ಮುಂಬೈ(ಮೇ.01): 12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಅಂಪೈರ್ ತೀರ್ಪು ಸೇರಿದಂತೆ ಆನ್‌ಫೀಲ್ಡ್‌ನಲ್ಲಿನ ಸಣ್ಣ ಘಟನೆಗಳನ್ನ ಹೊರತು ಪಡಿಸಿದರೆ ವಿವಾದಗಳು ಭುಗಿಲೆದ್ದಿರಲಿಲ್ಲ. ಆದರೆ 12ನೇ ಆವೃತ್ತಿ ಐಪಿಎಲ್ ಟೂರ್ನಿಗೂ ಕಳಂಕ ಅಂಟಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಫ್ರಾಂಚೈಸಿ ಮಾಲೀಕರು ನಿಯಮ ಉಲ್ಲಂಘಿಸಿದ ಕಾರಣಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ 2 ವರ್ಷ ನಿಷೇಧಕ್ಕೊಳಗಾಗಿತ್ತು. ಇದೀಗ CSK,RR ಬಳಿಕ ಕಿಂಗ್ಸ್ ಇಲೆವೆನ್ ಪಂಜಾಬ್ ಕೂಡ ಅಮಾನತು ಭೀತಿಯಲ್ಲಿದೆ.

ಇದನ್ನೂ ಓದಿ: ಕೊಹ್ಲಿ ಜತೆ ಕನ್ನಡಿಗನನ್ನು ಹೋಲಿಸಿದ ಕ್ರಿಸ್ ಗೇಲ್..!

ಕಿಂಗ್ಸ್ ಇಲೆವೆನ್ ಸಹ ಮಾಲೀಕ ನೆಸ್ ವಾಡಿಯಾ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೊಳಾಗಿ ಬಿಡುಗಡೆಯಾಗಿದ್ದಾರೆ. ಜಪಾನ್‌ನಲ್ಲಿ ಅರೆಸ್ಟ್ ಆದ ನೆಸ್ ವಾಡಿಯಾ, ಜೈಲು ಶಿಕ್ಷೆಯನ್ನೂ ಅನುಭವಿಸಿದ್ದರು. ಕಳೆದ ಮಾರ್ಚ್‌ನಲ್ಲಿ ಈ ಘಟನೆ ನಡೆದಿದೆ. ಇದೀಗ ಈ ಪ್ರಕರಣ ಬೆಳಕಿಗೆ ಬಂದಿದ್ದು, ವಾಡಿಯಾ ಡ್ರಗ್ಸ್ ಪ್ರಕರಣವನ್ನು ಬಿಸಿಸಿಐ ಗಂಭೀರವಾಗಿ ಪರಿಗಣಿಸಿದೆ. ನೆಸ್ ವಾಡಿಯಾ ತಪ್ಪು ಸಾಬೀತಾದಲ್ಲಿ, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ನಿಷೇಧಕ್ಕೊಳಗಾಗಲಿದೆ.

ಇದನ್ನೂ ಓದಿ: IPL ಇತಿಹಾಸದಲ್ಲೇ ಅಪರೂಪದ ದಾಖಲೆ ಬರೆದ CSK

ಐಪಿಎಲ್ ಫ್ರಾಂಚೈಸಿ ಮಾಲೀಕರು ಆನ್‌ಫೀಲ್ಡ್, ಆಫ್ ದಿ ಫೀಲ್ಡ್‌ನಲ್ಲಿ ನಿಯಮ ಉಲ್ಲಂಘಿಸುವಂತಿಲ್ಲ. ಮಾಲೀಕರ ಬೆಟ್ಟಿಂಗ್ ಪ್ರಕರಣದಿಂದ CSK ಹಾಗೂ RR ನಿಷೇಧದ  ಶಿಕ್ಷೆ ಅನುಭವಿಸಿತು. ಇದೀಗ ನೆಸ್ ವಾಡಿಯಾ ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿದ್ದಾರೆ. ಡೋಪಿಂಗ್‌ನಿಂದ ಆಟಗಾರರನ್ನು ದೂರವಿಡಲು ಬಿಸಿಸಿಐ ಹಾಗೂ ಐಸಿಸಿ ಅವಿರತ ಪ್ರಯತ್ನ ಮಾಡುತ್ತಿದೆ. ಇದೀಗ ಫ್ರಾಂಚೈಸಿ ಮಾಲೀಕರೇ ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿರುವುದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಂಕಷ್ಟ ಮತ್ತಷ್ಟು ಹೆಚ್ಚಿಸಿದೆ.

ವಾಡಿಯಾ ಡ್ರಗ್ಸ್ ಪ್ರಕರಣ:
ಕಳೆದ ಮಾರ್ಚ್‌ನಲ್ಲಿ ನೆಸ್‌ ಪ್ರವಾಸಕ್ಕೆಂದು ಜಪಾನ್‌ಗೆ ತೆರಳಿದ್ದ ವೇಳೆ ತಮ್ಮ ಬಳಿ 25 ಗ್ರಾಂ ಗಾಂಜಾ ಇಟ್ಟುಕೊಂಡಿದ್ದರು. ಆದರೆ ನ್ಯೂ ಚಿಟೋಸ್‌ ವಿಮಾನ ನಿಲ್ದಾಣದಲ್ಲಿ ತಪಾಸಣೆ ವೇಳೆ ಶ್ವಾನಗಳು ಗಾಂಜಾ ಪತ್ತೆ ಹಚ್ಚಿದ್ದವು. ಹೀಗಾಗಿ ಅವರನ್ನು ಬಂಧಿಸಿ, ವಿಚಾರಣೆಗೆ ಗುರಿಪಡಿಸಲಾಗಿತ್ತು.

ವಿಚಾರಣೆ ವೇಳೆ ತಾವು ಸ್ವಂತ ಬಳಕೆಗಾಗಿ ಗಾಂಜಾ ಇಟ್ಟುಕೊಂಡಿದ್ದೆ ಎಂದು ನೆಸ್‌ ಒಪ್ಪಿದ್ದರು. ಇದನ್ನು ಮಾನ್ಯ ಮಾಡಿದ ಕೋರ್ಟ್‌ ನೆಸ್‌ಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿತ್ತಾದರೂ, ನಿಯಮಗಳ ಅನ್ವಯ ಅವರ ಶಿಕ್ಷೆಯನ್ನು ಅಮಾನತ್ತಿನಲ್ಲಿ ಇಟ್ಟಿತ್ತು. ಹೀಗಾಗಿ ಅವರು ಜೈಲು ಶಿಕ್ಷೆ ಅನುಭವಿಸಬೇಕಾದ ಅಪಾಯದಿಂದ ಪಾರಾಗಿ ಭಾರತಕ್ಕೆ ಮರಳಿದ್ದಾರೆ.