ಡ್ರಗ್ಸ್‌ ಚಟಕ್ಕೆ ಬಿದ್ದವರನ್ನು ಶಿಕ್ಷೆಗೊಳಪಡಿಸುವುದಕ್ಕಿಂತ ಹೆಚ್ಚಾಗಿ ಅವರಿಗೆ ಮೊದಲು ಚಿಕಿತ್ಸೆ ಕೊಡಿಸುವ ಕೆಲಸ ಆಗಬೇಕು. ಯಾವ ಕಾರಣಕ್ಕೆ ಈ ಡ್ರಗ್ಸ್ ಚಟಕ್ಕೆ ಬಿದ್ದಿದ್ದಾರೆ ಎಂಬುದನ್ನು ಗುರುತಿಸಿ ಚಿಕಿತ್ಸೆ ನೀಡುವಂಥ ಕೆಲಸವಾಗಬೇಕಿದೆ

 ಡ್ರಗ್ಸ್‌ ಚಟಕ್ಕೆ ಬಿದ್ದವರನ್ನು ಶಿಕ್ಷೆಗೊಳಪಡಿಸುವುದಕ್ಕಿಂತ ಹೆಚ್ಚಾಗಿ ಅವರಿಗೆ ಮೊದಲು ಚಿಕಿತ್ಸೆ ಕೊಡಿಸುವ ಕೆಲಸ ಆಗಬೇಕು. ಯಾವ ಕಾರಣಕ್ಕೆ ಈ ಡ್ರಗ್ಸ್ ಚಟಕ್ಕೆ ಬಿದ್ದಿದ್ದಾರೆ ಎಂಬುದನ್ನು ಗುರುತಿಸಿ ಚಿಕಿತ್ಸೆ ನೀಡುವಂಥ ಕೆಲಸವಾಗಬೇಕಿದೆ. ಸರಿಯಾಗಿ ಚಿಕಿತ್ಸೆ ನೀಡಿದರೆ ಅವರು ಡ್ರಗ್ಸ್ ಚಟದಿಂದ ಹೊರಬಂದು ಎಲ್ಲರಂತೆ ಜೀವನ ನಡೆಸುತ್ತಾರೆ. ಶೇ.85ರಷ್ಟು ವ್ಯಸನಿಗಳನ್ನು ಡ್ರಗ್ಸ್‌ ಚಟದಿಂದ ಹೊರ ತರಬಹುದು. ಶಾಲಾ-ಕಾಲೇಜು ಮಟ್ಟದಲ್ಲೇ ಈ ಬಗ್ಗೆ ಕೌನ್ಸೆಲಿಂಗ್‌ ನೀಡಬೇಕು ಜತೆಗೆ ಡ್ರಗ್ಸ್ ಬಗ್ಗೆ ಜಾಗೃತಿ ಮೂಡಿಸಬೇಕು.

ಮಂಜುನಾಥ ಕೆ.

ಮಾದಕ ವಸ್ತುವಿನ ಕಬಂಧಬಾಹುಗೆ ಸಿಲುಕಿ ಒದ್ದಾಡುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಕುಟುಂಬ, ನಾಡಿನ ಭವಿಷ್ಯಕ್ಕೆ ಬೆಳಕಾಗಬೇಕಿದ್ದ ಅನೇಕ ಯುವಜನರು ಮಾದಕ ವಸ್ತುಗಳ ವ್ಯಸನಿಗಳಾಗಿ ಕತ್ತಲೆ ಕೂಪದಲ್ಲಿ ಒದ್ಡಾಡುತ್ತಿದ್ದಾರೆ. ಹಳ್ಳಿಯಿಂದ ಹಿಡಿದು ನಗರ ಪ್ರದೇಶಗಳಲ್ಲಿ ಬೇರೆ ಬೇರೆ ರೀತಿಯ ಮಾದಕ ವಸ್ತು, ಮದ್ಯಪಾನ ಮುಂತಾದ ಕೆಟ್ಟ ಚಟದ ದಾಸರಾಗಿರುವ ಯುವಕರು ತಮ್ಮ ಕುಟುಂಬವನ್ನು ಕಣ್ಣೀರಿನಲ್ಲಿ ಮಿಂದೇಳುವಂತೆ ಮಾಡುತ್ತಿದ್ದಾರೆ. ಯುವಜನರು ಈ ಕತ್ತಲೆ ಕೂಪಕ್ಕೆ ಯಾಕೆ ಬೀಳುತ್ತಾರೆ? ಇದರಿಂದ ಹೊರಬರುವ ಮಾರ್ಗ ಏನು? ಪಾಲಕರ ಜವಾಬ್ದಾರಿಗಳೇನು? ಪೊಲೀಸ್‌, ಸಮಾಜದ ಪಾತ್ರ ಏನು? ಇತ್ಯಾದಿ ಹಲವು ಪ್ರಶ್ನೆಗಳಿಗೆ ಈ ಬಾರಿಯ ‘ಕನ್ನಡಪ್ರಭ’ದ ಜತೆಗೆ ಮುಖಾಮುಖಿಯಾಗಿದ್ದಾರೆ ನಿಮ್ಹಾನ್ಸ್‌ನ ಮಾದಕದ್ರವ್ಯ ಚಿಕಿತ್ಸಾ ಕೇಂದ್ರದ (ಮನೋರೋಗ ವಿಭಾಗ) ಸಹಾಯಕ ಪ್ರಾಧ್ಯಾಪಕ ಡಾ. ವೆಂಕಟ ಲಕ್ಷ್ಮೀನರಸಿಂಹ.

*ಯುವ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಮಾದಕ ವಸ್ತು ಚಟಕ್ಕೆ ದಾಸರಾಗುತ್ತಿದ್ದಾರಲ್ಲ?

ನಮ್ಮ ದೇಶದಲ್ಲಿ 18 ವರ್ಷ ತುಂಬಿರುವವರಿಗೆ ಮದ್ಯಪಾನ ಮತ್ತು ಧೂಮಪಾನಕ್ಕೆ ಅವಕಾಶವಿದೆ. ಯುವಕರು ಮೊದಲು ಧೂಮಪಾನ ಮತ್ತು ಮದ್ಯಪಾನದಿಂದ ಆರಂಭಿಸಿ, ನಂತರ ಗಾಂಜಾ ಸೇರಿ ಇನ್ನಿತರ ಮಾದಕ ವಸ್ತುಗಳತ್ತ ಆಕರ್ಷಿತರಾಗುತ್ತಾರೆ. ಕುತೂಹಲದಿಂದ ಆರಂಭವಾದ ಡ್ರಗ್ಸ್ ಸೇವನೆ ನಂತರ ಚಟವಾಗಿ ಬದಲಾಗುತ್ತದೆ. ಕೆಲವರಿಗೆ ಸಣ್ಣವಯಸ್ಸಿನಿಂದಲೇ ನ್ಯೂರೋ ಡೆವಲಪ್‌ಮೆಂಟಲ್‌ ಸಮಸ್ಯೆ ಇರುತ್ತದೆ. ಎಡಿಎಟಿ, ಇಂಪಲ್ಸಿವಿಟಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆಯಿಂದ ಬಳಲುತ್ತಿರುವವರು ಶಾಲಾ-ಕಾಲೇಜು ಹಂತದಲ್ಲಿ ಸರಿಯಾಗಿ ಓದಲು ಸಾಧ್ಯವಾಗದೆ ತುಂಬಾ ಡಿಸ್ಟರ್ಬ್ ಆಗಿರುತ್ತಾರೆ. ಅಂಥವರು ಶಾಲೆ-ಕಾಲೇಜು ತೊರೆದು, ಕೆಟ್ಟವರ ಸಹವಾಸ ಮಾಡುತ್ತಾರೆ. ನಂತರ ಮಾದಕ ವ್ಯಸನಿಗಳಾಗುತ್ತಾರೆ.

*ಇತ್ತೀಚೆಗೆ ಯುವಜನರಲ್ಲಿ ಮಾದಕ ವಸ್ತು ಬಳಕೆ ದಿಢೀರ್ ಹೆಚ್ಚುತ್ತಿರುವುದು ಆತಂಕ ಹುಟ್ಟಿಸುವಂತಿದೆಯಲ್ವಾ?

ಈಗ ಮಾದಕ ವಸ್ತುಗಳು ಯುವಕರ ಕೈಗೆ ಸುಲಭವಾಗಿ ಸಿಗುತ್ತಿದೆ. ಐದು ವರ್ಷಗಳ ಹಿಂದೆ ಡ್ರಗ್ಸ್‌ಗಳ ಬಗ್ಗೆ ಯಾವುದೇ ಮಾಹಿತಿ ಸಿಗುತ್ತಿರಲಿಲ್ಲ. ಈಗ ಮೊಬೈಲ್‌ನಲ್ಲಿ ಎಲ್ಲ ರೀತಿಯ ಮಾಹಿತಿ ಸಿಗುತ್ತಿದೆ. ಬೆಂಗಳೂರಿನಲ್ಲಿ ಹೆಚ್ಚಾಗಿ ಪೆಂಟಡೆಲ್ ಐವಿ ಇಂಜೆಕ್ಷನ್ ಅನ್ನು ಡ್ರಗ್ಸ್ ರೂಪದಲ್ಲಿ ತೆಗೆದುಕೊಳ್ಳಲಾಗುತ್ತಿದೆ. ಇದೊಂದು ನೋವು ನಿವಾರಕ. ಈ ಇಂಜೆಕ್ಷನ್‌ ಡೋಸ್‌ ಹೆಚ್ಚಾದರೆ ನಶೆ ಏರುತ್ತದೆ ಎಂಬುದು ಈಗ ಬಹುತೇಕ ಗೊತ್ತಿದೆ. ಎಂ.ಡಿ ಮತ್ತು ಎಂಡಿಎಂಎ ಎಂಬ ಮಾದಕವಸ್ತು ಮೊದಲು ಅಮೆರಿಕ ಮತ್ತು ಯೂರೋಪ್‌ ದೇಶಗಳಲ್ಲಿ ಹೆಚ್ಚಾಗಿ ಬಳಕೆಯಾಗುತ್ತಿತ್ತು. ಬಳಿಕ ಅಲ್ಲಿಂದ ಅಕ್ರಮವಾಗಿ ನಮ್ಮ ದೇಶಕ್ಕೆ ಸಾಗಣೆ ಮಾಡಲಾಗುತ್ತಿತ್ತು. ಆದರೀಗ ಇದನ್ನು ಸ್ಥಳೀಯವಾಗಿಯೇ ತಯಾರಿಸಲಾಗುತ್ತಿದೆ. ಇದೂ ಸೇರಿ ಇನ್ನಿತರ ಕಾರಣಗಳಿಂದಾಗಿ ರಾಜ್ಯದಲ್ಲಿ ಡ್ರಗ್ಸ್‌ ಸೇವಿಸುವವರ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ ಎನ್ನಬಹುದಾಗಿದೆ.

*ಡ್ರಗ್ಸ್ ಚಟಕ್ಕೆ ಬಿದ್ದವರು ಅಪರಾಧ ಕೃತ್ಯಗಳಲ್ಲಿ ಯಾಕೆ ಭಾಗಿಯಾಗುತ್ತಾರೆ?

ಉದಾಹರಣೆಗೆ ವ್ಯಸನಿಯೊಬ್ಬ ಹೆರಾಯಿನ್ ತೆಗೆದುಕೊಳ್ಳುತ್ತಾನೆ ಎಂದಿಟ್ಟುಕೊಳ್ಳೋಣ. ಒಂದು ಗ್ರಾಂ ಹೆರಾಯಿನ್‌ಗೆ ಅಂದಾಜು ಮೂರು ಸಾವಿರ ರು. ಇರಬಹುದು. ವ್ಯಸನಕ್ಕೊಳಗಾದವರು ತನ್ನ ಬಳಿ ಇರುವ ಬೈಕ್‌ ಮಾರಾಟ ಮಾಡಿ 30 ಸಾವಿರ ರು. ಪಡೆದು 10 ದಿನ ಹೆರಾಯಿನ್‌ ಸೇವಿಸುತ್ತಾನೆ. 11ನೇ ದಿನ ಆತ ಹೆರಾಯಿನ್‌ ತೆಗೆದುಕೊಳ್ಳಲಿಲ್ಲ ಅಂದ್ರೆ ವಿತ್‌ಡ್ರಾ ಸಿಂಡ್ರಮ್ಸ್ ಶುರುವಾಗುತ್ತದೆ. ಆ ಸಿಂಡ್ರೋಮ್‌ನಿಂದಾಗಿ ಹೇಗಾದರೂ ಮಾಡಿ ಹಣ ಹೊಂದಿಸಲು ಪರದಾಡಿ ಕೊನೆಗೆ ತನ್ನದೇ ಮನೆ ಅಥವಾ ಅಕ್ಕಪಕ್ಕದ ಮನೆಯಲ್ಲಿ ಮಾದಕ ವ್ಯಸನಿ ಕಳ್ಳತನ ಮಾಡಿ ತನ್ನ ಚಟ ಪೂರೈಸಿಕೊಳ್ಳುತ್ತಾನೆ. ಈ ರೀತಿ ಡ್ರಗ್ಸ್ ಚಟಕ್ಕೆ ಬಿದ್ದವರು ಕೊನೆ ಕೊನೆಗೆ ಹಣ ಹೊಂದಿಸಲು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಾರೆ.

*ಡ್ರಗ್ಸ್ ಚಟದಿಂದ ಹೊರ ಬರಲು ಪರಿಣಾಮಕಾರಿ ಚಿಕಿತ್ಸೆ ಇದೆಯೇ?

ಡ್ರಗ್ಸ್‌ ಚಟಕ್ಕೆ ಬಿದ್ದವರನ್ನು ಶಿಕ್ಷೆಗೊಳಪಡಿಸುವುದಕ್ಕಿಂತ ಹೆಚ್ಚಾಗಿ ಅವರಿಗೆ ಮೊದಲು ಚಿಕಿತ್ಸೆ ಕೊಡಿಸುವ ಕೆಲಸ ಆಗಬೇಕು. ಯಾವ ಕಾರಣಕ್ಕೆ ಈ ಡ್ರಗ್ಸ್ ಚಟಕ್ಕೆ ಬಿದ್ದಿದ್ದಾರೆ ಎಂಬುದನ್ನು ಗುರುತಿಸಿ ಚಿಕಿತ್ಸೆ ನೀಡುವಂಥ ಕೆಲಸವಾಗಬೇಕಿದೆ. ಸರಿಯಾಗಿ ಚಿಕಿತ್ಸೆ ನೀಡಿದರೆ ಅವರು ಡ್ರಗ್ಸ್ ಚಟದಿಂದ ಹೊರಬಂದು ಎಲ್ಲರಂತೆ ಜೀವನ ನಡೆಸುತ್ತಾರೆ. ಶೇ.85ರಷ್ಟು ವ್ಯಸನಿಗಳನ್ನು ಡ್ರಗ್ಸ್‌ ಚಟದಿಂದ ಹೊರ ತರಬಹುದು. ಶಾಲಾ-ಕಾಲೇಜು ಮಟ್ಟದಲ್ಲೇ ಈ ಬಗ್ಗೆ ಕೌನ್ಸೆಲಿಂಗ್‌ ನೀಡಬೇಕು ಜತೆಗೆ ಡ್ರಗ್ಸ್ ಬಗ್ಗೆ ಜಾಗೃತಿ ಮೂಡಿಸಬೇಕು.

*ಯಾವ ವಯಸ್ಸಿನವರು ಹೆಚ್ಚಿಗೆ ನಿಮ್ಮಲ್ಲಿ ಚಿಕಿತ್ಸೆ ಕೋರಿ ಬರುತ್ತಾರೆ?

ಮದ್ಯಪಾನ, ತಂಬಾಕು ಚಟಕ್ಕೆ ಬಿದ್ದವರಲ್ಲಿ ಸಾಮಾನ್ಯವಾಗಿ 35-40 ವರ್ಷ ಮೇಲ್ಪಟ್ಟವರು, ಹೆರಾಯಿನ್‌, ಬ್ರೌನ್‌ಶುಗರ್‌, ಟೆಂಪೆಡಾಲ್ ಐವಿ ಇಂಜೆಕ್ಷನ್‌ನಂಥ ಡ್ರಗ್ಸ್‌ ಸೇವಿಸಿದ 18ರಿಂದ 20 ವರ್ಷದೊಳಗಿನ ಅತಿಯಾದ ವ್ಯಸನಿಗಳು ನಮ್ಮಲ್ಲಿ ಚಿಕಿತ್ಸೆಗಾಗಿ ಬರುತ್ತಾರೆ. ಸಾಮಾನ್ಯವಾಗಿ ಡ್ರಗ್ಸ್ ವ್ಯಸನಿಗಳೇ ನಮ್ಮಲ್ಲಿ ಹೆಚ್ಚಾಗಿ ಚಿಕಿತ್ಸೆಗೆ ಬರುತ್ತಾರೆ. ಪ್ರತಿದಿನ ಸುಮಾರು 200 ಮಂದಿ ಚಿಕಿತ್ಸೆಗೆ ತೆಗೆದುಕೊಳ್ಳುತ್ತಾರೆ. ಅದರಲ್ಲಿ ಅತಿಯಾಗಿ ವ್ಯಸನಕ್ಕೆ ಒಳಗಾದವರನ್ನು ಮಾತ್ರ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತದೆ. ಉಳಿದವರಿಗೆ ಒಪಿಡಿಯಲ್ಲೇ ಚಿಕಿತ್ಸೆ ಕೊಡಲಾಗುತ್ತದೆ.

*ಸಾಮಾನ್ಯವಾಗಿ ಡ್ರಗ್ಸ್ ಚಟದಿಂದ ಹೊರಬರಲು ಎಷ್ಟು ಸಮಯ ಬೇಕಾಗಬಹುದು?

ಅತಿಯಾಗಿ ವ್ಯಸನಕ್ಕೆ ಒಳಗಾದವರು ಅಂದರೆ ಹೆರಾಯಿನ್‌, ಬ್ರೌನ್‌ಶುಗರ್‌, ಟೆಂಪೆಡಾಲ್ ಐವಿ ಇಂಜೆಕ್ಷನ್ ತೆಗೆದುಕೊಳ್ಳುವವರಿಗೂ ಚಿಕಿತ್ಸೆ ಇದೆ. ಕನಿಷ್ಠ 3 ರಿಂದ 6 ತಿಂಗಳವರೆಗೂ ಡ್ರಗ್ಸ್ ಚಟದಿಂದ ಹೊರಬರಲು ಸಮಯ ತೆಗೆದುಕೊಳ್ಳುತ್ತಾರೆ. ಸಾಮಾನ್ಯವಾಗಿ ಡ್ರಗ್ಸ್‌ ಚಟಕ್ಕೆ ಬಿದ್ದವರನ್ನು ರಿಹ್ಯಾಬ್‌ ಸೆಂಟರ್‌ಗೆ 3 ರಿಂದ 6 ತಿಂಗಳ ಕಾಲ ದಾಖಲಿಸಿ ಚಿಕಿತ್ಸೆ ಕೊಡಿಸಬೇಕು ಎಂಬ ತಪ್ಪು ಕಲ್ಪನೆಯಿದೆ. ಇದರಿಂದ ಕೆಲವರು ಚಿಕಿತ್ಸೆ ಪಡೆಯಲು ಹಿಂದೇಟು ಹಾಕುತ್ತಾರೆ. ಆದರೆ ಹೊರರೋಗಿಗಳ ವಿಭಾಗದಲ್ಲೂ (ಒಪಿಡಿ) ಅವರಿಗೆ ಚಿಕಿತ್ಸೆ ಕೊಡಿಸಬಹುದಾಗಿದೆ. ವ್ಯಸನಕ್ಕೆ ಬಿದ್ದವರ ಮೆದುಳಲ್ಲಿ ತುಂಬಾ ಬದಲಾವಣೆಗಳು ಆಗಿರುತ್ತವೆ. ಅದೆಲ್ಲ ಗುಣಮುಖವಾಗಿ ಸಹಜ ಜೀವನಕ್ಕೆ ಬರಲು ಕನಿಷ್ಠ ಆರು ತಿಂಗಳ ಚಿಕಿತ್ಸೆ ಅಗತ್ಯವಿದೆ. ಆದರೆ ಇದು ಕಡ್ಡಾಯವಲ್ಲ.

*ಪಾಲಕರು ಮಕ್ಕಳ ಮೇಲೆ ಯಾವ ರೀತಿ ನಿಗಾ ವಹಿಸಬೇಕು?

ಪಾಲಕರು ತಮ್ಮ ಮಕ್ಕಳ ಚಲನವಲನ, ಚಟುವಟಿಕೆಗಳ ಮೇಲೆ ನಿಗಾ ಇಟ್ಟಿರಬೇಕು. ಪ್ರಾಯದ ಮಕ್ಕಳಿಗೆ ಭಾವನಾತ್ಮಕವಾಗಿ ಬೆಂಬಲ ನೀಡಬೇಕು. ಉದಾಹರಣೆಗೆ ಶಾಲಾ-ಕಾಲೇಜಲ್ಲಿ ತಮ್ಮ ಮಕ್ಕಳು ಯಾವುದಾದರೂ ವಿಷಯದಲ್ಲಿ ಫೇಲಾದರೆ ಅವರಿಗೆ ನೈತಿಕ ಬೆಂಬಲ ನೀಡಿ ಧೈರ್ಯ ತುಂಬಬೇಕು. ಅದನ್ನು ಬಿಟ್ಟು ಬೈದು ನಿಂದಿಸಿದರೆ ಡಿಪ್ರೆಷನ್‌ಗೆ ಜಾರಿ ದಾರಿ ತಪ್ಪುತ್ತಾರೆ. ಒಂದು ವೇಳೆ ಮಕ್ಕಳು ಮದ್ಯ ಅಥವಾ ಡ್ರಗ್ಸ್ ಚಟಕ್ಕೆ ಬಿದ್ದಿರುವುದು ಗೊತ್ತಾದ ಕೂಡಲೇ ರಿಹಾಬ್‌ ಸೆಂಟರ್‌ಗೆ ಕರೆದೊಯ್ದು ಚಿಕಿತ್ಸೆ ಕೊಡಿಸಬೇಕು. ತಡಮಾಡಿದಷ್ಟು ಅವರು ಅತಿಯಾದ ವ್ಯಸನಕ್ಕೆ ಒಳಗಾಗುತ್ತಾರೆ.

*ನಿಮ್ಮಲ್ಲಿ ಚಿಕಿತ್ಸೆ ಪಡೆದವರು ಈವರೆಗೂ ಎಷ್ಟು ಮಂದಿ ಚಟದಿಂದ ವಿಮುಕ್ತರಾಗಿದ್ದಾರೆ?

ನಿಮಾನ್ಸ್‌ನಲ್ಲಿ ಅಡಿಕ್ಷನ್‌ ಸೆಂಟರ್‌ 1992ರಲ್ಲಿ ಪ್ರಾರಂಭವಾಯಿತು. ನಿಮಾನ್ಸ್‌ನಲ್ಲಿ ವರ್ಷಕ್ಕೆ ಸುಮಾರು 32-35 ಸಾವಿರ ಮಂದಿ ಚಿಕಿತ್ಸೆಗೆ ಬರುತ್ತಾರೆ. ಅದರಲ್ಲಿ 4-5 ಸಾವಿರ ಹೊಸ ರೋಗಿಗಳು ಇರುತ್ತಾರೆ. ಸುಮಾರು 30 ಸಾವಿರ ಮಂದಿ ಹಳೆಯ ರೋಗಿಗಳು ಇರುತ್ತಾರೆ. 2016ರಲ್ಲಿ 20 ಸಾವಿರ ರೋಗಿಗಳು ಬರುತ್ತಿದ್ದರು. ಇದೀಗ 32-35 ಸಾವಿರದಷ್ಟು ರೋಗಿಗಳು ಬರುತ್ತಿದ್ದಾರೆ. ಒಪಿಡಿಯಲ್ಲಿ 200-250 ರೋಗಿಗಳಿರುತ್ತಾರೆ.

*ಡ್ರಗ್ಸ್ ಚಟದಿಂದ ಹೊರಬಂದವರು ಮತ್ತೆ ಡ್ರಗ್ಸ್ ಸೇವಿಸಿದರೆ ಅವರಿಗೆ ಯಾವ ರೀತಿ ಚಿಕಿತ್ಸೆ ನೀಡುತ್ತೀರಾ?

ಸಕ್ಕರೆ ಕಾಯಿಲೆ ಬಂದವರಿಗೆ ವೈದ್ಯರು ಸಿಹಿ ತಿನಿಸಿನಿಂದ ದೂರವಿರಿ ಅಂತ ವೈದ್ಯರು ಹೇಳುತ್ತಾರೆ. ಆದರೂ ಶೇ.60 ಮಂದಿ ಸಿಹಿ ಸೇವಿಸುತ್ತಾರೆ. ಸಿಹಿ ಕೂಡ ಒಂದು ರೀತಿಯಲ್ಲಿ ವ್ಯಸನದಂತೆ. ಅದೇ ರೀತಿ ವ್ಯಸನಿಗಳು ಕೂಡ ಕೆಲ ಬಾರಿ ಆಗೊಮ್ಮೆ, ಈಗೊಮ್ಮೆ ಡ್ರಗ್ಸ್ ಸೇವಿಸಿ ಬಿಡುತ್ತಾರೆ. ಅಂಥವರಿಗೆ ಬೇರೆ ರೀತಿಯ ಚಿಕಿತ್ಸೆ ನೀಡಲಾಗುತ್ತದೆ. ಜತೆಗೆ ಕೌನ್ಸೆಲಿಂಗ್‌ ಕೂಡ ನೀಡಲಾಗುತ್ತದೆ.

*ಡ್ರಗ್ಸ್ ತಡೆಗಟ್ಟಲು ಪೊಲೀಸರು ಏನು ಮಾಡಬೇಕು?

ಯುವಕರೇ ಡ್ರಗ್‌ ಪೆಡ್ಲರ್‌ಗಳ ಗುರಿ. ಹಾಗಾಗಿಯೇ ಹೆಚ್ಚಾಗಿ ಶಾಲಾ-ಕಾಲೇಜು ಬಳಿ ಡ್ರಗ್ಸ್ ಮಾರಾಟ ಮಾಡುತ್ತಾರೆ. ಡ್ರಗ್ಸ್ ಬಳಕೆ ಕಡಿಮೆ ಮಾಡಲು ಎರಡು ಮಾರ್ಗಗಳಿವೆ. ಒಂದು ಡ್ರಗ್ಸ್ ಸರಬರಾಜಿಗೇ ಕಡಿವಾಣ ಹಾಕುವುದು. ಇದು ಪೊಲೀಸರ ಕೆಲಸ. ಎರಡನೆಯದು ಡ್ರಗ್ಸ್‌ ಬೇಡಿಕೆ ಹೆಚ್ಚಾಗದಂತೆ ನೋಡಿಕೊಳ್ಳುವುದು. ಅಂದರೆ ಡ್ರಗ್ಸ್‌ ವ್ಯಸನಿಗಳನ್ನು ಅದರಿಂದ ದೂರವಿಡುವುದು. ಇದು ವೈದ್ಯರ ಕೆಲಸ.

*ಡ್ರಗ್ಸ್ ಹಾವಳಿ ತಡೆಗಟ್ಟಲು ಯಾವ ರೀತಿ ಜಾಗೃತಿ ಮೂಡಿಸಬೇಕು?

ಶಾಲಾ, ಕಾಲೇಜುಗಳಲ್ಲಿ ಡ್ರಗ್ಸ್ ಬಗ್ಗೆ ಹೆಚ್ಚು ಚರ್ಚೆಗಳು ಆಗಬೇಕು. ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡಬೇಕು. ನ್ಯೂರೋ ಡೆವಲಪ್‌ಮೆಂಟಲ್‌ ಸಮಸ್ಯೆ ಇರುವವರನ್ನು ಗುರುತಿಸಬೇಕು. ಅಂಥವರ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು.