ಲಂಡನ್(ಏ.29): ಮನೋರಂಜನಾ ಡ್ರಗ್ಸ್ ಸೇವಿಸಿ ಸಿಕ್ಕಿಬಿದ್ದಿದ್ದ ಇಂಗ್ಲೆಂಡ್ ತಂಡದ ಆರಂಭಿಕ ಬ್ಯಾಟ್ಸ್’ಮನ್ ಅಲೆಕ್ಸ್ ಹೇಲ್ಸ್ ಅವರನ್ನು 2019ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ತಂಡದಿಂದ ಕೈಬಿಡಲಾಗಿದೆ. ಈ ಮೊದಲು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಹೇಲ್ಸ್ ಅವರನ್ನು 21 ದಿನಗಳ ಮಟ್ಟಿಗೆ ನಿಷೇಧ ಹೇರಲಾಗಿತ್ತು.

ಈ ವಿಷಯವನ್ನು ಖಚಿತಪಡಿಸಿರುವ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ, ಐರ್ಲೆಂಡ್ ಹಾಗೂ ಪಾಕಿಸ್ತಾನ ವಿರುದ್ಧ ನಡೆಯಲಿರುವ ಸೀಮಿತ ಓವರ್’ಗಳ ಸರಣಿಯಿಂದಲೂ ಅಲೆಕ್ಸ್ ಹೇಲ್ಸ್ ಅವರನ್ನು ತಂಡದಿಂದ ಹೊರಗಿಡಲಾಗಿದೆ ಎಂದು ಸ್ಪಷ್ಟಪಡಿಸಿದೆ. ಡ್ರಗ್ಸ್ ಸೇವಿಸಿರುವುದು ತನಿಖೆಯಿಂದ ಸ್ಪಷ್ಟವಾಗಿರುವ ಹಿನ್ನಲೆಯಲ್ಲಿ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಈ ಕಠಿಣ ತೀರ್ಮಾನಕ್ಕೆ ಬಂದಿದೆ.

ವಿಶ್ವಕಪ್’ಗೂ ಮುನ್ನ ಆಘಾತ: ಡ್ರಗ್ಸ್ ಸೇವಿಸಿ ಸಿಕ್ಕಿಬಿದ್ದ ಸ್ಟಾರ್ ಕ್ರಿಕೆಟಿಗ

ಸ್ಫೋಟಕ ಆರಂಭಿಕ ಬ್ಯಾಟ್ಸ್’ಮನ್ ಅಲೆಕ್ಸ್ ಹೇಲ್ಸ್ ಇಂಗ್ಲೆಂಡ್ ಪರ 70 ಪಂದ್ಯಗಳನ್ನಾಡಿ 6 ಶತಕ ಸಹಿತ 2419 ರನ್ ಬಾರಿಸಿದ್ದಾರೆ. ಸೀಮಿತ ಓವರ್’ಗಳ ಕ್ರಿಕೆಟ್’ನಲ್ಲಿ 95.72ರ ಸ್ಟ್ರೈಕ್’ರೇಟ್ ಹೊಂದಿರುವ ಹೇಲ್ಸ್ ವಿಶ್ವಕಪ್ ಟೂರ್ನಿಗೆ ಇಂಗ್ಲೆಂಡ್ ತಂಡದ ಮೀಸಲು ಆರಂಭಿಕನಾಗಿ ಸ್ಥಾನ ಪಡೆದಿದ್ದರು. ಇನ್ನೂ ಹೇಲ್ಸ್ ಸ್ಥಾನಕ್ಕೆ ಯಾರು ಆಯ್ಕೆಯಾಗಲಿದ್ದಾರೆ ಎನ್ನುವುದು ಸದ್ಯದ ಕುತೂಹಲವಾಗಿದೆ.

ವಿಶ್ವಕಪ್ ಟೂರ್ನಿಗೆ ಆತಿಥೇಯ ಇಂಗ್ಲೆಂಡ್ ತಂಡ ಪ್ರಕಟ!

2019ರ ಏಕದಿನ ವಿಶ್ವಕಪ್ ಟೂರ್ನಿಯು ಮೇ 30ರಿಂದ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಆತಿಥ್ಯ ವಹಿಸಿರುವ ಇಂಗ್ಲೆಂಡ್ ತಂಡವು ದಕ್ಷಿಣ ಆಫ್ರಿಕಾ ಎದುರು ಸೆಣಸಲಿದೆ. 10 ತಂಡಗಳು ಪ್ರಶಸ್ತಿಗಾಗಿ ಕಾದಾಡಲಿದ್ದು, ಭಾರತ ಜೂನ್ 05ರಂದು ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಪಂದ್ಯವನ್ನಾಡಲಿದೆ.