58 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಿಂದ ಆಫ್ಘಾನಿಸ್ತಾನ ಬ್ಯಾಟ್ಸ್‌'ಮನ್ ಒಟ್ಟು 1779 ರನ್ ಕಲೆಹಾಕಿದ್ದಾರೆ.
ಗ್ರೇಟರ್'ನೊಯ್ಡಾ(ಮಾ.12): ಆಫ್ಘಾನಿಸ್ತಾನ ತಂಡದ ಎಂ.ಎಸ್. ಧೋನಿ ಅಂತಲೇ ಹೆಸರುವಾಸಿಯಾಗಿರುವ ಸ್ಫೋಟಕ ಬ್ಯಾಟ್ಸ್'ಮನ್ ಮೊಹಮದ್ ಶಹಜಾದ್, ಅಂತಾರಾಷ್ಟ್ರೀಯ ಟಿ20ಯಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟ್ಸ್ಮನ್'ಗಳ ಪಟ್ಟಿಯಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ.
ಇಲ್ಲಿ ಐರ್ಲೆಂಡ್ ವಿರುದ್ಧ ನಡೆದ ಮೂರನೇ ಟಿ20 ಪಂದ್ಯದಲ್ಲಿ ಅಮೋಘ 72 ರನ್ ಸಿಡಿಸಿದ ಶಹಜಾದ್ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದರು. 58 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಿಂದ ಆಫ್ಘಾನಿಸ್ತಾನ ಬ್ಯಾಟ್ಸ್'ಮನ್ ಒಟ್ಟು 1779 ರನ್ ಕಲೆಹಾಕಿದ್ದಾರೆ. ಐರ್ಲೆಂಡ್'ನ ಬ್ಯಾರಿ ಮೆಕ್'ಕಾರ್ಥಿ ಎಸೆತವನ್ನು ಬೌಂಡರಿ ಬಾರಿಸುವ ಮೂಲಕ ಶಹಜಾದ್, ವಿರಾಟ್ ಕೊಹ್ಲಿ (1709 ರನ್)ದಾಖಲೆಯನ್ನು ಹಿಂದಿಕ್ಕಿದರು.
ಇದೇ ಪಂದ್ಯದಲ್ಲಿ ಶಹಜಾದ್'ಗೆ ನ್ಯೂಜಿಲೆಂಡ್ನ ಮಾರ್ಟಿನ್ ಗಪ್ಟಿಲ್ (1806 ರನ್) ಅವರನ್ನೂ ಮೀರಿಸಿ 3ನೇ ಸ್ಥಾನಕ್ಕೇರುವ ಅವಕಾಶವಿತ್ತು. ಆದರೆ ಅದರೊಳಗೆ ಶಹಜಾದ್ ಔಟಾದರು. ನ್ಯೂಜಿಲೆಂಡ್'ನ ಬ್ರೆಂಡನ್ ಮೆಕ್ಕಲಂ (2140 ರನ್) ಹಾಗೂ ಶ್ರೀಲಂಕಾದ ತಿಲಕರತ್ನೆ ದಿಲ್ಶಾನ್ (1889ರನ್)ಗಳೊಂದಿಗೆ ಮೊದಲೆರೆಡು ಸ್ಥಾನದಲ್ಲಿದ್ದಾರೆ.
ಈ ಇಬ್ಬರೂ ಆಟಗಾರರು ಈಗಾಗಲೇ ಅಂತಾರಾಷ್ಟ್ರೀಯ ಟಿ20ಯಿಂದ ನಿವೃತ್ತಿ ಹೊಂದಿರುವುದರಿಂದ ಶಹಜಾದ್'ಗೆ ಅಗ್ರಸ್ಥಾನಕ್ಕೇರುವ ಅವಕಾಶವಿದೆ. ಆದರೆ, ಚುಟುಕು ಮಾದರಿಯಲ್ಲಿ 50ರ ಸರಾಸರಿ ಹೊಂದಿರುವ ಏಕೈಕ ಬ್ಯಾಟ್ಸ್ಮನ್ ಎನಿಸಿರುವ ವಿರಾಟ್ ಸಹ ಅಗ್ರಸ್ಥಾನಕ್ಕೇರುವ ನೆಚ್ಚಿನ ಆಟಗಾರ ಎನಿಸಿಕೊಂಡಿದ್ದಾರೆ.
