ಬೆಳ್ಳಿಯಪ್ಪಗೆ ಒಲಿಂಪಿಕ್ಸ್‌ಗೆ ಅರ್ಹತೆ ಮುಂದಿನ ಗುರಿ..!

* ವಿಶ್ವ 10ಕೆ ಬೆಂಗಳೂರು ಮ್ಯಾರಥಾನ್‌ನಲ್ಲಿ ಪಾಲ್ಗೊಂಡಿರುವ ಎಬಿ ಬೆಳ್ಳಿಯಪ್ಪ 

* 2019ರಲ್ಲಿ ಬೆಂಗಳೂರು 10ಕೆ ಮ್ಯಾರಥಾನ್‌ನಲ್ಲಿ ಪಾಲ್ಗೊಂಡರೂ ಗೆಲ್ಲಲು ಆಗಿರಲಿಲ್ಲ

* ಈ ವರ್ಷ ಸೆಪ್ಟೆಂಬರ್‌ನಲ್ಲಿ ಚೀನಾದಲ್ಲಿ ನಡೆಯಬೇಕಿದ್ದ ಏಷ್ಯನ್‌ ಗೇಮ್ಸ್‌ ಮುಂದೂಡಿಕೆ

AB Belliyappa eyes on Olympics Qualification kvn

- ನಾಸಿರ್‌ ಸಜಿಪ, ಕನ್ನಡಪ್ರಭ

ಬೆಂಗಳೂರು(ಮೇ.15): ಸತತ ಪರಿಶ್ರಮಪಟ್ಟರೆ ಯಾವ ಸಾಧನೆ ಬೇಕಾದರೂ ಮಾಡಬಹುದು. 2024ರ ಪ್ಯಾರಿಸ್ ಒಲಿಂಪಿಕ್ಸ್‌ (Paris Olympics 2022) ಅರ್ಹತೆ ಗಿಟ್ಟಿಸಿಕೊಳ್ಳುವುದು ಈಗ ನನ್ನ ಮುಂದೆ ಇರುವ ಪ್ರಮುಖ ಗುರಿ ಎಂದು ವಿಶ್ವ 10ಕೆ ಬೆಂಗಳೂರು ಮ್ಯಾರಥಾನ್‌ನಲ್ಲಿ ಪಾಲ್ಗೊಳ್ಳಲಿರುವ ಕರ್ನಾಟಕದ ಕೊಡಗಿನ ಎ.ಬಿ.ಬೆಳ್ಳಿಯಪ್ಪ ಅವರು ತಿಳಿಸಿದ್ದಾರೆ.

ಶನಿವಾರ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಅವರು, 2019ರಲ್ಲಿ ಬೆಂಗಳೂರು 10ಕೆ ಮ್ಯಾರಥಾನ್‌ನಲ್ಲಿ (TCS World 10K Bengaluru) ಪಾಲ್ಗೊಂಡರೂ ಗೆಲ್ಲಲು ಆಗಿರಲಿಲ್ಲ. ಈ ಬಾರಿ ಉತ್ತಮ ತಯಾರಿಯೊಂದಿಗೆ ಬಂದಿದ್ದೇನೆ. ಆದರೆ ಪೂರ್ಣ ಮ್ಯಾರಥಾನ್‌ನಲ್ಲಿ ರಾಷ್ಟ್ರೀಯ ದಾಖಲೆಯಾಗಿರುವ ಶಿವನಾಥ್‌ ಸಿಂಗ್‌ ಅವರ 2 ಗಂಟೆ 12 ನಿಮಿಷದ ದಾಖಲೆಯನ್ನು ಮುರಿಯುವುದು ನನ್ನ ಮುಖ್ಯ ಗುರಿ. ಅದನ್ನು ಸಾಧಿಸುವ ಭರವಸೆ ಇದೆ’ ಎಂದಿದ್ದಾರೆ.

ಬೆಳ್ಳಿಯಪ್ಪ 2020ರಲ್ಲಿ ಮುಂಬೈ ಹಾಫ್‌ ಮ್ಯಾರಥಾನ್‌ ಹಾಗೂ ಸ್ಯಾಫ್‌ ಬಾಂಗ್ಲಾ ಮ್ಯಾರಥಾನ್‌ನಲ್ಲಿ 3ನೇ ಸ್ಥಾನ ಪಡೆದಿದ್ದು, 2022ರ ಡೆಲ್ಲಿ ಮ್ಯಾರಥಾನ್‌ನಲ್ಲಿ 2 ಗಂಟೆ 17:09 ನಿಮಿಷಗಳಲ್ಲಿ ಗುರಿ ತಲುಪಿ ಏಷ್ಯನ್‌ (Asian Games), ಕಾಮನ್‌ವೆಲ್ತ್‌ ಗೇಮ್ಸ್‌ಗೆ (Commonwealth Games) ಅರ್ಹತೆ ಪಡೆದಿದ್ದಾರೆ. ಈ ಕ್ರೀಡಾಕೂಟಗಳಲ್ಲಿ ಉತ್ತಮ ಪ್ರದರ್ಶನ ತೋರುವ ನಿರೀಕ್ಷೆಯಲ್ಲಿದ್ದಾರೆ. 

ಇಂದು ವಿಶ್ವ 10K ಓಟ, 19 ಸಾವಿರಕ್ಕೂ ಅಧಿಕ ಮಂದಿ ಭಾಗಿ

2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತಾ ಸಮಯವನ್ನು ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್‌ ಸಂಸ್ಥೆ(ಐಎಎಎಫ್‌) ಇನ್ನಷ್ಟೇ ಪ್ರಕಟಿಸಬೇಕಿದೆ. ಆದರೂ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಡೆಲ್ಲಿ ಮ್ಯಾರಥಾನ್‌ನಲ್ಲಿ ತೋರಿದ ಪ್ರದರ್ಶನವನ್ನು ಮುಂದುವರೆಸಿದರೆ ಅವಕಾಶ ಸಿಗುವ ಸಾಧ್ಯತೆಯಿದೆ. ಕೋವಿಡ್‌ (COVID 19) ಸಮಯದಲ್ಲೂ ಸಹ ದಿನಕ್ಕೆ 5ರಿಂದ 6 ಗಂಟೆಗಳ ಕಾಲ ಅಭ್ಯಾಸ ನಡೆಸುತ್ತಿದ್ದ ಬೆಳ್ಳೆಯಪ್ಪ, ಕೂಟದಿಂದ ಕೂಟಕ್ಕೆ ಬಹಳಷ್ಟು ಸುಧಾರಣೆ ಕಾಣುತ್ತಿದ್ದಾರೆ. ಪುಣೆಯ ಆರ್ಮಿ ಶಾಲೆಯಲ್ಲಿ ಅಭ್ಯಾಸ ನಿರತರಾಗಿರುವ ಅವರು, ಕರ್ನಾಟಕದವರೇ ಆದ ಕೋಚ್ ಕೆ.ಸಿ.ರಾಮು ಅವರ ಬಳಿ ಕಳೆದ 4 ವರ್ಷಗಳಿಂದ ತರಬೇತಿ ಪಡೆಯುತ್ತಿದ್ದಾರೆ.

ಕೋವಿಡ್ ಕಾರಣದಿಂದ ಈ ವರ್ಷ ಸೆಪ್ಟೆಂಬರ್‌ನಲ್ಲಿ ಚೀನಾದಲ್ಲಿ ನಡೆಯಬೇಕಿದ್ದ ಏಷ್ಯನ್‌ ಗೇಮ್ಸ್‌ ಮುಂದೂಡಿಕೆಯಾಗಿದ್ದು, ಮತ್ತಷ್ಟು ಅಭ್ಯಾಸ ನಡೆಸಲು ಅವಕಾಶ ಕಲ್ಪಿಸಿದೆ ಎಂದು ಬೆಳ್ಳಿಯಪ್ಪ ಹೇಳಿದ್ದಾರೆ.

Latest Videos
Follow Us:
Download App:
  • android
  • ios