ಬರ್ಮಿಂಗ್‌ಹ್ಯಾಮ್‌[ಮಾ.08]: ಪ್ರತಿಷ್ಠಿತ ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ತಾರಾ ಶಟ್ಲರ್‌ಗಳಾದ ಸೈನಾ ನೆಹ್ವಾಲ್‌ ಹಾಗೂ ಕಿದಂಬಿ ಶ್ರೀಕಾಂತ್‌ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಇದೇ ವೇಳೆ ಬಿ.ಸಾಯಿ ಪ್ರಣೀತ್‌ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಸೋಲುಂಡು ಹೊರಬಿದ್ದಿದ್ದಾರೆ.

ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌: ಮೊದಲ ಸುತ್ತಲ್ಲೇ ಹೊರಬಿದ್ದ ಸಿಂಧು!

ಬುಧವಾರ ತಡರಾತ್ರಿ ಮೊದಲ ಸುತ್ತಿನ ಪಂದ್ಯವನ್ನಾಡಿದ ಸೈನಾ, ಕ್ರಿಸ್ಟಿಗಿಲ್ಮೋರ್‌ ವಿರುದ್ಧ 21-17, 21-18 ಗೇಮ್‌ಗಳಲ್ಲಿ ಜಯಗಳಿಸಿದರು. ಗುರುವಾರ ನಡೆದ ಪ್ರಿ ಕ್ವಾರ್ಟರ್‌ನಲ್ಲಿ ಡೆನ್ಮಾರ್ಕ್’ನ ಲಿನೆ ಹೊಜ್ಮಾರ್ಕ್ ವಿರುದ್ಧ ಹೋರಾಡಿದ ಸೈನಾ, 8-21, 21-16, 21-13 ಗೇಮ್‌ಗಳಲ್ಲಿ ಜಯಗಳಿಸಿದರು. ಮೊದಲ ಗೇಮ್‌ನಲ್ಲಿ ಹೀನಾಯ ಸೋಲು ಕಂಡ ಸೈನಾ, ಬಳಿಕ ಪುಟಿದೆದ್ದರು.

ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ಸುಲಭ ಗೆಲುವು ಸಾಧಿಸಿದ್ದ ಶ್ರೀಕಾಂತ್‌, ಪ್ರಿ ಕ್ವಾರ್ಟರ್‌ನಲ್ಲಿ ಪ್ರಯಾಸದ ಗೆಲುವು ಸಾಧಿಸಿದರು. ಇಂಡೋನೇಷ್ಯಾದ ಜೊನಾಥನ್‌ ಕ್ರಿಸ್ಟಿವಿರುದ್ಧ 21-17, 11-21, 21-12 ಗೇಮ್‌ಗಳಲ್ಲಿ ಗೆದ್ದು ಅಂತಿಮ 8ರ ಸುತ್ತು ಪ್ರವೇಶಿಸಿದರು.

ಇದೇ ವೇಳೆ ಮೊದಲ ಸುತ್ತಿನಲ್ಲಿ ಭಾರತದವರೇ ಆದ ಎಚ್‌.ಎಸ್‌.ಪ್ರಣಯ್‌ ವಿರುದ್ಧ ಗೆದ್ದಿದ್ದ ಬಿ.ಸಾಯಿ ಪ್ರಣೀತ್‌, ಪ್ರಿ ಕ್ವಾರ್ಟರ್‌ನಲ್ಲಿ ಹಾಂಕಾಂಗ್‌ನ ಆ್ಯಂಗುಸ್‌ ಲಾಂಗ್‌ ವಿರುದ್ಧ 12-21, 17-21 ಗೇಮ್‌ಗಳಲ್ಲಿ ಸೋಲುಂಡು ಹೊರಬಿದ್ದರು. ಟೂರ್ನಿಯಲ್ಲಿ ಸೈನಾ ಹಾಗೂ ಶ್ರೀಕಾಂತ್‌ ಮಾತ್ರ ಭಾರತದ ಹೋರಾಟವನ್ನು ಮುಂದುವರಿಸಿದ್ದು, ಪ್ರಶಸ್ತಿ ಮೇಲೆ ಕಣ್ಣಿರಿಸಿದ್ದಾರೆ.