Asianet Suvarna News Asianet Suvarna News

ಎಚ್.ಎಸ್.ವೆಂಕಟೇಶ ಮೂರ್ತಿ ಎಂಬ ರೂಪಕ ಕವಿಯ ಜ್ಞಾಪಕ ಚಿತ್ರಶಾಲೆ

ತಮ್ಮ ಮನೋಹರ ಗೀತೆಗಳ ಮೂಲಕ ಜನಸಾಮಾನ್ಯರ ಮನದ ಕದ ತಟ್ಟಿದ ಕನ್ನಡದ ಖ್ಯಾತ ಕವಿ ಎಚ್.ಎಸ್.ವೆಂಕಟೇಶ ಮೂರ್ತಿಗೆ ಈಗ 80ರ ಹರೆಯ. ಇವರ ಬಗ್ಗೆ ಪೋಲಿ, ಪ್ರೇಮ ಕವಿ ಎಂದೇ ಖ್ಯಾತರಾದ ಬಿ.ಆರ್.ಲಕ್ಷ್ಮಣರಾವ್ ಬರೆದಿದ್ದು ಹೀಗೆ. 

kannada poet br lakshman rao writes about modern writer hs venkateshamurthy
Author
First Published Jun 28, 2024, 3:10 PM IST

- ಬಿ.ಆರ್. ಲಕ್ಷ್ಮಣರಾವ್

1983ರಲ್ಲಿ ವೆಂಕಟೇಶ ಮೂರ್ತಿ ಮತ್ತು ನಾನು ಬೆಂಗಳೂರು ಆಕಾಶವಾಣಿಯಲ್ಲಿ ನಡೆದ ಒಂದು ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದೆವು. ನಾವು ‘ನವ್ಯಕಾವ್ಯ’ ಚಳುವಳಿಯಲ್ಲಿ ರೂಪುಗೊಂಡ ಕವಿಗಳಾದ್ದರಿಂದ ಆಗ್ಗೆ ಓದುಗವಿತೆಗಳನ್ನಷ್ಟೇ ಬರೆದಿದ್ದೆವು. ಆಕಾಶವಾಣಿಯ ಸಂಗೀತ ವಿಭಾಗದವರು ಹಾಡುಗವಿತೆಗಳನ್ನು ಬರೆಯಲು ನಮ್ಮನ್ನು ಕೋರಿದರು. ‘ಹಾಡುಗವಿತೆಗಳ ಸಂಕಲನವನ್ನು ಪ್ರಕಟಿಸಿ, ನಮಗೆ ಕೊಟ್ಟರೆ, ನಿಮ್ಮನ್ನು ಅನುಮೋದಿತ ಕವಿಗಳ ಪಟ್ಟಿಗೆ ಸೇರಿಸಿ, ನಿಮ್ಮ ಗೀತೆಗಳಿಗೆ ಸಂಗೀತ ಸಂಯೋಜಿಸಿ, ಹಾಡಿಸಿ, ಪ್ರಸಾರ ಮಾಡಲು ಅನುಕೂಲವಾಗುತ್ತೆ’ ಎಂದರು. ಹಾಡುಗವಿತೆಯು ಮೂರ್ತಿ ಮತ್ತು ನನಗೆ ಅಪರಿಚಿತವೇನೂ ಆಗಿರಲಿಲ್ಲ.‌ ನಾವಿಬ್ಬರೂ ಕನ್ನಡ ಚಿತ್ರಗೀತೆಗಳ, ಭಾವಗೀತೆಗಳ, ದೇವರನಾಮಗಳ ಆರಾಧಕರೇ ಆಗಿದ್ದೆವು.‌ ಜೊತೆಗೆ ಆಗಷ್ಟೇ ನಿಸಾರ್ ಅಹಮದ್ ಅವರ ‘ನಿತ್ಯೋತ್ಸವ’ ಎಂಬ ಭಾವಗೀತೆಗಳ ಧ್ವನಿಸುರುಳಿ ಹೊರಬಂದು ಅಪಾರ ಜನಪ್ರಿಯತೆ ಗಳಿಸಿತ್ತು. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರೂ ಸಹ ಹುರುಪಿನಿಂದ ಗೀತೆಗಳನ್ನು ರಚಿಸಿ, ಧ್ವನಿ ಸುರುಳಿಗಳನ್ನು ಹೊರತರುತ್ತಿದ್ದರು. ಹೀಗಾಗಿ ನಾವೂ ಸಹ ಒಂದು ಕೈ ನೋಡೋಣವೆಂದು, ಮೂರ್ತಿ ಮತ್ತು ನಾನು ತಲಾ 20 ಗೀತೆಗಳನ್ನು ಸಿದ್ಧಪಡಿಸಿದೆವು. ಹೀಗೆ ‘ಮರೆತ ಸಾಲುಗಳು’ ಎಂಬ ಹೆಸರಲ್ಲಿ ಮೂರ್ತಿಯ ಮತ್ತು ‘ಪ್ರೇಮ ಸುಳಿವ ಜಾಡು’ ಎಂಬ ಹೆಸರಲ್ಲಿ ನನ್ನ ಭಾವಗೀತೆಗಳ ಪುಸ್ತಿಕೆಗಳು 1984ರಲ್ಲಿ ಪ್ರಕಟಗೊಂಡವು. ಅವುಗಳನ್ನು ಆಗ್ಗೆ ನನ್ನೂರಾದ ಚಿಂತಾಮಣಿಯ ‘ಗೆಳೆಯರ ಬಳಗ’ದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ನವ್ಯಕವಿಗಳಾದ ಡಾ.ಬಿ.ಸಿ. ರಾಮಚಂದ್ರಶರ್ಮ ಅವರು ಬಿಡುಗಡೆ ಮಾಡಿದರು. ಗಂಭೀರ ಕವಿಗಳು ಸುಲಭದ ಜನಪ್ರಿಯತೆಗಾಗಿ, ಸಂಗೀತವನ್ನು ಅವಲಂಬಿಸಿದ ಗೀತೆಗಳ ಮೋಹಕ್ಕೆ ಮರುಳಾಗಬಾರದು ಎಂಬುದು ಶರ್ಮರ ಧೃಡ ನಿಲುವಾಗಿತ್ತು.‌ ಆದರೂ ಸಹ ಅವರು ನಮ್ಮ ಸಂಕಲನಗಳನ್ನು ಮೆಚ್ಚಿ ಮಾತಾಡಿದರು.‌ ಅವರು ಪ್ರಸ್ತಾಪಿಸಿದ ಒಂದು ಸಂಗತಿ ನನಗೆ ತುಂಬಾ ಅರ್ಥಪೂರ್ಣ ಎನಿಸಿತು. ಅದನ್ನು ಅವರ ಮಾತುಗಳಲ್ಲೇ ಉಲ್ಲೇಖಿಸುತ್ತೇನೆ:

‘ಈ ಹಾಡುಗಳಲ್ಲಿ ಕೂಡ, ಇವರು ತಾವು ಇದುವರೆಗೆ ಬರೆದಿರುವ ಕಾವ್ಯಗಳ ಮೂಲಕ ನಮ್ಮ ಕಣ್ಣಿಗೆ ಹಿಡಿದ ವ್ಯಕ್ತಿತ್ವಗಳನ್ನೇ ದುಡಿಸಿಕೊಂಡಿದ್ದಾರೆ ಎನ್ನುವುದು ನನ್ನೊಳಗಿನ ಮನಃಶಾಸ್ತ್ರಜ್ಞನಿಗೆ ಸಂತೋಷವಾಗಿದೆ. ಅಂದರೆ ಹಾಡು ಬರೆಯುವ ಮುಖವಾಡ ಹಾಕಿಕೊಂಡಾಗಲೂ ಇವರು ತಮ್ಮೊಳಗೆ ತುಡಿಯುತ್ತಲೇ ಇರುವ ವೆಂಕಟೇಶಮೂರ್ತಿಗೆ, ಲಕ್ಷ್ಮಣರಾವ್‌ಗೆ ಮೋಸ ಮಾಡಿಲ್ಲ. ಮೂಲಧರ್ಮವಾಗಿ ಒಳಗೆ ಚಡಪಡಿಸುವ ತಮ್ಮ ಕವಿ ಸ್ವಭಾವಗಳಿಗೆ ಸುಳ್ಳಾಗುವಂತೆ ವರ್ತಿಸಿಲ್ಲ. ಆತ್ಮವಂಚನೆಯ ಕೆಲಸ ಮಾಡಿಲ್ಲ.’.

ರಾಮಚಂದ್ರಶರ್ಮರ ನಿರೀಕ್ಷೆಯನ್ನು ನಾವು ಈವರೆಗೂ ಹುಸಿಹೋಗದಂತೆ ನೋಡಿಕೊಂಡಿದ್ದೇವೆ. ನಮ್ಮ ಕಾವ್ಯವ್ಯಕ್ತಿತ್ವದ ಮತ್ತು ಶೈಲಿಯ ಸ್ವಂತಿಕೆಯ ಛಾಪನ್ನು ನಮ್ಮ ಗೀತೆಗಳಲ್ಲೂ ಕಾಪಾಡಿಕೊಂಡು ಬಂದಿದ್ದೇವೆ.

ಭಗವದ್ಗೀತೆ ಇನ್ನು ಕನ್ನಡದಲ್ಲಿಯೂ ಲಭ್ಯ

ಕಾಲಾನುಕ್ರಮದಲ್ಲಿ, ನಮ್ಮ ಹಾಡುಗಳು ಆಕಾಶವಾಣಿಯಲ್ಲಿ ಪ್ರಸಾರಗೊಂಡು ಕೇಳುಗರ ಮನ ಸೆಳೆದವು. ಸುಗಮ ಸಂಗೀತದ ದಿಗ್ಗಜರಾದ ಮೈಸೂರು ಅನಂತಸ್ವಾಮಿ ಮತ್ತು ಸಿ.ಅಶ್ವತ್ಥ್ ಅವರ ಸಂಗೀತ ಸಂಯೋಜನೆಯಲ್ಲಿ ಧ್ವನಿಸುರುಳಿಗಾಗಿ ಹೊರಬಂದು ನಾಡಿನ, ಹಾಗೆಯೇ ವಿಶ್ವದೆಲ್ಲಡೆಯ ರಸಿಕರ ಮನ ಗೆದ್ದವು. ನಮಗೆ ಅಪಾರ ಜನಪ್ರೀತಿಯನ್ನು ಗಳಿಸಿಕೊಟ್ಟವು. ಆದರೆ ಒಂದು ಮಾತಂತೂ ನಿಜ. ನಾವು ಜನಪ್ರಿಯತೆಗಾಗಿ ಗೀತೆಗಳನ್ನು ರಚಿಸಲಿಲ್ಲ. ಜನಪ್ರಿಯತೆ ನಮ್ಮ ಗೀತೆಗಳಿಗೆ ತಾನಾಗಿ ಒಲಿದುಬಂತು.

ಎಚ್ಚೆಸ್ವಿಯ ಕಾವ್ಯದ ಪ್ರಮುಖ ವೈಶಿಷ್ಟ್ಯ ಅದರ ರೂಪಕಾತ್ಮಕತೆ. ಕುಮಾರವ್ಯಾಸನಿಗೆ ‘ರೂಪಕ ಸಾಮ್ರಾಜ್ಯ ಚಕ್ರವರ್ತಿ’ ಎಂಬ ಬಿರುದಿದೆ. ಮೂರ್ತಿ ಹೇಳಿಕೇಳಿ ಕುಮಾರವ್ಯಾಸನ ಪರಮ ಆರಾಧಕ. ಹೀಗಾಗಿ ಇಂದಿನ ಕವಿಗಳಲ್ಲಿ ಮೂರ್ತಿಗೂ ಈ ಬಿರುದನ್ನು ಅನ್ವಯಿಸಿದರೆ ಕಿಂಚಿತ್ತೂ ತಪ್ಪಾಗಲಾರದು. ಈ ರೂಪಕಾತ್ಮಕ ಗುಣ ಮೂರ್ತಿಯ ಗೀತೆಗಳಲ್ಲೂ ಎದ್ದು ತೋರುತ್ತದೆ. ಇದಕ್ಕೆ ಅಕ್ಷರಶಃ ನೂರಾರು ಉದಾಹರಣೆಗಳನ್ನು ಕೊಡಬಹುದು. ಕೆಲವನ್ನಷ್ಟೇ ಇಲ್ಲಿ ಕಾಣಿಸುತ್ತಿದ್ದೇನೆ:

ಸಾವಿರಾರು ಅಲೆಯ ಹೆಗಲು

ಒಂದು ಹಾಯಿ ದೋಣಿಗೆ.

ನೀರು ಸುರಿದರೂ ಆರದ ದೀಪ

ತಾಯಿಯ ಮಿನುಗುವ ಕಣ್ಣು.

ಕಣ್ಣಿನಾಟ ಕಣ್ಣಿಗುಂಟು

ಗಾಳದಾಟ ಗಾಳಕೆ;

ಎಲ್ಲವನ್ನೂ ಸೋಲಬಹುದು

ನೀನು ಎಸೆವ ದಾಳಕೆ.

ನೀಲಿಯ ಬಾನಿನ ನೀರಿನ ದೋಣಿಗೆ

ಕಾಮನಬಿಲ್ಲಿನ ಹಾಯಿಪಟ.

ಕಾವ್ಯದ ಹಲವು ಪ್ರಭೇದಗಳಲ್ಲಿ ಒಂದಾದ ಗೀತೆಗೆ ತನ್ನದೇ ಇತಿಮಿತಿಗಳಿವೆ. ಓದುಗವಿತೆಯ ಸ್ವಾಯತ್ತತೆ ಇದಕ್ಕಿಲ್ಲ. ಸಂಗೀತದ ಸಾಹಚರ್ಯವಿಲ್ಲದೆ ಇದು ಪರಿಪೂರ್ಣವಾಗಲಾರದು. ಸಂಗೀತವೆಂಬ ವಾಹಕದ ಮೂಲಕವಷ್ಟೇ ಇದು ಸಹೃದಯರ ಮನ ಮುಟ್ಟಬಲ್ಲದು. ಆದರೆ ಜನ ಸಾಮಾನ್ಯರನ್ನು ಗೀತೆ ತಲುಪಿದಷ್ಟು ಸುಲಭವಾಗಿ ಕವಿತೆ ತಲುಪಲಾರದು. ಹೀಗಾಗಿ ಗೀತೆಗೆ ಕಾವ್ಯದಲ್ಲಿ ಒಂದು ಗಣನೀಯ ಸ್ಥಾನವಿದೆ.

ಈ ಸಂದರ್ಭದಲ್ಲಿ, ಕವಿಗೀತೆಯನ್ನು ಕುರಿತು ಮೂರ್ತಿ ಹೇಳಿದ ಈ ಮಾತುಗಳು ನೆನಪಾಗುತ್ತಿವೆ: ‘ಕವಿಗೀತೆ ಆ ಕವಿಯ ಇಡೀ ಕಾವ್ಯದ ಭವ್ಯ ಅರಮನೆಯ ಸುಂದರ ಹೆಬ್ಬಾಗಿಲಿನಂತೆ. ರಸಿಕರು ಆ ಬಾಗಿಲ ಚೆಲುವನ್ನು ಆಸ್ವಾದಿಸುತ್ತ ಅಲ್ಲೇ ನಿಂತುಬಿಡಬಾರದು. ಅರಮನೆಯ ಒಳಹೊಕ್ಕು ಅದರ ವಿಸ್ತಾರವನ್ನು, ವೈಶಿಷ್ಟ್ಯವನ್ನು ವೈವಿಧ್ಯತೆಯನ್ನು ಕಂಡು, ಅನುಭವಿಸಿ, ಆನಂದಿಸಬೇಕು. ಹೀಗಾದಾಗ ಕವಿಗೀತೆ ಸಾರ್ಥಕವಾದಂತೆ’.

ಕನ್ನಡದ ಪ್ರೇಮ ಕವಿ ಚಿಂತಾಮಣಿಯಿಂದ ಬಂದ ಸಖ ಬಿ.ಆರ್.ಲಕ್ಷ್ಮಣ್ ರಾವ್‌ಗೆ 75ನೇ ವಸಂತದ ಸಂಭ್ರಮ

ತಮ್ಮ ಗಹನ, ಗಂಭೀರ ಕವಿತೆಗಳ ಮೂಲಕ ವಿದಗ್ಧ ಕಾವ್ಯಾಸ್ವಾದಕರನ್ನು, ಹಾಗೆಯೇ ತಮ್ಮ ಮನೋಹರ ಗೀತೆಗಳ ಮೂಲಕ ಜನ ಸಾಮಾನ್ಯರನ್ನು ತಲುಪಿ, ಖ್ಯಾತಿ ಮತ್ತು ಜನಪ್ರೀತಿಯನ್ನು ಏಕಕಾಲಕ್ಕೆ ಸೂರೆಗೊಂಡ ಕವಿಗಳು ಕನ್ನಡದಲ್ಲಿ ಅತಿ ವಿರಳ. ಅಂತಹ ವಿರಳರ ಸಾಲಿನಲ್ಲಿ ನನ್ನ ಅತ್ಯಾಪ್ತ ಗೆಳೆಯ ಮೂರ್ತಿ ಅಗ್ರಪಂಕ್ತಿಯಲ್ಲಿದ್ದಾನೆ ಎಂಬುವುದು ನನಗೆ, ಹಾಗೆಯೇ ಅವನ ಸಾಹಿತ್ಯಾಭಿಮಾನಿಗಳೆಲ್ಲರಿಗೂ ಅಭಿಮಾನದ ಸಂಗತಿ. ಮೂರ್ತಿಯಿಂದ ಕನ್ನಡ ಕಾವ್ಯಲೋಕ ಇನ್ನಷ್ಟು, ಮತ್ತಷ್ಟು ಉತ್ಕೃಷ್ಟ ಕೃತಿಗಳನ್ನು ನಿರೀಕ್ಷಿಸುತ್ತಲೇ ಇರುತ್ತದೆ.‌ ಹೀಗಾಗಿ ‘ಶತಮಾನಂ ಭವತಿ’ ಎಂಬುವುದು ಮೂರ್ತಿಗೆ ನಮ್ಮೆಲ್ಲರ ಹೃತ್ಪೂರ್ವಕ ಹಾರೈಕೆ.

Follow Us:
Download App:
  • android
  • ios