ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ಪಂಗಡ (ಎಸ್‌ಟಿ) ಮತ್ತು ಇತರ ಹಿಂದುಳಿದ ವರ್ಗಗಳ (ಒಬಿಸಿ) ಮೇಲಿನ ತಾರತಮ್ಯವನ್ನು ಹತ್ತಿಕ್ಕುವ ಸಲುವಾಗಿ ಸಮಿತಿ ರಚಿಸುವಂತೆ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಹೊರಡಿಸಿದ ಹೊಸ ಆದೇಶ ವಿವಾದಕ್ಕೀಡಾಗಿದೆ.

-ದಿವ್ಯಾ ಹೆಗಡೆ ಕಬ್ಬಿನಗದ್ದೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ಪಂಗಡ (ಎಸ್‌ಟಿ) ಮತ್ತು ಇತರ ಹಿಂದುಳಿದ ವರ್ಗಗಳ (ಒಬಿಸಿ) ಮೇಲಿನ ತಾರತಮ್ಯವನ್ನು ಹತ್ತಿಕ್ಕುವ ಸಲುವಾಗಿ ಸಮಿತಿ ರಚಿಸುವಂತೆ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಹೊರಡಿಸಿದ ಹೊಸ ಆದೇಶ ವಿವಾದಕ್ಕೀಡಾಗಿದೆ. ಹೊಸ ನಿಯಮಗಳಿಂದ ತಮಗೆ ಅನ್ಯಾಯವಾಗುತ್ತದೆ, ಇದು ಸಮಾನತೆಯ ಬದಲು ಅಸಮಾನತೆಯನ್ನೇ ಪೋಷಿಸುತ್ತದೆ ಎಂದು ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿದ್ದಾರೆ. ನಿಯಮವನ್ನು ಹಿಂಪಡೆಯದಿದ್ದರೆ ಹೋರಾಟದ ಎಚ್ಚರಿಕೆಯನ್ನೂ ನೀಡಿದ್ದಾರೆ. ಇದೀಗ ಪ್ರಕರಣ ಸುಪ್ರೀಂ ಕೋರ್ಟ್‌ ಅಂಗಳ ತಲುಪಿದ್ದು. ಕೋರ್ಟ್‌ ಕೂಡ ತಡೆ ನೀಡಿ, ನಿಯಮಗಳ ಮರುಪರಿಶೀಲನೆಗೆ ಸೂಚಿಸಿದೆ. ವಿವಾದಕ್ಕೀಡಾದ ನಿಯಮಗಳ ಸಾಧಕ-ಬಾಧಕಗಳ ಇಣುಕು ನೋಟ ಇಲ್ಲಿದೆ.

ಹೊಸ ನಿಯಮ ಏನು? ಲಾಭ ಏನು?

ಕೇಂದ್ರ ಸರ್ಕಾರದ ಅಧೀನದಲ್ಲಿರುವ ಯುಜಿಸಿ ಜ.13ರಂದು ಹೊರಡಿಸಿದ್ದ ಅಧಿಸೂಚನೆ ವಿವಾದದ ಮೂಲ. ಅಧಿಸೂಚನೆ ಪ್ರಕಾರ, ವಿವಿಗಳು ಹಾಗೂ ವಿವಿ ಮಾನ್ಯತೆ ಪಡೆದ ಕಾಲೇಜುಗಳಲ್ಲಿ ಜಾತಿ ತಾರತಮ್ಯವನ್ನು ತಡೆಗಟ್ಟಲು ಸಮಾನ ಅವಕಾಶ ಕೇಂದ್ರ, ಸಮಾನತೆ ಸಮಿತಿ ಮತ್ತು 24*7 ಸಹಾಯವಾಣಿ ರಚಿಸುವುದು ಕಡ್ಡಾಯ. ಸಮಾನತೆ ಸಮಿತಿಯಲ್ಲಿ ಕಡ್ಡಾಯವಾಗಿ ಎಸ್‌ಸಿ, ಎಸ್‌ಟಿ, ಒಬಿಸಿ, ಅಂಗವಿಕಲರು ಮತ್ತು ಮಹಿಳೆಯರು ಸೇರಿರಬೇಕು. ಈ ಸಮಿತಿಗಳು ಎಸ್‌ಸಿ, ಎಸ್‌ಟಿ, ಒಬಿಸಿ ಸಮುದಾಯಗಳ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿ ಮೇಲಿನ ಜಾತಿ ಆಧರಿತ ದೌರ್ಜನ್ಯಗಳನ್ನು ತಡೆಗಟ್ಟಲು ಕೆಲಸ ಮಾಡಬೇಕು. ಶೋಷಣೆಗೆ ಒಳಗಾದವರು ಇವುಗಳಿಗೆ ದೂರು ಸಲ್ಲಿಸಬಹುದು.

ಹೊಸ ನಿಯಮಕ್ಕೆ ಕಾರಣ?

ಇತ್ತೀಚಿನ ವರ್ಷಗಳಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧರಿತ ತಾರತಮ್ಯದ ದೂರುಗಳು ಆತಂಕಕಾರಿ ರೀತಿಯಲ್ಲಿ ಹೆಚ್ಚಾಗಿವೆ. 2017–18ರಲ್ಲಿ 173 ದೂರುಗಳಿದ್ದರೆ, 2023–24ರಲ್ಲಿ ಈ ಸಂಖ್ಯೆ 378ಕ್ಕೆ ಏರಿದೆ. 5 ವರ್ಷಗಳಲ್ಲಿ ಶೇ.118.4ರಷ್ಟು ಹೆಚ್ಚಳವಾಗಿದೆ. ಯುಜಿಸಿ ಪ್ರಕಾರ, ಶೇ.90ಕ್ಕಿಂತ ಹೆಚ್ಚು ದೂರುಗಳನ್ನು ಪರಿಹರಿಸಲಾಗಿದೆ. ಆದರೆ ಬಾಕಿ ಇರುವ ಪ್ರಕರಣಗಳ ಸಂಖ್ಯೆ ಕೂಡ 2019–20ರಲ್ಲಿ 18ರಿಂದ 2023–24ರಲ್ಲಿ 108ಕ್ಕೆ ಏರಿರುವುದು ಆತಂಕ ಮೂಡಿಸಿದೆ. ಹಿಂದುಳಿದ ವರ್ಗಗಳ ಮೇಲಿನ ದೌರ್ಜನ್ಯ ಇನ್ನೂ ಜೀವಂತವಾಗಿರುವುದನ್ನು ಮನಗಂಡು ಯುಜಿಸಿ ಹೊಸ ನಿಯಮ ಜಾರಿಗೆ ತಂದಿದೆ.

2 ಸಾವಿನ ಹಿನ್ನೆಲೆ:

2016ರಲ್ಲಿ ಹೈದರಾಬಾದ್‌ ವಿವಿಯ ಪಿಎಚ್‌ಡಿ ವಿದ್ಯಾರ್ಥಿ ರೋಹಿತ್ ವೇಮುಲ ಹಾಗೂ 2019ರಲ್ಲಿ ಮುಂಬೈನ ವೈದ್ಯಕೀಯ ವಿದ್ಯಾರ್ಥಿನಿ ಪಾಯಲ್ ತದ್ವಿ ಜಾತಿ ಕಿರುಕುಳದ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ತಾಯಂದಿರು ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. 2025ರಲ್ಲಿ ಈ ಅರ್ಜಿಗಳ ವಿಚಾರಣೆ ನಡೆಸಿದ ಕೋರ್ಟ್‌, ಯುಜಿಸಿಯ 2012ರ ಹಳೆಯ ನಿಯಮಗಳು ಸಾಕಷ್ಟು ಪರಿಣಾಮಕಾರಿಯಾಗಿಲ್ಲ. ಹೀಗಾಗಿ 8 ವಾರಗಳಲ್ಲಿ ಹೊಸ ಮತ್ತು ಕಠಿಣ ನಿಯಮಗಳನ್ನು ರೂಪಿಸುವಂತೆ ಯುಜಿಸಿಗೆ ನಿರ್ದೇಶಿಸಿತು.

ವಿರೋಧ ಏಕೆ?

ಹೊಸ ನಿಯಮಗಳು ಜಾರಿಯಾದ ನಂತರ ಮೇಲ್ವರ್ಗ ಅಥವಾ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ‘ಸವರ್ಣ ಸೇನೆ’ಯ ನೇತೃತ್ವದಲ್ಲಿ ಯುಜಿಸಿ ಮುಖ್ಯಕಚೇರಿಯ ಮುಂಭಾಗ, ದೆಹಲಿ, ಉತ್ತರ ಪ್ರದೇಶ ಸೇರಿ ಹಲವೆಡೆ ಪ್ರತಿಭಟನೆ ನಡೆಸಲಾಗಿದೆ. ಸಾಮಾನ್ಯ ವರ್ಗದ ವಿದ್ಯಾರ್ಥಿಗಳ ಆಕ್ಷೇಪಗಳು ಹೀಗಿವೆ.

ಆಕ್ಷೇಪ 1: ನಿಯಮಗಳು ಏಕಪಕ್ಷೀಯವಾಗಿವೆ. ಇವು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ವಿದ್ಯಾರ್ಥಿಗಳಿಗೆ ಮಾತ್ರ ರಕ್ಷಣೆ ನೀಡುತ್ತವೆ. ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ತಾರತಮ್ಯವಾದರೆ ದೂರು ನೀಡಲು ಅವಕಾಶವಿಲ್ಲ.

ಆಕ್ಷೇಪ 2: ಮೇಲ್ವರ್ಗದ ವಿದ್ಯಾರ್ಥಿಗಳ ವಿರುದ್ಧ ಇದನ್ನು ಅಸ್ತ್ರವಾಗಿ ಬಳಸಿಕೊಳ್ಳಬಹುದು. ಸುಳ್ಳು ದೂರು ನೀಡಿದರೆ ಶಿಕ್ಷೆಯ ಬಗ್ಗೆ ಸ್ಪಷ್ಟತೆ ಇಲ್ಲ. ಹೀಗಾಗಿ ದೂರುಗಳ ಸಂಖ್ಯೆ ಮಾತ್ರ ಹೆಚ್ಚುತ್ತಾ ಹೋಗಬಹುದು.

ಆಕ್ಷೇಪ 3: ತಾರತಮ್ಯದ ನಿರ್ದಿಷ್ಟ ಕೃತ್ಯ ಅಥವಾ ನಿದರ್ಶನಗಳನ್ನು ಪಟ್ಟಿ ಮಾಡಿಲ್ಲ. ಈ ಗೊಂದಲವು ಸಮಿತಿಗಳಿಗೆ ಅತಿಯಾದ ಅಧಿಕಾರ ನೀಡಿ ಪಕ್ಷಪಾತಕ್ಕೆ ಕಾರಣವಾಗಬಹುದು.

ಆಕ್ಷೇಪ 4: ದೂರುದಾರರು ತಮ್ಮ ಮೇಲಿನ ತಾರತಮ್ಯದ ಕುರಿತು ಸೂಕ್ತ ಸಾಕ್ಷ್ಯಗಳನ್ನು ನೀಡುವ ಅಗತ್ಯವಿಲ್ಲ. ಇದು ದೂರುದಾರನ ಮೇಲೆ ಮುಗ್ಧತೆಯನ್ನು ಆರೋಪಿಸಿ, ಆರೋಪಿಯ ಮೇಲೆ ಮಾನಸಿಕ ಹೊರೆ ಉಂಟುಮಾಡುತ್ತದೆ.

ಆಕ್ಷೇಪ 5: ಸಮಿತಿಯಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಸಾಮಾನ್ಯ ವರ್ಗದವರಿಗೆ ಅವಕಾಶವಿಲ್ಲ. ಇದು ಪಕ್ಷಪಾತದ ನಡೆ.

ಆಕ್ಷೇಪ 6: ಸಮಾನತೆ ಸಮಿತಿಯ ಸ್ಥಾಪನೆ ಮತ್ತು ನಿಭಾಯಿಸುವ ಅಧಿಕಾರ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಿಗೆ ನೀಡಲಾಗಿದೆ. ಇದು ನಿಷ್ಪಕ್ಷಪಾತ, ಪರಿಶೀಲನೆ ಮತ್ತು ಸಮತೋಲನದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.

2012ರ ನಿಯಮಕ್ಕಿಂತ ಹೇಗೆ ಭಿನ್ನ?:

ಯುಜಿಸಿ 2012ರ ನಿಯಮದಲ್ಲಿ ಎಸ್‌ಸಿ, ಎಸ್‌ಟಿಗಳ ರಕ್ಷಣೆಯನ್ನು ಮಾತ್ರ ಸೇರಿಸಲಾಗಿತ್ತು. ಆದರೆ ಹೊಸ ನಿಯಮದಲ್ಲಿ ಇದನ್ನು ಒಬಿಸಿಗಳಿಗೂ ವಿಸ್ತರಿಸಲಾಗಿದೆ. ಆದರೆ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಒಬಿಸಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ದತ್ತಾಂಶಗಳ ಪ್ರಕಾರ, 2021–22ರಲ್ಲಿ ಉನ್ನತ ಶಿಕ್ಷಣ ದಾಖಲಾತಿಯಲ್ಲಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ವಿದ್ಯಾರ್ಥಿಗಳ ಒಟ್ಟು ಸಂಖ್ಯೆ ಶೇ.60.8ರಷ್ಟಿದೆ. 1.63 ಕೋಟಿ ಒಬಿಸಿ, 66.23 ಲಕ್ಷ ಎಸ್‌ಸಿ ಮತ್ತು 27.1 ಲಕ್ಷ ಎಸ್‌ಟಿ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಅಂದರೆ ಒಬಿಸಿಗಳು ಬೃಹತ್‌ ಸಂಖ್ಯೆಯಲ್ಲಿದ್ದರೂ ಅವರಿಗೆ ನಿಯಮವನ್ನು ವಿಸ್ತರಿಸಿರುವುದು ಪ್ರಶ್ನೆ ಮೂಡಿಸಿದೆ. 2012ರ ನಿಯಮದಲ್ಲಿ ಲಿಂಗ, ಅಂಗವೈಕಲ್ಯ, ಧರ್ಮ, ಭಾಷೆ, ಜನಾಂಗ ಮತ್ತು ಜನ್ಮಸ್ಥಳದ ಮೇಲಿನ ತಾರತಮ್ಯಗಳನ್ನು ಪರಿಗಣಿಸಲಾಗಿತ್ತು. ಆದರೆ ಹೊಸ ನಿಯಮ ಜಾತಿಯನ್ನೇ ಹೆಚ್ಚು ಕೇಂದ್ರೀಕರಿಸಿದೆ.

ರಾಜಕೀಯ ಸಂಚಲನ:

ಯುಜಿಸಿ ಹೊಸ ನಿಯಮ ತಾರತಮ್ಯದಿಂದ ಕೂಡಿದೆ ಎಂದು ಆರೋಪಿಸಿ ಸ್ವತಃ ಬಿಜೆಪಿಯಲ್ಲೇ ರಾಜೀನಾಮೆ ಪರ್ವ ಆರಂಭವಾಗಿದೆ. ಉತ್ತರ ಪ್ರದೇಶದ ವಿಭಾಗೀಯ ಮ್ಯಾಜಿಸ್ಟ್ರೇಟ್ ಅಲಂಕಾರ್‌ ಅಗ್ನಿಹೋತ್ರಿ, ಬಿಜೆಪಿ ಯುವ ಮೋರ್ಚಾ ನೋಯ್ಡಾ ಉಪಾಧ್ಯಕ್ಷ ರಾಜು ಪಂಡಿತ್‌, ಕಿಸಾನ್‌ ಮೋರ್ಚಾದ ರಾಯ್‌ಬರೇಲಿ ಜಿಲ್ಲಾಧ್ಯಕ್ಷ ಶ್ಯಾಮಸುಂದರ್‌ ತ್ರಿಪಾಠಿ ಸೇರಿ ಹಲವರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿರುವ ತ್ರಿಪಾಠಿ, ‘ಪ್ರತಿಭಟನೆಯ ಸಂಕೇತವಾಗಿ ನಾನು ನನ್ನ ಹುದ್ದೆಗೆ ರಾಜೀನಾಮೆ ನೀಡಿದ್ದೇನೆ. ಯುಜಿಸಿ ಹೊಸ ನಿಯಮಗಳು ಸಂಪೂರ್ಣವಾಗಿ ಅನ್ಯಾಯ ಮತ್ತು ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ವಿರುದ್ಧವಾಗಿವೆ’ ಎಂದು ಆಕ್ಷೇಪಿಸಿದ್ದಾರೆ.

ಸುಪ್ರೀಂಗೆ ಮೊರೆ, ತಡೆ:

ಸುಪ್ರೀಂ ಕೋರ್ಟ್‌ಗೆ ವಿನೀತ್‌ ಜಿಂದಾಲ್‌ ಎಂಬವರು ಅರ್ಜಿ ಸಲ್ಲಿಸಿದ್ದು, ಅದರಲ್ಲಿ ‘ಜಾತಿ ತಾರತಮ್ಯದ ವಿರುದ್ಧದ ಸಮಿತಿಗೆ ಕೇವಲ ಎಸ್‌ಸಿ, ಎಸ್‌ಟಿ ಮತ್ತು ಇತರೆ ಒಬಿಸಿ ವಿದ್ಯಾರ್ಥಿಗಳು ಮಾತ್ರ ದೂರು ಸಲ್ಲಿಸಬಹುದು. ಇದು ಸಾಮಾನ್ಯ ವರ್ಗಕ್ಕೆ ಅನ್ಯಾಯವಾಗುತ್ತದೆ. ಮೇಲ್ವರ್ಗದವರೂ ಜಾತಿ ನಿಂದನೆ, ತಾರತಮ್ಯ ಅನುಭವಿಸುತ್ತಾರೆ. ಅಲ್ಲದೇ ಯುಜಿಸಿ ಹೊರಡಿಸಿರುವ ಆದೇಶವು ಸಂವಿಧಾನದ ಸಮಾನತೆ ಹಕ್ಕನ್ನು ಉಲ್ಲಂಘಿಸುತ್ತದೆ. ಹೀಗಾಗಿ ಎಲ್ಲ ವರ್ಗಗಳನ್ನು ಒಳಗೊಳ್ಳುವ ಸಮಿತಿ ರಚಿಸಬೇಕು. ಇಲ್ಲವಾದಲ್ಲಿ ಸಾಮಾನ್ಯ ವರ್ಗಕ್ಕೆ ಸರಿಯಾಗಿ ದೂರು ನೀಡುವ ವ್ಯವಸ್ಥೆಯೂ ಇರುವುದಿಲ್ಲ’ ಎಂದು ಮನವಿ ಮಾಡಿದ್ದಾರೆ. ಇದರ ಬೆನ್ನಲ್ಲೇ ಸುಪ್ರೀಂ ಕೋರ್ಟು ನಿಯಮಗಳಿಗೆ ತಡೆ ನೀಡಿ ಮರುಪರಿಶೀಲನೆಗೆ ಸೂಚಿಸಿದೆ.

ಕೇಂದ್ರದ ಸ್ಪಷ್ಟನೆ ಏನು?

ಯುಸಿಜಿ ನಿಯಮದ ವಿರುದ್ಧ ಆಕ್ಷೇಪಗಳು ಭುಗಿಲೆದ್ದ ಬೆನ್ನಲ್ಲೇ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಸ್ಪಷ್ಟನೆ ನೀಡಿದ್ದು,‘ತಾರತಮ್ಯದ ಹೆಸರಿನಲ್ಲಿ ಕಾನೂನಿನ ದುರುಪಯೋಗಕ್ಕೆ ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡುತ್ತೇನೆ. ಇದನ್ನು ಖಚಿತಪಡಿಸಿಕೊಳ್ಳುವುದು ಯುಜಿಸಿ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಜವಾಬ್ದಾರಿ. ಎಲ್ಲಾ ಕ್ರಮಗಳನ್ನು ಸಂವಿಧಾನದ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗುತ್ತದೆ’ ಎಂದಿದ್ದಾರೆ.

 * ಹೊಸ ನಿಯಮದಲ್ಲಿ ಜಾತಿ ತಾರತಮ್ಯ ಬಲಿಪಶುಗಳಲ್ಲಿ ಸಾಮಾನ್ಯ ವರ್ಗವನ್ನು ಹೊರಗಿಡಲಾಗಿದೆ. ಸಮಾನತೆ ಸಮಿತಿಯಲ್ಲೂ ಸಾಮಾನ್ಯ ವರ್ಗಕ್ಕೆ ಅವಕಾಶವಿಲ್ಲ. ಸುಳ್ಳು ದೂರುಗಳಿಗೆ ದಂಡ ವಿಧಿಸಲು ಯಾವುದೇ ಅವಕಾಶ ನೀಡಲಾಗಿಲ್ಲ. ಈ ಅನ್ಯಾಯದ ನಿಯಮಗಳನ್ನು ಪರಿಷ್ಕರಿಸಬೇಕು.

-ಆನಂದ್ ರಂಗನಾಥನ್‌, ಪತ್ರಕರ್ತ, ಚಿಂತಕ

ಆಶಯಕ್ಕೆ ವಿರುದ್ಧ

ಯುಜಿಸಿ ಹೊರಡಿಸಿದ ಮಾರ್ಗಸೂಚಿಗಳು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿವೆ. ಇವುಗಳನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯಿದೆ. ಕಠಿಣ, ಸಂವಿಧಾನ ವಿರೋಧಿ ಮತ್ತು ಭಾರತ ವಿರೋಧಿಯಾಗಿರುವ ಇವನ್ನು ರದ್ದುಗೊಳಿಸಬೇಕು.

- ಮೋಹನ್‌ ದಾಸ್‌ ಪೈ, ಆರಿನ್‌ ಕ್ಯಾಪಿಟಲ್‌ ಅಧ್ಯಕ್ಷ

ಸ್ವಾಗತಾರ್ಹ ಹೆಜ್ಜೆ

ಆಳವಾಗಿ ಬೇರೂರಿರುವ ತಾರತಮ್ಯ ನಿವಾರಿಸಲು ಹಾಗೂ ಉನ್ನತ ಶಿಕ್ಷಣ ವ್ಯವಸ್ಥೆ ಸುಧಾರಿಸಲು ಇದು ಸ್ವಾಗತಾರ್ಹ ಹೆಜ್ಜೆ. ಈ ನಿಯಮಗಳನ್ನು ಬಲಪಡಿಸಬೇಕು ಮತ್ತು ಅವುಗಳ ರಚನಾತ್ಮಕ ಅಂತರವನ್ನು ಪರಿಹರಿಸಲು ಪರಿಷ್ಕರಿಸಬೇಕು ಮತ್ತು ನಿಜವಾದ ಹೊಣೆಗಾರಿಕೆಯೊಂದಿಗೆ ಜಾರಿಗೊಳಿಸಬೇಕು.

- ಎಂ.ಕೆ. ಸ್ಟಾಲಿನ್‌, ತಮಿಳುನಾಡು ಸಿಎಂ