ಮ್ಯಾಂಚೆಸ್ಟರ್[ಸೆ.09]: ವೇಗಿ ಪ್ಯಾಟ್ ಕಮಿನ್ಸ್ (43/4) ಮಾರಕ ದಾಳಿಗೆ ತತ್ತರಿಸಿದ ಇಂಗ್ಲೆಂಡ್, ಆ್ಯಷಸ್ ಟೆಸ್ಟ್ ಸರಣಿಯ 4ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 185 ರನ್‌ಗಳ ಅಂತರದಲ್ಲಿ ಸೋಲುಂಡಿದೆ. ಇದರೊಂದಿಗೆ ಆಸ್ಟ್ರೇಲಿಯಾ ಸರಣಿಯಲ್ಲಿ 2-1 ರಿಂದ ಮುನ್ನಡೆ ಸಾಧಿಸಿದೆ.

ಆ್ಯಷಸ್‌ ಕದನ: 2ನೇ ಇನ್ನಿಂಗ್ಸ್‌ನಲ್ಲೂ ಆಸೀಸ್‌ಗೆ ಆಸರೆಯಾದ ಸ್ಮಿತ್‌!

5ನೇ ಹಾಗೂ ಕೊನೆಯ ದಿನವಾದ ಭಾನುವಾರ 2 ವಿಕೆಟ್‌ಗೆ 18 ರನ್‌ಗಳಿಂದ 2ನೇ ಇನ್ನಿಂಗ್ಸ್ ಮುಂದುವರೆಸಿದ ಇಂಗ್ಲೆಂಡ್ ತಂಡಕ್ಕೆ ಜೋ ಡೆನ್ಲಿ ಹಾಗೂ ಜೇಸನ್ ರಾಯ್ ಆಸರೆ ಯಾದರು. ರಾಯ್ (31) ಔಟಾದ ಬಳಿಕ ಬೆನ್ ಸ್ಟೋಕ್ಸ್ (1) ಬೇಗನೆ ನಿರ್ಗಮಿಸಿದರು. ಆರಂಭಿಕ ಬ್ಯಾಟ್ಸ್’ಮನ್ ಡೆನ್ಲಿ (53), ಜಾನಿ ಬೇರ್‌ಸ್ಟೋವ್ (25), ಬಟ್ಲರ್ (34) ಒಬ್ಬರ ಹಿಂದೆ ಒಬ್ಬರು ಪೆವಿಲಿಯನ್ ಹಾದಿ ಹಿಡಿಯುವ ಮೂಲಕ ಆತಿಥೇಯ ಇಂಗ್ಲೆಂಡ್ 197ಕ್ಕೆ ಆಲೌಟ್ ಆಯಿತು. ಆಸ್ಟ್ರೇಲಿಯಾ 2ನೇ ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌ಗೆ 186 ರನ್‌ಗಳಿಸಿ ಡಿಕ್ಲೇರ್ ಮಾಡಿಕೊಂಡು 383 ರನ್‌ಗಳ ಗುರಿ ನೀಡಿತ್ತು.

ಆ್ಯಷಸ್‌ ಕದನ 2019: ಇಂಗ್ಲೆಂಡ್‌ಗೆ ರೂಟ್‌, ಬರ್ನ್ಸ್ ಆಸರೆ

ಆ್ಯಷಸ್ ಸರಣಿಯ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ಜಯಿಸುವ ಮೂಲಕ 1-0 ಮುನ್ನಡೆ ಕಾಯ್ದುಕೊಂಡಿತ್ತು. ಇನ್ನು ಎರಡನೇ ಪಂದ್ಯ ಡ್ರಾನಲ್ಲಿ ಮುಕ್ತಾಯವಾಗಿತ್ತು. ಮೂರನೇ ಪಂದ್ಯದಲ್ಲಿ ಬೆನ್ ಸ್ಟ್ರೋಕ್ಸ್ ಏಕಾಂಗಿ ಹೋರಾಟದ ನೆರವಿನಿಂದ ಇಂಗ್ಲೆಂಡ್ 1 ವಿಕೆಟ್’ಗಳ ರೋಚಕ ಜಯ ಸಾಧಿಸಿತ್ತು. ಈ ಮೂಲಕ ಸರಣಿಯಲ್ಲಿ 1-1ರ ಸಮಬಲ ಸಾಧಿಸಿತು. ಇದೀಗ ನಾಲ್ಕನೇ  ಟೆಸ್ಟ್ ಪಂದ್ಯವನ್ನು ಜಯಿಸುವುದರೊಂದಿಗೆ ಪ್ರವಾಸಿ ಆಸ್ಟ್ರೇಲಿಯಾ ಸರಣಿಯಲ್ಲಿ 2-1ರ ಮುನ್ನಡೆ ಸಾಧಿಸಿದೆ. ಆ್ಯಷಸ್ ಸರಣಿಯ ಕೊನೆಯ ಪಂದ್ಯ ಸೆಪ್ಟೆಂಬರ್ 12ರಿಂದ ಲಂಡನ್’ನ ಕೆನಿಂಗ್ಟನ್ ಓವಲ್ ಮೈದಾನದಲ್ಲಿ ಆರಂಭವಾಗಲಿದೆ.  

ಸ್ಕೋರ್: ಆಸ್ಟ್ರೇಲಿಯಾ 497/8 ಡಿ. ಹಾಗೂ 186/6 ಡಿ.

ಇಂಗ್ಲೆಂಡ್ 301 ಹಾಗೂ 197