ಬೆಂಗಳೂರು[ಸೆ.09]: ಆಸ್ಟ್ರೇಲಿಯಾ-ಇಂಗ್ಲೆಂಡ್ ನಡುವಿನ ಆ್ಯಷಸ್ ಸರಣಿಯ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯವನ್ನು ಜಯಿಸುವುದರ ಮೂಲಕ ಆಸ್ಟ್ರೇಲಿಯಾ 2-1 ಅಂತರದ ಮುನ್ನಡೆ ಸಾಧಿಸಿದೆ. ಈ ಮೂಲಕ ಟಿಮ್ ಪೈನೆ ನೇತೃತ್ವದ ಆಸ್ಟ್ರೇಲಿಯಾ ತಂಡವು ಆ್ಯಷಸ್ ಕಪ್ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ರಿಕಿ ಪಾಂಟಿಂಗ್ ಹಾಗೂ ಮೈಕಲ್ ಕ್ಲಾರ್ಕ್’ಗೆ ಮಾಡಲಾಗದ ಸಾಧನೆಯನ್ನು ಟಿಮ್ ಪೈನೆ ಮಾಡಿದ್ದಾರೆ. 

ಆ್ಯಷಸ್ ಕದನ: ಇಂಗ್ಲೆಂಡ್ ವಿರುದ್ಧ ಗೆದ್ದ ಆಸ್ಟ್ರೇಲಿಯಾ

ಹೌದು, 2001ರಲ್ಲಿ ಆಸ್ಟ್ರೇಲಿಯಾ ಕಡೆಯ ಬಾರಿಗೆ ಇಂಗ್ಲೆಂಡ್ ನೆಲದಲ್ಲಿ 4-1 ಆ್ಯಷಸ್ ಸರಣಿ ಗೆದ್ದು ಇತಿಹಾಸ ಬರೆದಿತ್ತು. ಆ ಬಳಿಕ ರಿಕಿ ಪಾಂಟಿಂಗ್ ಹಾಗೂ ಮೈಕೆಲ್ ಕ್ಲಾರ್ಕ್ ನೇತೃತ್ವದ ಆಸೀಸ್ ಪಡೆ ಇಂಗ್ಲೆಂಡ್ ಪ್ರವಾಸ ಕೈಗೊಂಡಿತ್ತಾದರೂ ಬರಿಗೈನಲ್ಲೇ ವಾಪಾಸ್ಸಾಗಿತ್ತು. ಆದರೆ ಟಿಮ್ ಪೈನೆ ನೇತೃತ್ವದ ತಂಡ ಸಾಂಪ್ರಾದಾಯಿಕ ಎದುರಾಳಿಯ ನೆಲದಲ್ಲೇ ಇನ್ನೊಂದು ಟೆಸ್ಟ್ ಪಂದ್ಯ ಬಾಕಿ ಇರುವಾಗಲೇ ಆ್ಯಷಸ್ ಕಪ್ ತವರಿಗೆ ಕೊಂಡ್ಯೊಯುವುದನ್ನು ಖಚಿತ ಪಡಿಸಿಕೊಂಡಿದೆ. ಆ್ಯಷಸ್ ಸರಣಿಯಲ್ಲಿ ಆಸ್ಟ್ರೇಲಿಯಾ 2-1ರ ಮುನ್ನಡೆ ಕಾಯ್ದುಕೊಂಡಿದ್ದು, ಸೆಪ್ಟೆಂಬರ್ 12ರಿಂದ ಕೆನಿಂಗ್’ಟನ್ ಓವಲ್’ನಲ್ಲಿ ಅಂತಿಮ ಟೆಸ್ಟ್ ಪಂದ್ಯ ನಡೆಯಲಿದ್ದು, ಆಸೀಸ್ ಡ್ರಾ ಮಾಡಿಕೊಂಡರೆ ಸರಣಿ ಕೈವಶವಾಗಲಿದೆ. ಒಂದು ವೇಳೆ ಸೋತರೂ ಸರಣಿ ಸಮವಾಗಲಿದ್ದು, ಆ್ಯಷಸ್ ಟ್ರೋಫಿ ಹಾಲಿ ಚಾಂಪಿಯನ್ ಎನಿಸಿರುವ ಆಸ್ಟ್ರೇಲಿಯಾ ತಂಡದಲ್ಲೇ ಉಳಿಯಲಿದೆ.  

ಆಸ್ಟ್ರೇಲಿಯಾ ತಂಡದ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಬರೋಬ್ಬರಿ 19 ವರ್ಷಗಳ ಬಳಿಕ ಆ್ಯಷಸ್ ಕಪ್ ತನ್ನಲ್ಲೇ ಉಳಿಸಿಕೊಂಡ ಆಸೀಸ್ ಪಡೆಗೆ ಹಲವು ಗಣ್ಯರು ಸಾಮಾಜಿಕ ಜಾಲತಾಣಗಳಲ್ಲಿ ಶುಭ ಕೋರಿದ್ದಾರೆ.