ಮಕ್ಕಳನ್ನು ದೊಡ್ಡ ದೊಡ್ಡ ಹುದ್ದೆಗೆ ಮುಟ್ಟಿಸುವ ಆಸೆಯೊಂದಿಗೆ ಇಂಗ್ಲಿಷ್ ಕಾನ್ವೆಂಟುಗಳಿಗೆ ಫೀಜು ಕಟ್ಟುವಷ್ಟು ಶಕ್ತಿ ಇತ್ತು. ಆ ಕುಟುಂಬದ ಹೆಣ್ಣುಮಕ್ಕಳು ಮುಖಕ್ಕೆ ಪೌಡರ್, ಲಿಪ್‌ಸ್ಟಿಕ್, ಕ್ರೀಮು ಎಂದೆಲ್ಲಾ ಹಣ ಖರ್ಚು ಮಾಡುತ್ತಿದ್ದರು.
- ಎಂ.ಎಲ್. ಲಕ್ಷ್ಮೀಕಾಂತ್
ಸ್ವಾತಂತ್ರ್ಯ ಬಂದು ನಾಲ್ಕೈದು ವರ್ಷಗಳಷ್ಟೇ ಆಗಿದ್ದ ಕಾಲವದು. ಮಹಾತ್ಮ ಗಾಂಧಿ, ಸರ್ದಾರ್ ವಲ್ಲಭಭಾಯ್ ಪಟೇಲರು ಅಗಲಿಯಾಗಿತ್ತು. 200 ವರ್ಷಗಳನ್ನು ಆಳಿದ ಬಳಿಕ ಬ್ರಿಟಿಷರು ಬಿಟ್ಟು ಹೋಗಿದ್ದ ಭಾರತದ ಪ್ರಜೆಗಳ ಪೈಕಿ 45% ಮಂದಿ ಕಡುಬಡವರು ಎಂದು ಸ್ವತಂತ್ರ ಭಾರತದ ಮೊದಲ ಜನಗಣತಿ ವರದಿ ಚೀರಿ ಹೇಳುತ್ತಿತ್ತು. ಚಪ್ಪಲಿ ಕಾಣದ ಕಾಲುಗಳು, ನೆತ್ತಿ ಮೇಲೆ ಸ್ವಂತದ್ದೊಂದು ಸೂರಿಲ್ಲದ ಅಸಂಖ್ಯ ಜನಗಳು, ಒಪ್ಪೊತ್ತಿನ ಊಟವಿಲ್ಲದ ಹೊಟ್ಟೆಗಳು, ಖಾಲಿ ತಟ್ಟೆಗಳು, ಮಾಸಿದ ಬಟ್ಟೆಗಳು ದಂಡಿಯಾಗಿ ಭಾರತದ ದಯನೀಯ ಸ್ಥಿತಿಯನ್ನು ಬೇಡಬೇಡವೆಂದರೂ ಎತ್ತಿ ತೋರಿಸುತ್ತಿದ್ದವು.
ಅಂತಹ ದುರ್ದಿನಗಳಲ್ಲೂ ಒಂದಷ್ಟು ಜನರು ಅನುಕೂಲವಾಗಿಯೇ ಇದ್ದರು. ಬ್ರಿಟಿಷರ ಕೃಪೆಗೆ ಒಳಗಾಗಿ ಉದ್ಯಮ ಸ್ಥಾಪಿಸಿದವರು, ಉನ್ನತ ಅಧಿಕಾರ ವಲಯದಲ್ಲಿ ಕೂತವರು, ವಕೀಲರು, ವೈದ್ಯರು ಹಾಗೂ ಶ್ರೀಮಂತ ಜಮೀನ್ದಾರರು... ಅವರಿಗೆ ತಲೆ ಮೇಲೆ ಸೂರಿನ ಸಮಸ್ಯೆ ಇರಲಿಲ್ಲ. ಮೂರೂ ಹೊತ್ತು ಹೊಟ್ಟೆ ತುಂಬುತ್ತಿತ್ತು. ಮನೆಯಿಂದ ಹೊರಗೆ ಕಾಲಿಟ್ಟರೆ ಕಾಲಿಗೆ ಚಪ್ಪಲಿ ಇರುತ್ತಿತ್ತು. ಮಕ್ಕಳನ್ನು ದೊಡ್ಡ ದೊಡ್ಡ ಹುದ್ದೆಗೆ ಮುಟ್ಟಿಸುವ ಆಸೆಯೊಂದಿಗೆ ಇಂಗ್ಲಿಷ್ ಕಾನ್ವೆಂಟುಗಳಿಗೆ ಫೀಜು ಕಟ್ಟುವಷ್ಟು ಶಕ್ತಿ ಇತ್ತು. ಆ ಕುಟುಂಬದ ಹೆಣ್ಣುಮಕ್ಕಳು ಮುಖಕ್ಕೆ ಪೌಡರ್, ಲಿಪ್‌ಸ್ಟಿಕ್, ಕ್ರೀಮು ಎಂದೆಲ್ಲಾ ಹಣ ಖರ್ಚು ಮಾಡುತ್ತಿದ್ದರು.
ಪಾಂಡ್ಸ್, ಯಾರ್ಡ್‌ಲೀಯಂತಹ ಆ ಕಾಲದ ಪ್ರಸಿದ್ಧ ವಿದೇಶಿ ಬ್ರ್ಯಾಂಡುಗಳನ್ನು ವ್ಯಾಪಕವಾಗಿ ಬಳಸುತ್ತಿದ್ದರು. ಒಂದು ಕಡೆ ತುತ್ತು ಅನ್ನಕ್ಕೂ ಕಷ್ಟಪಡುವ ಹೆಚ್ಚು ಜನರು ಇರುವ ದೇಶ, ಮತ್ತೊಂದು ಕಡೆ ಪರದೇಶಿ ವಸ್ತುಗಳ ಬಳಕೆಯಿಂದಾಗಿ, ಅದಾಗಲೇ ಬಡಕಲಾಗಿರುವ ವಿದೇಶಿ ವಿನಿಮಯ ಬರಿದಾಗುವ ಆತಂಕ. ಅದರಲ್ಲಿ ಅನುಕೂಲಸ್ಥ ಹೆಣ್ಣುಮಕ್ಕಳ ತಪ್ಪೇನೂ ಇರಲಿಲ್ಲ. ಆಗ ದೇಶಿ ಬ್ರ್ಯಾಂಡ್ ಎಂಬ ಸೌಂದರ್ಯವರ್ಧಕಗಳಾವುವು ಇರಲಿಲ್ಲ. ಅಂದು ಪ್ರಧಾನಿಯಾಗಿದ್ದ ಜವಾಹರಲಾಲ್ ನೆಹರು ಅವರಿಗೆ ಇದೊಂದು ಗಂಭೀರ ಸಮಸ್ಯೆಯಾಗಿ ಕಾಡಿತು. ಸೌಂದರ್ಯವರ್ಧಕಗಳ ಹೆಸರಲ್ಲಿ ವಿದೇಶಕ್ಕೆ ಹೋಗುತ್ತಿರುವ ಸಂಪನ್ಮೂಲವನ್ನು ಏನಾದರೂ ಮಾಡಿ ಬಂದ್ ಮಾಡಲೇಬೇಕು ಎಂದು ಹಟಕ್ಕೆ ಬಿದ್ದರು.
ವಿದೇಶಿ ಬ್ರ್ಯಾಂಡ್‌ಗಳನ್ನು ಅನುಕರಿಸಿ ಸೌಂದರ್ಯವರ್ಧಕ ತಯಾರು ಮಾಡುವಷ್ಟು ಸಾಮರ್ಥ್ಯ ಭಾರತಕ್ಕೆ ಇರಲಿಲ್ಲ. ಕೈಗಾರಿಕೆಗಳೂ ಈಗಿನಷ್ಟು ವ್ಯಾಪಕವಾಗಿರಲಿಲ್ಲ. ಟಾಟಾ ಸಮೂಹದ ಮುಖ್ಯಸ್ಥರಾಗಿದ್ದ ಜೆಆರ್‌ಡಿ ಟಾಟಾ ಅವರು ಸಮಾಜದ ಎಲ್ಲ ಗಣ್ಯರ ಜತೆಗೂ ಉತ್ತಮ ಒಡನಾಟ ಹೊಂದಿದ್ದ ಉದ್ಯಮಿ. ನೆಹರು ಅವರಿಗೂ ಆತ್ಮೀಯ. ನೆಹರು ಅವರಿಗೂ ಬೇರೆ ಯಾರೂ ಕಾಣಲಿಲ್ಲ. ಅವರು ಜೆಆರ್‌ಡಿ ಟಾಟಾ ಬಳಿ ಸಮಸ್ಯೆ ಹೇಳಿಕೊಂಡರು. ಇದಕ್ಕೊಂದು ದೇಶೀ ಪರಿಹಾರ ಬೇಕೇಬೇಕು ಎಂದು ಗಂಟುಬಿದ್ದರು. ಜೆಆರ್‌ಡಿ ಅವರು ಮುಂಬೈನಲ್ಲಿದ್ದ ಟಾಟಾ ಆಯಿಲ್ ಮಿಲ್‌ನತ್ತ ಮುಖ ಮಾಡಿದರು. ಅದೊಂದು ಕೊಬ್ಬರಿ ಎಣ್ಣೆ ತಯಾರು ಮಾಡುವ ಕಾರ್ಖಾನೆ. ಅಲ್ಲಿಂದಲೇ ಶುರುವಾಯಿತು ದೇಶದ ಮೊದಲ ಸ್ವದೇಶಿ ಸೌಂದರ್ಯ ಉತ್ಪನ್ನಗಳ ತಯಾರಿ ಕೆಲಸ.
ಭಾರತದ ಲಕ್ಷ್ಮಿ ‘ಲ್ಯಾಕ್ಮೆ’ಯಾದಳು: ಹತ್ತು ಹಲವು ಉದ್ದಿಮೆಗಳನ್ನು ಕಟ್ಟಿದ್ದರೂ ಟಾಟಾ ಕಂಪನಿಗೆ ಸೌಂದರ್ಯ ಸಾಮಗ್ರಿ ತಯಾರಿ ಬಗ್ಗೆ ಅನುಭವವಿರಲಿಲ್ಲ. ಹೀಗಾಗಿ ಫ್ರಾನ್ಸ್‌ನ ಎರಡು ಕಂಪನಿಗಳ ಜತೆ ಮಾತುಕತೆ ನಡೆಸಿ, ಅವರನ್ನು ಒಪ್ಪಿಸಲಾಯಿತು. ಅದಕ್ಕಾಗಿ ಅವರು ಕೇಳಿದ ಶುಲ್ಕವನ್ನೂ ಕೊಡಲಾಯಿತು. ಎಲ್ಲವೂ ಸಜ್ಜಾಯಿತು. ಹೆಸರು ಏನು ಇಡೋದು? ಸೌಂದರ್ಯ ಸಾಮಗ್ರಿಗಳನ್ನು ತಯಾರಿಸುವ ಕಲೆ ಹೇಳಿಕೊಡಲು ಬಂದಿದ್ದ ಫ್ರಾನ್ಸ್ ತಜ್ಞರನ್ನೇ ಕೇಳಲಾಯಿತು. ಭಾರತ- ಫ್ರಾನ್ಸ್ ಎರಡಕ್ಕೂ ಸೂಕ್ತವಾಗುವ ಹೆಸರನ್ನು ಹುಡುಕುತ್ತಿರುವಾಗ ಕಂಡಿದ್ದೇ ಲಕ್ಷ್ಮಿ. ಫ್ರಾನ್ಸ್‌ನಲ್ಲಿ ಆಗ ತುಂಬಿದ ಗೃಹಗಳಲ್ಲಿ ಗೀತನಾಟಕವೊಂದು ಪ್ರದರ್ಶನವಾಗುತ್ತಿತ್ತು. ಅದರಲ್ಲಿ ಲಕ್ಷ್ಮೀ ದೇವತೆಯ ಪಾತ್ರವಿತ್ತು.
ಅದೇ ಹೆಸರು ಇಟ್ಟರೆ ಹೇಗೆ ಎಂದು ಯೋಚಿಸುತ್ತಿರುವಾಗಲೇ, ಭಾರತೀಯರು ಒಪ್ಪುತ್ತಾರಾ? ಲೋಕಲ್ ಬ್ರ್ಯಾಂಡ್ ಎಂದು ಖರೀದಿ ಮಾಡದಿದ್ದರೆ? ಪ್ರಶ್ನೆ ಬಂತು. ಫ್ರಾನ್ಸ್ ಗೀತನಾಟಕದಲ್ಲಿ ಲಕ್ಷ್ಮಿಯನ್ನು ‘ಲ್ಯಾಕ್ಮೆ’ ಎಂದು ಸಂಬೋಧಿಸಲಾಗುತ್ತಿತ್ತು. ಅದು ವಿದೇಶಿ ಬ್ರ್ಯಾಂಡ್ ರೀತಿ ಧ್ವನಿಸುತ್ತಿತ್ತು. ಆ ಹೆಸರೇ ಫೈನಲ್ ಆಯಿತು. ಭಾರತದ ಮೊದಲ ಸೌಂದರ್ಯವರ್ಧಕ ಸಾಮಗ್ರಿ ಬ್ರ್ಯಾಂಡ್ ಲಕ್ಷ್ಮಿ ಎಂಬುದರ ಬದಲು ಲ್ಯಾಕ್ಮೆ ಎಂದು ಆಯಿತು. 1952ರಲ್ಲಿ ಉತ್ಪನ್ನಗಳ ಬಿಡುಗಡೆಯೂ ನೆರವೇರಿತು. ಸೌಂದರ್ಯ ಉತ್ಪನ್ನ ತಯಾರು ಮಾಡಿದರೂ ಅದಾಗಲೇ ಆಳವಾಗಿ ಬೇರೂರಿದ್ದ ವಿದೇಶಿ ಬ್ರ್ಯಾಂಡುಗಳೆದುರು ಪೈಪೋಟಿ ನೀಡುವುದು ಲ್ಯಾಕ್ಮೆಗೆ ಕಷ್ಟವಿತ್ತು. ಹೇಗೋ ನಡೆಯುತ್ತಿರುವಾಗ ಟಾಟಾ ಸಮೂಹದ ನೇವಲ್ ಟಾಟಾ ಅವರ ಜೀವನದಲ್ಲಿ ಒಂದು ಬದಲಾವಣೆ ಆಯಿತು. ಅದು ಲ್ಯಾಕ್ಮೆ ಅದೃಷ್ಟವನ್ನೇ ಖುಲಾಯಿಸಿತು.
ವಿದೇಶಿ ಲೇಡಿ ಮಾಡಿದಳು ಮೋಡಿ: ಭಾರತವನ್ನು ನೋಡಲೆಂದು 1953ರಲ್ಲಿ 23 ವರ್ಷದ ಸಿಮೋನ್ ಡ್ಯುನೋಯೆರ್ ಎಂಬ ಸ್ವಿಜರ್ಲೆಂಡ್ ಮೂಲದ ಯುವತಿ ಪ್ರವಾಸಕ್ಕೆ ಬಂದಿದ್ದಳು. ಅಷ್ಟರಲ್ಲಾಗಲೇ ನೇವಲ್ ಟಾಟಾ (ರತನ್ ಟಾಟಾ- ಜಿಮ್ಮಿ ಟಾಟಾ ಅವರ ತಂದೆ) ಅವರು ಪತ್ನಿಯಿದ ದೂರವಾಗಿದ್ದರು. ಕಾರ್ಯಕ್ರಮವೊಂದರಲ್ಲಿ ಸಿಮೋನ್ ಹಾಗೂ ನೇವಲ್ ಪರಿಚಯವಾದರು. ಅದು ಪ್ರೀತಿಗೆ ತಿರುಗಿತು. 2 ವರ್ಷಗಳ ಬಳಿಕ ಮದುವೆಯಾಯಿತು. ಅವರಿಬ್ಬರ ನಡುವೆ 26 ವರ್ಷಗಳ ಅಂತರ. ಸಿಮೋನ್ ಡ್ಯುನೋಯೆರ್ ಅವರು ಸಿಮೋನ್ ‘ಟಾಟಾ’ ಆಗಿ ಬದಲಾದರು. ರತನ್- ಜಿಮ್ಮಿ ಟಾಟಾಗೆ ಮಲತಾಯಿ ಆದರು. ನೊಯೆಲ್ ಟಾಟಾಗೆ ಹೆತ್ತಮ್ಮನಾದರು.
1962ರ ಚಳಿಗಾಲದ ಒಂದು ದಿನ ದೆಹಲಿಯಲ್ಲೊಂದು ಔತಣಕೂಟ. ‘ಇಷ್ಟೊಂದು ಚಳಿ ಇದೆ, ಲ್ಯಾಕ್ಮೆ ಕಂಪನಿ ನಡೆಸುತ್ತಿದ್ದರೂ ಒಂದೇ ಒಂದು ಕೋಲ್ಡ್ ಕ್ರೀಮ್ ಕೂಡ ಉತ್ಪಾದಿಸುವುದಿಲ್ಲವಲ್ಲ’ ಎಂದು ಸಿಮೋನ್ ಕಾಲೆಳೆಯಲು ಹೋದರು. ಅಷ್ಟರಲ್ಲಿ ಒಬ್ಬರು, ‘ಹಾಗಿದ್ದರೆ ನೀವೇ ಏಕೆ ಕಂಪನಿಯ ಬೋರ್ಡ್ ಸೇರಬಾರದು’ ಎಂದು ಸಲಹೆ ಕೊಟ್ಟರು. ಹ..ಹ..ಹಾ.. ಎಂದು ನಗುತ್ತಾ ಸಿಮೋನ್ ಮನೆಗೆ ಬಂದರು. ಮೂರೇ ದಿನಗಳಲ್ಲಿ ಅವರ ಮುಂದೆ ಆಫರ್ ಲೆಟರ್ ಬಂದಿತ್ತು. ಬಹಳ ಯೋಚಿಸಿ, ಏಕೆ ಸೇರಬಾರದು ಎಂದು ಕಂಪನಿಯನ್ನು ಸೇರಿದ ಅವರಿಗೆ ಭಾರತದ ‘ಬ್ಯೂಟಿ ಸೀಕ್ರೆಟ್’ ಗೊತ್ತಾಯಿತು.
ಒಳ್ಳೆಯ ಹೆಣ್ಮಕ್ಕಳು ಲಿಪ್‌ಸ್ಟಿಕ್ ಧರಿಸಲ್ಲ!: ಭಾರತೀಯ ಮಹಿಳೆಯರಲ್ಲಿ ಬಹುತೇಕ ಮಂದಿಗೆ ಸೌಂದರ್ಯ ಸಾಮಗ್ರಿ ಎಂದರೆ ಯಾವುದೆಂದೇ ಗೊತ್ತಿರಲಿಲ್ಲ. ನೈಸರ್ಗಿಕ ವಸ್ತುಗಳು, ಗಿಡ ಮೂಲಿಕೆಗಳನ್ನು ಒಂದಷ್ಟು ಜನ ಬಳಸಿದರೆ, ಉಳಿದವರು ಪೌಡರ್ ಬಳಸುತ್ತಿದ್ದರು. ಆ ಪೌಡರೇ ಅವರ ಸೌಂದರ್ಯ ಪ್ರಪಂಚ. ಆಗೆಲ್ಲಾ ಹೆಣ್ಣುಮಕ್ಕಳು ಲಿಪ್‌ಸ್ಟಿಕ್ ಹಚ್ಚಿಕೊಂಡರೆ ಅವರನ್ನು ಕೆಟ್ಟದೃಷ್ಟಿಯಲ್ಲಿ ಕಾಣಲಾಗುತ್ತಿತ್ತು. ಮೇಕಪ್ ಮಾಡಿದರಂತೂ ಕತೆಯೇ ಮುಗಿದುಹೋಗುತ್ತಿತ್ತು. ಒಳ್ಳೆಯವರೆಂದು ಬಿಂಬಿಸಿಕೊಳ್ಳಲು ಈ ಸೌಂದರ್ಯ ಸಾಮಗ್ರಿಗಳಿಂದ ಮಹಿಳೆಯರು ದೂರವೇ ಇದ್ದರು. ಶೇ.80ರಿಂದ ಶೇ.90ರಷ್ಟು ಹೆಣ್ಣುಮಕ್ಕಳು 18 ತುಂಬುವುದರೊಳಗೆ ಮೇಕಪ್ ಸಾಮಗ್ರಿ ಬಳಸುವುದನ್ನು ಯುರೋಪಿನಾದ್ಯಂತ ಕಂಡಿದ್ದ ಸಿಮೋನ್ ಅವರಿಗೆ, ಭಾರತದಲ್ಲಿನ ಪರಿಸ್ಥಿತಿ ಕಂಡು ಅಚ್ಚರಿ, ದಿಗ್ಭ್ರಮೆ ಎರಡೂ ಆಯಿತು.
ಸಿಮೋನ್ ಅವರಿಗೆ ಗೊತ್ತಾಗಿದ್ದು ಒಂದು: ಲ್ಯಾಕ್ಮೆ ಜನಪ್ರಿಯಗೊಳಿಸಲು ಗಮನಹರಿಸಬೇಕಿರುವುದು ಮಾರುಕಟ್ಟೆಯ ಮೇಲೊಂದೇ ಅಲ್ಲ, ಮನಸ್ಥಿತಿ ಮೇಲೂ. ಹೀಗಾಗಿ ‘ಒಳ್ಳೆಯ ಹುಡುಗಿಯರು ಮೇಕಪ್ ಮಾಡಿಕೊಳ್ಳುವುದಿಲ್ಲ’ ಎಂಬ ಮನಸ್ಥಿತಿಯನ್ನೇ ಬದಲಿಸಲು ಹೊರಟರು. ಅದೇ ವೇಳೆ, ಪಾಶ್ಚಾತ್ಯ ದೇಶಗಳ ಬ್ರ್ಯಾಂಡ್‌ಗಳು ಅಲ್ಲಿನವರ ಚರ್ಮ, ಬಣ್ಣಕ್ಕೆ ತಕ್ಕಂತೆ ಉತ್ಪನ್ನಗಳನ್ನು ತಯಾರು ಮಾಡುತ್ತಿದ್ದವು. ಸಿಮೋನ್ ಅವಧಿಯಲ್ಲಿ ಭಾರತೀಯರ ಚರ್ಮ, ಬಣ್ಣ, ವಾತಾವರಣಕ್ಕೆ ಹೊಂದಿಕೆಯಾಗುವಂತಹ ಉತ್ಪನ್ನಗಳನ್ನು ತಯಾರಿಸಲಾಯಿತು. ಪಾಶ್ಚಾತ್ಯ ಅನುಭವ- ಭಾರತೀಯ ಸಂಸ್ಕೃತಿ ಎರಡನ್ನೂ ಅವರು ಅರಿತಿದ್ದು ಲಾಭವಾಯಿತು.
ಜಾಹೀರಾತು ಮಾಧ್ಯಮವನ್ನು ಲ್ಯಾಕ್ಮೆ ಬೆಳೆಸಲು ಸಿಮೋನ್ ಪ್ರಬಲವಾಗಿ ಬಳಸಿಕೊಂಡರು. ‘ಚೆನ್ನಾಗಿ ಕಾಣುವುದೇನು ಕೆಟ್ಟದ್ದೇ?’ ಎಂದು ಜನರಲ್ಲಿ ಕಿಡಿ ಹೊತ್ತಿಸಿದರು. ನಿರಂತರ ಅಭಿಯಾನಗಳ ಮೂಲಕ ಮಹಿಳೆಯರಲ್ಲಿ ಮೇಕಪ್ ಹಾಗೂ ಆ ಸಾಮಗ್ರಿಗಳ ಬಗ್ಗೆ ಇದ್ದ ಗ್ರಹಿಕೆಗಳನ್ನೇ ಬದಲಿಸಿದರು. ಅದರ ಭಾಗವಾಗಿ ಜನ್ಮ ತಳೆದಿದ್ದೇ, 1980ರ ದಶಕದ ಟೀವಿ ಜಾಹೀರಾತು ‘ಲ್ಯಾಕ್ಮೆ ಗರ್ಲ್’. ಅದಕ್ಕೆ ರೂಪದರ್ಶಿ ಶ್ಯಾಮೋಲಿ ವರ್ಮಾರನ್ನು ಬಳಸಿಕೊಂಡರು. ಪ್ರಸಿದ್ಧ ನಟಿಯರಾದ ರೇಖಾ, ಐಶ್ವರ್ಯ ರೈ ಅವರನ್ನೂ ಲ್ಯಾಕ್ಮೆ ಜಾಹೀರಾತಿಗೆ ಬಳಸಿ ಬ್ರ್ಯಾಂಡ್ ಕಟ್ಟಿದರು. ಭಾರತದಲ್ಲಿ ಒಳ್ಳೆಯ ಹುಡುಗಿಯರೂ ಮೇಕಪ್ ಹಾಕಿಕೊಳ್ಳುತ್ತಾರೆ ಎಂಬ ಸಂದೇಶ ಸಾರುವುದು ಅವರ ಉದ್ದೇಶವಾಗಿತ್ತು.
ಮನಮೋಹನ ಸಿಂಗ್‌ರ ಐಡಿಯಾ
ಒಂದೆಡೆ ಮೇಕಪ್ ಸಾಮಗ್ರಿಗಳನ್ನು ಭಾರತೀಯರು ಬಳಸುವಂತೆ ಮಾಡಲು ಸಿಮೋನ್ ಪ್ರಯತ್ನಿಸುತ್ತಿದ್ದರೆ, ವಿದೇಶಿ ವಿನಿಮಯ ಉಳಿಸಲು ಸ್ವದೇಶಿ ಸೌಂದರ್ಯ ಸಾಮಗ್ರಿ ಉತ್ಪಾದನೆಗೆ ಶ್ರೀಕಾರ ಹಾಕಿದ್ದ ಸರ್ಕಾರವೇ ಬದಲಾದ ಕಾಲಘಟ್ಟದಲ್ಲಿ ಅದಕ್ಕೆ ದುಬಾರಿ ತೆರಿಗೆ ಹೇರುತ್ತಿತ್ತು. ಒಂದು ಹಂತದಲ್ಲಂತೂ 110% ಉತ್ಪಾದನಾ ಸುಂಕ ವಿಧಿಸುತ್ತಿತ್ತು. ಆದರೆ ಸಿಮೋನ್ ಬಿಡಲಿಲ್ಲ. ನಿರಂತರವಾಗಿ ಕೇಂದ್ರ ಸರ್ಕಾರದ ಮುಂದೆ ವಾದ ಮಂಡಿಸಿದರು. ಬೇಡಿಕೆ ಈಡೇರದೆ ಹೋದಾಗ ನೇರವಾಗಿ ಅಂದಿನ ಹಣಕಾಸು ಸಚಿವ ಮನಮೋಹನ ಸಿಂಗ್ ಅವರನ್ನು ಭೇಟಿ ಮಾಡಿ ತಮ್ಮ ದುಮ್ಮಾನ ಹೇಳಿದರು.
‘ಒಂದು ಕೆಲಸ ಮಾಡಿ, ಹೆಚ್ಚೆಚ್ಚು ಮಹಿಳೆಯರು ಈ ಬಗ್ಗೆ ದೂರುವಂತೆ ಮಾಡಿ’ ಎಂದು ಮನಮೋಹನ ಸಿಂಗ್ ಅವರೇ ಸಿಮೋನ್‌ಗೆ ಸಲಹೆ ಕೊಟ್ಟರು! ಅದರಂತೆ ಅವರು ದೇಶಾದ್ಯಂತ ಮಹಿಳಾ ಸಂಘಟನೆಗಳು, ಶಾಲೆ, ಕಾಲೇಜುಗಳಲ್ಲಿ ಸಂಘಟಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ತಲುಪುವಂತೆ ಮಾಡಿದರು. ಮುಂದಿನ ಬಜೆಟ್‌ನಲ್ಲೇ ಸುಂಕ ಕಡಿಮೆಯಾಗಿತ್ತು. ಸಿಮೋನ್ ಅವರ ಹೋರಾಟದ ಫಲವಾಗಿ ಲ್ಯಾಕ್ಮೆ ಎಂಬುದು ದೇಶದ ಅತ್ಯಂತ ಜನಪ್ರಿಯ, ಹೆಚ್ಚು ಜನರು ಬಳಸುವ ಬ್ರ್ಯಾಂಡ್ ಆಗಿ ರೂಪುಗೊಂಡಿತು. ಲ್ಯಾಕ್ಮೆ ಎಂದರೆ ಹೆಣ್ಣುಮಕ್ಕಳು ಕಣ್ಣರಳಿಸಿ ನೋಡುವಂತಾಯಿತು.
ತೊಂಬತ್ತರ ದಶಕದಲ್ಲಿ ಭಾರತದ ಆರ್ಥಿಕತೆ ಉದಾರೀಕರಣಕ್ಕೆ ತೆರೆದುಕೊಂಡಿತ್ತು. ವಿದೇಶಿ ಕಂಪನಿಗಳಿಗೆ ದೇಶದ ಬಾಗಿಲು ಮುಕ್ತವಾಯಿತು. ಪೈಪೋಟಿ ನೀಡುವುದು ಕಷ್ಟವಾಗುತ್ತೆ ಎಂಬ ದೂರದೃಷ್ಟಿಯಿಂದಲೋ ಏನೋ 200 ಕೋಟಿ ರು.ಗೆ ಲ್ಯಾಕ್ಮೆ ಕಂಪನಿಯನ್ನು ಹಿಂದುಸ್ತಾನ್ ಯುನಿಲಿವರ್‌ಗೆ ಮಾರಾಟ ಮಾಡಿದರು ಸಿಮೋನ್. ಅವರು ಉದ್ಯಮದಿಂದ ಹೊರನಡೆಯಲಿಲ್ಲ. ಬೆಂಗಳೂರಿನ ಲಿಟಲ್‌ವುಡ್ ಎಂಬ ಸ್ಟೋರ್ ಖರೀದಿಸಿ, ‘ಟ್ರೆಂಟ್’ ಎಂಬ ಹೊಸ ಕಂಪನಿಯನ್ನು ಸ್ಥಾಪಿಸಿದರು. ಅಂದಿನ ಲಿಟಲ್‌ವುಡ್ ಬಳಿಕ ವೆಸ್ಟ್‌ಸೈಡ್ ಆಯಿತು. ಇಂದು ದೇಶದಲ್ಲಿ ಜನಪ್ರಿಯವಾಗಿರುವ ಝುಡಿಯೋ, ವೆಸ್ಟ್‌ಸೈಡ್‌ನ ಮಾತೃಸಂಸ್ಥೆಯೇ ಟ್ರೆಂಟ್.
ಕಾಲೇಜು ಹುಡುಗಿಯರಿಂದ ವೃದ್ಧ ಮಹಿಳೆಯರ ಹ್ಯಾಂಡ್ ಬ್ಯಾಗ್‌ನಲ್ಲಿ ಇಂದು ಲಿಪ್‌ಸ್ಟಿಕ್, ಐಲೈನರ್, ಬಗೆಬಗೆಯ ಕ್ರೀಮು, ಮೇಕಪ್ ಪೌಡರ್ ಕಾಣಬಹುದು. ಅದರಲ್ಲಿ ಲ್ಯಾಕ್ಮೆ ಇಲ್ಲದಿರಬಹುದು. ಅವನ್ನು ಮಹಿಳೆಯರು ಬಳಸುತ್ತಿರುವುದಕ್ಕೆ ಸಿಮೋನ್ ಟಾಟಾ ಅವರು ಅಂದು ಮಾಡಿದ ಕ್ರಾಂತಿಯೇ ಕಾರಣ ಎಂದರೆ ತಪ್ಪಾಗುವುದಿಲ್ಲ. ಮಹಿಳೆಯರು ಮೇಕಪ್ ಮಾಡಿಕೊಳ್ಳಬಾರದು, ಲಿಪ್‌ಸ್ಟಿಕ್ ಹಚ್ಚಿಕೊಳ್ಳಬಾರದು, ಅದೆಲ್ಲಾ ಕೆಟ್ಟದ್ದು ಎಂಬ ಮನಸ್ಥಿತಿಯನ್ನೇ ಬದಲಿಸಿ ಸೌಂದರ್ಯ ಸಾಮಗ್ರಿಗಳನ್ನು ಮಹಿಳೆಯರ ಜೀವನದ ಬಹುಮುಖ್ಯ ಭಾಗವಾಗಿಸಿದ ಕೀರ್ತಿ ಸಿಮೋನ್ ಅವರಿಗೆ ಸಲ್ಲುತ್ತದೆ. ಅಂದಹಾಗೆ, ಇಷ್ಟೆಲ್ಲಾ ಸಾಹಸ ಮಾಡಿದ ಸಿಮೋನ್ ಟಾಟಾ ಡಿ.5ರಂದು ತೀರಿಹೋದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ.


