ಈ ವಿಧೇಯಕ ಶಿಕ್ಷೆ ನೀಡುವುದಕ್ಕೆ ಮಾತ್ರ ಸೀಮಿತವಾಗದೆ, ದ್ವೇಷ ಹರಡುವಿಕೆ ತಡೆಯುವ ಸಮಗ್ರ ಉದ್ದೇಶವನ್ನೂ ಹೊಂದಿದೆ. ದ್ವೇಷ ಭಾಷಣದ ಪ್ರಸಾರ, ಪ್ರಕಟಣೆ ಅಥವಾ ಪ್ರಚಾರವನ್ನು ಪರಿಣಾಮಕಾರಿಯಾಗಿ ತಡೆಯುತ್ತದೆ.
ಲೇಖಕರು: ಸಂಕೇತ ಏಣಗಿ, ಸುಪ್ರೀಂ ಕೋರ್ಟ್ ವಕೀಲರು
ಸಮಾಜದಲ್ಲಿ ಶಾಂತಿ, ಸೌಹಾರ್ದ ಮತ್ತು ಸಮಾನತೆ ಕಾಪಾಡುವುದು ಯಾವುದೇ ಪ್ರಜಾಪ್ರಭುತ್ವ ಸರ್ಕಾರದ ಆದ್ಯ ಕರ್ತವ್ಯ. ಇತ್ತೀಚೆಗೆ ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ದ್ವೇಷ ಭಾಷಣಗಳು ಮತ್ತು ದ್ವೇಷ ಅಪರಾಧಗಳು, ಸಾಮಾಜಿಕ ಸ್ವಾಸ್ಥ್ಯ ಹದಗೆಡಿಸಿವೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರದ ''ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ತಡೆಗಟ್ಟುವಿಕೆ) ವಿಧೇಯಕ-2025'' ಒಂದು ಅತ್ಯಂತ ಸಮಯೋಚಿತ ಮತ್ತು ಪ್ರಗತಿಪರ ಹೆಜ್ಜೆ.
ದ್ವೇಷ ಭಾಷಣ ಅಪರಾಧಗಳ ಸಂಬಂಧ ದೇಶದಾದ್ಯಂತ ದೊಡ್ಡಮಟ್ಟದಲ್ಲಿ ಎಫ್ಐಆರ್‌ಗಳು ದಾಖಲಾಗಿವೆ. ಇಂಥ ಪ್ರಕರಣಗಳ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್, ದ್ವೇಷ ಭಾಷಣ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಸಮಾಜದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ಅದನ್ನು ತಡೆಗಟ್ಟುವ ಕಾನೂನು ಜಾರಿಯ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿತ್ತು. ದ್ವೇಷ ಭಾಷಣ, ದ್ವೇಷ ಅಪರಾಧಗಳನ್ನು ತಡೆಗಟ್ಟಲು ಅಗತ್ಯ ಕಾನೂನು ರೂಪಿಸಿ ಜಾರಿಗೊಳಿಸುವಂತೆ ಎಲ್ಲ ರಾಜ್ಯಗಳ ಪೊಲೀಸ್ ಮಹಾ ನಿರ್ದೇಶಕರಿಗೂ ಸೂಚಿಸಿತ್ತು.
ಅದರಂತೆ ಆಯಾ ರಾಜ್ಯಗಳ ಪೊಲೀಸ್ ಮಹಾ ನಿರ್ದೇಶಕರು, ದ್ವೇಷ ಭಾಷಣ ತಡೆಯಲು ಮತ್ತು ದ್ವೇಷ ಭಾಷಣ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಎಲ್ಲ ಪೊಲೀಸ್ ಠಾಣೆಗಳಿಗೆ ನಿರ್ದೇಶಿಸುತ್ತಿದ್ದರು. ಆದರೆ, ಈವರೆಗೂ ಪ್ರತ್ಯೇಕ ಕಾನೂನು ರಚನೆಯಾಗಿರಲಿಲ್ಲ. ಭಾರತೀಯ ನ್ಯಾಯ ಸಂಹಿತೆಯಲ್ಲಿ (ಬಿಎನ್‌ಎಸ್) ದ್ವೇಷ ಭಾಷಣ/ದ್ವೇಷ ಅಪರಾಧಕ್ಕೆ ಸಂಬಂಧಿಸಿ ಒಂದು ನಿಯಮ ಸೇರಿಸಲಾಗಿದೆ. ದ್ವೇಷ ಭಾಷಣ ಅಪರಾಧ ತಡೆಯಲು ಕೇವಲ ಒಂದು ನಿಯಮ ಸಾಕಾಗುವುದಿಲ್ಲ. ಸಮಗ್ರವಾದ ಕಾನೂನು ಜಾರಿ ಅನಿವಾರ್ಯ.
ಈ ಎಲ್ಲ ವಿಚಾರಗಳನ್ನು ಪರಿಗಣಿಸಿದರೆ, ಈ ವಿಧೇಯಕವನ್ನು ರೂಪಿಸಿರುವ ರಾಜ್ಯ ಸರ್ಕಾರದ ಪ್ರಯತ್ನ ನಿಜಕ್ಕೂ ಅರ್ಥಪೂರ್ಣ. ದ್ವೇಷ ಭಾಷಣ ಮಾಡುವ ಪ್ರವೃತ್ತಿಯವರು ಮಾತ್ರ ಈ ವಿಧೇಯಕ ವಿರೋಧಿಸುತ್ತಾರೆ. ಮೇಲಾಗಿ ಈ ವಿಧೇಯಕ ಯಾರೊಬ್ಬರ ಮಾತನಾಡುವ ಹಕ್ಕನ್ನೂ ಕಸಿದುಕೊಳ್ಳುತ್ತಿಲ್ಲ. ದ್ವೇಷ ಭಾಷಣ, ದ್ವೇಷ ಅಪರಾಧಗಳನ್ನು ನಿಯಂತ್ರಿಸುತ್ತದೆ. ಮುಖ್ಯವಾಗಿ ಯಾವುದೇ ಕಾಲಮಾನದಲ್ಲಾದರೂ ದ್ವೇಷ ಭಾಷಣ ಮುಕ್ತ ಭಾಷಣವಲ್ಲ.
ಈ ವಿಧೇಯಕ ಶಿಕ್ಷೆ ನೀಡುವುದಕ್ಕೆ ಮಾತ್ರ ಸೀಮಿತವಾಗದೆ, ದ್ವೇಷ ಹರಡುವಿಕೆ ತಡೆಯುವ ಸಮಗ್ರ ಉದ್ದೇಶವನ್ನೂ ಹೊಂದಿದೆ. ದ್ವೇಷ ಭಾಷಣದ ಪ್ರಸಾರ, ಪ್ರಕಟಣೆ ಅಥವಾ ಪ್ರಚಾರವನ್ನು ಪರಿಣಾಮಕಾರಿಯಾಗಿ ತಡೆಯುತ್ತದೆ. ದ್ವೇಷ ಭಾಷಣ ಅಪರಾಧ ಎಸಗಿ, ಸಮಾಜದಲ್ಲಿ ಅಶಾಂತಿ ಉಂಟುಮಾಡುವ ವ್ಯಕ್ತಿಗಳು ಅಥವಾ ಸಂಸ್ಥೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಿದೆ. ಮೇಲಾಗಿ, ದ್ವೇಷದ ಅಪರಾಧಗಳಿಂದ ಹಾನಿಗೊಳಗಾದ ಸಂತ್ರಸ್ತರಿಗೆ ಸೂಕ್ತ ಪರಿಹಾರ, ರಕ್ಷಣೆ ಒದಗಿಸುತ್ತದೆ.
ಕಾನೂನು, ಸಾಂವಿಧಾನಿಕ ಆಯಾಮಗಳು: ರಾಜ್ಯ ಸರ್ಕಾರ ವಿಧೇಯಕ ರೂಪಿಸಿರುವುದು ಸುಪ್ರೀಂ ಕೋರ್ಟ್‌ನ ನಿರ್ದೇಶನಗಳ ಪಾಲನೆಯಾಗಿದೆ. ಈ ವಿಧೇಯಕ ನ್ಯಾಯಾಲಯದ ಆಶಯಗಳಿಗೆ ಪೂರಕವಾಗಿದೆ. ಇದು ರಾಜ್ಯಮಟ್ಟದಲ್ಲಿ ಒಂದು ಬಲಿಷ್ಠ ಕಾನೂನು ಚೌಕಟ್ಟು ಒದಗಿಸುತ್ತದೆ.
ಬಿಎನ್‌ಎಸ್ ಮತ್ತು ಐಟಿ ಕಾಯ್ದೆಯ ಸಮನ್ವಯ: ಈ ವಿಧೇಯಕ ಭಾರತೀಯ ನ್ಯಾಯ ಸಂಹಿತೆ-2023 ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಿಬಂಧನೆಗಳೊಂದಿಗೆ ಸಮನ್ವಯ ಸಾಧಿಸಿದೆ. ದ್ವೇಷ ಭಾಷಣವನ್ನು ಜಾತಿ, ಧರ್ಮ, ಭಾಷೆ, ಲಿಂಗ ಅಥವಾ ಪ್ರಾದೇಶಿಕತೆ ಆಧಾರದ ಮೇಲೆ ದ್ವೇಷ ಪ್ರಚೋದಿಸುವ ಕೃತ್ಯ ಎಂದು ವಿಧೇಯಕ ವ್ಯಾಖ್ಯಾನಿಸಿದೆ. ಆ ಮೂಲಕ ಕಾನೂನುಬದ್ಧ ಸ್ಪಷ್ಟತೆ ನೀಡುತ್ತದೆ.
ದಂಡನೆ, ತಡೆಗಟ್ಟುವಿಕೆ: ವಿಧೇಯಕದಡಿ ದ್ವೇಷಾಪರಾಧಗಳನ್ನು ಜಾಮೀನು ರಹಿತ ಎಂದು ಪರಿಗಣಿಸಲಾಗಿದೆ. ಮೊದಲ ಬಾರಿ ಅಪರಾಧ ಎಸಗುವವರಿಗೆ 1 ರಿಂದ 7 ವರ್ಷವರೆಗೆ ಜೈಲು ಶಿಕ್ಷೆ, 50 ಸಾವಿರ ರು. ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಅಪರಾಧ ಪುನರಾವರ್ತನೆ ಮಾಡಿದವರಿಗೆ 10 ವರ್ಷವರೆಗೆ ಜೈಲು ಶಿಕ್ಷೆ ವಿಸ್ತರಿಲು ಅವಕಾಶ ಇದೆ. ಆ ಮೂಲಕ ದ್ವೇಷ ಭಾಷಣ ಅಪರಾಧ ಪ್ರವೃತ್ತಿ ಹೊಂದಿರುವ ಅಪರಾಧಿಗಳಲ್ಲಿ ಭಯ ಹುಟ್ಟಿಸಲು ಸಹಕಾರಿ. ಹಾಗೆಯೇ, ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಖಾತರಿಪಡಿಸುತ್ತದೆ. ಪದೇ ಪದೆ ಈ ಅಪರಾಧಗಳಲ್ಲಿ ಭಾಗಿಯಾಗಬಾರದು ಎಂಬ ಎಚ್ಚರಿಕೆಯನ್ನೂ ಮೂಡಿಸುತ್ತದೆ.
ಸಾಮಾಜಿಕ ಆಯಾಮಗಳು: ವಿಧೇಯಕ ಕೇವಲ ದಂಡನಾ ಕ್ರಮಗಳಲ್ಲದೆ ಸಾಮಾಜಿಕ ಆಯಾಮಗಳನ್ನು ಹೊಂದಿದೆ. ಮೊದಲಿಗೆ ಸಾಮಾಜಿಕ ಸಾಮರಸ್ಯದ ರಕ್ಷಣೆ. ಕರ್ನಾಟಕ ಸಾಂಸ್ಕೃತಿಕ ವೈವಿಧ್ಯತೆಯ ನಾಡು. ದ್ವೇಷ ಭಾಷಣಗಳು ಸಮಾಜದ ವಿವಿಧ ವರ್ಗಗಳ ನಡುವೆ ಅಪನಂಬಿಕೆ ಬಿತ್ತುತ್ತವೆ. ಈ ಕಾನೂನು ಅಲ್ಪಸಂಖ್ಯಾತರು, ದಲಿತರು ಮತ್ತು ಹಿಂದುಳಿದ ವರ್ಗಗಳ ವಿರುದ್ಧದ ದ್ವೇಷಪೂರಿತ ದಾಳಿ ತಡೆಯಲು ‘ಕವಚ’ವಾಗಿ ಕೆಲಸ ಮಾಡುತ್ತದೆ. ಜೊತೆಗೆ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ, ಸಾಮಾಜಿಕ ಸ್ವಾಸ್ಥ್ಯ ಕಾಪಾಡಲಿದೆ.
ಡಿಜಿಟಲ್ ಮಾಧ್ಯಮದ ಮೇಲೆ ನಿಗಾ: ಇಂದು ಸಾಮಾಜಿಕ ಜಾಲತಾಣಗಳು ದ್ವೇಷ ಹರಡುವ ಪ್ರಮುಖ ವೇದಿಕೆಗಳಾಗಿವೆ. ವಿಧೇಯಕವು ಡಿಜಿಟಲ್ ಮಾಧ್ಯಮದ ದ್ವೇಷದ ಅಂಶಗಳನ್ನು ತೆಗೆದುಹಾಕಲು ಅಥವಾ ನಿರ್ಬಂಧಿಸಲು ಸರ್ಕಾರಕ್ಕೆ ಅಧಿಕಾರ ನೀಡುತ್ತದೆ. ಇದು ಸುಳ್ಳು ಸುದ್ದಿಗಳ ನಿಯಂತ್ರಣಕ್ಕೂ ಪರಿಣಾಮಕಾರಿ.
ಸಾಂಸ್ಥಿಕ ಜವಾಬ್ದಾರಿ: ಈ ವಿಧೇಯಕದ ಮತ್ತೊಂದು ಪ್ರಮುಖ ಅಂಶವೆಂದರೆ, ಕೇವಲ ವ್ಯಕ್ತಿಗಳನ್ನಷ್ಟೇ ಅಲ್ಲದೆ ದ್ವೇಷವನ್ನು ಪ್ರಚೋದಿಸುವ ಸಂಘಟನೆ ಅಥವಾ ಸಂಸ್ಥೆಗಳನ್ನೂ ಹೊಣೆಗಾರರನ್ನಾಗಿ ಮಾಡಿದೆ. ಇದು ಸಂಘಟಿತ ರೂಪದಲ್ಲಿ ನಡೆಯುವ ಕೋಮು ಪ್ರಚೋದನೆಗಳಿಗೆ ದೊಡ್ಡ ತಡೆ.
ವಾಕ್ ಸ್ವಾತಂತ್ರ್ಯಕ್ಕೆ ಧಕ್ಕೆ ಇಲ್ಲ
ಈ ವಿಧೇಯಕ ಯಾರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೂ ಕಸಿದುಕೊಳ್ಳುವುದಿಲ್ಲ. ದ್ವೇಷ ಭಾಷಣ, ದ್ವೇಷ ಅಪರಾಧಗಳನ್ನು ನಿಯಂತ್ರಿಸುತ್ತದೆ. ವಾಸ್ತವವಾಗಿ ಅಭಿವ್ಯಕ್ತಿ ಸ್ವಾತಂತ್ರ್ಯ ಮೂಲಭೂತ ಹಕ್ಕಾಗಿದ್ದರೂ, ಅದು ಮತ್ತೊಬ್ಬರ ಘನತೆಗೆ ಧಕ್ಕೆ ತರುವ ಅಥವಾ ಸಮಾಜದಲ್ಲಿ ರಕ್ತಪಾತಕ್ಕೆ ಕಾರಣವಾಗುವ ಹಕ್ಕು ನೀಡುವುದಿಲ್ಲ. ಎಂದಿಗೂ ‘ದ್ವೇಷ ಭಾಷಣ ಮುಕ್ತ ಭಾಷಣವಲ್ಲ’ ಎಂಬ ತತ್ವವನ್ನು ವಿಧೇಯಕ ಎತ್ತಿ ಹಿಡಿಯುತ್ತದೆ. ಆ ಮೂಲಕ ನಾಗರಿಕರ ಸುರಕ್ಷತೆ, ರಾಜ್ಯದ ಅಖಂಡತೆ ಕಾಪಾಡುವ ಪ್ರಯತ್ನ ಈ ವಿಧೇಯಕದಲ್ಲಿದೆ. ಆದ್ದರಿಂದ ಈ ವಿಧೇಯಕ ಜಾರಿಯಾಗುವುದು ಅತ್ಯಗತ್ಯ.


