಮಿ!
ಹಾಂಗ್‌ಝೋ: ಭಾರತದ ಪ್ರತಿಭಾವಂತ ಕುಸ್ತಿಪಟು ಅಂತಿಮ್ ಪಂಘಲ್‌ಗೆ ಕ್ವಾರ್ಟರ್ ಫೈನಲ್‌ನಲ್ಲಿ ಸೋಲುಣಿಸಿದ ಜಪಾನ್‌ನ 19 ವರ್ಷದ ಅಕಾರಿ ಫೂಜಿನಾಮಿ, ಇಡೀ ಸ್ಪರ್ಧೆಯಲ್ಲಿ ಒಂದೂ ಅಂಕ ಬಿಟ್ಟುಕೊಡದೆ ಚಿನ್ನದ ಪದಕ ಗೆದ್ದರು. ಈಕೆ ಹಿರಿಯರ ವಿಭಾಗದಲ್ಲಿ ಸ್ಪರ್ಧಿಸಲು ಆರಂಭಿಸಿದಾಗಿನಿಂದ ಈ ತನಕ ಸೋತೇ ಇಲ್ಲ. ಸತತ 130 ಪಂದ್ಯಗಳನ್ನು ಗೆದ್ದಿರುವ ಫೂಜಿನಾಮಿ ಸಣ್ಣ ವಯಸ್ಸಿಗೇ ವಿಶ್ವದ ಶ್ರೇಷ್ಠಾತಿಶ್ರೇಷ್ಠ ಕುಸ್ತಿಪಟುಗಳ ಸಾಲಿನಲ್ಲಿ ಸ್ಥಾನ ಪಡೆದಿದ್ದಾರೆ.
ಮಹಿಳಾ ಕುಸ್ತಿಯಲ್ಲಿ 53 ಕೆ.ಜಿ. ವಿಭಾಗ ಭಾರತದ ನೆಚ್ಚಿನ ವಿಭಾಗಗಳಲ್ಲಿ ಒಂದು. ಇದೇ ವಿಭಾಗದಲ್ಲಿ ವಿನೇಶ್ ಫೋಗಟ್ ಹಲವು ಪದಕಗಳನ್ನು ಗೆದ್ದಿದ್ದಾರೆ. ಸದ್ಯ 53 ಕೆ.ಜಿ. ವಿಭಾಗದಲ್ಲಿ ಭಾರತವನ್ನು ಅಂತಿಮ್ ಪಂಘಲ್ ಪ್ರತಿನಿಧಿಸುತ್ತಿದ್ದು, ಫೂಜಿನಾಮಿಯನ್ನು ಮಣಿಸಿ ಪದಕ ಗೆಲ್ಲುವುದೇ ಭಾರತೀಯರು ಸೇರಿ ಉಳಿದೆಲ್ಲಾ ದೇಶಗಳ ಸ್ಪರ್ಧಿಗಳ ಮುಂದಿರುವ ಅತಿದೊಡ್ಡ ಸವಾಲಾಗಿದೆ.
ಹಾಕಿ: ಭಾರತ ವನಿತೆಯರಿಗೆ ಸೆಮೀಸಲ್ಲಿ ಚೀನಾ ಶಾಕ್!
ಚಿನ್ನ ಗೆದ್ದು 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ನೇರ ಅರ್ಹತೆ ಗಿಟ್ಟಿಸುವ ಭಾರತ ಮಹಿಳಾ ಹಾಕಿ ತಂಡದ ಕನಸು ಭಗ್ನಗೊಂಡಿದೆ. ಸೆಮಿಫೈನಲ್‌ನಲ್ಲಿ ಗುರುವಾರ ಚೀನಾ ವಿರುದ್ಧ ಭಾರತಕ್ಕೆ 0-4 ಗೋಲುಗಳ ಹೀನಾಯ ಸೋಲು ಎದುರಾಯಿತು. ವಿಶ್ವ ರ್‍ಯಾಂಕಿಂಗ್‌ನಲ್ಲಿ 12ನೇ ಸ್ಥಾನದಲ್ಲಿರುವಚೀನಾ ವಿರುದ್ಧ ವಿಶ್ವ ನಂ.7 ಭಾರತ ಕಳೆದ 11 ಮುಖಾಮುಖಿಗಳಲ್ಲಿ ಸೋತಿರಲಿಲ್ಲ.
ಸೆಮೀಸ್‌ನಲ್ಲಿ ತಂಡದ ತಾಂತ್ರಿಕವಾಗಿ ತೀರಾ ಕಳಪೆಯಾಗಿ ಕಂಡಿದ್ದಲ್ಲದೇ, ಆಕ್ರಮಣಕಾರಿ ಆಟವಾಡುವುದನ್ನೇ ಮರೆತಿದ್ದು ಅಚ್ಚರಿಗೆ ಕಾರಣವಾಯಿತು. ನವ್‌ನೀತ್ ಕೌರ್‌ರನ್ನು ಯೋಜನಾಬದ್ಧವಾಗಿ ನಿಯಂತ್ರಿಸಿದ ಚೀನಾಕ್ಕೆ ಭಾರತವನ್ನು ಹಣಿಯಲು ಯಾವುದೇ ರೀತಿಯಲ್ಲಿ ಕಷ್ಟವಾಗಲಿಲ್ಲ. ಭಾರತಕ್ಕೆ ಕಂಚಿನ ಪದಕ ಗೆಲ್ಲುವ ಅವಕಾಶವಿದ್ದು, ಶನಿವಾರ ಹಾಲಿ ಚಾಂಪಿಯನ್ ಜಪಾನ್ ವಿರುದ್ಧ ಸೆಣಸಲಿದೆ.