ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್: ಮೊದಲ ಸುತ್ತಲ್ಲೇ ಹೊರಬಿದ್ದ ಸಿಂಧು!
ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತಕ್ಕೆ ಮೊದಲ ದಿನವೇ ಸಿಹಿ-ಕಹಿ ಫಲಿತಾಂಶ ಹೊರಬಿದ್ದಿದ್ದು, ಸೈನಾ-ಶ್ರೀಕಾಂತ್ ಶುಭಾರಂಭ ಮಾಡಿದರೆ, ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿ.ವಿ ಸಿಂಧು ಮೊದಲ ಪಂದ್ಯದಲ್ಲೇ ಮುಗ್ಗರಿಸಿ ಆಘಾತ ಅನುಭವಿಸಿದ್ದಾರೆ.
ಬರ್ಮಿಂಗ್‌ಹ್ಯಾಮ್[ಮಾ.07]: ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರ್ತಿಯರ ಪೈಕಿ ಒಬ್ಬರೆನಿಸಿದ್ದ ಭಾರತದ ಪಿ.ವಿ.ಸಿಂಧು, ಮೊದಲ ಸುತ್ತಿನಲ್ಲಿ ಸೋಲುಂಡು ಹೊರಬಿದ್ದಿದ್ದಾರೆ. ಇನ್ನು ಸೈನಾ ನೆಹ್ವಾಲ್ ಹಾಗೂ ಕಿದಾಂಬಿ ಶ್ರೀಕಾಂತ್ ಶುಭಾರಂಭ ಮಾಡಿದ್ದಾರೆ.
ಬುಧವಾರದಿಂದ ಇಲ್ಲಿ ಆರಂಭಗೊಂಡ ಟೂರ್ನಿಯ ಮಹಿಳಾ ಸಿಂಗಲ್ಸ್ ಮೊದಲ ಸುತ್ತಿನ ಪಂದ್ಯದಲ್ಲಿ ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಸಿಂಧು, ದಕ್ಷಿಣ ಕೊರಿಯಾದ ಸುಂಗ್ ಜೀ ಹ್ಯುನ್ ವಿರುದ್ಧ 16-21, 22-20, 18-21 ಗೇಮ್‌ಗಳಲ್ಲಿ ಪರಾಭವಗೊಂಡರು. ಸೈನಾ ಸ್ಕಾಟ್’ಲ್ಯಾಂಡ್’ನ ಕ್ರಿಸ್ಟಿ ಗಿಲ್’ಮೋರ್ ಅವರ ವಿರುದ್ಧ 21-17, 21-18 ಗೇಮ್’ಗಳಲ್ಲಿ ಜಯಿಸಿದರೆ, ಶ್ರೀಕಾಂತ್ ಫ್ರಾನ್ಸ್’ನ ಬ್ರೈಸ್ ಲೆವರ್ಡ್ಜ್ ವಿರುದ್ಧ 21-13, 21-11 ನೇರ ಗೇಮ್’ಗಳಲ್ಲಿ ಗೆದ್ದು ಮುಂದಿನ ಹಂತ ಪ್ರವೇಶಿಸಿದರು.
5ನೇ ಶ್ರೇಯಾಂಕಿತೆ ಸಿಂಧುಗಿದು ಸುಂಗ್ ಜೀ ವಿರುದ್ದ ಕಳೆದ 3 ಮುಖಾಮುಖಿಗಳಲ್ಲಿ 3ನೇ ಸೋಲಾಗಿದೆ. 2ನೇ ಹಾಗೂ 3ನೇ ಗೇಮ್‌ಗಳಲ್ಲಿ ಒಟ್ಟು 8 ಮ್ಯಾಚ್ ಪಾಯಿಂಟ್‌ಗಳನ್ನು ಉಳಿಸಿಕೊಂಡರೂ ಸಿಂಧುಗೆ ಪಂದ್ಯ ಜಯಿಸಲು ಸಾಧ್ಯವಾಗಲಿಲ್ಲ.
ಕೊರಿಯಾ ಆಟಗಾರ್ತಿ ವಿರುದ್ಧ 8-6 ಗೆಲುವು-ಸೋಲುಗಳ ದಾಖಲೆಯೊಂದಿಗೆ ಪಂದ್ಯಕ್ಕೆ ಸಿಂಧು ಕಾಲಿಟ್ಟರೂ, 81 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ವಿರೋಚಿತ ಸೋಲಿಗೆ ಶರಣಾದರು. 2ನೇ ಹಾಗೂ 3ನೇ ಗೇಮ್‌ಗಳಲ್ಲಿ ಅತ್ಯುತ್ತಮ ಹೋರಾಟ ತೋರಿದ ಸಿಂಧು, ಅಷ್ಟೇ ತಪ್ಪುಗಳನ್ನು ಎಸಗಿದರು.
ಮಹಿಳಾ ಡಬಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತದ ಮೇಘನಾ ಜಕ್ಕಂಪುಡಿ ಹಾಗೂ ಪೂರ್ವಿಶಾ ಎಸ್.ರಾಮ್ ಜೋಡಿ ರಷ್ಯಾದ ಎಕ್ತರಿನಾ ಹಾಗೂ ಅಲಿನಾ ಜೋಡಿ ವಿರುದ್ಧ 21-18, 12-21, 12-21 ಗೇಮ್‌ಗಳಲ್ಲಿ ಪರಾಭವಗೊಂಡು ಹೊರಬಿತ್ತು.
ಪ್ರಿ ಕ್ವಾರ್ಟರ್‌ಗೆ ಪ್ರಣೀತ್
ಪುರುಷರ ಸಿಂಗಲ್ಸ್‌ನಲ್ಲಿ 2017ರ ಸಿಂಗಾಪುರ ಓಪನ್ ಚಾಂಪಿಯನ್ ಬಿ.ಸಾಯಿ ಪ್ರಣೀತ್, ಮೊದಲ ಸುತ್ತಿನಲ್ಲಿ ಭಾರತದವರೇ ಆದ ಎಚ್.ಎಸ್.ಪ್ರಣಯ್ ವಿರುದ್ಧ 21-19, 21-19 ನೇರ ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು. ಎರಡೂ ಗೇಮ್‌ಗಳು ಭಾರೀ ರೋಚಕತೆಯಿಂದ ಕೂಡಿದ್ದವು. ಪ್ರಿ ಕ್ವಾರ್ಟರ್ ಫೈನಲ್‌ಗೇರಿರುವ ಪ್ರಣೀತ್, ಹಾಂಕಾಂಗ್‌ನ ಆ್ಯಂಗುಸ್ ಕಾ ಲಾಂಗ್ ವಿರುದ್ಧ ಸೆಣಸಲಿದ್ದಾರೆ.