ಹೂವು ಹಾಕದಂತೆ ಫರ್ಮಾನು ಹೊರಡಿಸಿದ್ದ ಆಯೋಜಕರು ವೇದಿಕೆಗೆ ಹೂವಿನ ಅಲಂಕಾರ ಮಾಡಿದ್ದನ್ನು ಕಂಡು ಕೆಂಡಾಮಂಡಲಗೊಂಡರು. ಹೂವು ಹಾಕದಂತೆ ಹೇಳಿದ್ದೆ. ಆದರೂ ಹಾಕಿದ್ದು ಯಾರು ಎಂದು ಬುಸಗುಡಲಾರಂಭಿಸಿದರು. ಇದನ್ನು ನೋಡಿದ ಹೂವಿನ ಅಲಂಕಾರ ಮಾಡಿದ ಹುಡುಗರು ಯಾರಿಗೂ ಕಾಣದಂತೆ ಅಲ್ಲಿಂದ ಮಾಯ ಆಗಿದ್ದರು.
ಒಬ್ಬರು ಹೂವಿನಿಂದ ಅಲಂಕರಿಸಬೇಡ ಎಂದರೆ ಮತ್ತೊಬ್ಬರು ಬೇಗ ಬೇಗ ಅಲಂಕರಿಸಿ ಎಂದಾಗ, ಪಾಪ, ಹೂವಿನ ಬುಟ್ಟಿ ಕೈಯಲ್ಲಿ ಹಿಡಿದುಕೊಂಡು ನಿಂತ ಹುಡುಗರಿಗೆ ತಲೆ ಕೆರೆದುಕೊಳ್ಳುವ ಸ್ಥಿತಿ. ಯಾರ ಮಾತು ಕೇಳಬೇಕು, ಯಾರ ಮಾತು ಬಿಡಬೇಕು ಎಂಬ ಗೊಂದಲ ಮೂಡಿದರೆ ಹುಡುಗರದ್ದು ಏನೂ ತಪ್ಪಿಲ್ಲ ಬಿಡಿ.
ಜನಪರ ಸಿದ್ಧಾಂತ ಪ್ರತಿಪಾದಿಸುವವರ ಸಮಾಜವಾದಿ ಕಾರ್ಯಕ್ರಮ
ಯಾಕೆಂದರೆ ಅದು, ಸರಳತೆ, ಸಮಾನತೆ ಮುಂತಾದ ಜನಪರ ಸಿದ್ಧಾಂತ ಪ್ರತಿಪಾದಿಸುವವರ ಸಮಾಜವಾದಿ ಕಾರ್ಯಕ್ರಮ. ಇಷ್ಟಕ್ಕೂ ಹುಡುಗರು ಈ ರೀತಿ ತಲೆ ಕೆರೆದುಕೊಳ್ಳುವಂತಹ ಪ್ರಸಂಗ ನಡೆದಿದ್ದು ರಾಜಧಾನಿ ಬೆಂಗಳೂರಿನಲ್ಲಿ.
ಇತ್ತೀಚೆಗೆ ದಕ್ಷಿಣ ಭಾರತ ಸಮಾಜವಾದಿ ಸಮ್ಮೇಳನ ಆಯೋಜಿಸಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾ. ಸುದರ್ಶನ ರೆಡ್ಡಿ, ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ್ ಸೇರಿ ಬೇರೆ ರಾಜ್ಯಗಳ ಘಟಾನುಘಟಿ ಸಮಾಜವಾದಿ ನಾಯಕರನ್ನು ಆಹ್ವಾನಿಸಲಾಗಿತ್ತು.
ಕಾರ್ಯಕ್ರಮ ಆರಂಭಕ್ಕೂ ಮುನ್ನ ಆಯೋಜಕರು ವೇದಿಕೆ ಸಿದ್ಧಪಡಿಸಲು ಮುಂದಾಗಿದ್ದರು. ವೇದಿಕೆ ಮೇಲೆ ಒಂದೇ ರೀತಿಯ ಖುರ್ಚಿಗಳನ್ನು ಹಾಕಲಾಗಿತ್ತು. ತೆಂಗಿನ ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲು ಸಜ್ಜುಗೊಳಿಸಲಾಗಿತ್ತು. ಜತೆಗೆ ವೇದಿಕೆಯನ್ನು ಹೂವಿನಿಂದ ಅಲಂಕರಿಸಲು ಹುಡುಗರು ಸಿದ್ಧತೆ ಮಾಡುತ್ತಿದ್ದರು..
ಅಷ್ಟರಲ್ಲೇ ಆಯೋಜಕರೊಬ್ಬರು ಬಂದು ‘ಇದು ಸಮಾಜವಾದಿಗಳ ಕಾರ್ಯಕ್ರಮ. ಇಲ್ಲಿ ಹೂವಿನ ಅಲಂಕಾರದಂತಹ ಆಡಂಬರ ಬೇಡ’ ಎಂದು ಫರ್ಮಾನು ಹೊರಡಿಸಿ ಅಲ್ಲಿಂದ ಹೊರಟು ಹೋದರು. ಹೂವು ತಂದಿದ್ದ ಹುಡುಗರಿಗೆ ಕಾರ್ಯಕ್ರಮದ ವೇದಿಕೆಯನ್ನು ಅಲಂಕರಿಸುವುದು ಮಾತ್ರ ಗೊತ್ತು. ಈ ‘ಸಮಾಜವಾದಿ’ ಕಾರ್ಯಕ್ರಮದಲ್ಲಿ ಹೂವಿನ ಅಲಂಕಾರ ಮಾಡಬಾರದು ಎಂದು ಅವರಿಗೆ ಏನು ಗೊತ್ತು?
ಇಷ್ಟು ಹೇಳಿದ ಮೇಲೆ ಏನು ಮಾಡಬೇಕು ಎಂದು ತೋಚದೆ ಹುಡುಗರು ನಿಂತು ಕೊಂಡಿದ್ದರು. ಅಷ್ಟರಲ್ಲಿ ಮತ್ತೊಬ್ಬ ಆಯೋಜಕರು ಹೂವು ತಂದಿದ್ದವರಿಗೆ ಗದರಿ, ‘ಏನು ಮಾಡ್ತಿದ್ದೀರಪ್ಪ. ಬೇಗ ಬೇಗ ಹೂವಿನ ಹಾರವನ್ನು ವೇದಿಕೆ ಮುಂಭಾಗ ಹಾಕಿ ಅಲಂಕರಿಸಿ’ ಎಂದು ಆದೇಶಿಸಿದರು. ಇದರಿಂದ ಗಲಿಬಿಲಿಗೊಂಡ ಹುಡುಗರು ಆಗಿದ್ದಾಗಲಿ ಹೂವು ತಂದಿದ್ದಾಗಿದೆ. ಇದನ್ನು ಬಳಸದಿದ್ದರೆ ಹಾಳಾಗುತ್ತದೆ, ವೇದಿಕೆಗೆ ಹಾಕಿಯೇ ಬಿಡುವ ಎಂದು ತರಾತುರಿಯಲ್ಲಿ ವೇದಿಕೆ ಮುಂಭಾಗ ಹೂವಿನ ಅಲಂಕಾರ ಮಾಡಿಯೇ ಬಿಟ್ಟರು.
ಅದಾದ ನಂತರ ಹೂವು ಹಾಕದಂತೆ ಫರ್ಮಾನು ಹೊರಡಿಸಿದ್ದ ಆಯೋಜಕರು ವೇದಿಕೆಗೆ ಹೂವನ್ನು ಹಾಕಿದ್ದು ಕಂಡು ಕೆಂಡಾಮಂಡಲಗೊಂಡರು. ಹೂವು ಹಾಕದಂತೆ ಹೇಳಿದ್ದೆ. ಆದರೂ ಹಾಕಿದ್ದು ಯಾರು ಎಂದು ಬುಸಗುಡಲಾರಂಭಿಸಿದರು. ಇದನ್ನು ನೋಡಿದ ಹೂವಿನ ಅಲಂಕಾರ ಮಾಡಿದ ಹುಡುಗರು ಯಾರಿಗೂ ಕಾಣದಂತೆ ಅಲ್ಲಿಂದ ಮಾಯ ಆಗಿದ್ದರು.
ಭೀಮಣ್ಣ ಖಂಡ್ರೆ ಡ್ರೆಸ್‌ಗೆ ಸಚಿವರ ತಲೆ ಜೋಡಿಸಿದ ಫ್ಲೆಕ್ಸ್ ಮುದ್ರಕ
ಟಿಪ್ ಟಾಪ್ ಡ್ರೆಸ್, ಹೊಳೆಯುವ ಶೂ, ಧರಿಸಿರುವ ಬಟ್ಟೆಯ ಬಣ್ಣ ಸೇಮ್, ಆದರೆ ತಲೆ ಮಾತ್ರ ಬೇರೆಯದ್ದು, ಅದು ಒಬ್ಬರದ್ದಲ್ಲ, ಇಬ್ಬರು ಸಚಿವರು ನಿಂತುಕೊಂಡಿರುವ ಫೋಟೋಗಳು ಫ್ಲೆಕ್ಸ್‌ನಲ್ಲಿ ರಾರಾಜಿಸುತ್ತಿದ್ದುದನ್ನು ನೋಡಿದ ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ಅವರಿಗೆ ಇಬ್ಬರು ಯಾವಾಗ ಈ ರೀತಿ ಡ್ರೆಸ್ ಹಾಕಿಕೊಂಡಿದ್ದಾರೆಂದು ಅಚ್ಚರಿಯಾಗಿತ್ತಂತೆ!
ಕೊನೆಗೆ ಈ ಇಬ್ಬರು ಒಂದೇ ರೀತಿಯ ಫೋಟೊಗಳು ಫ್ಲೆಕ್ಸ್‌ನಲ್ಲಿ ಬರುವಂತೆ ಮಾಡಿದ್ದು, ಫ್ಲೆಕ್ಸ್ ಪ್ರಿಂಟ್ ಮಾಡಿದ ಮಹಾಶಯ ಎಂಬ ವಿಷಯ ಕೇಳಿ ಎಸ್.ಎಂ. ಕೃಷ್ಣ ಮನಸಾರೆ ನಕ್ಕು ಬಿಟ್ಟರಂತೆ. ಸುಮಾರು 20 ವರ್ಷಗಳ ಹಿಂದೆ ನಡೆದಿರುವ ಈ ಘಟನೆ ಸ್ಮರಿಸಿದವರು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ.
ವಿಧಾನ ಪರಿಷತ್ತಿನಲ್ಲಿ ಅಧಿವೇಶನದ ಮೊದಲ ದಿನ ಶತಾಯುಷಿ, ಹಿರಿಯ ಕಾಂಗ್ರೆಸ್ ಮುಖಂಡ ಭೀಮಣ್ಣ ಖಂಡ್ರೆ ಅವರಿಗೆ ಸಂತಾಪ ಸೂಚಿಸಿ ಮಾತನಾಡಿದ ಛಲವಾದಿ ಅವರು, ಖಂಡ್ರೆ ಅವರ ಶಿಸ್ತು. ಜೀವನದುದ್ದಕ್ಕೂ ಖಾದಿ ಬಟ್ಟೆ ಧರಿಸಿದ್ದು, ಅಡಿಯಿಂದ ಮುಡಿವರೆಗೆ ಟಿಪ್-ಟಾಪ್ ಡ್ರೆಸ್ ಮಾಡುತ್ತಿದ್ದನ್ನು ವಿವರಿಸುತ್ತಾ... ಆಗಿನ್ನೂ ಹೊಸದಾಗಿ ಫ್ಲೆಕ್ಸ್ ಬಳಕೆ ಆರಂಭವಾಗಿತ್ತು. ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ಅವರನ್ನು ಕಾರ್ಯಕ್ರಮವೊಂದಕ್ಕೆ ಆಹ್ವಾನಿಸಲಾಗಿತ್ತು. ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಇಬ್ಬರು ಸಚಿವರು ನಿಂತುಕೊಂಡಿರುವ ಫೋಟೋಗಳ ಬೃಹತ್ ಫ್ಲೆಕ್ಸ್‌ಗಳಲ್ಲಿ ಗಮನ ಸೆಳೆಯುತ್ತಿತ್ತು. ಅದನ್ನು ನೋಡಿದ ಎಸ್.ಎಂ.ಕೃಷ್ಣ ಅವರು, ಈ ಇಬ್ಬರು ಎಂದೂ ಈ ರೀತಿ ಟಿಪ್-ಟಾಪ್ ಡ್ರೆಸ್ ಹಾಕಿಯೇ ಕೊಂಡಿಲ್ಲ. ಯಾವಾಗ ಈ ರೀತಿ ಡ್ರೆಸ್ ಹಾಕಿಕೊಳ್ಳಲು ಆರಂಭಿಸಿದರೆಂದು ಪಕ್ಕದಲ್ಲಿದ್ದ ಮುಖಂಡನ್ನು ಕೇಳಿದರಂತೆ.
ಆಗ ಮುಖಂಡರು ಸಾರ್... ಟಿಪ್-ಟಾಪ್ ಡ್ರೆಸ್ ಭೀಮಣ್ಣ ಖಂಡ್ರೆ ಅವರದ್ದು, ತಲೆ ಮಾತ್ರ ಈ ಇಬ್ಬರು ಸಚಿವರದ್ದು, ಇದೆಲ್ಲ ಫ್ಲೆಕ್ಸ್ ತಯಾರಕನ ಕರಾಮತ್ತು ಎಂದಾಗ ಎಂ.ಎಸ್. ಕೃಷ್ಣ ಗೊಳ್ಳೆಂದು ನಕ್ಕು ಮುಂದೆ ಸಾಗಿದರೆಂದು ಛಲವಾದಿ ಅವರು ಹೇಳಿದಾಗ, ನಗುವ ಸರದಿ ಸದನದಲ್ಲಿದ್ದವರದ್ದಾಗಿತ್ತು.
-ಗಿರೀಶ್ ಗರಗ
-ಚಂದ್ರಮೌಳಿ ಎಂ.ಆರ್.


