ಮುಂಬೈ[ಆ.17]: ಟೀಂ ಇಂಡಿಯಾ ಕೋಚ್ ಆಯ್ಕೆ ಬಯಸಿದ್ದ ಆರು ಆಕಾಂಕ್ಷಿಗಳಲ್ಲಿ ಐವರನ್ನು ಹಿಂದಿಕ್ಕಿ ರವಿಶಾಸ್ತ್ರಿ ಮತ್ತೊಮ್ಮೆ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ಹಾಗಂತ ಶಾಸ್ತ್ರಿ ಮುಂದಿರುವ ಹಾದಿ ಹೂವಿನ ಹಾಸಿಗೆಯಂತೂ ಅಲ್ಲವೇ ಅಲ್ಲ. 

ರವಿಶಾಸ್ತ್ರಿ ಕೋಚ್ ಪುನರಾಯ್ಕೆಗೆ ಕಾರಣವೇನು?

ಹೌದು, ರವಿಶಾಸ್ತ್ರಿ ಈಗಾಗಲೇ 2 ವರ್ಷ ಟೀಂ ಇಂಡಿಯಾ ಪೂರ್ಣಾವಧಿ ಕೋಚ್ ಆಗಿ ಕಾರ್ಯ ನಿರ್ವಹಿಸಿದ ಅನುಭವವಿದೆ. ಅದರಲ್ಲೂ ಇತ್ತೀಚೆಗೆ ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಂನಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವ ಮಾತುಗಳು ಹರಿದಾಡುತ್ತಿವೆ. ಹೀಗಾಗಿ ರವಿಶಾಸ್ತ್ರಿ ಮುಂದಿರುವ ಸವಾಲುಗಳೇನು ಎನ್ನುವುದನ್ನು ಸುವರ್ಣನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ.

ಟೀಂ ಇಂಡಿಯಾ ನೂತನ ಕೋಚ್ ಆಗಿ ರವಿ ಶಾಸ್ತ್ರಿ ಪುನರ್ ಆಯ್ಕೆ!

* ಹಲವು ವರ್ಷಗಳಿಂದ ಭಾರತ ತಂಡದ ಮಧ್ಯಮ ಕ್ರಮಾಂಕದ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಸದ್ಯ ವಿಂಡೀಸ್‌ ಪ್ರವಾಸದಲ್ಲಿ ಶ್ರೇಯಸ್‌ ಅಯ್ಯರ್‌ ಉತ್ತಮ ಆಟದೊಂದಿಗೆ ಭರವಸೆ ಮೂಡಿಸಿದ್ದು, ಅವರಿಗೆ ಮತ್ತಷ್ಟುಅವಕಾಶ ಕಲ್ಪಿಸಬೇಕಿದೆ. 

* ರಿಷಭ್‌ ಪಂತ್‌ ಸೇರಿದಂತೆ ಕೆಲ ಯುವ ಆಟಗಾರರು ನಿರೀಕ್ಷೆ ಉಳಿಸಿಕೊಳ್ಳಲು ವಿಫಲರಾಗುತ್ತಿದ್ದಾರೆ. ಸದೃಢ ತಂಡ ಸಿದ್ಧಪಡಿಸುವ ಸವಾಲು ಶಾಸ್ತ್ರಿ ಮುಂದಿದೆ. 

* 2015, 2019ರ ಏಕದಿನ ವಿಶ್ವಕಪ್‌ ಸೆಮೀಸ್‌ನಲ್ಲಿ ಭಾರತ ಸೋಲುಂಡು ನಿರಾಸೆ ಅನುಭವಿಸಿತ್ತು. ಚಾಂಪಿಯನ್ಸ್‌ ಟ್ರೋಫಿ ಫೈನಲ್‌, 2016ರ ಟಿ20 ವಿಶ್ವಕಪ್‌ಗಳಲ್ಲೂ ಸೋಲುಂಡು ಪ್ರಶಸ್ತಿಯಿಂದ ವಂಚಿತಗೊಂಡಿತ್ತು. 2020, 2021ರಲ್ಲಿ ಟಿ20 ವಿಶ್ವಕಪ್‌ ನಡೆಯಲಿದ್ದು, ಭಾರತವನ್ನು ಚಾಂಪಿಯನ್‌ ಪಟ್ಟಕ್ಕೇರಿಸುವ ಒತ್ತಡವಿದೆ.

* ತಂಡದ ಹಿರಿಯ ಆಟಗಾರರಾದ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ನಡುವೆ ಮನಸ್ತಾಪದ ವದಂತಿ ದಿನೇ ದಿನೇ ಹೆಚ್ಚುತ್ತಿದ್ದು, ಆ ರೀತಿ ಯಾವುದಾದರೂ ಸಮಸ್ಯೆ ಇದ್ದಲ್ಲಿ ಅದನ್ನು ಬಗೆಹರಿಸುವ ಕೆಲಸವನ್ನು ಶಾಸ್ತ್ರಿ ಮಾಡಬೇಕಿದೆ.