ಕಡಲ ಭದ್ರೆತೆಗೆ ಹೆಚ್ಚಿನ ಒತ್ತು; ಏರಿಯಲ್ ವೆಹಿಕಲ್ ತರಲಿದೆ ಶತ್ರುಗಳಿಗೆ ಕುತ್ತು!
ಡಿಆರ್‌ಡಿಓ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯ ಭಾರತೀಯ ನೌಕಾಪಡೆಗೆ ಹೊಸ ನೌಕೆಯೊಂದನ್ನು ಸೇರಿಸಲು ಮುಂದಾಗಿದ್ದು, ಇದು ಹೇಗೆ ಕಾರ್ಯ ನಿರ್ವಹಿಸಲಿದೆ?
- ಗಿರೀಶ್ ಲಿಂಗಣ್ಣ, ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕರು)
ಭಾರತದ ಸಾಗರ ರಕ್ಷಣಾ ಸಾಮರ್ಥ್ಯಗಳನ್ನು ಹೆಚ್ಚಿಸಲು, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ) ಒಂದು ವಿಶ್ವಾಸಾರ್ಹ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದೆ. ನೀರೊಳಗಿನಿಂದ ಉಡಾವಣೆ ಮಾಡುವ ಮಾನವರಹಿತ ವೈಮಾನಿಕ ವಾಹನಗಳ (ULUAVs) ತಯಾರಿಕೆಗೆ ಡಿಆರ್‌ಡಿಓ ಮುಂದಾಗಿದೆ. ಪುಣೆ ಮೂಲದ 'ಸಾಗರ್ ಡಿಫೆನ್ಸ್ ಇಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್' ಹೆಸರಿನ ಸ್ಟಾರ್ಟ್ ಅಪ್ ಸಹಭಾಗಿತ್ವದಲ್ಲಿ, ಜಲಾಂತರ್ಗಾಮಿ ನೌಕೆಗಳಿಂದ ನಿರ್ವಹಿಸಬಹುದಾದ ಯುಎವಿಗಳನ್ನು ತಯಾರಿಸುವ ಯೋಜನೆ ಸಿದ್ಧಗೊಂಡಿದೆ.
ಡಿಆರ್‌ಡಿಓದ 'ಟೆಕ್ನಾಲಜಿ ಡೆವಲಪ್‌ಮೆಂಟ್ ಫಂಡ್' (ಟಿಡಿಎಫ್), ಈ ವಾಹನಗಳ ತಯಾರಿಕೆಗೆ ಅವಶ್ಯವಾದ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಗುತ್ತಿಗೆಯನ್ನು ಪುಣೆ ಮೂಲದ ಸಾಗರ್ ಡಿಫೆನ್ಸ್ ಇಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್‌ಗೆ ನೀಡಿದೆ.
ಡಿಆರ್‌ಡಿಓ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯ (ಡಿಆರ್‌ಡಿಎಲ್), ಈ ವಿಶೇಷ ವಾಹನಗಳ ತಯಾರಿಕೆಗೆ ಅಗತ್ಯವಾದ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವಲ್ಲಿ ಸಾಗರ್ ಡಿಫೆನ್ಸ್ ಗೆ ಎಲ್ಲ ರೀತಿಯ ತಾಂತ್ರಿಕ ನೆರವು ನೀಡಲಿದ್ದು, ಈ ಹಿಂದೆಯೂ ಸಾಗರ್ ಡಿಫೆನ್ಸ್ ಕಂಪನಿಯು ಭಾರತೀಯ ನೌಕಾಪಡೆಗಾಗಿ 'ಸೀ ಸ್ಪಾಟರ್ ಡ್ರೋನ್' ಅನ್ನು ಅಭಿವೃದ್ಧಿಪಡಿಸಿತ್ತು.
ಐಎನ್‌ಎಸ್ ವಿಕ್ರಾಂತ್ ಹೆಗಲೇರಲಿದೆ ರಫೇಲ್ ಫೈಟರ್: ಭಾರತ-ಫ್ರಾನ್ಸ್ ಒಪ್ಪಂದಕ್ಕೆ ಹೊಸ ಖದರ್..!
ಇದೀಗ ಡಿಆರ್‌ಡಿಎಲ್ ನಿರ್ದೇಶಕ ಡಾ. ಜಿಎಎಸ್ ಮೂರ್ತಿ ಮತ್ತು ಭಾರತೀಯ ನೌಕಾಪಡೆಯ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಹೊಸ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ನೀರೊಳಗಿನಿಂದ ಉಡಾವಣೆ ಮಾಡುವ ಮಾನವರಹಿತ ವೈಮಾನಿಕ ವಾಹನಗಳು ಶೀಘ್ರದಲ್ಲೇ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಳ್ಳಲಿವೆ.
ಸ್ವಾಯತ್ತ ಡ್ರೋನ್‌ಗಳಾಗಿರುವ ಈ ಏರಿಯಲ್ ವೆಹಿಕಲ್ಸ್ ಜಲಾಂತರ್ಗಾಮಿ ನೌಕೆಗಳಿಂದ ತ್ವರಿತವಾಗಿ ಉಡಾಯಿಸಬಹುದು. ಈ ಡ್ರೋನ್‌ಗಳು ಜಲಾಂತರ್ಗಾಮಿ ನೌಕೆಗಳು ತಮ್ಮ ಗಮ್ಯ ಸ್ಥಾನವನ್ನು ಬಿಟ್ಟುಕೊಡದೆ, ಸಂಭಾವ್ಯ ಶತ್ರು ಬೆದರಿಕೆಗಳನ್ನು ಮೇಲ್ವಿಚಾರಣೆ ಮಾಡಲು ಅನುವು ಮಾಡಿಕೊಡುತ್ತವೆ. ಅಲ್ಲದೇ ಈ ಡ್ರೋನ್‌ಗಳು ಜಲಂತರ್ಗಾಮಿಗಳ ಕಾರ್ಯಾಚರಣೆಯ ಪರಿಣಾಮಕಾರಿತ್ವವನ್ನು ಹೆಚ್ಚಿಸುತ್ತವೆ.
ಏರಿಯಲ್ ವೆಹಿಕಲ್‌ಗಳನ್ನು ಮುಖ್ಯವಾಗಿ ಸಮುದ್ರ ಗುಪ್ತಚರ, ಕಣ್ಗಾವಲು ಮತ್ತು ವಿಚಕ್ಷಣ ಸಾಧನಗಳನ್ನಾಗಿ ಬಳಸಲಾಗುತ್ತದೆ. ಸಾಗರದಲ್ಲಿನ ಚಟುವಟಿಕೆಗಳ ಕುರಿತು ಸೂಕ್ತ ಡೇಟಾವನ್ನು ಸಂಗ್ರಹಿಸುವ ಈ ವಾಹನಗಳು, ನೌಕಾಪಡೆಯ ಕಾರ್ಯಕ್ಷಮತೆಯನ್ನು ವೃದ್ಧಿಸುತ್ತವೆ. ಭವಿಷ್ಯದ ಸಂಭಾವ್ಯ ಬೆದರಿಕೆಗಳನ್ನು ಸಮರ್ಥವಾಗಿ ಎದುರಿಸುವ ಉದ್ದೇಶದಿಂದ ವಿನ್ಯಾಸಗೊಳಿಸಿರುವ ಈ ಡ್ರೋನ್‌ಗಳಿಗೆ, ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಸೇರ್ಪಡೆಗೊಳಿಸುವ ಅವಕಾಶ ಕೂಡ ಇದೆ.
'ಜಲಾಂತರ್ಗಾಮಿ ನೌಕೆಗಳೊಂದಿಗೆ ಸಂವಹನ ನಡೆಸಲು ರೇಡಿಯೋ ಫ್ರೀಕ್ವೆನ್ಸಿ ಮತ್ತು ಡೇಟಾ-ಲಿಂಕ್ ಟ್ರಾನ್ಸ್‌ಮಿಷನ್‌ಗಳನ್ನು ಬಳಸುವ ಮೂಲಕ, ಈ ಏರಿಯಲ್ ವೆಹಿಕಲ್‌ಗಳು ಪರಿಣಾಮಕಾರಿ ಯುದ್ಧತಂತ್ರ ರಚನೆಯಲ್ಲಿ ಗಮನಾರ್ಹವಾದ ಪಾತ್ರ ನಿರ್ವಹಿಸುತ್ತವೆ..' ಎಂದು ಸಾಗರ್ ಡಿಫೆನ್ಸ್ ಎಂಜಿನಿಯರಿಂಗ್‌ನ ಸಿಇಒ ಕ್ಯಾಪ್ಟನ್ ನಿಕುಂಜ್ ಪರಾಶರ್ ಹೇಳಿದ್ದಾರೆ.
ಟರ್ಬ್ಯುಲೆನ್ಸ್ ದುರಂತ: ಸಿಂಗಾಪುರ್ ಏರ್‌ಲೈನ್ಸ್ ಘಟನೆ ಮತ್ತು ವಿಮಾನಯಾನದ ಭವಿಷ್ಯ
ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕ್ಯಾಪ್ಟನ್ ನಿಕುಂಜ್ ಪರಾಶರ್, 'ಜಲಾಂತರ್ಗಾಮಿ ನೌಕೆಗಳ ಸೀಮಿತ ನೋಟ ಸಾಮರ್ಥ್ಯ ಪರಿಣಾಮಕಾರಿ ಸಾಗರ ಕಾರ್ಯಾಚರಣೆಗಳಿಗೆ ಅಡ್ಡಿಪಡಿಸುತ್ತದೆ. ಆದರೆ ಈ ಏರಿಯಲ್ ವೆಹಿಕಲ್‌ಗಳ ಬಳಕೆಯಿಂದಾಗಿ ಜಲಂತರ್ಗಾಮಿಗಳ ಸನ್ನಿವೇಶವನ್ನು ಅರಿಯುವ ಸಾಮರ್ಥ್ಯ ಹೆಚ್ಚಾಗಲಿದೆ. ಇದರಿಂದ ಭಾರತೀಯ ನೌಕಾಪಡೆಯು ಗಮನಾರ್ಹವಾದ ಯುದ್ಧತಂತ್ರದ ಪ್ರಯೋಜನವನ್ನು ಪಡೆಯಲಿದೆ. ಇದು ಜಲಾಂತರ್ಗಾಮಿಗಳಿಗೆ ಏಕಕಾಲದಲ್ಲಿ ಹಲವು ಚಟುವಟಿಕೆಗಳ ಮೇಲೆ ನಿಗಾ ಇಡಲು ಅನುವು ಮಾಡಿಕೊಡುತ್ತದೆ, ' ಎಂದರು.
ಗಂಟೆಗೂ ಹೆಚ್ಚು ಕಾಲ ಕಾರ್ಯ ನಿರ್ವಹಿಸುವ ಈ ಆಧುನಿಕ ಏರಿಯಲ್ ವೆಹಿಕಲ್ಸ್, ಸುಮಾರು 20 ಕಿ.ಮೀ ದೂರ ಕ್ರಮಿಸಬಲ್ಲವು. ಈ ಡ್ರೋನ್‌ಗಳನ್ನು ಆಳ ಸಮುದ್ರದ ನೀರಲ್ಲಿ ಜಲಾಂತರ್ಗಾಮಿ ನೌಕೆಗಳಿಂದ ನೇರವಾಗಿಯೂ ಉಡಾಯಿಸಬಹುದು. ಇದು ವಿವೇಚನಾಯುಕ್ತ ಕಣ್ಗಾವಲು ಕಾರ್ಯಾಚರಣೆಗಳನ್ನು ನಡೆಸುವಲ್ಲಿ ನಿರ್ಣಾಯಕ ಪಾತ್ರವಹಿಸಲಿದೆ ಎಂದು ಸಾಗರ್ ಡಿಫೆನ್ಸ್ ಹೇಳಿದೆ.
ಈ ಡ್ರೋನ್‌ಗಳು ನೀರೊಳಗಿನ ಸೋನಾರ್ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇದು ಜಲಾಂತರ್ಗಾಮಿ ನೌಕೆಗಳಿಗೆ ನೀರಿನ ಮೇಲೆ ಏನಾಗುತ್ತಿದೆ ಎಂಬುದನ್ನು ನೋಡಲಾಗುತ್ತದೆ. ಅಲ್ಲದೇ ಶತ್ರು ಹಡಗುಗಳನ್ನು ಗುರುತಿಸಲು ಉಪಯೋಗಕ್ಕೆ ಬರಲಿದ್ದು, ಸೋನಾರ್ ತಂತ್ರಜ್ಞಾನದ ನೆರವಿನಿಂದ ಶತ್ರು ಹಡಗುಗಳ ಕಣ್ಗಾವಲಿನಿಂದ ಜಲಂತರ್ಗಾಮಿಗಳನ್ನು ರಕ್ಷಿಸಲಿದೆ.
ಬಾಹ್ಯಾಕಾಶದ ಗಡಿಗಳಾಚೆ: ಭಾರತದ 2047ರ ಮುನ್ನೋಟ
ಈ ಏರಿಯಲ್ ವೆಹಿಕಲ್ ಗಳ ಸೇರ್ಪಡೆಯಿಂದಾಗಿ ಭಾರತೀಯ ನೌಕಾಪಡೆಗೆ ಹೆಚ್ಚಿನ ಬಲ ಬರಲಿದ್ದು, ಸಾಗರ ರಕ್ಷಣೆಯ ತನ್ನ ಜವಾಬ್ದಾರಿಯನ್ನು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಬಹುದಾಗಿದೆ. ತಂತ್ರಜ್ಞಾನ ಸುಧಾರಿಸಿದಂತೆಲ್ಲ ಈ ಡ್ರೋನ್‌ಗಳು ನೀರೊಳಗಿನ ಯುದ್ಧ ತಂತ್ರಗಳನ್ನು ಹೇಗೆ ಬದಲಾಯಿಸುತ್ತದೆ ಮತ್ತು ಭಾರತದ ಕಡಲ ಭದ್ರತೆಯನ್ನು ಹೇಗೆ ಹೆಚ್ಚಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.