ಮುಂಬೈ[ಏ.15]: ಭಾರತೀಯ ಕ್ರಿಕೆಟ್‌ ಅಭಿಮಾನಿಗಳು ಬಹಳ ದಿನಗಳಿಂದ ನಿರೀಕ್ಷೆ ಮಾಡುತ್ತಿದ್ದ ದಿನ ಬಂದೇ ಬಿಟ್ಟಿದೆ. ಸೋಮವಾರ ಇಲ್ಲಿ ಸಭೆ ಸೇರಲಿರುವ ಬಿಸಿಸಿಐ ಆಯ್ಕೆ ಸಮಿತಿ, 2019ರ ಐಸಿಸಿ ಏಕದಿನ ವಿಶ್ವಕಪ್‌ಗೆ ಭಾರತ ತಂಡವನ್ನು ಆಯ್ಕೆ ಮಾಡಲಿದೆ. ಎಂ.ಎಸ್‌.ಕೆ. ಪ್ರಸಾದ್‌ ನೇತೃತ್ವದ ಆಯ್ಕೆ ಸಮಿತಿ, ಬಿಸಿಸಿಐ ಕಾರ್ಯದರ್ಶಿ ಅಮಿತಾಭ್‌ ಚೌಧರಿ, ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ, ಕೋಚ್‌ ರವಿಶಾಸ್ತ್ರಿ ಆಯ್ಕೆ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಪತ್ರಿಕಾಗೋಷ್ಠಿ ನಡೆಸಿ ತಂಡವನ್ನು ಪ್ರಕಟ ಮಾಡಲಾಗುತ್ತದೆ. ಮಧ್ಯಾಹ್ನ 3 ಗಂಟೆ ವೇಳೆಗೆ ವಿಶ್ವಕಪ್‌ ಆಡಲು ಇಂಗ್ಲೆಂಡ್‌ಗೆ ವಿಮಾನ ಹತ್ತಲಿರುವ ಆಟಗಾರರು ಯಾರಾರ‍ಯರು ಎನ್ನುವುದು ಬಹಿರಂಗಗೊಳ್ಳಲಿದೆ.

ವಿಶ್ವಕಪ್ ಟೂರ್ನಿಗೆ ಸೆಹ್ವಾಗ್ ಕನಸಿನ ತಂಡ ಪ್ರಕಟ

ಕಳೆದ ಒಂದೂವರೆ ಎರಡು ವರ್ಷಗಳಿಂದ ವಿಶ್ವಕಪ್‌ಗೆ ಸಿದ್ಧತೆ ನಡೆಸಿರುವ ಭಾರತ ತಂಡ, ಬಹುತೇಕ ಆಟಗಾರರನ್ನು ಅಂತಿಮಗೊಳಿಸಿಕೊಂಡಿದೆ. ಇತ್ತೀಚೆಗೆ ತಂಡದ ನಾಯಕ ವಿರಾಟ್‌ ಕೊಹ್ಲಿ ನೀಡಿದ್ದ ಹೇಳಿಕೆ ಪ್ರಕಾರ, 14 ಸದಸ್ಯರ ಸ್ಥಾನ ಖಚಿತವಾಗಿದೆ. ಇನ್ನುಳಿದ ಒಂದು ಸ್ಥಾನಕ್ಕೆ ಮೂರು ವಿಭಿನ್ನ ಸಂಯೋಜನೆ ಪೈಕಿ ಒಂದನ್ನು ಆಯ್ಕೆ ಮಾಡುವ ಗೊಂದಲ ಆಯ್ಕೆ ಸಮಿತಿಗೆ ಎದುರಾಗಲಿದೆ.

ಮೇ 30ರಿಂದ ಆರಂಭಗೊಳ್ಳಲಿರುವ ವಿಶ್ವಕಪ್‌ನಲ್ಲಿ ಭಾರತ ತಂಡದ ಮೀಸಲು ಆರಂಭಿಕನ್ಯಾರು?, ಮೀಸಲು ವಿಕೆಟ್‌ ಕೀಪರ್‌ ಯಾರು?, 4ನೇ ವೇಗಿ ಸ್ಥಾನ ಯಾರಿಗೆ ಸಿಗಲಿದೆ? ಈ ಪ್ರಶ್ನೆಗಳಿಗೆ ಆಯ್ಕೆ ಸಮಿತಿ ಸೂಕ್ತ ಉತ್ತರ ಕಂಡುಕೊಂಡಿದೆಯೇ ಎನ್ನುವ ಕುತೂಹಲ ಕಾಡುತ್ತಿದೆ.

ಏಕದಿನ ವಿಶ್ವಕಪ್ ಟೂರ್ನಿಗೆ ಬಲಿಷ್ಠ ತಂಡ ಪ್ರಕಟಿಸಿದ ನ್ಯೂಜಿಲೆಂಡ್

ರೋಹಿತ್‌ ಶರ್ಮಾ, ಶಿಖರ್‌ ಧವನ್‌ ಆರಂಭಿಕರಾಗಿ ಸ್ಥಾನ ಪಡೆಯಲಿದ್ದಾರೆ. ಮೀಸಲು ಆರಂಭಿಕನ ಸ್ಥಾನಕ್ಕೆ ಕೆ.ಎಲ್‌.ರಾಹುಲ್‌ ಮುಂಚೂಣಿಯಲ್ಲಿದ್ದಾರೆ. ರಾಹುಲ್‌ರನ್ನು 4ನೇ ಕ್ರಮಾಂಕದಲ್ಲೂ ಬಳಸಿಕೊಳ್ಳಬಹುದು. ಈ ಐಪಿಎಲ್‌ನಲ್ಲಿ 335 ರನ್‌ ಕಲೆಹಾಕಿರುವ ರಾಹುಲ್‌, ಉತ್ತಮ ಲಯದಲ್ಲಿರುವುದಾಗಿ ಸಾಬೀತು ಪಡಿಸಿದ್ದಾರೆ. ಒಂದೊಮ್ಮೆ ರಾಹುಲ್‌ರನ್ನೇ ಮೀಸಲು ವಿಕೆಟ್‌ ಕೀಪರ್‌ ಆಗಿ ಬಳಸಿಕೊಳ್ಳಲು ನಿರ್ಧರಿಸಿದರೆ, ಅಂಬಟಿ ರಾಯುಡುಗೆ ಸ್ಥಾನ ಸಿಗಲಿದೆ. ತಜ್ಞ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ನನ್ನು ಆಯ್ಕೆ ಮಾಡಲು ನಿರ್ಧರಿಸಿದರೆ ರಿಷಭ್‌ ಪಂತ್‌ ಹಾಗೂ ದಿನೇಶ್‌ ಕಾರ್ತಿಕ್‌ ನಡುವೆ ಸ್ಪರ್ಧೆ ಏರ್ಪಡಲಿದೆ. ಪಂತ್‌ 1ರಿಂದ 7ನೇ ಕ್ರಮಾಂಕದ ವರೆಗೂ ಎಲ್ಲಿ ಬೇಕಿದ್ದರೂ ಬ್ಯಾಟ್‌ ಮಾಡಬಲ್ಲರು. ಜತೆಗೆ ಸ್ಫೋಟಕ ಆಟಕ್ಕೆ ಹೆಸರುವಾಸಿಯಾಗಿರುವ ಬ್ಯಾಟ್ಸ್‌ಮನ್‌. ಆದರೆ ಕಾರ್ತಿಕ್‌ಗೆ ಅನುಭವವಿರುವ ಕಾರಣ, ಆಯ್ಕೆ ಸಮಿತಿ ಅವರಿಗೆ ಮಣೆ ಹಾಕಿದರೆ ಅಚ್ಚರಿಯಿಲ್ಲ. ಆಲ್ರೌಂಡರ್‌ಗಳ ಸ್ಥಾನ ಹಾರ್ದಿಕ್‌ ಪಾಂಡ್ಯ, ವಿಜಯ್‌ ಶಂಕರ್‌ಗೆ ಸಿಗಲಿದೆ.

ಬೌಲಿಂಗ್‌ ವಿಭಾಗದಲ್ಲಿ ಜಸ್ಪ್ರೀತ್‌ ಬುಮ್ರಾ, ಭುವನೇಶ್ವರ್‌ ಕುಮಾರ್‌ ಹಾಗು ಮೊಹಮದ್‌ ಶಮಿ ಸ್ಥಾನ ಪಡೆಯುವುದು ಖಚಿತ. ಇನ್ನೊಂದು ಸ್ಥಾನಕ್ಕೆ ನಾಲ್ವರ ನಡುವೆ ಪೈಪೋಟಿ ಇದೆ. ಇಂಗ್ಲೆಂಡ್‌ನಲ್ಲಿ ಸ್ವಿಂಗ್‌ ಬೌಲಿಂಗ್‌ಗೆ ನೆರವಾಗುವ ವಾತಾವರಣವಿರಲಿದ್ದು, ಅಲ್ಲಿ ಆಡಿರುವ ಅನುಭವವೂ ಇರುವ ಕಾರಣ ಇಶಾಂತ್‌ ಶರ್ಮಾ ಸಹ ಆಯ್ಕೆ ನಿರೀಕ್ಷೆಯಲ್ಲಿದ್ದಾರೆ. ಉಮೇಶ್‌ ಯಾದವ್‌, ಸಿದ್ಧಾರ್ಥ್ ಕೌಲ್‌, ಖಲೀಲ್‌ ಅಹ್ಮದ್‌ ಸಹ ಪೈಪೋಟಿಯಲ್ಲಿದ್ದಾರೆ. ಅಚ್ಚರಿಯ ಆಯ್ಕೆಯಾಗಿ ನವ್‌ದೀಪ್‌ ಸೈನಿಗೆ ಅವಕಾಶ ನೀಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಕುಲ್ದೀಪ್‌ ಯಾದವ್‌ ಹಾಗೂ ಯಜುವೇಂದ್ರ ಚಹಲ್‌ ನಿಸ್ಸಂದೇಹವಾಗಿ ಸ್ಥಾನ ಗಿಟ್ಟಿಸಲಿದ್ದಾರೆ. ರವೀಂದ್ರ ಜಡೇಜಾ 3ನೇ ಸ್ಪಿನ್ನರ್‌ ಆಗಿ ತಂಡ ಕೂಡಿಕೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ.

2019ರ ಏಕದಿನ ವಿಶ್ವಕಪ್ ಟೂರ್ನಿಯು ಮೇ 30ರಿಂದ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಆತಿಥ್ಯ ವಹಿಸಿರುವ ಇಂಗ್ಲೆಂಡ್ ತಂಡವು ದಕ್ಷಿಣ ಆಫ್ರಿಕಾ ಎದುರು ಸೆಣಸಲಿದೆ. 10 ತಂಡಗಳು ಪ್ರಶಸ್ತಿಗಾಗಿ ಕಾದಾಡಲಿದ್ದು, ಭಾರತ ಜೂನ್ 05ರಂದು ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಪಂದ್ಯವನ್ನಾಡಲಿದೆ. ಇನ್ನು ಪಾಕಿಸ್ತಾನ ವಿರುದ್ಧ ಜೂನ್ 16ರಂದು ಭಾರತ ಕಾದಾಡಲಿದೆ.  

ಸಂಭವನೀಯ ತಂಡ

ಬಹುತೇಕ ಖಚಿತ: ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮಾ (ಉಪನಾಯಕ), ಶಿಖರ್‌ ಧವನ್‌, ಕೆ.ಎಲ್‌.ರಾಹುಲ್‌, ಎಂ.ಎಸ್‌.ಧೋನಿ (ವಿಕೆಟ್‌ ಕೀಪರ್‌), ಕೇದಾರ್‌ ಜಾಧವ್‌, ಹಾರ್ದಿಕ್‌ ಪಾಂಡ್ಯ, ವಿಜಯ್‌ ಶಂಕರ್‌, ಕುಲ್ದೀಪ್‌ ಯಾದವ್‌, ಯಜುವೇಂದ್ರ ಚಹಲ್‌, ರವೀಂದ್ರ ಜಡೇಜಾ, ಜಸ್‌ಪ್ರೀತ್‌ ಬೂಮ್ರಾ, ಭುವನೇಶ್ವರ್‌ ಕುಮಾರ್‌, ಮೊಹಮದ್‌ ಶಮಿ.

15ನೇ ಸದಸ್ಯ(ಆಯ್ಕೆಗಳು)

1) 2ನೇ ವಿಕೆಟ್‌ ಕೀಪರ್‌: ದಿನೇಶ್‌ ಕಾರ್ತಿಕ್‌/ರಿಷಭ್‌ ಪಂತ್‌.

2) 4ನೇ ಕ್ರಮಾಂಕಕ್ಕೆ ತಜ್ಞ ಬ್ಯಾಟ್ಸ್‌ಮನ್‌: ಅಂಬಟಿ ರಾಯುಡು

3) 4ನೇ ವೇಗಿ: ಉಮೇಶ್‌ ಯಾದವ್‌/ಖಲೀಲ್‌ ಅಹ್ಮದ್‌/ಇಶಾಂತ್‌ ಶರ್ಮಾ/ನವ್‌ದೀಪ್‌ ಸೈನಿ