ರವಿಶಾಸ್ತ್ರಿ ನಿರೀಕ್ಷೆಯಂತೆಯೇ ಟೀಂ ಇಂಡಿಯಾ ನೂತನ ಕೋಚ್ ಆಗಿ ಪುನರಾಯ್ಕೆಯಾಗಿದ್ದಾರೆ. ಟಾಮ್ ಮೂಡಿ, ಹೆಸ್ಸನ್‌ ಅವರಂತಹ ಆಕಾಂಕ್ಷಿಗಳು ಸ್ಪರ್ಧೆಯಲ್ಲಿದ್ದರೂ, ರವಿಶಾಸ್ತ್ರಿ ಕೋಚ್ ಆಗಿದ್ದೇಗೆ..? ಈ ಎಲ್ಲಾ ಕುತೂಹಲಗಳಿಗೆ ಇಲ್ಲಿದೆ ನೋಡಿ ಉತ್ತರ... 

ಮುಂಬೈ[ಆ.17]: ಭಾರತ ತಂಡದ ಕೋಚ್ ಆಗಿ ಮತ್ತೊಮ್ಮೆ ರವಿಶಾಸ್ತ್ರಿ ಆಯ್ಕೆಯಾಗಿದ್ದಾರೆ. ಗಾಯಕ್ವಾಡ್, ಕಪಿಲ್ ದೇವ್ ಹಾಗೂ ಶಾಂತ ರಂಗಸ್ವಾಮಿ ಅವರನ್ನೊಳಗೊಂಡ ಸಲಹಾ ಸಮಿತಿ ಭಾರತ ಕ್ರಿಕೆಟ್ ತಂಡದ ಮೊದಲ ಆಯ್ಕೆಯಾಗಿ ರವಿಶಾಸ್ತ್ರಿ ಹೆಸರನ್ನು ಶುಕ್ರವಾರ ಅಂತಿಮಗೊಳಿಸಿದೆ.

ಟೀಂ ಇಂಡಿಯಾ ನೂತನ ಕೋಚ್ ಆಗಿ ರವಿ ಶಾಸ್ತ್ರಿ ಪುನರ್ ಆಯ್ಕೆ!

4ನೇ ಬಾರಿ ಕೋಚ್‌ ಆದ ರವಿಶಾಸ್ತ್ರಿ!

ರವಿಶಾಸ್ತ್ರಿ ಭಾರತ ತಂಡದ ಕೋಚ್‌ ಆಗುತ್ತಿರುವುದು ಇದು 4ನೇ ಬಾರಿ. 2007ರ ಬಾಂಗ್ಲಾದೇಶ ಪ್ರವಾಸಕ್ಕೆ ಅವರು ತಂಡದ ವ್ಯವಸ್ಥಾಪಕರಾಗಿದ್ದರು. 2014ರಿಂದ 2016ರ ವರೆಗೂ ತಂಡದ ನಿರ್ದೇಶಕರಾಗಿದ್ದ ಶಾಸ್ತ್ರಿ, 2017ರಿಂದ 2019ರ ವರೆಗೂ ಪ್ರಧಾನ ಕೋಚ್‌ ಆಗಿ ಕಾರ್ಯನಿರ್ವಹಿಸಿದ್ದರು. ಏಕದಿನ ವಿಶ್ವಕಪ್‌ ಬಳಿಕ ಮುಕ್ತಾಯಗೊಂಡಿದ್ದ ಅವರ ಗುತ್ತಿಗೆಯನ್ನು 45 ದಿನಗಳ ಕಾಲ ವಿಸ್ತರಿಸಲಾಗಿತ್ತು. ಸದ್ಯ ವೆಸ್ಟ್‌ಇಂಡೀಸ್‌ ಪ್ರವಾಸದಲ್ಲಿರುವ ಭಾರತ ತಂಡಕ್ಕೆ ಶಾಸ್ತ್ರಿ ಮಾರ್ಗದರ್ಶನ ನೀಡುತ್ತಿದ್ದಾರೆ.

ರವಿ ಶಾಸ್ತ್ರಿ ಪುನರ್ ಆಯ್ಕೆ; ರೋಸಿ ಹೋದ ಅಭಿಮಾನಿಗಳಿಂದ ಟ್ವೀಟ್!

ಶಾಸ್ತ್ರಿ ಕೋಚ್ ಪುನರಾಯ್ಕೆಗೆ ಕಾರಣ..?

* ಕೋಚ್‌ ರೇಸ್‌ನಲ್ಲಿ ಹೆಸ್ಸನ್‌, ಮೂಡಿ, ರಾಬಿನ್‌ ಹಾಗೂ ರಜ್‌ಪೂತ್‌ರನ್ನು ಹಿಂದಿಕ್ಕಲು ಶಾಸ್ತ್ರಿಗೆ ಹೆಚ್ಚು ಕಷ್ಟವೇನೂ ಆಗಲಿಲ್ಲ. ಯಾಕೆಂದರೆ ಕಳೆದ 2 ವರ್ಷದಲ್ಲಿ ಕೋಚ್‌ ಆಗಿ ಅವರ ಸಾಧನೆ ಉತ್ತಮವಾಗಿದೆ.

* ರವಿಶಾಸ್ತ್ರಿ ಮಾರ್ಗದರ್ಶನದಲ್ಲಿ ತಂಡ ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೇರಿತು. 71 ವರ್ಷಗಳಲ್ಲಿ ಮೊದಲ ಬಾರಿಗೆ ಆಸ್ಪ್ರೇಲಿಯಾದಲ್ಲಿ ಟೆಸ್ಟ್‌ ಸರಣಿ ಗೆದ್ದು ಇತಿಹಾಸ ಬರೆಯಿತು.

* 2 ವರ್ಷಗಳಲ್ಲಿ ಆಡಿರುವ 21 ಟೆಸ್ಟ್‌ಗಳಲ್ಲಿ ಭಾರತ 13ರಲ್ಲಿ ಗೆದ್ದಿದೆ. 60 ಏಕದಿನ ಪಂದ್ಯಗಳಲ್ಲಿ 43ರಲ್ಲಿ, 36 ಟಿ20 ಪಂದ್ಯಗಳಲ್ಲಿ 25ರಲ್ಲಿ ಜಯಭೇರಿ ಬಾರಿಸಿದೆ.

* ಶಾಸ್ತ್ರಿ ಯಶಸ್ಸು ಸಾಧಿಸಿರುವಾಗ ಅವರನ್ನೇಕೆ ಬದಲಿಸಬೇಕು ಎನ್ನುವ ಅಭಿಪ್ರಾಯಗಳು ಬಿಸಿಸಿಐ ಅಧಿಕಾರಿಗಳಿಂದಲೇ ವ್ಯಕ್ತವಾಗಿತ್ತು.