ಚಟ್ಟೊಗ್ರಾಂ(ಸೆ.09): ಕಳೆದೆರಡು ವರ್ಷದ ಹಿಂದೆ ಟೆಸ್ಟ್ ಮಾನ್ಯತೆ ಗಿಟ್ಟಿಸಿಕೊಂಡ ಅಫ್ಘಾನಿಸ್ತಾನ ಐತಿಹಾಸಿಕ ಸಾಧನೆ ಮಾಡಿದೆ.  ಬಾಂಗ್ಲಾದೇಶ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಅಫ್ಘಾನಿಸ್ತಾನ 224 ರನ್ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಸರಣಿ ಕೈವಶ ಮಾಡಿದೆ.  ಇಷ್ಟೇ ಅಲ್ಲ ಹಲವು ದಾಖಲೆ ಬರೆದಿದೆ.  

 

ಇದನ್ನೂ ಓದಿ: ಆಫ್ಘಾನ್-ವೆಸ್ಟ್ ಇಂಡೀಸ್ ಸರಣಿಗೆ ಭಾರತ ಆತಿಥ್ಯ; ವೇಳಾಪಟ್ಟಿ ಪ್ರಕಟ!

ಗೆಲುವಿಗೆ 398 ರನ್ ಟಾರ್ಗೆಟ್ ಪಡೆದ ಬಾಂಗ್ಲಾದೇಶಕ್ಕೆ ಅಫ್ಘಾನ್ ನಾಯಕ ರಶೀದ್ ಖಾನ್ ಸ್ಪಿನ್ ದಾಳಿಗೆ ತತ್ತರಿಸಿತು. 6 ವಿಕೆಟ್ ಕಬಳಿಸೋ ಮೂಲಕ ಬಾಂಗ್ಲಾದೇಶಕ್ಕೆ ಶಾಕ್ ನೀಡಿದರು. ಅಫ್ಘಾನ್ ತಂಡದ ಅದ್ಬುತ ಬೌಲಿಂಗ್ ದಾಳಿಗೆ ತತ್ತರಿಸಿದ ಬಾಂಗ್ಲಾ 173 ರನ್‌ಗೆ ಆಲೌಟ್ ಆಯಿತು. ಈ ಮೂಲಕ ಅಫ್ಘಾನ್ 224 ರನ್ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಅಫ್ಘಾನಿಸ್ತಾನ ಆಡಿದ 3 ಟೆಸ್ಟ್ ಪಂದ್ಯದಲ್ಲಿ 2 ಗೆಲುವು ಸಾಧಿಸಿ ದಾಖಲೆ ಬರೆಯಿತು. ಇದಕ್ಕೂ ಮೊದಲು ಅಫ್ಗಾನ್,  ಐರ್ಲೆಂಡ್ ವಿರುದ್ಧ 7 ವಿಕೆಟ್ ಗೆಲುವು ಸಾಧಿಸಿದ್ದರೆ, ಭಾರತ ವಿರುದ್ಧ ಸೋಲು ಅನುಭವಿಸಿತ್ತು. 

ಇದನ್ನೂ ಓದಿ: ರಶೀದ್ ಖಾನ್ ಜಗತ್ತಿನ ಶ್ರೇಷ್ಠ ಬೌಲರ್ ಎಂದ ಆಸೀಸ್ ಆಲ್ರೌಂಡರ್

ಆರಂಭಿಕ 3 ಟೆಸ್ಟ್ ಪಂದ್ಯದಲ್ಲಿ 2 ಗೆಲುವು ದಾಖಲಿಸಿ, ಆಸ್ಟ್ರೇಲಿಯಾ ಸಾಧನೆ ಸರಿಗಟ್ಟಿದೆ. ಆಸ್ಟ್ರೇಲಿಯಾ ಆರಂಭಿಕ 3 ಟೆಸ್ಟ್ ಪಂದ್ಯದಲ್ಲಿ 2 ಗೆಲುವು ಸಾಧಿಸಿದ ಸಾಧನೆ ಮಾಡಿದೆ.  ಇದೀಗ ಅಫ್ಘಾನ್ ಕೂಡ ಇದೇ ಸಾಧನೆ ಮಾಡಿದೆ.  ಉಳಿದೆಲ್ಲಾ ತಂಡಗಳು ಆರಂಭಿಕ 2 ಗೆಲುವಿಗೆ 15ಕ್ಕೂ ಹೆಚ್ಚು ಪಂದ್ಯಗಳನ್ನು ತೆಗೆದುಕೊಂಡಿದೆ. 

ಅಫ್ಘಾನ್ ನಾಯಕ ರಶೀದ್ ಖಾನ್, ದಿಗ್ಗಜ ನಾಯಕರಾದ ಪಾಕಿಸ್ತಾನದ ಇಮ್ರಾನ್ ಖಾನ್,  ಆಸ್ಟ್ರೇಲಿಯಾದ ಅಲನ್ ಬಾರ್ಡರ್ ಸಾಲಿಗೆ ಸೇರಿಕೊಂಡಿದ್ದಾರೆ. ಟೆಸ್ಟ್ ಇನ್ನಿಂಗ್ಸ್ ಒಂದರಲ್ಲಿ ಹಾಫ್ ಸೆಂಚುರಿ ಸಿಡಿಸಿ ಹಾಗೂ ಪಂದ್ಯದಲ್ಲಿ 10 ವಿಕೆಟ್ ಪಡೆದ ವಿಶ್ವದ 3ನೇ ನಾಯಕ ಅನ್ನೋ ಸಾಧನೆ ಮಾಡಿದ್ದಾರೆ. 

ಟೆಸ್ಟ್ ಪಂದ್ಯದಲ್ಲಿ ಅರ್ಧಶತಕ ಹಾಗೂ 10 ವಿಕೆಟ್ ಸಾಧನೆ ಮಾಡಿದ ನಾಯಕ:
ಇಮ್ರಾನ್ ಖಾನ್(117 & 11-180) vs ಭಾರತ, 1982-83
ಅಲನ್ ಬಾರ್ಡರ್ (75 & 11-96) v ವಿಂಡೀಸ್, 1988-89
ರಶೀದ್ ಖಾನ್ (51 & 11-104) v ಬಾಂಗ್ಲಾ, 2019

ಟೆಸ್ಟ್ ಪಂದ್ಯ ಗೆದ್ದ ಅತಿ ಕಿರಿಯ ನಾಯಕ ಅನ್ನೋ ಹೆಗ್ಗಳಿಕೆಗೂ ಅಫ್ಘಾನ್ ನಾಯಕ ರಶೀದ್ ಖಾನ್ ಪಾತ್ರವಾಗಿದ್ದಾರೆ. ಇತ್ತ ಬಾಂಗ್ಲಾ ವಿರುದ್ಧ ಐತಿಹಾಸಿಕ ಗೆಲುವಿನೊಂದಿಗೆ ಅಫ್ಘಾನ್ ತಂಡದ  ಮೊಹಮ್ಮದ್ ನಬಿ ವಿದಾಯ ಹೇಳಿದ್ದಾರೆ.