ಅಶ್ವತ್ಥ ತಡೆದು, ಹೆಚ್ ಎಸ್ ವೆಂಕಟೇಶ ಮೂರ್ತಿ ಹತ್ರ ಬರೆಸು ಅಂದರು. ‘ಅವ್ರು ಅಷ್ಟು ಸೀರಿಯಸ್ ಕವಿ. ಇಂಥದ್ದಕ್ಕೆಲ್ಲ ಎಲ್ಲಿ ಬರೀತಾರೆ?’ ಅಂದೆ. ಅಶ್ವತ್ಥ ಎಚ್‌ಎಸ್‌ವಿ ಅವರನ್ನು ತನ್ನ ಮನೆಗೆ ಕರೆಸಿಯೇ ಬಿಟ್ಟರು.
ಧಾರಾವಾಹಿಯಲ್ಲಿ ಶೀರ್ಷಿಕೆ ಗೀತೆ ಅನ್ನೋದು ಸಂಪ್ರದಾಯ. ಮೊದಲ ದೈನಂದಿನ ಧಾರಾವಾಹಿಗಳಲ್ಲೊಂದಾಗಿ ಗುರುತಿಸಿಕೊಂಡ ನನ್ನ ನಿರ್ದೇಶನದ ‘ಮಾಯಾಮೃಗ’ ಕ್ಕೆ ಕೆ.ಎಸ್.ನರಸಿಂಹಸ್ವಾಮಿ ಅವರು ಶೀರ್ಷಿಕೆ ಗೀತೆ ಬರೆದರು. ಆಮೇಲೆ ಮನ್ವಂತರ ಬಂತು. ಆಮೇಲೆ ಮೂರನೆಯದಾಗಿ ಎಸ್‌ಎಲ್ ಬೈರಪ್ಪ ಅವರ ಕಾದಂಬರಿ ಆಧರಿತ ‘ಮತದಾನ’ ಸಿನಿಮಾ ಮಾಡಿದೆ. ಸಿ ಅಶ್ವತ್ಥ ಅವರ ಸಂಗೀತ ಸಂಯೋಜನೆ ಇತ್ತು. ಸಿನಿಮಾದಲ್ಲೊಂದು ಸನ್ನಿವೇಶ ಬರುತ್ತೆ. ನಾಯಕ ಆತ್ಮಹತ್ಯೆ ಮಾಡಿಕೊಳ್ಳಲು ಹೊರಡುತ್ತಾನೆ. ಅಲ್ಲೊಂದು ಹಾಡು ಬೇಕಿತ್ತು. ನಾನು ಲಾವಣಿ ಹಾಕ್ತೀನಿ ಅಂತ ಹೊರಟಿದ್ದೆ.
ಅಶ್ವತ್ಥ ತಡೆದು, ಹೆಚ್ ಎಸ್ ವೆಂಕಟೇಶ ಮೂರ್ತಿ ಹತ್ರ ಬರೆಸು ಅಂದರು. ‘ಅವ್ರು ಅಷ್ಟು ಸೀರಿಯಸ್ ಕವಿ. ಇಂಥದ್ದಕ್ಕೆಲ್ಲ ಎಲ್ಲಿ ಬರೀತಾರೆ?’ ಅಂದೆ. ಅಶ್ವತ್ಥ ಎಚ್‌ಎಸ್‌ವಿ ಅವರನ್ನು ತನ್ನ ಮನೆಗೆ ಕರೆಸಿಯೇ ಬಿಟ್ಟರು. ಹಾಗೆ ಬಂದ ಎಚ್‌ಎಸ್‌ವಿ ನನ್ನ ಮನಸ್ಸಲ್ಲಿದ್ದದ್ದಕ್ಕಿಂತಲೂ ಅತ್ಯುತ್ತಮವಾಗಿ ಗೀತೆ ಬರೆದರು. ‘ನಾಯಿ ತಲಿಮ್ಯಾಲಿನ ಬುತ್ತಿ ಸಂಸಾರ ಬಲು ದುಸ್ಸಾರ, ಇದನರಿತ ಅರಿತು ಮಂದಿ ಬಿದ್ದಾರ ಹಿಂದ ಬಿದ್ದಾರ’ ಅನ್ನೋ ಸಾಹಿತ್ಯವದು. ಅದಾದ ಮೇಲೆ ‘ಮುಕ್ತ’ ಧಾರಾವಾಹಿ ಮಾಡಿದೆ. ಅದು ರೈತರ ಬಗ್ಗೆ ಇತ್ತು. ಜಾಗತೀಕರಣ, ಉದಾರಿಕರಣ ಆವಾಗಷ್ಟೇ ಪ್ರಭಾವ ಬೀರಲು ಶುರು ಮಾಡಿದ್ದವು. ದೂರದಿಂದ ಯಾವುದೋ ದೇಶ ಎಲ್ಲವನ್ನೂ ನಿಯಂತ್ರಿಸುತ್ತೆ ಅನ್ನೋದಿತ್ತು. ಆ ಸಾರವನ್ನಿಟ್ಟು ಹೆಚ್‌ಎಸ್‌ವಿ;
‘ಕಾರ್ಮೋಡ ಮಳೆಯಾಗಿ ಸುರಿದಾಗ ಕಣ್ಣ ಹನಿಗೆ ಮುಕ್ತಿ
ಮರದ ಹಕ್ಕಿ ಮರಿ ರೆಕ್ಕೆ ಬೀಸಿದರೆ ಅದರ ಗರಿಗೆ ಮುಕ್ತಿ
ಎದೆಯ ನೋವು ಹಾಡಾಗಿ ಹೊಮ್ಮಿದರೆ ಭಾವಕ್ಕೆ ಬಂಧಮುಕ್ತಿ
ಎಂದು ಆದೇವ ನಾವು ಮುಕ್ತ ಮುಕ್ತ ಮುಕ್ತ’
ಎಂಬ ಮಾಂತ್ರಿಕ ಸಾಲುಗಳನ್ನು ಬರೆದರು. ಅಂದರೆ ಮೋಡ ಮಳೆಯಾಗಿ ಸುರಿದಾಗ ರೈತರ ಕಣ್ಣಲ್ಲಿ ಹೆಪ್ಪುಗಟ್ಟಿದ ಕಣ್ಣೀರು ಹೊರಬರುತ್ತೆ. ಜಾಗತೀಕರಣಕ್ಕೆ ‘ದೂರದಿಂದಲೇ ಜೀವ ಹಿಂಡುತಿದೆ ಕಾಣದೊಂದು ಹಸ್ತ’ ಎಂಬ ಸಾಲು ಬರೆದರು. ಅಶ್ವತ್ಥ ಇದಕ್ಕೆ ಪುರಿಯಾ ಧನಶ್ರೀ ರಾಗದಲ್ಲಿ ಸಂಗೀತ ಮಾಡಿದರು. ಅದೆಷ್ಟು ಜನಪ್ರಿಯ ಆಯ್ತು ಅಂದರೆ ಧಾರಾವಾಹಿಯನ್ನೂ ಮೀರಿ ಫೇಮಸ್ ಆಯ್ತು. ‘ತನ್ನಾವರಣವೆ ಸೆರೆಮನೆಯಾದರೆ ಜೀವಕೆ ಎಲ್ಲಿಯ ಮುಕ್ತಿ’ ಎಂಬಂಥಾ ಸಾಲುಗಳು, ತಾಯಿಯ ಬಗೆಗಿನ ಸಾಲುಗಳೂ ಇದ್ದವು.
ಆಮೇಲೆ ಈ ಹಾಡನ್ನು ಎಲ್ಲೆಲ್ಲೂ ಹಾಡೋದಕ್ಕೆ ಶುರು ಮಾಡಿದರು. ನಾನೆಲ್ಲಿ ಹೋದರೂ ಆ ಹಾಡು. ಒಬ್ಬ ವ್ಯಕ್ತಿಯಾದ ನನ್ನನ್ನು ತಮ್ಮ ಹಾಡಿನ ಮೂಲಕ ಗುರುತಿಸುವ ಹಾಗೆ ಮಾಡಿದರು ಎಚ್‌ಎಸ್‌ವಿ. ಏನು ಕಥೆ ಅಂತ ಕೇಳಿ ಒಂದು ಡ್ರಾಫ್ಟ್ ಮರೆಯೋರು. ಆಮೇಲೆ ಸಾಲುಗಳನ್ನು ಬರೆಯುತ್ತಾ ಹೋಗುವುದು ಅವರ ಶೈಲಿ. ನನ್ನ ‘ಮಗಳು ಜಾನಕಿ’ ಧಾರಾವಾಹಿಗೆ ‘ಬೆಂಕಿಯಿಂದ ಎದ್ದ ಬೆಳಕು ಮಗಳು ಜಾನಕಿ’ ಎಂಬ ಸಾಲು ಬರೆದಿದ್ದರು. ನಾನು ಅಲ್ಲಿ ಬೆಂಕಿಯ ಬದಲು ಅಗ್ನಿ ಹಾಕಿದರೆ ಚೆನ್ನಾಗಿರುತ್ತೇನೋ ಅಂದೆ. ಅವರು ಮುಕ್ತ ಮನಸ್ಸಿಂದ ಇದನ್ನು ಶ್ಲಾಘಿಸಿ ಹಾಗೇ ಬರೆದರು.
ಹೆಚ್‌ಎಸ್‌ವಿ ಅವರ ಗೀತೆಗಳಲ್ಲಿ ರೂಪಕಗಳು ಬಹಳ ಗಮನ ಸೆಳೆಯುತ್ತವೆ. ‘ಕನ್ನಡಿಯಲ್ಲಿ ಸಾವಿರಾರು ರೂಪಗಳು. ಒಂದಕ್ಕಾಗದರೂ ಕನ್ನಡಿಯ ಜ್ಞಾಪಕ ಇದೆಯಾ’ ಅನ್ನುವಂಥಾ ರೂಪಕಗಳಿವೆ. ಪ್ರತಿಯೊಬ್ಬನೂ ದುಃಖಜೀವಿ ಅನ್ನುತ್ತಿದ್ದರು. ಸಾಹಿತ್ಯ ಆ ದುಃಖದಿಂದ ಆಚೆ ಮನುಷ್ಯನನ್ನು ಕರ್ಕೊಂಡು ಬರುವಂಥಾದ್ದು. ಮನುಷ್ಯನ ಬದುಕೇ ಯಾತನೆ ಅಂತ. ಕಣ್ಣೀರನ್ನು ಅರಸಿಕೊಂಡು ಹೋದರೆ ಅದೇ ಕಾವ್ಯ ಅನ್ನುತ್ತಿದ್ದರು ಹೆಚ್‌ಎಸ್‌ವಿ. ಅವರ ಪ್ರಕಾರ ಬದುಕಿನಲ್ಲಿ ಸ್ಥಾಯಿ ವಿಷಾದ. ಅವರ ಅಗಲುವಿಕೆ ನನಗೆ, ಸಮಾಜಕ್ಕೆ ಬಹುದೊಡ್ಡ ನಷ್ಟ. ನಾನೀಗ ಧಾರಾವಾಹಿ ಮಾಡಿದ್ರೆ ಅದರೊಳಗಿನ ಭಾವ ಅರಿತು ಶೀರ್ಷಿಕೆ ಬರೆಯುವವರು ಯಾರೂ ಇಲ್ಲ!
