ಐಎನ್‌ಎಸ್ ವಿಕ್ರಾಂತ್ ಹೆಗಲೇರಲಿದೆ ರಫೇಲ್ ಫೈಟರ್: ಭಾರತ-ಫ್ರಾನ್ಸ್ ಒಪ್ಪಂದಕ್ಕೆ ಹೊಸ ಖದರ್..!
ಐಎನ್‌ಎಸ್ ವಿಕ್ರಾಂತ್ ಯುದ್ಧ ನೌಕೆಗಾಗಿ ಒಟ್ಟು 26 ರಫೇಲ್ ಮರೀನ್ ಫೈಟರ್ ಜೆಟ್‌ಗಳನ್ನು ಖರೀದಿಸಲು ಭಾರತ ಮುಂದಾಗಿದ್ದು, ಇದಕ್ಕಾಗಿ ಫ್ರಾನ್ಸ್ ಜೊತೆಗೆ 50,000 ಕೋಟಿ ರೂಪಾಯಿಗಳ ಮಹತ್ವದ ಒಪ್ಪಂದಕ್ಕೆ ನಿರ್ಧಾರ ಮಾಡಲಾಗಿದೆ. ಈ ಕುರಿತು ಫ್ರಾನ್ಸ್ ಜೊತೆಗೆ ಮುಂದಿನ ವಾರ ಮಾತುಕತೆ ಆರಂಭಿಸುವುದಾಗಿ ರಕ್ಷಣಾ ಮೂಲಗಳು ಖಚಿತಪಡಿಸಿವೆ. ಒಂದೊಮ್ಮೆ ಈ ಮಾತುಕತೆ ಯಶಸ್ವಿಯಾದರೆ ಭಾರತೀಯ ನೌಕಾಸೇನೆಗೆ ಆನೆ ಬಲ ಬಂದಂತಾಗಲಿದೆ.
ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ಬೆಂಗಳೂರು(ಮೇ.29): ಭಾರತ ಮತ್ತು ಫ್ರಾನ್ಸ್ ನಡುವೆ ನಡೆದ ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ, ಭಾರತದ ರಕ್ಷಣಾ ವಲಯಕ್ಕೆ ಸಂಬಂಧಿಸಿದಂತೆ ಐತಿಹಾಸಿಕವಾದುದು. ಈ ಒಪ್ಪಂದವು ಭಾರತೀಯ ವಾಯುಸೇನೆಯ ಬಲವನ್ನು ಹೆಚ್ಚಿಸಿದ್ದಲ್ಲದೇ, ನೆರೆಯ ಚೀನಾ ಮತ್ತು ಪಾಕಿಸ್ತಾನಕ್ಕೆ ನಡುಕವನ್ನುಂಟುಮಾಡಿದ್ದು ಸುಳ್ಳಲ್ಲ. ಹಲವು ಆಯಾಮಗಳನ್ನು ಹೊಂದಿದ್ದ ಈ ರಕ್ಷಣಾ ಒಪ್ಪಂದವು, ಇದೀಗ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ.
ಐಎನ್‌ಎಸ್ ವಿಕ್ರಾಂತ್ ಯುದ್ಧ ನೌಕೆಗಾಗಿ ಒಟ್ಟು 26 ರಫೇಲ್ ಮರೀನ್ ಫೈಟರ್ ಜೆಟ್‌ಗಳನ್ನು ಖರೀದಿಸಲು ಭಾರತ ಮುಂದಾಗಿದ್ದು, ಇದಕ್ಕಾಗಿ ಫ್ರಾನ್ಸ್ ಜೊತೆಗೆ 50,000 ಕೋಟಿ ರೂಪಾಯಿಗಳ ಮಹತ್ವದ ಒಪ್ಪಂದಕ್ಕೆ ನಿರ್ಧಾರ ಮಾಡಲಾಗಿದೆ. ಈ ಕುರಿತು ಫ್ರಾನ್ಸ್ ಜೊತೆಗೆ ಮುಂದಿನ ವಾರ ಮಾತುಕತೆ ಆರಂಭಿಸುವುದಾಗಿ ರಕ್ಷಣಾ ಮೂಲಗಳು ಖಚಿತಪಡಿಸಿವೆ. ಒಂದೊಮ್ಮೆ ಈ ಮಾತುಕತೆ ಯಶಸ್ವಿಯಾದರೆ ಭಾರತೀಯ ನೌಕಾಸೇನೆಗೆ ಆನೆ ಬಲ ಬಂದಂತಾಗಲಿದೆ.
ಐಎನ್‌ಎಸ್ ವಿಕ್ರಾಂತ್ ಯುದ್ಧ ನೌಕೆಗಾಗಿ ರಫೇಲ್ ಎಂ ಯುದ್ಧ ವಿಮಾನಗಳನ್ನು ಆಯ್ಕೆ ಮಾಡಲಾಗಿದೆ. ಇದು ಭಾರತದ ಪ್ರಸ್ತುತ ರಫೇಲ್ ಜೆಟ್‌ಗಳೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸುವ ಕ್ಷಮತೆಯನ್ನು ಹೊಂದಿದೆ. ಅಲ್ಲದೇ ಈ ಆಧುನಿಕ ಯುದ್ಧ ವಿಮಾನಗಳು ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ವಿವಿಧ ಸಾಮರಿಕ ಕಾರ್ಯಾಚರಣೆಗಳನ್ನು ನಿರ್ವಹಿಸಲು ಹೆಸರುವಾಸಿಯಾದ ರಫೇಲ್ ಎಂ, ಫ್ರೆಂಚ್ ಮಿಲಿಟರಿಯಲ್ಲಿ ಅಪಾರ ಖ್ಯಾತಿಯನ್ನು ಗಳಿಸಿದೆ.
ಅಮೆರಿಕಾ ಪ್ರಾಬಲ್ಯದೆದುರು ಭಾರತದ ಸ್ವಾಯತ್ತತೆ ರಕ್ಷಿಸಲು ಮೋದಿ ಪ್ರಯತ್ನ
26 ಹೊಸ ರಫೇಲ್ ಮೆರೈನ್ ಫೈಟರ್ ಜೆಟ್ ಖರೀದಿಗೆ ನಿರ್ಧಾರ
ಭಾರತವು 26 ಹೊಸ ರಫೇಲ್ ಮೆರೈನ್ ಫೈಟರ್ ಜೆಟ್‌ಗಳ ಖರೀದಿಗೆ ನಿರ್ಧರಿಸಿದ್ದು, ಇದಕ್ಕಾಗಿ ಫ್ರಾನ್ಸ್ ಜೊತೆಗೆ ಒಟ್ಟು 50,000 ಕೋಟಿ ರೂಪಾಯಿಗಳ ಒಪ್ಪಂದವನ್ನು ಅಂತಿಮಗೊಳಿಸಲು ವೇದಿಕೆ ಸಿದ್ಧವಾಗುತ್ತಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ಈ ವರದಿಯ ಪ್ರಕಾರ ಸ್ಥಳೀಯವಾಗಿ ನಿರ್ಮಿಸಲಾದ ಯುದ್ಧ ನೌಕೆ ಐಎನ್‌ಎಸ್ ವಿಕ್ರಾಂತ್ ಅನ್ನು ಯುದ್ಧ ಸನ್ನದ್ದುಗೊಳಿಸಲು ಭಾರತ ಸರ್ಕಾರವು ಫ್ರಾನ್ಸ್‌ನಿಂದ ಈ ಜೆಟ್‌ಗಳನ್ನು ಖರೀದಿಸಲು ಈಗಾಗಲೇ ಅನುಮೋದನೆ ನೀಡಿದೆ
ಭಾರತವು ಖರೀದಿ ಮಾಡಲು ಮುಂದಾಗಿರುವ 26 ರಫೇಲ್ ಮರೀನ್ ಫೈಟರ್ ಜೆಟ್‌ಗಳಲ್ಲಿ, 22 ಸಿಂಗಲ್-ಸೀಟ್ ಜೆಟ್‌ಗಳು ಮತ್ತು ನಾಲ್ಕು ಅವಳಿ ಆಸನದ ತರಬೇತುದಾರ ವಿಮಾನಗಳು ಸೇರಿವೆ. ಎರಡೂ ರಾಷ್ಟ್ರಗಳು ಒಪ್ಪಂದಕ್ಕೆ ಸಹಿ ಹಾಕಿದ ಸುಮಾರು ಮೂರು ವರ್ಷಗಳ ನಂತರ ಈ ಜೆಟ್‌ಗಳು ಭಾರತಕ್ಕೆ ತಲುಪುವ ನಿರೀಕ್ಷೆಯಿದೆ.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಅಡಿಯಲ್ಲಿ ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿ (ADA)ಯು, ವಿಮಾನವಾಹಕ ನೌಕೆ ಕಾರ್ಯಾಚರಣೆಗಳಿಗಾಗಿ ಹೊಸ ಸ್ವದೇಶಿ ಟ್ವಿನ್ ಇಂಜಿನ್ ಡೆಕ್-ಬೇಸ್ಡ್ ಫೈಟರ್ (TEDBF) ಅನ್ನು ಅಭಿವೃದ್ಧಿಪಡಿಸುತ್ತಿದೆ. ಈ ಮಧ್ಯೆ ಆಧುನಿಕ ಯುದ್ಧ ವಿಮಾನಗಳ ಕೊರತೆಯನ್ನು ಸರಿದೂಗಿಸಲು, ಫ್ರಾನ್ಸ್ ನಿಂದ 26 ರಫೇಲ್ ಮರೀನ್ ಫೈಟರ್ ಜೆಟ್‌ಗಳನ್ನು ಖರೀದಿಸಲು ಭಾರತ ನಿರ್ಧರಿಸಿದೆ. ಏಕೆಂದರೆ ಪ್ರಸ್ತುತ ಕಾರ್ಯಾಚರಣೆಯಲ್ಲಿರುವ Mig-29K ಜೆಟ್‌ಗಳು ಸ್ವದೇಶಿ ಟ್ವಿನ್ ಇಂಜಿನ್ ಡೆಕ್-ಬೇಸ್ಡ್ ಫೈಟರ್ ಜೆಟ್‌ಗಳು ಸಿದ್ಧವಾಗುವವರೆಗೆ ಉಳಿಯುವುದಿಲ್ಲ. ಭಾರತೀಯ ನೌಕಾಪಡೆಯು ಪ್ರಸ್ತುತ ರಷ್ಯಾದಿಂದ ಖರೀದಿಸಲಾದ ಐಎನ್‌ಎಸ್ ವಿಕ್ರಮಾದಿತ್ಯ ಮತ್ತು ಸ್ವದೇಶಿ ನಿರ್ಮಿತ ಐಎನ್‌ಎಸ್ ವಿಕ್ರಾಂತ್ ಹೆಸರಿನ ಎರಡು ಆಧುನಿಕ ವಿಮಾನವಾಹಕ ನೌಕೆಗಳನ್ನು ಹೊಂದಿದೆ ಎಂಬುದು ಇಲ್ಲಿ ಉಲ್ಲೇಖನೀಯ.
ಫೈಟರ್ ಜೆಟ್‌ಗಳು ಸಾಮಾನ್ಯವಾಗಿ ಗುಣಮಟ್ಟದ ಸಮಸ್ಯೆ ಮತ್ತು ಆಗಾಗ್ಗೆ ತಪಾಸಣೆಗೆ ಗುರಿಯಾಗುವ ಅನಿವಾರ್ಯತೆಯನ್ನು ಹೊಂದಿರುತ್ತವೆ. ಭಾರತೀಯ ನೌಕಾಪಡೆಯು 2025ರ ವೇಳೆಗೆ ಪ್ರಸ್ತುತ ತನ್ನ ಬತ್ತಳಿಕೆಯಲ್ಲಿರುವ 41 MiG-29K ಸೂಪರ್‌ಸಾನಿಕ್ ಯುದ್ಧ ವಿಮಾನಗಳನ್ನು ನಿವೃತ್ತಗೊಳಿಸಲು ನಿರ್ಧಾರ ಮಾಡಿದೆ. ಐಎನ್‌ಎಸ್ ವಿಕ್ರಾಂತ್ 18 MiG-29K ಜೆಟ್‌ಗಳೊಂದಿಗೆ ಸಮುದ್ರದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದ್ದರೆ, ಐಎನ್‌ಎಸ್ ವಿಕ್ರಮಾದಿತ್ಯ 26 MiG-29K ಜೆಟ್‌ಗಳನ್ನು ತನ್ನ ಒಡಲಲ್ಲಿ ಇಟ್ಟುಕೊಳ್ಳಬಲ್ಲದು.
ಸೆಪ್ಟೆಂಬರ್ 2016 ರಲ್ಲಿ ಸಹಿ ಹಾಕಲಾದ 59,000 ಕೋಟಿ ರೂಪಾಯಿಗಳ ಪ್ರಮುಖ ಒಪ್ಪಂದದ ಅಡಿಯಲ್ಲಿ, ಭಾರತವು ತನ್ನ ವಾಯುಪಡೆಗೆ ಈಗಾಗಲೇ 36 ರಫೇಲ್ ಜೆಟ್‌ಗಳನ್ನು ಫ್ರಾನ್ಸ್‌ನಿಂದ ಖರೀದಿಸಿದೆ. ಮೊದಲ ರಫೇಲ್ ಸ್ಕ್ವಾಡ್ರನ್ ನಂ. 17 ಗೋಲ್ಡನ್ ಆರೋಸ್, ಪಶ್ಚಿಮ ವಾಯು ಕಮಾಂಡ್ ಅಡಿಯಲ್ಲಿ ಅಂಬಾಲಾದಲ್ಲಿ ನೆಲೆಗೊಂಡಿದೆ. ಎರಡನೇ ಸ್ಕ್ವಾಡ್ರನ್ ಆದ ನಂ. 101, ಭಾರತೀಯ ವಾಯುಪಡೆಯ ಪೂರ್ವ ಏರ್ ಕಮಾಂಡ್ ಅಡಿಯಲ್ಲಿ ಹಸಿಮಾರಾದಲ್ಲಿ ನೆಲೆಗೊಂಡಿದೆ. ಈ ವಿಮಾನವು ಮೂರು ಮುಖ್ಯ ಆವೃತ್ತಿಗಳಲ್ಲಿ ಬರುತ್ತದೆ. ರಫೇಲ್ ಸಿ ಹೆಸರಿನ ಏಕ-ಆಸನ ಮಾದರಿ, ರಫೇಲ್ ಬಿ ಹೆಸರಿನ, ಅವಳಿ-ಆಸನ ಮಾದರಿ ಮತ್ತು ರಫೇಲ್ ಎಂ ಹೆಸರಿನ ಸಿಂಗಲ್-ಸೀಟ್ ಕ್ಯಾರಿಯರ್ ಆಧಾರಿತ ಮಾದರಿಯಾಗಿದೆ.
ಗೋವಾದಲ್ಲಿರುವ ನೌಕಾ ಸೌಲಭ್ಯದಲ್ಲಿ ಸಂಪೂರ್ಣ ಪರೀಕ್ಷೆಯ ನಂತರವಷ್ಟೇ, ಅಮೇರಿಕಾದ F/A-18 ಸೂಪರ್ ಹಾರ್ನೆಟ್‌ಗಳ ಬದಲಿಗೆ ರಫೇಲ್ ಎಂ ಎಂದೂ ಕರೆಯಲ್ಪಡುವ ಫ್ರಾನ್ಸ್ ನಿರ್ಮಿತ ರಫೇಲ್ ಮರೀನ್ ಫೈಟರ್ ಜೆಟ್‌ಗಳನ್ನು ಆಯ್ಕೆ ಮಾಡಲಾಗಿದೆ ಎಂದು ರಕ್ಷಣಾ ಇಲಾಖೆ ಮೂಲಗಳು ಮಾಹಿತಿ ನೀಡಿವೆ. ನಿರ್ಧಿಷ್ಟವಾಗಿ ರಫೇಲ್ ಎಂ ಜೆಟ್‌ಗಳನ್ನು ಆಯ್ಕೆ ಮಾಡಲು, ಅದು ಭಾರತೀಯ ವಾಯುಪಡೆಯ ಪ್ರಸ್ತುತ ರಫೇಲ್ ಜೆಟ್‌ಗಳೊಂದಿಗೆ ಉತ್ತಮವಾಗಿ ಹೊಂದಿಕೆಯಾಗುತ್ತದೆ ಎಂಬುದು ಪ್ರಮುಖ ಕಾರಣವಾಗಿದೆ.
ಯುದ್ಧ ವಿಮಾನಗಳ ಬಿಡಿ ಭಾಗಗಳು ಮತ್ತು ನಿರ್ವಹಣಾ ವೆಚ್ಚ ಕಡಿಮೆ
ರಫೇಲ್ ಮರೀನ್ ಫೈಟರ್ ಜೆಟ್‌ಗಳ ಸೇರ್ಪಡೆಯಿಂದಾಗಿ ಯುದ್ಧ ವಿಮಾನಗಳ ಬಿಡಿ ಭಾಗಗಳು ಮತ್ತು ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡಬಹುದಾಗಿದೆ ಎಂದು ನಿರೀಕ್ಷಿಸಲಾಗಿದೆ. ಸುಲಭ ನಿರ್ವಹಣೆ ರೆಕ್ಕೆಗಳು, ಕ್ಯಾರಿಯರ್ ಲ್ಯಾಂಡಿಂಗ್‌ಗಳಿಗಾಗಿ ವಿನ್ಯಾಸಗೊಳಿಸಲಾದ ವಿಸ್ತೃತ ಏರ್‌ಫ್ರೇಮ್ ಮತ್ತು ವಾಹಕಗಳ ಮೇಲೆ ಬಂಧಿತ ಲ್ಯಾಂಡಿಂಗ್‌ಗಳಿಗಾಗಿ ಇರುವ ಟೈಲ್ ಹುಕ್ ರಫೇಲ್ ಎಂ ಜೆಟ್ ನ ಯುದ್ಧ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ಆದರೆ MIG29k ಜೆಟ್ ರೀತಿಯಲ್ಲಿ ರಫೇಲ್ ಎಂ ಯುದ್ಧ ವಿಮಾನದ ರೆಕ್ಕೆಗಳನ್ನು ಮಡಚಲು ಸಾಧ್ಯವಿಲ್ಲ ಎಂಬುದು ಇಲ್ಲಿ ಉಲ್ಲೇಖನೀಯ.
ಡಸಾಲ್ಟ್ ಏವಿಯೇಷನ್ ತಯಾರಿಸಿದ ರಫೇಲ್ ಎಂ, ಬಹುಮುಖಿ ಕಾರ್ಯಾಚರಣೆಯ ಏಕ-ಆಸನದ ಯುದ್ಧ ವಿಮಾನವಾಗಿದ್ದು, ವಾಯು ರಕ್ಷಣೆ, ಪರಮಾಣು ಕ್ಷಿಪಣಿ ದಾಳಿ ತಡೆ ಮತ್ತು ವಿಚಕ್ಷಣದಂತಹ ವಿವಿಧ ಕಾರ್ಯಾಚರಣೆಗಳನ್ನು ನಿಭಾಯಿಸಬಲ್ಲದು. ಇದರ ರೆಕ್ಕೆಗಳು 10.90 ಮೀಟರ್, ಉದ್ದ 15.30 ಮೀಟರ್ ಮತ್ತು ಎತ್ತರ 5.30 ಮೀಟರ್ ಇದೆ. ಅಲ್ಲದೇ ರಫೇಲ್ ಎಂ ಗರಿಷ್ಠ 24.5 ಟನ್ ತೂಕದೊಂದಿಗೆ ಆಗಸಕ್ಕೆ ಚಿಮ್ಮುವ ಸಾಮರ್ಥ್ಯ ಹೊಂದಿದೆ. ಜೊತೆಗೆ ಈ ಯುದ್ಧ ವಿಮಾನಗಳು 9.5 ಟನ್ ಭಾರದ ಬಾಹ್ಯ ಸಾಮಗ್ರಿಗಳನ್ನು ಹೊತ್ತೊಯ್ಯಬಲ್ಲದು. ಈ ಯುದ್ಧ ವಿಮಾನಕ್ಕೆ 750 ನಾಟ್ಸ್ ಅಥವಾ ಗಂಟೆಗೆ 1,389 ಕಿ.ಮೀ ವೇಗದಲ್ಲಿ ಹಾರುವ ಸಾಮರ್ಥ್ಯವಿದೆ. ಇದು 50,000 ಅಡಿ ಎತ್ತರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಆಧುನಿಕ ಯುದ್ಧ ವಿಮಾನವಾಗಿದೆ ಎಂಬುದು ವಿಶೇಷ.
ರಫೇಲ್ ಎಂ ಒಂದೇ ಸಮಯದಲ್ಲಿ ಗಾಳಿಯಿಂದ ನೆಲಕ್ಕೆ ಮತ್ತು ಗಾಳಿಯಿಂದ ಗಾಳಿಗೆ ಕಾರ್ಯಾಚರಣೆಗಳನ್ನು ಕೈಗೊಳ್ಳಬಹುದು. ಇದು ದೀರ್ಘ-ಶ್ರೇಣಿಯ ಪರಮಾಣು ಕ್ಷಿಪಣಿ, MICA ಕ್ಷಿಪಣಿಗಳು, ಹ್ಯಾಮರ್, ಸ್ಕ್ಯಾಲ್ಪ್, AM39 EXOCET ಮತ್ತು ಲೇಸರ್-ನಿರ್ದೇಶಿತ ಬಾಂಬ್‌ಗಳನ್ನು ಒಳಗೊಂಡಂತೆ ವ್ಯಾಪಕ ಶ್ರೇಣಿಯ ಶಸ್ತ್ರಾಸ್ತ್ರಗಳನ್ನು ತನ್ನ ಬತ್ತಳಿಕೆಯಲ್ಲಿ ಇಟ್ಟುಕೊಳ್ಳಬಹುದು. ಇದು ಪ್ರತಿ ನಿಮಿಷಕ್ಕೆ 2,500 ಸುತ್ತು ಮದ್ದು ಗುಂಡುಗಳನ್ನು ಹಾರಿಸುವ ಮುಂಭಾಗದ ಆಂತರಿಕ ಫಿರಂಗಿಯನ್ನು ಸಹ ಹೊಂದಿದೆ. ಡಸಾಲ್ಟ್ ಏವಿಯೇಷನ್ ರಫೇಲ್ ಅನ್ನು "ಓಮ್ನಿರೋಲ್ ವಿಮಾನ" ಎಂದು ಕರೆಯುತ್ತದೆ. ಅಂದರೆ ಇದು ಭಿನ್ನ ಭಿನ್ನ ಯುದ್ಧ ಬೆದರಿಕೆಗಳನ್ನು ಎದುರಿಸಬಲ್ಲದು.
ತೈಲ ಭದ್ರತೆಗಾಗಿ ಭಾರತದ ಹೆಜ್ಜೆ: ಅಮೆರಿಕಾದ ವಿರುದ್ಧ ದೃಢ ನಡೆ
ರಫೇಲ್ ಯುದ್ಧ ವಿಮಾನವು ಫ್ರೆಂಚ್ ಮಿಲಿಟರಿಯಲ್ಲಿ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಇದರ ಮೊದಲ ಆವೃತ್ತಿಯಾದ ಸ್ಟ್ಯಾಂಡರ್ಡ್ F1ನ್ನು, ಏರ್-ಟು-ಏರ್ ಕಾರ್ಯಾಚರಣೆಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಇದು 2004ರಲ್ಲಿ ತನ್ನ ಮೊದಲ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ನಂತರದ ಆವೃತ್ತಿಗಳು ಗಾಳಿಯಿಂದ ನೆಲಕ್ಕೆ ಚಿಮ್ಮುವ ಸಾಮರ್ಥ್ಯವನ್ನು ಪಡೆದುಕೊಂಡವು. ಪ್ರಸ್ತುತ ಆವೃತ್ತಿಯಾದ ಸ್ಟ್ಯಾಂಡರ್ಡ್ F3, 2008 ರಿಂದ ಫ್ರೆಂಚ್ ಮಿಲಿಟರಿಯಲ್ಲಿ ಬಳಕೆಯಲ್ಲಿದೆ. ಮುಂದೆ 2023ರ ಆರಂಭದಲ್ಲಿ ಫ್ರೆಂಚ್ ಮಿಲಿಟರಿಯು ನವೀಕರಿಸಿದ ಸ್ಟ್ಯಾಂಡರ್ಡ್ F4 ರಫೇಲ್ ಯುದ್ಧ ವಿಮಾನಗಳನ್ನು ತನ್ನ ರಕ್ಷಣಾ ಬತ್ತಳಿಕೆಗೆ ಸೇರಿಸಿಕೊಂಡಿದೆ.
ಒಟ್ಟಿನಲ್ಲಿ ಭಾರತ ಮತ್ತು ಫ್ರಾನ್ಸ್ ನಡುವಿನ ಈ ಸಂಭಾವ್ಯ ಹೊಸ ಒಪ್ಪಂದ, ಭಾರತದ ರಕ್ಷಣಾ ವ್ಯವಸ್ಥೆಯನ್ನು ಗಮನಾರ್ಹವಾಗಿ ಸುಧಾರಿಸುವ ನಿರೀಕ್ಷೆ ಇದೆ. ರಫೇಲ್ ಜೆಟ್‌ಗಳ ಸೇರ್ಪಡೆಯಿಂದಾಗಿ ಭಾರತೀಯ ವಾಯುಪಡೆ ಮತ್ತಷ್ಟು ಅಕ್ರಮಕವಾಗಿದ್ದು, ಇದೀಗ ರಫೇಲ್ ಎಂ ಜೆಟ್‌ಗಳನ್ನು ಒಳಗೊಳ್ಳುವ ಮೂಲಕ ಭಾರತೀಯ ನೌಕಾಪಡೆಯು ಸಮುದ್ರ ರಕ್ಷಣೆಯಲ್ಲಿ ಹೊಸ ಭಾಷ್ಯ ಬರೆಯಲಿದೆ.