ಎಚ್.ಎಸ್.ವೆಂಕಟೇಶಮೂರ್ತಿ ಸಾಹಿತ್ಯ ಲೋಕದಲ್ಲಿ ಅಷ್ಟೆ ಹೆಸರು ಮಾಡಲಿಲ್ಲ. ಇವರ ನಂಟು ಸಿನಿಮಾರಂಗಕ್ಕೂ ಇತ್ತು. ಇವರ ಬರೆದ ಹಾಡುಗಳು ಸಿನಿಮಾಗಳಲ್ಲಿ ಬಳಕೆ ಆಗಿವೆ. ಅವರ ಹತ್ತು ಪ್ರಸಿದ್ಧ ಗೀತೆಗಳು ಇಲ್ಲಿವೆ.
ಎಚ್.ಎಸ್.ವೆಂಕಟೇಶಮೂರ್ತಿ ಸಾಹಿತ್ಯ ಲೋಕದಲ್ಲಿ ಅಷ್ಟೆ ಹೆಸರು ಮಾಡಲಿಲ್ಲ. ಇವರ ನಂಟು ಸಿನಿಮಾರಂಗಕ್ಕೂ ಇತ್ತು. ಇವರ ಬರೆದ ಹಾಡುಗಳು ಸಿನಿಮಾಗಳಲ್ಲಿ ಬಳಕೆ ಆಗಿವೆ. ಅವರ ಹತ್ತು ಪ್ರಸಿದ್ಧ ಗೀತೆಗಳು ಇಲ್ಲಿವೆ.
1. ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರತರೂ ಅರಿತೆವೇನು ನಾವು ನಮ್ಮ ಅಂತರಾಳವ: ಒಬ್ಬರು ಇನ್ನೊಬ್ಬರನ್ನು ಅರ್ಥಮಾಡಿಕೊಳ್ಳುತ್ತಿಲ್ಲ ಅನ್ನುವುದೇ ಜಗತ್ತಿನ ಬಹುದೊಡ್ಡ ಕೊರಗು. ನನ್ನನ್ನು ಅರ್ಥಮಾಡಿಕೋ ಅನ್ನುವುದು ಪ್ರತಿಯೊಬ್ಬರ ಕೂಗು. ಈ ವಸ್ತುವನ್ನಿಟ್ಟುಕೊಂಡು ಪ್ರತಿಯೊಬ್ಬರೂ ಹೇಗೆ ಭಿನ್ನವಾಗಿ ಯೋಚಿಸುತ್ತಾರೆ. ಜತೆಗಿದ್ದರೂ ಬೇರೆಯಿರುತ್ತಾರೆ, ಹತ್ತಿರವಿದ್ದೂ ದೂರ ಇರುತ್ತಾರೆ ಅನ್ನುವುದನ್ನು ಎಚ್ಎಸ್ವಿ ಮಾರ್ಮಿಕವಾಗಿ ಹೇಳಿದ್ದಾರೆ. ಸಾವಿರಾರು ಮುಖದ ಚೆಲುವ ಹಿಡಿದು ತೋರಿಸಿದರೂ, ಕನ್ನಡಿಗೆ ಒಂದು ಕೂಡ ಉಳಿಯುವುದಿಲ್ಲ, ಹಾಗೆಯೇ ಸಂಬಂಧದ ಛಾಯೆ ಕೂಡ ಎನ್ನುವುದನ್ನು ಈ ಕವಿತೆಯ ಮೂಲಕ ಸೂಚಿಸಿದ್ದಾರೆ.
2. ಲೋಕದ ಕಣ್ಣಿಗೆ ರಾಧೆಯು ಕೂಡ ಎಲ್ಲರಂತೆ ಒಂದು ಹೆಣ್ಣು: ರಾಧಾ ಕೃಷ್ಣರ ಪ್ರೇಮದ ಮಾತು ಬಂದಾಗ ಎಲ್ಲರೂ ರಾಧೆಯನ್ನು ಪ್ರೇಮಿಯಾಗಿ ವಿರಹಿಯಾಗಿ ನೋಡುತ್ತಾರೆ. ಕೃಷ್ಣನನ್ನು ದೇವತಾಸ್ವರೂಪಿಯಾಗಿ ನೋಡುತ್ತಾರೆ. ಆದರೆ ರಾಧೆ ಕೂಡ ಬಹಳ ಮುಖ್ಯವಾದ ಪಾತ್ರ ಅನ್ನುವುದನ್ನು ಈ ಕವಿತೆಯ ಮೂಲಕ ಎಚ್ ಎಸ್ ವಿ ಹೇಳಿದ್ದಾರೆ. ಇಡೀ ಜಗತ್ತಿಗೆ ರಾಧೆ ಮತ್ತೊಂದು ಹೆಣ್ಣುಜೀವ ಮಾತ್ರವೇ ಆಗಿರಬಹುದು. ಆದರೆ ತನ್ನ ಪಾಲಿಗೆ ಆಕೆ ಕೃಷ್ಣನನ್ನು ಹೇಗೆ ನೋಡಬೇಕು ಅನ್ನುವುದನ್ನು ಹೇಳಿಕೊಟ್ಟವಳು ಎನ್ನುತ್ತಾ ರಾಧೆಯ ಪ್ರೇಮ, ವಿರಹದ ಉತ್ಕಟತೆಯನ್ನು ಈ ಪದ್ಯದಲ್ಲಿ ತಂದಿದ್ದಾರೆ.
3. ತೂಗುಮಂಚದಲ್ಲಿ ಕೂತು ಮೇಘಶ್ಯಾಮ ರಾಧೆಗಾತು ..: ರಾಧಾಕೃಷ್ಣರ ಪ್ರೇಮದ ಕವಿತೆಗಳಿಗೆ ಎಚ್ ಎಸ್ ವಿ ಹೆಸರುವಾಸಿ. ಮಧುರೆಗೆ ಹೋದನು ಮಾಧವ ಬರುವನೋ ಬಾರನೋ ಹೋದವ ಎಂಬ ಪ್ರಶ್ನೆ ಕೇಳುತ್ತಾ ರಾಧೆಯ ವಿರಹವನ್ನು ಚಿತ್ರಿಸಿದವರು ಅವರು. ಅದಕ್ಕೂ ಮುಂಚೆ ರಾಧಾಕೃಷ್ಣರ ಪ್ರಣಯದ ಚಿತ್ರವನ್ನು ಇಲ್ಲಿ ಎಚ್ ಎಸ್ ವಿ ಬಹಳ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಇಡೀ ಚಿತ್ರ ಶೃಂಗಾರಮಯ ಆಗಿದ್ದರೂ ಎಲ್ಲೆ ಮೀರದಂತೆ ರಾಧಾಕೃಷ್ಣರ ಮಿಲನವನ್ನು ಈ ಪದ್ಯದಲ್ಲಿ ತಂದಿದ್ದಾರೆ. ಈ ಕಾಲದ ತರುಣರ ಮೆಚ್ಚಿನ ಪ್ರೇಮಗೀತೆಯಾಗಿ ಇದು ಪ್ರಸಿದ್ಧವಾಗಿದೆ.
4. ಹುಚ್ಚು ಖೋಡಿ ಮನಸು ಇದು ಹದಿನಾರರ ವಯಸು: ಆಗಷ್ಟೇ ಹದಿಹರೆಯಕ್ಕೆ ಕಾಲಿಟ್ಟ ಹುಡುಗಿಯ ಅಂತರಂಗದ ತುಮುಲ, ಉಲ್ಲಾಸ, ಉನ್ಮಾದಗಳನ್ನು ಎಚ್ ಎಸ್ ವಿ ಈ ಪದ್ಯದಲ್ಲಿ ವರ್ಣಿಸುತ್ತಾರೆ. ಸೆರಗು ತೀಡಿದಷ್ಟು ಸುಕ್ಕು ಹಠಮಾಡುವ ಕೂದಲು, ನಿರಿ ಏಕೋ ಸರಿಯಾಗದು, ಮತ್ತೆ ಒಳಗೇ ಹೋದಳು ಎಂಬ ಸಾಲಿನ ಮೂಲಕ ನಾಟಕೀಯವಾಗಿ ಹದಿಹರೆಯದ ಹುಡುಗಿಯ ಅಲಂಕಾರ, ಹೊರಹೋಗುವ ಸಿದ್ಧತೆಯ ತವಕ ತಲ್ಲಣಗಳನ್ನೆಲ್ಲ ಹೇಳುತ್ತಾ ಹೋಗಿದ್ದಾರೆ.
5. ನಾಯಿ ತಲಿಮ್ಯಾಲಿನ ಬುತ್ತಿ ಸಂಸಾರ ಬಲು ದುಸ್ಸಾರ: ಮತದಾನ ಚಿತ್ರಕ್ಕಾಗಿ ಎಚ್ ಎಸ್ ವಿ ಬರೆದಿರುವ ಈ ಹಾಡನ್ನು ಅಶ್ವತ್ಥ್ ಎಷ್ಟು ಪ್ರೀತಿಸಿದ್ದರು ಎಂದರೆ ಚಿತ್ರದಲ್ಲೂ ಇದನ್ನು ತಾನೇ ಹಾಡುತ್ತೇನೆ ಎಂದು ಹೇಳಿ ಒಂದು ಪಾತ್ರವನ್ನೇ ಮಾಡಿದ್ದರು. ಬದುಕಿನ ನಶ್ವರತೆ ಮತ್ತು ಕೆಲಸ ಮುಗಿದ ನಂತರ ಹೇಗೆ ಎಲ್ಲರನ್ನೂ ರಾಜಕೀಯದಲ್ಲಾಗಲೀ ಬದುಕಿನಲ್ಲಾಗಲೀ ಕಡೆಗಣಿಸುತ್ತಾರೆ ಎಂಬುದನ್ನು ತತ್ವಪದದ ಧಾಟಿಯ ಈ ಕವಿತೆಯಲ್ಲಿ ಎಚ್ ಎಸ್ ವಿ ಹಿಡಿದಿಟ್ಟಿದ್ದಾರೆ. ನೀರು ತುಂಬಿದ ಕೆರೆಗೆ ಭೂತಾಯಿ ಎನ್ನುತ್ತಾರೆ. ನೀರು ಆರಿದ ಮೇಲೆ ಎದೆ ಬಗೆಯುತ್ತಾರೆ ಎಂಬಂಥ ರೂಪಕಗಳು ಈ ಕವಿತೆಯಲ್ಲಿವೆ.
6. ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ ನೀಡಿ ಮುಕ್ತ ಮುಕ್ತ: ಟಿ ಎನ್ ಸೀತಾರಾಮ್ ಅವರ ಅನೇಕ ಧಾರಾವಾಹಿಗಳಿಗೆ ಎಚ್ ಎಸ್ ವೆಂಕಟೇಶಮೂರ್ತಿ ಶೀರ್ಷಿಕೆ ಗೀತೆ ಬರೆದಿದ್ದಾರೆ. ಅವೆಲ್ಲವೂ ಅಪಾರ ಜನಪ್ರಿಯತೆ ಗಳಿಸಿವೆ. ಮುಕ್ತ ಮುಕ್ತ ಧಾರಾವಾಹಿಗೆ ಬರೆದ ಈ ಗೀತೆಯಲ್ಲಿ ತ್ಯಾಗದ ಪರಿಕಲ್ಪನೆಯನ್ನು ಅವರು ಅತ್ಯಂತ ಸೊಗಸಾಗಿ ತಂದಿದ್ದಾರೆ. ಬೆಳಕಿನ ಕೂಸಿಗೆ ಕೆಂಡದ ಹಾಸಿಗೆ ಕಲಿಸಿದೆ ಜೀವನ ಪಾಠ, ಇರುಳ ವಿರುದ್ಧ, ಬೆಳಕಿನ ಯುದ್ಧ ಕೊನೆಯಿಲ್ಲದ ಕಾದಾಟ- ಮುಂತಾದ ಅರ್ಥಪೂರ್ಣ ಸಾಲುಗಳಿರುವ ಗೀತೆ ಇದು.
7. ಹೇಗಿದ್ದ ಹೇಗಾದ ಗೊತ್ತಾ ನಮ್ಮ ಚಿನ್ನಾರಿ ಮುತ್ತ: ಮಣ್ಣಿನಲ್ಲಿ ಬಿದ್ದವನು ಮುಗಿಲಲ್ಲಿ ಏಳಬಹುದು, ನಮ್ಮ ಕಣ್ಣೆದುರು ಏನೂ ಅಲ್ಲದಂತೆ ಕಂಡವರು ಎತ್ತರದಲ್ಲಿ ಮಿನುಗಬಹುದು. ಮನುಷ್ಯನ ಸಾಧನೆಗೆ ಇರುವ ಸಾಧ್ಯತೆ ಅಪಾರ. ಯಾರು ಬೇಕಿದ್ದರೂ ಗೆದ್ದು ಶ್ರಮ, ಛಲದಿಂದ ಬೇಕಾದ್ದನ್ನು ಸಾಧಿಸಬಹುದು ಎಂದು ಸ್ಫೂರ್ತಿ ತುಂಬುವ ಹಾಡನ್ನು ಎಚ್ ಎಸ್ ವಿ ನಾಗಾಭರಣ ನಿರ್ದೇಶನದ ಚಿನ್ನಾರಿ ಮುತ್ತ ಚಿತ್ರಕ್ಕೆ ಬರೆದಿದ್ದರು. ಈ ಹಾಡು ಇವತ್ತು ಕಷ್ಟದಿಂದ ಮೇಲೆ ಬಂದವರೆಲ್ಲರಿಗೂ ಹೊಂದುವಂಥ ಹಾಡಾಗಿದೆ. ಹೇಗಿದ್ದ ಹೇಗಾದ ಗೊತ್ತಾ ಅನ್ನುವ ಸಾಲನ್ನು ಸಾಧಕರೆಲ್ಲರನ್ನೂ ನೋಡಿದಾಗ ಎಲ್ಲರೂ ಗುನುಗುವಂತಾಗಿದೆ.
8. ಇರಬೇಕು ಇರುವಂತೆ ತೊರೆದು ಸಾವಿರ ಚಿಂತ: ನಾವು ಸಹಜವಾಗಿ ಹೇಗಿರಬೇಕು, ಎಲ್ಲ ದ್ವೇಷ ಅಸೂಯೆಗಳನ್ನು ಮೀರಿ ಯಾಕೆ ನಿಲ್ಲಬೇಕು, ಸಂತೋಷವಾಗಿರಲು ಏನು ಮಾಡಬೇಕು ಅನ್ನುವುದನ್ನು ಎಚ್ ಎಸ್ ವಿ ಈ ಪದ್ಯದಲ್ಲಿ ಸೊಗಸಾಗಿ ಹೇಳಿದ್ದಾರೆ. ಸಹನೆ, ತ್ಯಾಗ, ಪರೋಪಕಾರ ಮುಂತಾದ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎನ್ನುವ ಮೌಲ್ಯವನ್ನು ಮಕ್ಕಳಲ್ಲಿ ಬಿತ್ತುವುದರಲ್ಲೂ ಈ ಪದ್ಯ ಗೆದ್ದಿದೆ. ತಾನು ಬಿಸಿಲಲಿ ನಿಂತು ತನ್ನ ಬಳಿ ಬರುವವಗೆ ತಣ್ಣಗಿನ ಆಸರೆಯ ನೆರಳ ಕೊಟ್ಟು ಹೇಗೆ ಗೆಲುವಾಗುವುದೋ ಹಸಿರೆಲೆಯ ಹೊಂಗೆ ಮರ ಹಾಗೆ ಬಾಳಿಸು ಗುರುವೆ ಪ್ರೀತಿಯಿಟ್ಟು ಎನ್ನುವ ಸಾಲುಗಳಂತೂ ಜೀವನ ಸಾರವನ್ನು ಹೇಳುತ್ತಿವೆ.
9. ಪ್ರೇಯಸಿ ಪ್ರೀತಿಸಿ ಮರೆತೆಯಾ ಒಣಗಿಸಿ ಒಲವಿನ ಒರತೆಯಾ: ಎಚ್ ಎಸ್ ವಿ ಸೊಗಸಾದ ವಿರಹ ಗೀತೆಗಳನ್ನೂ ಬರೆದಿದ್ದಾರೆ. ಭಾವಗೀತೆಗಳ ಜೀವಾಳವೆಂದರೆ ಪ್ರೇಮ ಮತ್ತು ವಿರಹ. ಉರ್ದು ಗಜಲ್‌ಗಳಲ್ಲಿ ಮದ್ಯ, ಪ್ರೇಯಸಿ, ಪ್ರೇಮ ಮತ್ತು ವಿರಹಗಳು ರಾರಾಜಿಸುವಂತೆ ಕನ್ನಡದಲ್ಲೂ ಗಜಲ್‌ಗಳನ್ನು ಬರೆದು ಒಂದು ಕ್ಯಾಸೆಟ್ ಹೊರತರುವುದಕ್ಕೆ ಎಚ್ ಎಸ್ ವಿ ಮತ್ತು ಬಿಆರೆಲ್ ಕಾರಣರಾದರು. ಮಧುಮಾಲೆ ಎಂಬ ಕ್ಯಾಸೆಟ್ಟು ಕನ್ನಡದ ಮೊದಲ ಗಜಲ್ ಧ್ವನಿಸುರಳಿಯೆಂದೇ ಹೆಸರಾಗಿದೆ.
10. ಶ್ರೀಸಂಸಾರಿ: ಎಚ್ ಎಸ್ ವಿಯವರ ಗೇಯ ಗೀತೆಗಳಷ್ಟೇ, ಗದ್ಯಗೀತೆಗಳೂ ಹೆಸರುವಾಸಿ. ಹಾಡದೇ ಇರುವ ಅಸಂಖ್ಯಾತ ಕವಿತೆಗಳನ್ನು ಅವರು ಬರೆದಿದ್ದಾರೆ. ಅವರ ಆರಂಭದ ಸಂಕಲನಗಳಾದ ಸೌಗಂಧಿಕಾದಲ್ಲಿ ಕಥನ ಕವನಗಳಿದ್ದವು. ಒಣಮರದ ಗಿಳಿಗಳು ಸಂಕಲನದಲ್ಲಿ ನವ್ಯದ ಗೀತೆಗಳಿದ್ದವು. ಅವರ ಶ್ರೀಸಂಸಾರಿ ಶ್ರೀರಾಮನನ್ನು ಹೊಸ ರೂಪದಲ್ಲಿ ತೋರಿಸಿದ ಕವಿತೆ. ಬಿಲ್ಲು ಹೊತ್ತು ನಿಂತ ಶ್ರೀರಾಮನನ್ನುನೋಡಿದ ಕರಿಮುಸುಕಿನಲ್ಲಿ ಬಿಂಬಗ್ರಾಹಿ ಮಂದ್ರದಲ್ಲಿ ಗೊಣಗಿದ ಹೀಗೆ. ಹೆಗಲ ಬಿಲ್ಲ ಕೆಳಗಿಳಿಸಿ ಸ್ವಾಮಿ, ಜಾಗ ಉಂಟು ಇನ್ನೊಬ್ಬರಿಗೆ. ಆಗ ರಾಮನಿಗೆ ಮರಳಸೇತು ಕಟ್ಟುವಾಗ ನೆರವಾದ ಅಳಿಲು ನೆನಪಾಗುತ್ತದೆ. ಅಳಿಲು ಹೆಗಲೇರುತ್ತದೆ.
