ಪಾಕಿಸ್ತಾನ ಹಾಗೂ ಮುಸ್ಲಿಂ ಮೂಲಭೂತವಾದಿಗಳು ತಮ್ಮ ಷರಿಯಾ ಸಂಸ್ಕೃತಿ ಹೇರಲು ಮುಂದಾಗಿದ್ದಾಗ ಬಾಂಗ್ಲಾ ಪ್ರಜೆಗಳು ಪ್ರಬಲವಾಗಿ ವಿರೋಧಿಸಿದ್ದರು. ಅಂತಹ ಸಂಕಷ್ಟದ ಸ್ಥಿತಿಯಲ್ಲಿ ಬಾಂಗ್ಲಾದೇಶವನ್ನು ಪಾಕ್‌ನಿಂದ ವಿಮೋಚನೆಗೊಳಿಸಿದ್ದು ಭಾರತ. ಆದರೆ, ಈಗ ಪರಿಸ್ಥಿತಿ ಉಲ್ಟಾ ಆಗಿದೆ.
ಮುಖಾಮುಖಿ: ಡಾ। ಜಿ.ಬಿ.ಹರೀಶ, ಇತಿಹಾಸಕಾರ, ತತ್ವಶಾಸ್ತ್ರಜ್ಞ.
ಸಂದರ್ಶನ: ಮಂಜುನಾಥ ನಾಗಲೀಕರ್
* ಪಾಕಿಸ್ತಾನದಿಂದ ತೀವ್ರ ಶೋಷಣೆಗೆ ಗುರಿಯಾಗುತ್ತಿದ್ದ ರಾಷ್ಟ್ರ ಬಾಂಗ್ಲಾದೇಶ. ಪಾಕಿಸ್ತಾನ ಹಾಗೂ ಮುಸ್ಲಿಂ ಮೂಲಭೂತವಾದಿಗಳು ತಮ್ಮ ಷರಿಯಾ ಸಂಸ್ಕೃತಿ ಹೇರಲು ಮುಂದಾಗಿದ್ದಾಗ ಬಾಂಗ್ಲಾ ಪ್ರಜೆಗಳು ಪ್ರಬಲವಾಗಿ ವಿರೋಧಿಸಿದ್ದರು. ಆಗ ಬಾಂಗ್ಲನ್ನರನ್ನು ಇನ್ನಿಲ್ಲದಂತೆ ಕಾಡಲಾಗಿತ್ತು. ಅಂತಹ ಸಂಕಷ್ಟದ ಸ್ಥಿತಿಯಲ್ಲಿ ಬಾಂಗ್ಲಾದೇಶವನ್ನು ಪಾಕ್‌ನಿಂದ ವಿಮೋಚನೆಗೊಳಿಸಿದ್ದು ಭಾರತ. ಆದರೆ, ಈಗ ಪರಿಸ್ಥಿತಿ ಉಲ್ಟಾ ಆಗಿದೆ. ಬಾಂಗ್ಲಾದೇಶದಲ್ಲಿ ಭಾರತ ಹಾಗೂ ಭಾರತೀಯ ಸಂಸ್ಕೃತಿ ವಿರುದ್ಧದ ದ್ವೇಷದ ಅಲೆ ಎದ್ದಿದೆ. ಅಮೆರಿಕ ಸೇರಿದಂತೆ ವಿವಿಧ ರಾಷ್ಟ್ರಗಳಿಂದಲೂ ಭಾರತಕ್ಕೆ ನಕಾರಾತ್ಮಕ ಸಂದೇಶಗಳು ರವಾನೆಯಾಗುತ್ತಿವೆ. ಭಾರತದ ನೆರೆ ಹೊರೆಯ ಮಿತ್ರರಾಷ್ಟ್ರಗಳು ಶತ್ರುರಾಷ್ಟ್ರಗಳಾಗಿ ಬದಲಾಗುತ್ತಿವೆ. ಇದಕ್ಕೆಲ್ಲಾ ಕಾರಣಗಳೇನು? ಬಾಂಗ್ಲಾ ದೇಶದ ಹಿಂದೂ ದ್ವೇಷಕ್ಕೆ ಪರಿಹಾರಗಳೇನು? ವಿದೇಶಗಳೊಂದಿಗಿನ ಭಾರತದ ಸಂಬಂಧಗಳ ಭವಿಷ್ಯವೇನು? ಎಂಬಿತ್ಯಾದಿ ಮಹತ್ವದ ವಿಷಯಗಳ ಬಗ್ಗೆ ವಿಮರ್ಶಕ ಹಾಗೂ ಇತಿಹಾಸಕಾರ, ತತ್ವಶಾಸ್ತ್ರಜ್ಞ ಡಾ.ಜಿ.ಬಿ.ಹರೀಶ ‘ಕನ್ನಡಪ್ರಭ’ ಜತೆ ಮುಖಾಮುಖಿ ಆಗಿದ್ದಾರೆ.
*ಇತಿಹಾಸಕಾರರಾಗಿ ನಿಮ್ಮ ಪ್ರಕಾರ ಬಾಂಗ್ಲಾದೇಶ ಹಾಗೂ ಭಾರತದ ಸಂಬಂಧ ಈ ಹಿಂದೆ ಹೇಗಿತ್ತು?
ಪಾಕಿಸ್ತಾನದ ಶೋಷಣೆಯಿಂದ ವಿಮೋಚನೆ ಕೊಡಿಸಿದ್ದೇ ಭಾರತ. ಹೀಗಾಗಿ ಭಾರತ ಹಾಗೂ ಬಾಂಗ್ಲಾ ಸಂಬಂಧ ಚೆನ್ನಾಗಿತ್ತು. ಇದಕ್ಕೂ ಮೊದಲು ಬೆಂಗಾಲಿ, ಭಾರತೀಯ ಸಂಸ್ಕೃತಿಯನ್ನು ಪಾಲಿಸಬೇಕು. ಬೆಂಗಾಲಿ ಅಸ್ಮಿತೆ ಉಳಿಯಬೇಕು ಎನ್ನುವ ಮನಸ್ಥಿತಿ ಬಾಂಗ್ಲಾ ಜನರಲ್ಲಿತ್ತು. ಅದಕ್ಕಾಗಿ ರವೀಂದ್ರನಾಥ ಠಾಗೂರ್ ಅವರು ಬರೆದಿರುವ ಗೀತೆಯನ್ನು ರಾಷ್ಟ್ರಗೀತೆಯಾಗಿ ಸ್ವೀಕರಿಸಿದರು. ಆ ದೇಶದಲ್ಲಿ ಹರಿಯುವ ಗಂಗಾ ನದಿಯನ್ನು ಪದ್ಮಾ ನದಿ ಎಂದು ಕರೆಯುತ್ತಾರೆ. ಭಾರತವನ್ನು ತನ್ನ ಮಾರ್ಗದರ್ಶಿ ಎನ್ನುವಂತೆ ಬಾಂಗ್ಲಾದೇಶ ಭಾವಿಸುತ್ತಿತ್ತು.
* ಹಾಗಾದರೆ, ಮುಸ್ಲಿಂ ಮೂಲಭೂತವಾದ ಹಾಗೂ ಹಿಂದೂ ದ್ವೇಷ ಹುಟ್ಟಿದ್ದು ಹೇಗೆ? ಅದಕ್ಕೆ ಕಾರಣವೇನು?
ಇದು ಮೂಲಭೂತವಾದದಿಂದ ಆದ ಬದಲಾವಣೆ. ಸ್ವಾತಂತ್ರ್ಯ ಪಡೆದ ಕೆಲವೇ ವರ್ಷಗಳಲ್ಲಿ ಬಾಂಗ್ಲಾದೇಶದ ಸಂಸ್ಥಾಪಕ ಅಧ್ಯಕ್ಷ, ಬಾಂಗ್ಲಾಬಂಧು ಮುಜಿಬ್ ಉರ್ ರೆಹಮಾನ್ ಅವರನ್ನು ಕಗ್ಗೊಲೆ ಮಾಡಲಾಯಿತು. ಅಂತಹ ಮೂಲಭೂತವಾದಿಗಳೇ ಶೇಖ್ ಹಸೀನಾ ಅವರನ್ನು ದೇಶದಿಂದ ಪಲಾಯನ ಆಗುವಂತೆ ಮಾಡಿದರು. ಅದಕ್ಕೆ ಅಲ್ಲಿನ ಮೂಲಭೂತವಾದಿ ಮುಸ್ಲಿಂ ಸಂಘಟನೆಗಳು ಕಾರಣ. ಮೂಲಭೂತವಾದಿಗಳಿಗೆ ಬಾಂಗ್ಲಾದೇಶ ಖಟ್ಟರ್ ಮುಸ್ಲಿಂ ದೇಶವಾಗಬೇಕು. ಷರಿಯಾ ಕಾನೂನು ಬರಬೇಕು ಎನ್ನುವ ಮನಸ್ಥಿತಿಯಿದೆ. ಅದಕ್ಕೆ ಅಂದಿನ ಮುಜಿಬ್ ಉರ್ ರೆಹಮಾನ್ ಆಗಲಿ, ಇತ್ತೀಚಿನ ಶೇಖ್ ಹಸೀನಾ ಆಗಲಿ ಅವಕಾಶ ನೀಡಿರಲಿಲ್ಲ. ಆ ಎರಡು ಸಂದರ್ಭಗಳಲ್ಲಿ ದೇಶದ ಆಡಳಿತ ಮಿಲಿಟರಿಯವರ ಕೈವಶವಾಯಿತು. ಮಿಲಿಟರಿ ಆಡಳಿತ ಬಂದರೆ ಅಲ್ಲಿ ಪ್ರಭಾವಿ ರಾಷ್ಟ್ರಗಳ ಹಸ್ತಕ್ಷೇಪ ಇದೆ ಎಂದು ಅರ್ಥ.
* ಭಾರತವೇ ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯ ಕೊಡಿಸಿದೆ, ಐತಿಹಾಸಿಕ ಬಾಂಧವ್ಯವೂ ಇದೆ. ಹೀಗಿದ್ದರೂ ಹಿಂದೂಗಳ ರಕ್ಷಣೆ ಹಾಗೂ ಭದ್ರತೆಯ ಸವಾಲುಗಳನ್ನು ಭಾರತ ಯಾಕೆ ನಿಯಂತ್ರಿಸಲಾಗುತ್ತಿಲ್ಲ?
ಕಳೆದ ಒಂದು ವರ್ಷದಿಂದ ಬಾಂಗ್ಲಾದೇಶದಲ್ಲಿ ಭಾರತ ವಿರೋಧಿ ಮನಸ್ಥಿತಿ ಹೆಚ್ಚು ಬಲಗೊಳ್ಳುತ್ತಿದೆ. ಪಾಕಿಸ್ತಾನದಂತೆ ಬಾಂಗ್ಲಾದೇಶವೂ ಮಿಲಿಟರಿ ನಿಯಂತ್ರಣ ಮತ್ತು ಮೂಲಭೂತವಾದಿಗಳ ಕೈವಶವಾಗುತ್ತಿದೆ. ಪಾಕಿಸ್ತಾನದಂತೆ ಮೂಲಭೂತವಾದಿ ರಾಷ್ಟ್ರವಾಗಿ ಪರಿವರ್ತನೆಯಾಗುತ್ತಿದೆ. ಇದು ಭಾರತೀಯರು, ಹಿಂದುಗಳಿಗೆ ಒಳ್ಳೆಯದಲ್ಲ. ಹೀಗಾಗಿ, ಜಗತ್ತಿನ 30ಕ್ಕೂ ಹೆಚ್ಚು ಮುಸ್ಲಿಂ ರಾಷ್ಟ್ರಗಳು ಹಾಗೂ ನೆರೆಯ ಥೈಲ್ಯಾಂಡ್, ಇಂಡೋನೇಷ್ಯಾದಂತಹ ರಾಷ್ಟ್ರಗಳ ಮೂಲಕ ಬಾಂಗ್ಲಾದೇಶದಲ್ಲಿ ಹಿಂದೂಗಳ ರಕ್ಷಣೆಗೆ ಪ್ರಯತ್ನಗಳು ಆಗಬೇಕು. ಕೇಂದ್ರ ಸರ್ಕಾರ ಈ ವಿಚಾರವನ್ನು ಸೂಕ್ಷ್ಮವಾಗಿ ನಿಭಾಯಿಸುತ್ತಿದೆ ಎನಿಸುತ್ತಿದೆ.
* ಪ್ರಸ್ತುತ ಬಾಂಗ್ಲಾದೇಶದಲ್ಲಿ ಹಿಂದೂಗಳ ಸ್ಥಿತಿ-ಗತಿ ಹೇಗಿದೆ?
ಪ್ರಸ್ತುತ ಹಿಂದೂಗಳ ಸ್ಥಿತಿ ಕಳವಳಕಾರಿಯಾಗಿದೆ. ಆರ್ಥಿಕವಾಗಿ ಸ್ಥಿತಿವಂತ ಹಿಂದೂಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಅಥವಾ ಇಲ್ಲವೇ ಇಲ್ಲ ಎನ್ನಬಹುದು. ನಗರ ಪ್ರದೇಶಗಳಲ್ಲಂತೂ ಹಿಂದೂಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಕೃಷಿ ಮಾಡುವವರು ಬೇಗ ಊರು ತೊರೆಯಲಾಗದು. ಹೀಗಾಗಿ, ಗ್ರಾಮಾಂತರ ಪ್ರದೇಶಗಳಲ್ಲಿ ಉಳಿದುಕೊಂಡಿದ್ದಾರೆ. 1940ರಲ್ಲಿ ಶೇ.22ರಷ್ಟು ಇದ್ದ ಹಿಂದೂಗಳ ಜನಸಂಖ್ಯೆ ಇಂದು ಶೇ.8ಕ್ಕಿಂತ ಕಡಿಮೆಯಾಗಿದೆ. ಮುಂದೆ ಈ ಸಂಖ್ಯೆ ಇನ್ನೂ ಕಡಿಮೆಯಾದರೂ ಆಶ್ಚರ್ಯವಿಲ್ಲ.
* ಹಿಂದೂಗಳ ಸಂಖ್ಯೆ ಕಡಿಮೆಯಾಗಲು ಕಾರಣಗಳೇನು?
ಹಿಂದೂಗಳ ಜನಸಂಖ್ಯೆ ಹೇಗೆ ಕಡಿಮೆಯಾಯಿತು ಎಂದರೆ ಅಲ್ಲಿನ ಸರ್ಕಾರಗಳು ‘ಮಿಸ್ಸಿಂಗ್’ ಎನ್ನುತ್ತವೆ!. ಕೋಟ್ಯಂತರ ಜನರು ಮಿಸ್ಸಿಂಗ್ ಆಗಿದ್ದಾರೆ ಎಂದರೆ ನಂಬಲು ಸಾಧ್ಯವೇ?
* ಹಾಗಾದರೆ, ಬಾಂಗ್ಲಾದೇಶದ ಅಲ್ಪಸಂಖ್ಯಾತ ಹಿಂದೂಗಳ ಸುರಕ್ಷತೆಗೆ ಭಾರತ ಸರ್ಕಾರ ಏನು ಕ್ರಮ ಕೈಗೊಂಡಿದೆ?
ಪ್ರಸ್ತುತ ಹಲವು ಪ್ರಯತ್ನ ಮಾಡುತ್ತಿದೆ. ಜತೆಗೆ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಲ್ಲಿ ದೌರ್ಜನ್ಯಕ್ಕೆ ಒಳಗಾದ ಧಾರ್ಮಿಕ ಅಲ್ಪಸಂಖ್ಯಾತರಿಗೆ ನಾಗರಿಕತ್ವ ನೀಡಲು ತಂದಿರುವ ನಾಗರಿಕ ತಿದ್ದುಪಡಿ ಕಾಯ್ದೆ (ಸಿಎಎ) ಅನ್ನು ಸರಿಯಾಗಿ ಅನುಷ್ಠಾನಗೊಳಿಸಬೇಕು. ಭಾರತದಲ್ಲಿ ಆಶ್ರಯ ಬಯಸುವ ಹಿಂದೂಗಳಿಗೆ ನಾಗರಿಕತ್ವ ನೀಡಬೇಕು. ಅದೇ ರೀತಿ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿ ನೆಲೆಸಿರುವ ಬಾಂಗ್ಲಾದೇಶದ ಪ್ರಜೆಗಳನ್ನು ಗಡಿ ಪಾರು ಮಾಡಬೇಕು.
* ಬಾಂಗ್ಲಾದೇಶದೊಂದಿಗೆ ಭಾರತದ ಸಂಬಂಧ ಹದಗೆಡಲು ಕಾರಣಗಳು ಏನು?
ಯಾವುದೇ ಎರಡು ದೇಶಗಳ ನಡುವಿನ ಸಂಬಂಧ ಯಾವಾಗಲೂ ಒಂದೇ ರೀತಿ ಇರುವುದಿಲ್ಲ. ಕೆಲವೊಮ್ಮೆ ಶಾಂತ ಸಮುದ್ರದಂತೆ ಇದ್ದರೆ ಮತ್ತೊಮ್ಮೆ ಬೆಂಕಿ, ಬಿರುಗಾಳಿಯಂತೆ ಇರುತ್ತದೆ. ಬಾಂಗ್ಲಾದೇಶದಲ್ಲಿ ಅಮೆರಿಕ, ಚೀನಾ ತಮ್ಮ ಪ್ರಭಾವ ಬೀರುತ್ತಿವೆ. ರಾಜಕೀಯ ಅಸ್ಥಿರತೆ ಸೃಷ್ಟಿಸುತ್ತಿವೆ. ಬಾಂಗ್ಲಾದೇಶದಲ್ಲೀಗ ಮಿಲಿಟರಿ ಪ್ರಾಬಲ್ಯವಿದೆ. ಮಿಲಿಟರಿ ಪ್ರಾಬಲ್ಯವಿದ್ದರೆ ಆ ದೇಶದಲ್ಲಿ ಅಮೆರಿಕ, ಚೀನಾದಂತಹ ಬಲಾಡ್ಯ ದೇಶಗಳ ಕೈವಾಡ ಇದೆ ಎಂದು ಅರ್ಥ.
*- ಬಾಂಗ್ಲಾದೇಶ ಮಾತ್ರವಲ್ಲ ಭೂತಾನ್, ನೇಪಾಳ, ಶ್ರೀಲಂಕಾ, ಮಯಾನ್ಮಾರ್, ಮಾರಿಷಸ್‌ನಂತಹ ಮಿತ್ರರಾಷ್ಟ್ರಗಳೂ ಈಗ ಭಾರತದ ವಿರುದ್ಧವಾಗುತ್ತಿವೆಯಲ್ಲ?
ಜಿಮ್‌ನಲ್ಲಿ ಮಸಲ್ ಬಿಲ್ಡ್ ಮಾಡುವಾಗ ದೇಹದ ವಿವಿಧ ಭಾಗಗಳಿಗೆ ನೋವಾಗುತ್ತದೆ. ಆದರೆ, ಬಿಲ್ಡ್ ಮಾಡಿದ ಬಳಿಕ ದೇಹ ಸದೃಢವಾಗಿ ಕಾಣುತ್ತದೆ. ಹಾಗೆಯೇ, ಭಾರತ ಇಂದು ಜಗತ್ತಿನ ನಾಲ್ಕನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆದಿದೆ. ದೇಶದ ಆಕಾಂಕ್ಷೆಗಳು ಇನ್ನೂ ದೊಡ್ಡದಿವೆ. ನಮಗಿಂತ ಮೇಲಿನ ಸ್ಥಾನದಲ್ಲಿ ಇರುವವರಿಗೆ ಸಹಜವಾಗಿಯೇ ಆತಂಕ, ಅಭದ್ರತೆ ಕಾಡುತ್ತಿರುತ್ತದೆ. ತಮ್ಮ ಹತ್ತಿರಕ್ಕೆ ಯಾರು ಸುಳಿಯಬಾರದು ಎಂಬುದು ಅವರ ವಾದ. ಹೀಗಾಗಿ, ನಮ್ಮ ನೆರೆ ಹೊರೆಯ ರಾಷ್ಟ್ರಗಳ ರಾಜಕಾರಣಿಗಳು, ಮಿಲಿಟರಿ, ಮೂಲಭೂತವಾದಿಗಳನ್ನು ಬಳಸಿಕೊಂಡು ಎತ್ತಿಕಟ್ಟುವ ಕೆಲಸಗಳು ನಡೆಯುತ್ತಿವೆ. ಅದನ್ನು ಸರ್ಕಾರ ಎಚ್ಚರಿಕೆಯಿಂದ ನಿಭಾಯಿಸುತ್ತಿದೆ.
* ನೆರೆ ಹೊರೆಯ ರಾಷ್ಟ್ರಗಳಲ್ಲಿನ ರಾಜಕೀಯ ಅಸ್ಥಿರತೆ, ಅರಾಜಕತೆಯಂತಹ ಬೆಳವಣಿಗೆಯಿಂದ ಭಾರತದ ಮೇಲೆ ಆಗುವ ಪರಿಣಾಮಗಳು ಏನು?
ಯಾವುದೇ ದೇಶಕ್ಕೆ ನೆರೆ ಹೊರೆಯ ರಾಷ್ಟ್ರಗಳಲ್ಲಿನ ಅರಾಜಕತೆ ಒಳ್ಳೆಯದಲ್ಲ. ಬಾಂಗ್ಲಾದೇಶ ಸರ್ಕಾರವನ್ನು ಅಲ್ಲಿನ ಮೂಲಭೂತವಾದಿಗಳು ಹಿಂಸಾತ್ಮಕ ಮಾರ್ಗದ ಮೂಲಕ ಕಿತ್ತೆಸೆದರು. ಭಾರತ ಸರ್ಕಾರವನ್ನು ಕೂಡ ಅದೇ ರೀತಿ ಕಿತ್ತಿ ಎಸೆಯಬೇಕು. ಭಾರತೀಯ ಯವಕರು ಹೋರಾಟಕ್ಕೆ ಮುಂದಾಗಬೇಕು ಎಂದು ಕೆಲವು ವ್ಯಕ್ತಿಗಳು ಬಯಸಿದ್ದರು. ಈ ಮೂಲಕ ದೇಶದಲ್ಲಿ ಗಲಭೆ, ಅಶಾಂತಿಯನ್ನು ಸೃಷ್ಟಿಸಬೇಕು. ಆರ್ಥಿಕತೆಗೆ ಧಕ್ಕೆ ತರಬೇಕು. ಸೌಹಾರ್ದವನ್ನು ಹಾಳು ಮಾಡಬೇಕು ಎಂದು ಕೆಲವರು ಮಾತನಾಡಿದ್ದರು. ಆದರೆ, ಅಂತಹ ಯಾವುದೇ ಯಾವುದೇ ಪ್ರಚೋದನೆಗಳಿಗೆ ಭಾರತೀಯರು ಸೊಪ್ಪು ಹಾಕಿಲ್ಲ. ಭಾರತ ಸ್ಥಿರವಾಗಿದೆ.
* ಭಾರತದ ನೆರೆ ಹೊರೆಯ ಎಲ್ಲಾ ರಾಷ್ಟ್ರಗಳು ಚೀನಾ ಜೊತೆ ಉತ್ತಮ ಬಾಂಧವ್ಯವನ್ನು ಸಾಧಿಸುತ್ತಿವೆ. ಭಾರತದ ಆದ್ಯತೆ ಹಾದಿ ತಪ್ಪಿದ್ದೆಲ್ಲಿ?
ಚೀನಾ ಇಂದು ಜಗತ್ತಿನ ಎರಡನೇ ಅತ್ಯಂತ ಪ್ರಬಲ ದೇಶವಾಗಿ ಹೊರ ಹೊಮ್ಮಿದೆ. ಏಷ್ಯಾದ ದೊಡ್ಡ ಶಕ್ತಿಯಾಗಿದೆ. ಅದಕ್ಕೆ ಪರ್ಯಾಯ ಶಕ್ತಿ ಎಂದರೆ ಭಾರತ. ನಮ್ಮ ದೇಶವೂ ಉತ್ತಮ ಪ್ರಗತಿ ಸಾಧಿಸುತ್ತಿದೆ. ಪಾಕಿಸ್ತಾನ ಹೊರತುಪಡಿಸಿ ಎಲ್ಲಾ ನೆರೆಯ ರಾಷ್ಟ್ರಗಳು ಉತ್ತಮ ಸಂಬಂಧ ಹೊಂದಿವೆ. ಕೆಲವೊಮ್ಮೆ ನಮಗಿಂತಲೂ ಪ್ರಬಲವಾಗಿರುವ ಒಂದೆರೆಡು ದೇಶಗಳ ಅಮಿಷಕ್ಕೆ ಅಲ್ಲಿನ ರಾಜಕಾರಣಿಗಳು ಬಲಿಯಾಗಿದ್ದಾರೆ. ಆದರೆ, ಅದಾದ ನಂತರ ಮತ್ತೆ ನಮ್ಮ ತೆಕ್ಕೆಗೆ ಬಂದಿವೆ. ಉದಾಹರಣೆಗೆ ಮಾರಿಷಸ್, ಶ್ರೀಲಂಕಾ ಮತ್ತು ನೇಪಾಳವನ್ನೇ ನೋಡಬಹುದು.
* ಅಮೆರಿಕಾ ದೇಶವೂ ನಮಗೆ ಸುಂಕ ಬೆದರಿಕೆ ಹಾಕುತ್ತಿದೆ. ಅಲ್ಲಿನ ಭಾರತೀಯರ ಮೇಲೆ ಕಿಡಿ ಕಾರುತ್ತಿದೆ. ಇದರ ಪರಿಣಾಮ ಹೇಗಿರಲಿದೆ?
ಅಮೆರಿಕ ಮೊದಲು ಎನ್ನುವ ನಿಲುವಿನೊಂದಿಗೆ ಅಧಿಕಾರಕ್ಕೆ ಬಂದಿರುವ ಅಧ್ಯಕ್ಷ ಟ್ರಂಪ್ ತನ್ನ ದೇಶದ ಪ್ರಜೆಗಳ ಎದುರು ಅದನ್ನು ಸಾಬೀತುಪಡಿಸಬೇಕಿದೆ. ಅದಕ್ಕಾಗಿ ಒಮ್ಮೆ ಸ್ನೇಹಿತನಂತೆ, ಮತ್ತೊಮ್ಮೆ ವಿರೋಧಿಯಂತೆ ವರ್ತಿಸುತ್ತಾರೆ. ಅಮೆರಿಕ ದೇಶದಲ್ಲಿ ಮತ್ತು ಅಮೆರಿಕದೊಂದಿಗೆ ನಮ್ಮ ದೇಶದ ಹಿತಾಸಕ್ತಿಯು ಸಾಕಷ್ಟು ಇದೆ ಎನ್ನುವುದನ್ನು ಮರೆಯಬಾರದು. ಎಂದಿನಂತೆ ಈ ವಿಚಾರದಲ್ಲೂ ತಾಳ್ಮೆ ವಹಿಸಬೇಕು.
*ಅಮೆರಿಕ ದೇಶ ವೆನೆಜುವೆಲಾ ದೇಶದ ಅಧ್ಯಕ್ಷನನ್ನೇ ಅಪಹರಿಸಿದೆ. ಎಲ್ಲಾ ದೇಶದ ಆಡಳಿತಗಳಲ್ಲೂ ನೇರ ಹಸ್ತಕ್ಷೇಪ ಮಾಡುತ್ತಿದೆ. ಈ ವರ್ತನೆಗೆ ಕಾರಣಗಳೇನು?
ಅಮೆರಿಕದ ಈ ವರ್ತನೆ ನೂರಾರು ವರ್ಷಗಳಿಂದಲೂ ಹೀಗೆಯೇ ಇದೆ. ತೈಲ ಮತ್ತಿತರ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಆ ದೇಶದ ಕಣ್ಣು ಸದಾ ಇರುತ್ತದೆ. ಯಾವ ವಿಧಾನದಿಂದಲಾದರೂ ಪಡೆಯಬೇಕು, ಕಿತ್ತುಕೊಳ್ಳಬೇಕು ಎನ್ನುವುದು ಅಮೆರಿಕದ ಅಜೆಂಡಾ.
* ಅಮೆರಿಕದೊಂದಿಗೆ ನಮ್ಮ ಬಾಂಧವ್ಯ ಹೇಗಿರಲಿದೆ?
ನಮ್ಮ ದೇಶ ಎರಡು ಬಾರಿ ಅಣು ಬಾಂಬ್ ಪರೀಕ್ಷೆ ನಡೆಸಿದಾಗ ಅಮೆರಿಕ ದೇಶಕ್ಕೆ ಗೊತ್ತಾಗದಂತೆ ಯಶಸ್ವಿ ಪರೀಕ್ಷೆ ನಡೆಸಿತು. ಹಾಗಂತ, ಯುದ್ಧಕ್ಕೆ ಹೋಗುವುದಿಲ್ಲ. ನಮ್ಮ ದೇಶದ ನೀತಿಯು ಯುದ್ಧ ಕೊನೆಯ ಅಸ್ತ್ರ ಎಂಬುದಾಗಿದೆ. ಅಮೆರಿಕದೊಂದಿಗೆ ನಮ್ಮ ದೇಶದ ಬಾಂಧವ್ಯ ಉತ್ತಮವಾಗಿದೆ. ಜಗತ್ತಿನ ಅತಿ ಹೆಚ್ಚು ಜನಸಂಖ್ಯೆ ಇರುವ, ಅಭಿವೃದ್ಧಿ ಹೊಂದುತ್ತಿರುವ ಕಾರಣ ಸ್ವಲ್ಪ ತಾಳ್ಮೆ ವಹಿಸಿದರೆ ಹೆಚ್ಚು ಅನುಕೂಲವಿದೆ.

