ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ ಫ್ರೆಂಚ್‌ ಓಪನ್ ಫೈನಲ್‌ನಲ್ಲಿ ಇಟಲಿಯ ಫ್ಲಾವಿಯೊ ಕೊಬೊಲಿ ಅವರನ್ನು ಮಣಿಸಿ ತಮ್ಮ ಚೊಚ್ಚಲ ಗ್ರ್ಯಾನ್‌ಸ್ಲಾಂ ಪ್ರಶಸ್ತಿಯನ್ನು ಗೆದ್ದಿದ್ದಾರೆ. ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ನಡೆದ ರೋಚಕ ಐದು ಸೆಟ್‌ಗಳ ಪಂದ್ಯದಲ್ಲಿ ಜಯಗಳಿಸಿದ ಜ್ವೆರೆವ್, ನಾಲ್ಕನೇ ಫೈನಲ್ ಪ್ರಯತ್ನದಲ್ಲಿ ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಪ್ಯಾರಿಸ್‌: ಜರ್ಮನಿಯ ಯುವ ಟೆನಿಸಿಗ, ವಿಶ್ವ ನಂ.3 ಅಲೆಕ್ಸಾಂಡರ್‌ ಜ್ವೆರೆವ್‌ ಚೊಚ್ಚಲ ಗ್ರ್ಯಾನ್‌ಸ್ಲಾಂ ಕಿರೀಟ ಗೆದ್ದಿದ್ದಾರೆ. ಅವರು ಫ್ರೆಂಚ್‌ ಓಪನ್ ಟೆನಿಸ್ ಟೂರ್ನಿಯಲ್ಲಿ ಭಾನುವಾರ ಇಟಲಿಯ ಫ್ಲಾವಿಯೊ ಕೊಬೊಲಿ ವಿರುದ್ಧ ರೋಚಕ ಗೆಲುವು ಸಾಧಿಸಿ, ತಮ್ಮ ಗ್ರ್ಯಾನ್‌ಸ್ಲಾಂ ಕನಸನ್ನು ನನಸು ಮಾಡಿಕೊಂಡರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

4 ಗಂಟೆಗೂ ಹೆಚ್ಚು ಕಾಲ ನಡೆದ ಪುರುಷರ ಸಿಂಗಲ್ಸ್‌ ಪ್ರಶಸ್ತಿ ಕಾದಾಟದಲ್ಲಿ ಜ್ವೆರೆವ್‌ 6-1, 4-6, 6-4, 6-7(5-7), 6-1 ಸೆಟ್‌ಗಳಲ್ಲಿ ಜಯಭೇರಿ ಬಾರಿಸಿದರು. ಮೊದಲ ಸೆಟ್‌ಅನ್ನು ಸುಲಭದಲ್ಲಿ ಕಳೆದುಕೊಂಡ 10ನೇ ಶ್ರೇಯಾಂಕಿತ ಕೊಬೊಲಿ, ಬಳಿಕ ತೀವ್ರ ಪೈಪೋಟಿ ನೀಡಿ 4 ಸೆಟ್ ಅಂತ್ಯಕ್ಕೆ 2-2 ಸಮಬಲ ಸಾಧಿಸಿದರು. ಆದರೆ ಕೊನೆ ಸೆಟ್‌ನಲ್ಲಿ ಮತ್ತಷ್ಟು ಆಕ್ರಮಣಕಾರಿಯಾಗಿ ಆಡಿದ ಜ್ವೆರೆವ್‌, ಚಾಂಪಿಯನ್‌ ಆಗಿ ಹೊರಹೊಮ್ಮಿದರು. ಇದರೊಂದಿಗೆ ಕೊಬೊಲಿಯ ಚೊಚ್ಚಲ ಗ್ರ್ಯಾನ್‌ಸ್ಲಾಂ ಕನಸು ಭಗ್ನಗೊಂಡಿತು.

2.5 ವರ್ಷದಲ್ಲಿ ಸಿನ್ನರ್‌, ಆಲ್ಕರಜ್‌ ಬಿಟ್ಟು ಗ್ರ್ಯಾನ್‌ಸ್ಲಾಂ ಗೆದ್ದ ಮೊದಲಿಗ

2024ರಿಂದ ಅಂದರೆ ಕಳೆದ ಎರಡೂವರೆ ವರ್ಷಗಳಲ್ಲೇ ಆಲ್ಕರಜ್‌ ಹಾಗೂ ಸಿನ್ನರ್‌ ಹೊರತಾಗಿ ಗ್ರ್ಯಾನ್‌ಸ್ಲಾಂ ಗೆದ್ದ ಮೊದಲಿಗ ಎಂಬ ಖ್ಯಾತಿಗೆ ಜ್ವೆರೆವ್‌ ಪಾತ್ರರಾಗಿದ್ದಾರೆ. ಸಿನ್ನರ್‌ 2024ರಲ್ಲಿ ಆಸ್ಟ್ರೇಲಿಯನ್‌ ಓಪನ್‌, ಯುಎಸ್‌ ಓಪನ್‌, 2025ರಲ್ಲಿ ಆಸ್ಟ್ರೇಲಿಯನ್‌, ವಿಂಬಲ್ಡನ್‌ ಗೆದ್ದಿದ್ದರೆ, ಆಲ್ಕರಜ್‌ 2024ರಲ್ಲಿ ಫ್ರೆಂಚ್‌ ಓಪನ್‌, ವಿಂಬಲ್ಡನ್‌, 2025ರಲ್ಲಿ ಫ್ರೆಂಚ್‌, ಯುಎಸ್‌, 2026ರಲ್ಲಿ ಆಸ್ಟ್ರೇಲಿಯನ್‌ ಓಪನ್‌ ಗೆದ್ದಿದ್ದಾರೆ.

04 ಫೈನಲ್‌

ಜ್ವೆರೆವ್‌ 4 ಬಾರಿ ಗ್ರ್ಯಾನ್‌ಸ್ಲಾಂ ಫೈನಲ್‌ ಆಡಿದ್ದು, ಇದೇ ಮೊದಲ ಬಾರಿ ಜಯಗಳಿಸಿದ್ದಾರೆ. 2020ರ ಯುಎಸ್‌, 2024ರ ಫ್ರೆಂಚ್‌, 2025ರ ಆಸ್ಟ್ರೇಲಿಯನ್‌ ಓಪನ್‌ ಫೈನಲ್‌ ಸೋತಿದ್ದರು.

₹31.06 ಕೋಟಿ: ಚಾಂಪಿಯನ್‌ ಜ್ವೆರೆವ್‌ಗೆ ₹31.06 ಕೋಟಿ ನಗದು ಬಹುಮಾನ ಲಭಿಸಿತು.

₹15.53 ಕೋಟಿ: ರನ್ನರ್‌-ಅಪ್‌ ಕೊಬೊಲಿಗೆ ₹15.53 ಕೋಟಿ ನಗದು ಬಹುಮಾನ ಲಭಿಸಿತು.

ವಾರೆವ್ಹಾ ಆ್ಯಂಡ್ರೀವಾ

ಪ್ಯಾರಿಸ್: ಫ್ರೆಂಚ್‌ ಓಪನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿಯಲ್ಲಿ ರಷ್ಯಾದ 19 ವರ್ಷದ ಮಿರ್ರಾ ಆ್ಯಂಡ್ರೀವಾ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಶನಿವಾರ ನಡೆದ ಮಹಿಳಾ ಸಿಂಗಲ್ಸ್‌ ಫೈನಲ್‌ನಲ್ಲಿ 8ನೇ ಶ್ರೇಯಾಂಕಿತೆ ಆ್ಯಂಡ್ರೀವಾ, ಪೋಲೆಂಡ್‌ನ ಶ್ರೇಯಾಂಕ ರಹಿತ ಮಜಾ ಚ್ವಾಲಿನ್ಸ್ಕಾ ವಿರುದ್ಧ 6-3, 6-2 ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಇದರೊಂದಿಗೆ ಚೊಚ್ಚಲ ಗ್ರ್ಯಾನ್‌ಸ್ಲಾಂ ಕಿರೀಟ ತಮ್ಮದಾಗಿಸಿಕೊಂಡರು.

ಆ್ಯಂಡ್ರೀವಾ ಈ ಹಿಂದೆ 2024ರಲ್ಲಿ ಫ್ರೆಂಚ್‌ ಓಪನ್‌ ಸೆಮಿಫೈನಲ್‌ ತಲುಪಿದ್ದರು. ಕಳೆದ ಬಾರಿ ಕ್ವಾರ್ಟರ್‌ನಲ್ಲಿ ಎಡವಿದ್ದ ಅವರು ಈ ಬಾರಿ ತಮ್ಮ ಕನಸು ನನಸಾಗಿಸಿಕೊಂಡರು. ಫೈನಲ್‌ನಲ್ಲಿ ಅವರಿಗೆ ದೊಡ್ಡ ಸವಾಲು ಕೂಡಾ ಎದುರಾಗಲಿಲ್ಲ. ಇನ್ನು, ಚ್ವಾಲಿನ್ಸ್ಕಾ ಕೂಡಾ ಇದೇ ಮೊದಲ ಬಾರಿ ಗ್ರ್ಯಾನ್‌ಸ್ಲಾಂ ಫೈನಲ್‌ ಆಡಿದರು. ಆದರೆ ಚೊಚ್ಚಲ ಫೈನಲ್‌ಅನ್ನು ಸ್ಮರಣೀಯಗೊಳಿಸಲು 24 ವರ್ಷದ ಆಟಗಾರ್ತಿಗೆ ಸಾಧ್ಯವಾಗಲಿಲ್ಲ.

₹31.06 ಕೋಟಿ: ಚಾಂಪಿಯನ್‌ ಮಿರ್ರಾ ಆ್ಯಂಡ್ರೀವಾಗೆ ₹31.06 ಕೋಟಿ ನಗದು ಬಹುಮಾನ ಲಭಿಸಿತು.

₹15.53 ಕೋಟಿ: ರನ್ನರ್‌-ಅಪ್‌ ಮಜಾ ಚ್ವಾಲಿನ್ಸ್ಕಾಗೆ ₹15.53 ಕೋಟಿ ನಗದು ಬಹುಮಾನ ಲಭಿಸಿತು.

ಹೋಟೆಲ್‌ ಬಿಲ್‌ ಕೊಡಲು ಪರದಾಡಿದ್ದ ಚ್ವಾಲಿನ್ಸ್ಕಾಗೆ ಸಿಕ್ತು 15 ಕೋಟಿ ನಗದು!

ಫ್ರೆಂಚ್ ಓಪನ್ ಆಡಲೆಂದು ಪ್ಯಾರಿಸ್‌ಗೆ ಆಗಮಿಸಿದ್ದ ಚ್ವಾಲಿನ್ಸ್ಕ ಅರ್ಹತಾ ಸುತ್ತಿನಲ್ಲಿ ಆಡಿ ಗೆದ್ದು ಮುಖ್ಯ ಸುತ್ತು ಪ್ರವೇಶಿಸಿದ್ದರು. ಟೂರ್ನಿಗೂ ಮುನ್ನ ಅವರಿಗೆ ಪ್ರಾಯೋಜಕರೂ ಇರಲಿಲ್ಲ. ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ಅವರಿಗೆ ತಾವು ತಂಗುವ ಹೋಟೆಲ್​ ಕೋಣೆಯ ಬಿಲ್ ಪಾವತಿಸಲೂ ಹಣವಿರಲಿಲ್ಲ. ಆಗ ಅವರಿಗೆ ನೆರವಾಗಿದ್ದ ಪೋಲೆಂಡ್‌ನ ಪಾನೀಯ ಕಂಪೆನಿ ಓಶೀ. ವಿಶ್ವ ನಂ.1 ಇಗಾ ಸ್ವಿಯಾಟೆಕ್‌ಗೆ ಪ್ರಾಯೋಜಕತ್ವ ವಹಿಸಿರುವ ಈ ಸಂಸ್ಥೆ, ಚ್ವಾಲಿನ್ಸ್ಕಾಗೂ ನೆರವಾಗಿದೆ. ಇದನ್ನು ಅವರು ಟೂರ್ನಿ ವೇಳೆ ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಈಗ ಅವರಿಗೆ ಬಹುಮಾನ ಮೊತ್ತವಾಗಿ ₹15.56 ಕೋಟಿ ಲಭಿಸಿದೆ.