Asianet Suvarna News Asianet Suvarna News

ಕುವೆಂಪು ರಾಮಾಯಣ ದರ್ಶನದ ಮಳೆಗಾಲದ ವರ್ಷನ್!

ಮಲೆನಾಡು ಹಾಗೂ ಮಳೆ ಇಲ್ಲದೇ ಕುವೆಂಪು ಕಾವ್ಯ ಪರಿಪೂರ್ಣವಾಗುವುದೇ ಇಲ್ಲ. ಜ್ಞಾನಪೀಠ ಪುರಸ್ಕೃತ ಮಹಾಕಾವ್ಯ ಶ್ರೀ ರಾಮಾಯಣ ದರ್ಶನಂನಲ್ಲೂ ಕುವೆಂಪು ಮಳೆಯನ್ನು ವರ್ಣಿಸಿದ್ದು ಹೀಗೆ.

Jnanapeeth award winning epic ramayana darshanam of kuvempu and rain
Author
First Published Jun 28, 2024, 4:15 PM IST

- ವಿಹಂಗಮ

ಮಳೆಗಾಲ ಎಂದರೆ ನೆನಪಾಗುವುದು ಬಾಲ್ಯದ ಮಲೆನಾಡಿನ ಎಡೆಬಿಡದ ಮುಂಗಾರು; ತಪ್ಪಿದರೆ ಅದೇ ಮೈಯಾಂತು ಬಂದಂತೆ 'ಶ್ರೀ ರಾಮಾಯಣ ದರ್ಶನಂ' ಕೃತಿಯಲ್ಲಿ ಕುವೆಂಪು ಕಾಣಿಸಿದ ಕಾರ್ಗಾಲ. ಅದು ಅಂತಿಂಥ ಕಾವಳದ ಕಾಲವಲ್ಲ. ಮಲೆಗಳಲ್ಲಿ ಮದುಮಗಳು, ಕಾನೂರು ಕಾದಂಬರಿಗಳಲ್ಲೂ  ಅವರ 'ಕದ್ದಿಂಗಳು ಕಗ್ಗತ್ತಲು' ಮೊದಲಾದ ಪದ್ಯಗಳಲ್ಲೂ  ಅದರ ಝಲಕ್ ಇದೆ. ರಾಮಾಯಣ ದರ್ಶನಂನಲ್ಲಿ ಕತೆಯ ಭಾಗವಾಗಿ, ರಾಮನ ಮನಸ್ಸಿನ ಭಾವರೂಪಕವಾಗಿ, ಸೀತಾವಿರಹದ ವಸ್ತುಪ್ರತಿರೂಪವಾಗಿ ಅದು ಬರುತ್ತದೆ. 

ಅದು ಶುರುವಾಗುವುದು ಹೀಗೆ: ವನವಾಸದ ವೇಳೆ ಸೀತೆಯನ್ನು ಕಳೆದುಕೊಂಡ ರಾಮ ಪಂಚವಟಿಯಿಂದ ಮುಂದೊತ್ತಿ ಬಂದು ಕಿಷ್ಕಿಂಧೆಯಲ್ಲಿ ಸುಗ್ರೀವನ ಸಖ್ಯ ಬೆಳೆಸಿ, ವಾಲಿವಧೆ ಮಾಡುತ್ತಾನೆ. ಅಷ್ಟರಲ್ಲಿ ಮಳೆಗಾಲ ಸಮೀಪಿಸುತ್ತದೆ. ವನವಾಸವಾದ್ದರಿಂದ ಅವನಿಗೆ ಪುರಪ್ರವೇಶವಿಲ್ಲ. ಹೀಗಾಗಿ ಪ್ರಸ್ರವಣ ಪರ್ವತದ ಗುಹೆಯೊಂದರಲ್ಲಿ ತಂಗುತ್ತಾನೆ. ಮುಂಗಾರಿಗಾಗಿ ತಿರೆ ಬಾಯಾರಿದೆ- ಸೀತೆಯ ವಿರಹತಪ್ತ ರಾಮನ ಹಾಗೆ. ದಿಗಂತದಂಚಲ್ಲಿ ಮೇಘಸ್ತೋಮ ಮೇಲ್ಮೇಲೆದ್ದು ಬರುತ್ತದೆ- 

ಸೀತೆಗೆ ರಾಮನಂತೆ, ಮುಂಗಾರ್ಗೆ ತಿರೆ
ಬಾಯಾರುತಿರೆ, ಓ ಆ ದಿಗಂತದೆಡೆ, ವರದಂತೆವೋಲ್
ಕಾಣಿಸಿತು ವರ್ಷಶಾಪಂ, ರವಿಸಂಗಿ, ಶರಧಿಶಿಶು,
ನೀರದಸ್ತೂಪನೀಲಂ, ಶಿವನ ಜಟೆಯಂತೆವೋಲ್
ಶಿಖರಾಕೃತಿಯಿನುಣ್ಮಿ, ಮೇಲೆಮೇಲಕ್ಕೇರ್ದು
ಶೈಲಾಕೃತಿಯಿನುರ್ಬ್ಬಿ, ತೆಕ್ಕನೆ ಕದದ್ದತ್ತು.
ಕುಣಿವ ಕಾಳಿಯ ಕರಿಯ ಮುಡಿ ಬಿರ್ಚ್ಚಿ ಪರ್ವುವೋಲ್,
ಸಂಜೆಬಾನಂ ಮುಸುಕಿ ಮುಚ್ಚಿ. ಮೇಣ್ ಕಾರ್ಗಾಳಿ
ಬೀಸಿದುದು ಮಲೆಯ ಮಂಡೆಯ ಕಾಡುಗೂದಲಂ
ಪಿಡಿದಲುಬಿ ತೂಗಿ, ನೋವಿಂಗೊರಲಿದತ್ತಡವಿ :
ಹಳೆಮರಗಳುರುಳಿ ; ಮರಕೆ ಮರವುಜ್ಜಿ ; ಕೊಂಬೆಗೆ
ಕೊಂಬೆ ತೀಡಿ ; ಮಳೆಯೊಳ್ ಬಿದಿರು ಕರ್ಕಶವುಲಿಯ
ಕೀರಿ, ಸಿಡಿರೋಷದಿಂ ಕಿಡಿಯಿಡುವ ಮಸಿನವಿರ
ಪುರ್ಬ್ಬಿನಾ ಕಾರ ರಾಕ್ಷಸಿಯಕ್ಷಿಯಲೆವಂತೆ

ಈ ಮುಂಗಾರು 'ವರ್ಷಶಾಪಂ'. ವಿರಹಾಗ್ನಿದಗ್ಧ ರಾಮನಂತಃಕರಣದ ಕ್ಷೋಭೆಯಂತೆ ಇಲ್ಲಿ ಕಾಣುವುದೆಲ್ಲ ಕರಾಳ ಪ್ರತಿಮೆಗಳು- ತಲೆಕುಚ್ಚು ಹಿಡಿದಲುಗಿಸುವ, ನೋವಿಗೆ ಒರಲುವ, ಕರ್ಕಶ ಕೀರುವ ಬಿದುರಿನ, ಕಡುಗಪ್ಪುಗೂದಲಿನ ಹುಬ್ಬಿನ ಯಕ್ಷಿರಾಕ್ಷಸಿ ಇತ್ಯಾದಿ. ಮಳೆ ಶುರುವಾಗುತ್ತದೆ:

ಮಿಂಚಿತು ಮುಗಿಲಿನಂಚು, ಸಂಘಟ್ಟಣೆಗೆ ಸಿಡಿಲ್
ಗುಡುಗಿದವು ಕಾರ್ಗಲ್ ಮುಗಿಲ್‌ಬಂಡೆ, ತೋರ ಹನಿ
ಮೇಣಾಲಿಕಲ್ ಕವಣೆವೀಸಿದುವು. ಬಿಸಿಲುಡುಗಿ,
ದೂಳುಂಡೆಗಟ್ಟಿ, ಮಣ್‌ತೊಯ್ದು, ಕಮ್ಮನೆ ಸೊಗಸಿ
ತೀಡಿದುದು ನೆಲಗಂಪು ನಲ್, ಝಣನ್ನೂಪುರದ
ಸುಸ್ವರದ ಮಾಧುರ್ಯದಿಂ ಕನತ್ಕಾಂತಿಯಿಂ
ಝರದ ಝಲ್ಲರಿಯ ಜವನಿಕೆಯಾಂತು ನರ್ತಿಸುವ
ಯೌವನಾ ಯವನಿಯ ಕರದ ಪೊಂಜುರಿಗೆಯಂತೆ
ಸುಮನೋಜ್ಞಮಾದುದಾ ಭೀಷ್ಮ ಸೌಂದರ್ಯದಾ
ಮುಂಗಾರ್ ಮೊದಲ್.

ಹಿಂಗಿದುದು ಬಡತನಂ ತೊರೆಗೆ,
ಮೊಳೆತುದು ಪಸುರ್‌ ತಿರೆಗೆ, ಪೀತಾಂಬರಕೆ
ಜರತಾರಿಯೆರಚುವೋಲಂತೆ ಕಂಗೊಳಿಸಿದುದು
ಹಸುರು ಗರುಕೆಯ ಪಚ್ಚೆವಾಸಗೆಯೊಳುದುರಿರ್ದ
ಪೂವಳದಿ ಪೊನ್, ಬಂಡೆಗಲ್ ಬಿರುಕಿನಿಂದಾಸೆ
ಕಣ್ದೆರೆಯುವಂತೆ ತಲೆಯೆತ್ತಿದುದು ಸೊಂಪುವುಲ್.
ಮಿಂದು ನಲಿದುದು ನಗಂ : ಮೇದು ತಣಿದುದು ಮಿಗಂ ;
ಗರಿಗೊಂಡೆರಂಕೆಗೆದರುತೆ ಹಾಡಿ ಹಾರಾಡಿ
ಹಣ್ಣುಂಡು ಹಿಗ್ಗಿದುದು ಹಕ್ಕಿಯ ಮರಿಯ ಸೊಗಂ.
ಮಳೆ ಹಿಡಿದುದತಿಥಿಯಾಗೈತಂದವಂ ಮನೆಗೆ
ತನ್ನೊಡೆತನವನೊಡ್ಡಿ ನಿಲ್ವಂತೆ. 

ಮಳೆ ಹಿಡಿದದ್ದು ಮನೆಗೆ ಬಂದ ಅತಿಥಿ ಮನೆಗೇ ಒಡೆತನವನ್ನೊಡ್ಡಿದಂತಾಯ್ತು- ಭಿಕ್ಷೆ ಬೇಡಲು ಬಂದವನು ಗೃಹಿಣಿಯನ್ನೇ ಅಪಹರಿಸಿದಂತೆ! ಇಲ್ಲಿಂದ ರಾಮನ ಏಕಾಂತದುರಿಯ, ಭಗ್ನಮಾನಸದ ದುರ್ದಿನಗಳು ಆರಂಭವಾಗುತ್ತವೆ:

ದುರ್ದಿನಂ ದ್ರವರೂಪಿಯಾಗಿ ಕರಕರೆಯ ಕರೆದುದನಿಶಂ
ದೂರವಾದುದು ದಿನಪದರ್ಶನಂ, 

(ದಿನಪಕುಲಜನಿಗೆ ದಿನಪದರ್ಶನ ದುರ್ಲಭವಾಯಿತು)

ಕವಿದುದಯ್
ಕರ್ಮುಗಿಲ ಮರ್ಬ್ಬಿನ ಮಂಕು ಪಗಲಮ್. ಇರುಳಂ
ಕರುಳನಿರಿದುದು ಕೀಟಕೋಟಿಯ ಕಂಠವಿಕೃತಿ.

ಸುಖದ ದಿನಗಳಲ್ಲಿ ಜೋಗುಳವೆನಿಸಬಹುದಾಗಿದ್ದ ಇರುಳ ಕೀಟಗಳ ದನಿಯೀಗ ಕಂಠವಿಕೃತಿ. ಇಲ್ಲಿಂದಾಚೆ ಮಲೆನಾಡಿನವರಿಗೆ ಸುಲಭವಾಗಿ ಅರ್ಥವಾಗಬಹುದಾದ ಚಿತ್ರಗಳು. ಗಟ್ಟಿ ಹಿಡಿದು ಸುರಿಯುವ ಮಳೆಗೆ ಮುದುಡುವ ಜೀವರಾಜಿಯ ನೋಟಗಳು.

ಗರಿ ತೊಯ್ದು ಮೆಯ್ದಂಟಿ ಕಿರಿಗೊಂಡ ಗಾತ್ರದಿಂ
ಮುದುರಿದೊದ್ದೆಯ ಮುದ್ದೆಯಾಗಿ ಕುಗುರಿತು ಹಕ್ಕಿ
ಹೆಗ್ಗೊಂಬನೇರಿ, ಕಾಡಂಚಿನಾ ಪಸಲೆಯಂ
ನಿಲ್ವಿರ್ಕೆ ಗೈದು, ರೋಮಂದೊಯ್ದಜಿನದಿಂದ
ಕರ್ಪು ಬಣ್ಣಂಬಡೆದವೋಲಿರ್ದು, ಹರಹರೆಯ
ಕೊಂಬಿನಿಂದಿಂಬೆಸೆವ ಮಂಡೆಯ ಮೊಗವನಿಳುಹಿ,
ಜಡಿಯ ಜಿನುಗಿಗೆ ರೋಸಿ, ತನ್ನ ಹಿಂಡಿನ ನಡುವೆ
ನಿಂದುದು ಮಳೆಗೆ ಮಲೆತು, ಕೆಸರು ಮುಚ್ಚಿದ ಖುರದ
ಕಾಲ್ಗಳ ಮಿಗದ ಹೋರಿ.

ಕಲ್ಲರೆಯನೇರಿದುದು
ಕಟ್ಟಿರುಂಪೆಯ ಪೀಡೆಗಾರದ ಮೊಲಂ, ಜಿಗಣೆ,
ನುಸಿ, ಹನಿಗಳಿಗೆ ಹೆದರಿ ಹಳುವನುಳಿಯುತ್ತೆ ಹುಲಿ
ಹಳು ಬೆಳೆಯದತ್ತರದ ಮಲೆಯ ನೆತ್ತಿಯನರಸಿ
ಚರಿಸಿದುದು. ಜೀರೆಂಬ ಕೀ‌ದನಿಯ ಚೀ‌ರ್‌ಚೀರಿ
ಪಗಲಿರುಳ ಗೋಳಗರೆದುದಯ್ ಝಿಲ್ಲಿಕಾ ಸೇನೆ :
ಬೇಸರದೇಕನಾದಮಂ ಓ ಬೇಸರಿಲ್ಲದೆಯೆ
ಬಾರಿಸುತನವರತಂ ಬಡಿದುದು ಜಡಿಯ ಸೋನೆ !

ಹೀಗೆ ಸಾಮಾನ್ಯರಿಗೂ ಮಂಕು ಹಿಡಿಸುವ ಕಾರ್ಗಾಲ, ಜೀವನದ ಗಾಢ ವಿಷಣ್ಣಕಾಲದಲ್ಲಿರುವವನಿಗೆ ಇನ್ನು ಹೇಗಿರಬಹುದು. ಒಂದೊಂದೇ ಮಾಸ ಯಾವಾಗ ಮುಗಿಯುತ್ತದೆ, ಯಾವಾಗ ಬಿಸಿಲೇಳುತ್ತದೆ ಎಂದು ಕಾಯುವ ಕರ್ಮ.

ಕಳೆದುದಯ್ ಜೇಷ್ಠಮಾಸಂ. ತೊಲಗಿತಾಷಾಢಮುಂ.
ತೀರ್ದುದಾ ಶ್ರಾವಣಂ. ಭಾದ್ರಪದ ದೀರ್ಘಮುಂ,
ಶಿವಶಿವಾ, ಕೊನೆಮುಟ್ಟಿದತ್ತೆಂತೊ ! ದಾಶರಥಿ ತಾಂ
ಮಾಲ್ಯವತ್ ಪರ್ವತ ಗುಹಾಶ್ರಮದಿ ಕೇಳ್, ಶ್ರಮದಿಂದ
ನೂಂಕುತಿರ್ದನ್ ಮಳೆಯ ಕಾಲಮಂ, ಕಾಲಮಂ
ಸತಿಯ ಚಿಂತೆಗೆ ಸಮನ್ವಯಿಸಿ, ಬೈಗು ಬೆಳಗ
ಮೇಣ್ ಪಗಲಿರುಳಂ ದಹಿಸಿತಗಲಿಕೆವೆಂಕೆ :
ಪಡಿದೋರ್ದುದಾ ವಿರಹಮಿಂದ್ರಗೋಪಂಗಳಿಂ ಮೇಣ್
ಮಿಂಚುಂಬುಳುಗಳಿಂ; ಇರುಳ್, ಅಣ್ಣತಮ್ಮದಿ‌ರ್
ಗವಿಯೊಳ್ ಮಲಗಿ, ನಿದ್ದೆ ಬಾರದಿರೆ, ನುಡಿಯುವರ್

ಹಗಲು ಕಾಮನಬಿಲ್ಲುಗಳು ವಿರಹವನ್ನು ವೆಗ್ಗಳಿಸುವುವು. ಇರುಳು ಅಗಲಿಕೆ ಬೆಂಕಿ ದಹಿಸಿ ನಿದ್ದೆ ಬಾರದು. ಅಣ್ಣ ತಮ್ಮಂದಿರು ಕತ್ತಲನ್ನು ದಿಟ್ಟಿಸುತ್ತಾ ಮಾತನಾಡುವರು. ಮಾತಿನಲ್ಲಿ ಅಸ್ಪಷ್ಟ ಭವಿಷ್ಯದ ಚಿತ್ರ. 

ಕಡೆಯುವರ್ ತಮ್ಮ ಮುಂದಣ ಕಜ್ಜವಟ್ಟೆಯಂ.
ಕಾರಿರುಳ್‌. ಹೆಪ್ಪುಗಟ್ಟಿದ ಕಪ್ಪು, ಕಲ್ಲಂತೆವೋಲ್.
ಹೊರಗೆ, ಮಳೆ ಕರಕರೆಯ ಕರೆಯುತಿದೆ. ಕಪ್ಪೆ ಹುಳು
ಹಪ್ಪಟೆಯ ಕೊರಳ ಸಾವಿರ ಹಲ್ಲ ಗರಗಸಂ
ಗರ್ಗರನೆ ಕೊರೆಯುತಿದೆ ನಿಶೆಯ ನಿಶ್ಯಬ್ದತೆಯ
ಖರ್ಪರವನಾಲಿಸಿದ ಕಿವಿ ಮೂರ್ಛೆವೋಪಂತೆ :

ಸಹ್ಯಾದ್ರಿಯ ಇರುಳಮಳೆ ಎಂದರೆ ಕಪ್ಪೆ ಇತ್ಯಾದಿ ಕೀಟಕೋಟಿಯ ಘೋಷಗಳೂ ಸೇರಿದ ಸಹಸ್ರ ದಂತ ಗರಗಸದ ಕೊರೆತ! 

“ಏನ್ ವೃಷ್ಟಿ ಘೋಷಮಿದು, ಆಲಿಸಾ, ಸೌಮಿತ್ರಿ !
ಮಲೆ ಕಾಡು ನಾಡು ಬಾನ್ ಒಕ್ಕೊರಲೊಳೊಂದಾಗಿ
ಬಾಯಳಿದು ಬೊಬ್ಬಿರಿಯುತಿಪ್ಪಂತೆ ತೋರುತಿದೆ.
ಈ ಪ್ರಕೃತಿಯಾಟೋಪದೀ ಉಗ್ರತೆಯ ಮಧ್ಯೆ
ನಾವ್ ಮನುಜರತ್ಯಲ್ಪ ಕೃತಿ ! ನಮ್ಮಹಂಕಾರ
ರೋಗಕಿಂತಪ್ಪ ಬೃಹದುಗ್ರತಾ ಸಾನ್ನಿಧ್ಯಮೇ
ದಿವ್ಯ ಭೇಷಜಮೆಂಬುದೆನ್ನನುಭವಂ. ಇಲ್ಲಿ,
ಈ ಗರಡಿಯೊಳ್ ಸಾಧನೆಯನೆಸಗಿದಾತಂಗೆ
ದೊರೆಕೊಳ್ವುದೇನ್ ದುರ್ಲಭಂ ಪಾರ್ವತಸ್ಥಿರತೆ ?
ಸಾಕ್ಷಿಯದಕಿರ್ಪನಾಂಜನೇಯಂ !.."

ಆಗ ರಾಮನ ಮನದಲ್ಲಿ ಮೂಡುವ ಮೂರ್ತಿ ಆಂಜನೇಯ. ಇಂಥ ಪ್ರ‌ಕೃತಿಯಾಟೋಪದ ಬೃಹದುಗ್ರತಾಸಾನಿಧ್ಯವೇ ನಮ್ಮ ಅಹಂಕಾರಗಳು ಅಳಿಯಲು ಸೂಕ್ತ ಮದ್ದು. ಇಂಥ ಗರಡಿಯ ಸಾಧನೆಯಲ್ಲಿಯೇ ಹನುಮನಂಥ ಪರ್ವತಸ್ಥಿರ ವ್ಯಕ್ತಿತ್ವ ರೂಪುಗೊಂಡೀತು ಎಂಬ ಕಾಣ್ಕೆ ಅವನದು. ಆಮೇಲೆ ನಳ ನೀಲ ಮುಂತಾದ ವಾನರವೀರರ ಕುರಿತೂ ಮಾತಾಗುತ್ತದೆ. 

ಎಚ್.ಎಸ್.ವೆಂಕಟೇಶ ಮೂರ್ತಿ ಎಂಬ ರೂಪಕ ಕವಿಯ ಜ್ಞಾಪಕ ಚಿತ್ರಶಾಲೆ

ಆದರೆ ಮಳೆಗಾಲದ ಐದು ತಿಂಗಳು ಕಳೆಯುತ್ತ ಬಂದರೂ ಸುಗ್ರೀವನ ಸುಳಿವಿಲ್ಲ. ವಾನರವೀರರನ್ನು ಕರೆದುಕೊಂಡು ಬಂದು ಸೀತಾನ್ವೇಷಣೆಗೆ ನೆರವಾಗುತ್ತೇನೆ ಎಂದಿದ್ದ ಕಪಿವೀರನ ಸದ್ದಿಲ್ಲ. ಆತಂಕ ಒಳಗೊಳಗೇ ಮಡುಗಟ್ಟುತ್ತದೆ. ಮರೆತನೇನು? ಲಕ್ಷ್ಮಣ ಕೋಪದಿಂದ, ನಾನೇ ಹೋಗಿ ಸುಗ್ರೀವನ ಕಂಡು ಬರುವೆ ಎಂದು ಹೂಂಕರಿಸುತ್ತಾನೆ. ಆದರೆ ರಾಮನೇ ಅವನನ್ನು ಸುಮ್ಮನಿರಿಸುತ್ತಾನೆ. ಈ ಭಯಂಕರ ಮಳೆಯಲ್ಲಿ ಯಾರು ಎಲ್ಲಿ ಹೇಗೆ ಓಡಾಡಲು ಸಾಧ್ಯ? ಮಳೆ ಕಳೆದ ಮೇಲೆ ಬಾ ಎಂದು ನಾನೇ ಅವನಿಗೆ ಹೇಳಿದ್ದಾನೆ ಎನ್ನುತ್ತಾನೆ. ಅಷ್ಟರಲ್ಲಿ ಬಂತು ಅಶ್ವಯುಜ ಮಾಸ!

ನುಗ್ಗುತಿರ್ದ್ದತ್ತಾಶ್ವಯುಜ ವರ್ಷಾಶ್ವದಳದ
ಹೇಷಾರವದ ಘೋಷಂ !... ಆಲಿಸುತ್ತಿದ್ದಂತೆ,
ಅರಳಿದುವು ಕಣ್ಣಾಲಿ : ಘೋರಾಂಧಕಾರದಾ
ಸಾಗರದಿ ತೇಲಿ ಬಹ ಹನಿಮಿಂಚಿನಂತೆವೋಲ್,
ಮಿಂಚುಂಬುಳೊಂದೊಯ್ಯನೊಯ್ಯನೆಯೆ ಪೊಕ್ಕುದಾ
ಕಗ್ಗತ್ತಲೆಯ ಗವಿಗೆ, ತೇಲುತೀಜುತ ಮೆಲ್ಲ
ಮೆಲ್ಲನೆಯೆ ಹಾರಾಡಿ ನಲಿದಾಡಿತಲ್ಲಲ್ಲಿ,
ಮಿಂಚಿನ ಹನಿಯ ಚೆಲ್ಲಿ, ಮಿಂಚಿನ ಹನಿಯ ಸೋರ್ವ
ಮಿಂಚುಂಬನಿಯ ಪೋಲ್ವ ಮಿಂಚುಂಬುಳುವನಕ್ಷಿ
ಸೋಲ್ವಿನಂ ನೋಡಿ, ರಾಮನ ಕಣ್ಗೆ ಹನಿ ಮೂಡಿ,
ತೊಯ್ದತ್ತು ಕೆನ್ನೆ : ತೆಕ್ಕನೆ ತುಂಬಿದುದು ಶಾಂತಿ
ತನ್ನಾತ್ಮಮಂ ! ಮತ್ತೆಮತ್ತೆ ನೋಡಿದನದಂ.
ಸಾಮಾನ್ಯಮಂ, ಆ ಅನಿರ್ವಚನೀಯ ದೃಶ್ಯಮಂ !

ಕಗ್ಗತ್ತಲು ಕವಿದ ರಾಮನ ಬದುಕಿಗೆ ಭರವಸೆಯ ಬೆಳಕು ಬಂದುದು ಒಂದು ಸಣ್ಣ ಮಿಂಚುಹುಳದ ಮೂಲಕ! ವಾಲ್ಮೀಕಿಯಂಥ ಆದಿಕವಿಗೂ ಹೊಳೆಯದ ದೃಶ್ಯವೊಂದು ಮಲೆನಾಡಿನ ಈ ಕವಿಗೆ ಝಗ್ಗನೆ ಹೊಳೆದುಬಿಟ್ಟಿದೆ. ಕಾರ್ಗತ್ತಲಲ್ಲಿ ತಡಕಾಡುತ್ತಿರುವವನಿಗೆ ಅಶ್ವಯುಜ ಮಾಸದ ಮಳೆ ಇಳಿಯುತ್ತ ಬಂದ ಆ ರಾತ್ರಿಯಲ್ಲಿ ಗವಿಯೊಳಗೆ ಮೆಲ್ಲಮೆಲ್ಲನೆ ಹಾರಾಡುತ್ತ ಬಂದ ಮಿಂಚುಹುಳವೊಂದು ಆಸೆಯ ಹಣತೆಗೆ ಕಿಡಿಹಚ್ಚಿತು. ನೋಡಿದ ರಾಮನ ಕಣ್ಣು ಹನಿಗೂಡಿತು, ಆತ್ಮವನ್ನು ಶಾಂತಿ ತುಂಬಿತು. ಅನಿರ್ವಚನೀಯ ದೃಶ್ಯವನ್ನು ಮತ್ತೆ ಮತ್ತೆ ನೋಡಿದ, ಕೆನ್ನೆ ತೋಯಿಸಿಕೊಂಡ. 

ಕುಳ್ಳಿರ್ದ ಮಳೆಗಾಲಮೆದ್ದು ನಿಂತುದು ತುದಿಯ
ಕಾಲಿನಲಿ, ನೂಲ್‌ಸೋನೆಯಾ ತೆರೆಮರೆಯನೆತ್ತಲ್ಕೆ
ಶೈಲವರನಕೊ, ಕಾಣಿಸಿತ್ತಾತನೆರ್ದೆಗೊರಗಿ
ರಮಿಸಿರ್ದ ಕಾನನ ವಧೂ ಶ್ಯಾಮಲಾಂಬರಂ !

ಹಗಲಾಯಿತು. ನೂಲಿನಂತೆ ಸುರಿಯುತ್ತಿದ್ದ ಸೋನೆಮಳೆಯ ತೆರೆಯನ್ನು ಸರಿಸಿದಾಗ ಕಂಡದ್ದು ಮಹಾ ಪರ್ವತವೆಂಬ ವರ! ಅವನ ತೆಕ್ಕೆಗೆ ಒರಗಿದ ಹಸಿರು ವನರಾಜಿಯೆಂಬ ವಧು! ಹೆಂಡತಿಯನ್ನು ಕಳೆದುಕೊಂಡು ಪರಿತಪಿಸುತ್ತಿದ್ದ ರಾಮನಿಗೆ ಇಂಥ ಚೇತೋಹಾರಿ ದೃಶ್ಯ ಇನ್ನೊಂದು ಇದ್ದೀತೆ? 

ಲಂಬಮಾನಂ ಸೋರ್ವ ಮುತ್ತಿನ ಸರಗಳಂತೆ 
ಕಾವಿಯನುಳಿದ ಮಲೆಯ ತೊರೆಯ ನೀರ್‌ಬೀಳಗಳು
ಕಣ್‌ಸೆಳೆದುವಲ್ಲಲ್ಲಿ. 

ಅಬ್ಬರದ ಮಳೆಯಿಂದಾಗಿ ಮಣ್ಣುನೀರು ತುಂಬಿಕೊಂಡು ಕೆಂಪಾಗಿ ಹರಿಯುತ್ತಿದ್ದ ಕಾಡಿನ ತೊರೆಗಳು ಈಗ ʼಕಾವಿ ತೊರೆದುʼ ಮುತ್ತಿನ ಸರಗಳಂತೆ ಕಾಣಿಸತೊಡಗಿದವು. ಅಂದರೆ ರಾಮನಿಗೂ ಕಾವಿ ತೊರೆಯುವ ಕಾಲ ಬಂತು. 

ಕೇದಗೆಗೆ ಮುಪ್ಪಡಸಿ,
ಬೀತುದೆ ಸೀತಾಳಿ ಹೂ, ಬಾನ್‌ಬಯಲೊಳಿರ್ದ
ಮೋಡಮೋರೆಗೆ ಕರ್ಪುವೋಗಿ, ಬೆಳ್ಳಿನ ನೆಳಲ್
ಸುಳಿದುದಲ್ಲಲ್ಲಿ. ನಿಸ್ತೇಜನಾಗಿರ್ದ ರವಿ
ಘನವನಾಂತರ ವಾಸಮಂ ಮುಗಿಸಿ ಮರುಳುತಿರೆ,
ಮೇಘಸಂಧಿಗಳಿಂದೆ, ಮುಸುಕೆತ್ತಿ, ನಸುನಾಣ್ಣಿ,
ಮೊಗಕೆ ನಾಣ್‌ಬೆಟ್ಟೇರಿದಪರಿಚಿತಳಂತೆವೋಲ್ ಇಣಿಕಿತು ಗತೋಷ್ಣಾತಪಂ. 

ಸೂರ್ಯನಿಗೆ ವನಾಂತರ ವಾಸ ಮುಗಿಯಿತು. ರಾಮನಿಗೆ ಇನ್ನೂ ಮುಗಿದಿಲ್ಲ. ಆದರೆ ಮುಗಿಯುವ ಸೂಚನೆ ನೀಡಿತು. ಸಂದಿದ್ದ ಬೆಚ್ಚಗಿನ ಹವೆ ಮೆಲ್ಲಗೆ ಮೈದೋರಿತು- ಮುಸುಕೆತ್ತಿ ಮುಖಕ್ಕೆ ನಸುನಾಚಿಕೆಯಿಂದ ಬೆರಳನ್ನು ಕುತ್ತಿದ ಮುಗುದೆಯಂತೆ. 

ಪಾಲ್ತುಂಬಿ ತುಳ್ಕಿ
ಗರುಕೆಪಚ್ಚೆಗೆ ಸೋರ್ವ ಕೊಡಗೆಚ್ಚಲಿನ ಗೋವು
ಹೊಸಬಿಸಿಲ ಸೋಂಕಿಂಗೆ ಸೊಗಸಿ ಮೆಯ್ ಕಾಯಿಸುತೆ
ಗಿರಿಸಾನು ಶಾದ್ವಲದಿ ನಿಂತು, ಬಾಲವನೆತ್ತಿ
ಕುಣಿದೋಡಿ ಬಂದು ತನ್ನೆಳಮುದ್ದುಮೋರೆಯಂ
ತಾಯ್ತನಕೆ ಪಡಿಯೆಣೆಯ ಮೆತ್ತೆಗೆಚ್ಚಲ್ಗಿಡಿದು,
ಜೊಲ್ಲುರ್ಕೆ, ಚಪ್ಪರಿಸಿ ಮೊಲೆಯನುಣ್ಬ ಕರುವಂ ನೆಕ್ಕಿತಳ್ಕರೆಗೆ. ಲೋಕದ ಕಿವಿಗೆ ದುರ್ದಿನಂ
ಕೊನೆಮುಟ್ಟಿದತ್ತೆಂಬ ಮಂಗಳದ ವಾರ್ತೆಯಂ
ಡಂಗುರಂಬೊಯ್ಸಿದುದು ಪಕ್ಷಿಗೀತಂ.

ಮಳೆಗಾಲದ ಕೊನೆಯ ದಿನಗಳು ಸುಭಿಕ್ಷದ, ಹಸುರಿನ, ಹಾಲು ತುಂಬಿ ತುಳುಕುವ ಕೊಡಗೆಚ್ಚಲಿನ ಗೋವುಗಳ ಕಾಲ. ದುರ್ದಿನಗಳು ಮುಗಿದವು ಎಂಬ ಘೋಷವನ್ನು ಪಕ್ಷಿಗೀತೆಗಳು ಡಂಗುರ ಸಾರಿದವು. 

ಲಕ್ಷ್ಮೀ ನಿವಾಸದ ಮುದ್ದು ಹುಡುಗಿ ಜಾನ್ವಿ ಆಲಿಯಾಸ್ ಚಂದನಾ ಬಗ್ಗೆ ನಿಮಗೆಷ್ಟು ಗೊತ್ತು?

ಹೀಗೆ ಮಳೆಗಾಲದ ವರ್ಣನೆ ಕೊನೆಯಾಗುತ್ತದೆ. ಇಲ್ಲಿಂದ ಮುಂದೆ ಸುಗ್ರೀವಾಜ್ಞೆ, ವಾನರವೀರರ ದಿಟ್ಟ ಹೋರಾಟದ ಸುಂದರ ಪುಟಗಳು ತೆರೆದುಕೊಳ್ಳುತ್ತವೆ. ಅಯೋಧ್ಯೆಯ ನಗರವಾಸಿ ರಾಮ, ಕರ್ನಾಟಕದ ಸಹ್ಯಾದ್ರಿಯ ಮಲೆಗಳ ನಡುವೆ ಗುಹೆಯಲ್ಲಿ, ಮುಂಗಾರಿನ ಬಿರುಹೊಯ್ಲಿನ, ಕಾರ್ಗತ್ತಲಿನ, ಸೋನೆಮಳೆಯ, ಮಿಂಚುಹುಳಗಳ, ದಿನಗಳ ನಡುವೆ ಆಶೆನಿರಾಶೆಗಳ ರಾಟವಾಳದಲ್ಲಿ ಕುಳಿತು ಏರಿಳಿಯುತ್ತಾನೆ. ಮಳೆಗಾಲದ ಮುಗಿದಾಗ ಅವನು ಹೊಸ ಮನುಷ್ಯನಾಗಿದ್ದಾನೆ. 

ಈತ ವಾಲ್ಮೀಕಿಗೆ ಕಾಣಿಸಿರದ, ಕುವೆಂಪುಗೆ ಮಾತ್ರ ಕಾಣಿಸಬಹುದಾದ ರಾಮ.

Follow Us:
Download App:
  • android
  • ios