ಪೋಷಕರ ಮದ್ಯವ್ಯಸನದಿಂದ ನೂರಾರು ಮಕ್ಕಳು ನಲುಗುತ್ತಿದ್ದಾರೆ. ಅಂಥಾ ಮಕ್ಕಳನ್ನು ನೋಯದಿರುವಂತೆ ನೋಡಿಕೊಳ್ಳುವ ಜವಾಬ್ದಾರಿ ಪೋಷಕರದ್ದೂ ಇದೆ, ಸಮಾಜದ್ದೂ ಇದೆ. ಇದು ಪೋಷಕರ ಮದ್ಯವ್ಯಸನದಿಂದ ನೊಂದು, ಆಮೇಲೆ ಕಷ್ಟಪಟ್ಟು ಓದಿ ಗೆಲುವು ಪಡೆದು ಹೆಣ್ಣು ಮಗಳ ಅನುಭವ ಕಥನ.

ಅಶ್ವಿನಿ ಹೆಚ್‌. ನಂದಳಿಕೆ

ಸುಮಾರು 12 ವರ್ಷಗಳ ಹಿಂದೆ ಒಂದು ಬೆಳಿಗ್ಗೆ ಯಾರೋ ಜೋರಾಗಿ ಮನೆಯ ಬಾಗಿಲು ತಟ್ಟುತ್ತಿದ್ದರು. ಓಡಿ ಹೋಗಿ ಬಾಗಿಲು ತೆರೆದರೆ ಅಲ್ಲಿ ಮನೆ ಬಾಡಿಗೆ ಹಣ ಕೇಳಲು ಮನೆ ಮಾಲೀಕರು ನಿಂತಿದ್ದರು. ಸುತ್ತಮುತ್ತ ಅಕ್ಕಪಕ್ಕದ ಮನೆಯವರು ಉಪ್ಪು-ಖಾರ ಹಾಕಿ ಮಾತನಾಡಲು ಸೇರಿದ್ದರು.

ಎರಡು ತಿಂಗಳ ಬಾಡಿಗೆ ಬಾಕಿ ಇತ್ತು. ನನಗೆ ಆಕಾಶ ತಲೆ ಮೇಲೆ ಬಿದ್ದಂತೆ ಅನ್ನಿಸಿತು. ಮನೆ ಬದಲಿಸುವುದು ಹೊಸ ಸಂಗತಿ ಏನೂ ಆಗಿರಲಿಲ್ಲ. ಆದರೆ ಅಂಥದ್ದೊಂದು ಅವಮಾನ ಎದುರಿಸುವ ಶಕ್ತಿ ಆ ಕ್ಷಣಕ್ಕೆ ಇರಲಿಲ್ಲ.

ಈ ಅವಮಾನಕರ ಜೀವನದ ಕಗ್ಗತ್ತಲ ನಡಿಗೆ ಶುರುವಾದದ್ದು ನನ್ನ 13ನೇ ವಯಸ್ಸಿನಲ್ಲಿ. ತಂದೆ ಹೃದಯಾಘಾತದಿಂದ ತೀರಿಕೊಂಡ ನಂತರ. ತಂದೆ ಹೋದ ಬಳಿಕ ತಾಯಿ ಮಾನಸಿಕವಾಗಿ ನೊಂದಳು. ಆ ನೋವನ್ನು ಮರೆಯಲು ಮದ್ಯವ್ಯಸನಕ್ಕೆ ಬಲಿಯಾದಳು. ಮುಂದೊಂದು ದಿನ ಇದೇ ವ್ಯಸನ ಮಾನಸಿಕ ಅಸ್ವಸ್ಥತೆಗೆ ಕಾರಣವಾಯಿತು. ಅಷ್ಟೇ ಅಲ್ಲ ನನ್ನ ಆಸೆ-ಕನಸುಗಳಿಗೂ ಬೇಲಿ ಹಾಕಿತು.

ತಂದೆ ಜ್ಯುವೆಲ್ಲರಿ ಅಂಗಡಿಯ ಮಾಲೀಕರಾಗಿದ್ದರು. ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದವರು. ಕಷ್ಟ ಅಂತ ಬಂದವರಿಗೆ ಸಹಾಯ ಮಾಡುವ ವ್ಯಕ್ತಿತ್ವ. ಊರವರಿಗೆ ಅಪ್ಪ ಎಂದರೆ ಗೌರವ. ಆದರೆ ದಿನ ಕುಡಿದು ಬಂದು ಮನೆಯಲ್ಲಿ ಮಾತ್ರ ಯುದ್ಧಕಾಂಡ. ಅಪ್ಪನಿಗೂ ಅಮ್ಮನಿಗೂ ಪ್ರತೀದಿನ ಗಲಾಟೆ.

ಅಪ್ಪ ಹೋದಮೇಲೆ ಅಮ್ಮನಿಗೂ ಮದ್ಯವ್ಯಸನ ಶುರುವಾಯಿತು. ಬೆಳಿಗ್ಗೆ ಎದ್ದ ತಕ್ಷಣ ಬೇಕಾಗುತ್ತಿತ್ತು. ಇಲ್ಲವೆಂದರೆ ಅವಳು ಅವಳಾಗಿರುತ್ತಿರಲಿಲ್ಲ. ಕಾರಣವಿಲ್ಲದೆ ಒಬ್ಬಳೇ ಮಾತಾಡುವುದು, ರಾತ್ರಿ ವೇಳೆಯಲ್ಲಿ ಕಿರುಚಾಡುವುದು, ಇದ್ದಕ್ಕಿದ್ದಂತೆ ಬದಲಾಗುವ ವಿಚಿತ್ರ ವರ್ತನೆಯಿಂದ ಬದುಕುವುದೇ ಒಂದು ದೊಡ್ಡ ಸಾಹಸವಾಗಿತ್ತು. ಕಾಲ ಕಳೆದಂತೆ ಕುಟುಂಬದ ನಿರ್ಲಕ್ಷ್ಯ ಪ್ರಾರಂಭವಾಯಿತು. ನನ್ನ ಅಣ್ಣನಿಂದ ದೂರವಾದೆ. ಕುಟುಂಬದ ಸದಸ್ಯರೇ ನನ್ನ ಕುತ್ತಿಗೆ ಹಿಡಿದು ಹೊರದಬ್ಬಿದರು. ಇದೆಲ್ಲಕ್ಕೂ ಕಾರಣ ನನ್ನ ತಾಯಿಯ ಮದ್ಯಪಾನ ಚಟ.

ಎಲ್ಲರನ್ನೂ ತೊರೆದು ಒಂದು ದಿನ ನಾನು ನನ್ನ ತಾಯಿಯೊಂದಿಗೆ ಅಜ್ಜಿಯ ಮನೆಯಿಂದ ಹೊರಬರಬೇಕಾಯಿತು. ಬಾಡಿಗೆ ಮನೆಯ ವಾಸ ಪ್ರಾರಂಭವಾಯಿತು. ಹುಟ್ಟಿನಿಂದಲೂ ಬಾಡಿಗೆ ಮನೆಯಲ್ಲೇ ಇದ್ದ ನನಗೆ ಸ್ವಂತ ಮನೆಯಲ್ಲಿ ಬದುಕುವ ಆಸೆ ಇತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಅಪ್ಪ ಅಮ್ಮ ಅನ್ಯೋನ್ಯವಾಗಿ ಇರುವುದನ್ನು ನೋಡಬೇಕು ಅಂತ ಆಸೆ ಇತ್ತು. ಅದೂ ಆಗಲಿಲ್ಲ.

ಅಮ್ಮ ಬೀಡಿ ಕಟ್ಟುತ್ತಿದ್ದರು. ಸಿಕ್ಕ ಹಣ ಅವಳ ಮದ್ಯದ ಖರ್ಚಿಗೆ ಹೋಗುತ್ತಿತ್ತು. ನಾನು 9ನೇ ತರಗತಿ ಮುಗಿಸಿ ಇನ್ನೇನು 10ನೇ ತರಗತಿ ಕಲಿಯಬೇಕೆಂಬ ಕನಸು ಹೊತ್ತವಳು. ಆ ಕನಸನ್ನು ತ್ಯಜಿಸಿ, ಸ್ವಲ್ಪ ಸಮಯ ಊರ ಹತ್ತಿರದ ಟೆಕ್ಸ್‌ಟೈಲ್‌ ಅಂಗಡಿಗೆ ಕೆಲಸಕ್ಕೆ ಸೇರಿದೆ.

ಕೆಲಸಕ್ಕೆ ಹೋದರೂ ಮನೆಯಲ್ಲಿ ಕುಡಿದು ಬೀಳುವ ತಾಯಿಯ ಬಗ್ಗೆಯೇ ಯೋಚನೆ. ಎಲ್ಲಿ ಬೀಳುವಳೋ, ಏನಾಗುವುದೋ ಎಂಬ ತಳಮಳ. ರಾತ್ರಿಯಾದರೆ ಸಾಕು, ಅಮ್ಮನ ವಿಚಿತ್ರ ಗೊಣಗಾಟ ಪ್ರಾರಂಭ. ಅವಳು ಒಬ್ಬಳೇ ಮಾತನಾಡುತ್ತಿದ್ದಳು. ಇದು ನನ್ನ ಭಯವನ್ನು ದುಪ್ಪಟ್ಟುಗೊಳಿಸಿತ್ತು. ಅದೆಷ್ಟೋ ಬಾರಿ ಪಕ್ಕದ ಮನೆಗೆ ಹೋಗಿ ಮಲಗಿದ್ದುಂಟು. ಆ ಮನೆಯವರು ನನ್ನ ಬಗ್ಗೆ ಗೊಣಗಾಡಿದ್ದುಂಟು.

6 ವರ್ಷಗಳಲ್ಲಿ ಸುಮಾರು 10 ಬಾಡಿಗೆ ಮನೆಗಳಿಗೆ ಹೋದೆವು. ಎಲ್ಲಿಯೂ ನೆಮ್ಮದಿ ಇರಲಿಲ್ಲ. ಈ ಮಧ್ಯೆ ತಾಯಿ ಹೋಟೆಲ್ ಕೆಲಸ ಮಾತ್ರವಲ್ಲ, ಹಲವು ಕೆಲಸಗಳಿಗೆ ಹೋಗಿ ಕುಡಿದು ತೂರಾಡಿ, ಬೈಸಿಕೊಂಡು ಬಂದಿದ್ದರು. ಮನೆಗೆ ಬಂದಾಗ ಸುತ್ತಲೂ ಕುಡಿತದ ವಾಸನೆಯೇ ಇರುತ್ತಿತ್ತು. ಕುಡುಕಿಯ ಮಗಳು ಎಂಬ ಪಟ್ಟ ಆ ವಯಸ್ಸಿನಲ್ಲಿ ನನಗೆ ಸಿಕ್ಕಿತ್ತು.

ಇಷ್ಟೆಲ್ಲಾ ಅಡ್ಡಬೇಲಿಗಳಿದ್ದರೂ ನನಗೆ ಕಲಿಯುವ ಆಸೆ ಇತ್ತು. ಊರ ಹಿರಿಯರನ್ನು ಭೇಟಿಯಾಗಿ ಸಹಾಯ ಪಡೆದು 10ನೇ ತರಗತಿಗೆ ಹೇಗೋ ಸೇರಿದೆ. ಶಾಲೆಗೆ ಸೇರಿದ ನಾಲ್ಕನೇ ದಿನ ಆಯಾಸಗೊಂಡು ಮನೆಗೆ ಬಂದಾಗ ಮನೆಯ ಕದವೇ ತೆರೆಯಲಿಲ್ಲ. ಅಮ್ಮ ಬಾಗಿಲು ಹಾಕಿ ಕುಡಿದು ಮಲಗಿದ್ದರು. ಬಾಗಿಲು ತಟ್ಟಿ ಕಣ್ಣೀರಿಟ್ಟು ಸೊರಗಿ ಹೋದ ನನ್ನ ಕಣ್ಣೀರು ಒರೆಸಲು ಒಂದು ಕೈ ಇರಲಿಲ್ಲ.

ಶಿಕ್ಷಕರ ಬೆಂಬಲದಿಂದ ಹೇಗೋ 10ನೇ ತರಗತಿ ಪರೀಕ್ಷೆ ಮುಗಿಸಿ 70% ಅಂಕ ಪಡೆದೆ. ನಂತರದ ದಿನಗಳಲ್ಲಿ ಮತ್ತೆ ಶಿಕ್ಷಣದ ಆಸೆಯನ್ನು ಕೈಬಿಟ್ಟು 2 ವರ್ಷ ಕೆಲಸದ ಹಾದಿ ಹಿಡಿದೆ. 6 ವರ್ಷದಲ್ಲಿ ಒಟ್ಟು 7 ಕೆಲಸಗಳಿಗೆ ಹೋಗಿದ್ದೆ. ಜೆರಾಕ್ಸ್ ಅಂಗಡಿ, ಬಟ್ಟೆ ಅಂಗಡಿ ಮಾತ್ರವಲ್ಲ, 2-3 ಕಡೆ ಮನೆ ಕೆಲಸಕ್ಕೂ ಹೋಗಿದ್ದೆ. ನನ್ನ ವಯಸ್ಸಿಗೆ ಮೀರಿ ಅವರಿವರ ಬಾಯಿಂದ ಸಾಕಷ್ಟು ಟೀಕೆ ಕೇಳಬೇಕಿತ್ತು. ಕೆಲಸಗಳನ್ನು ಮಾಡಲೇಬೇಕಿತ್ತು.

ಈ ದಿನಗಳಲ್ಲಿ ಒಂದಷ್ಟು ದಿನ ನೆಮ್ಮದಿಯಲ್ಲಿ ಇದ್ದೆ ಎಂದರೆ ಅದು ಆಸ್ಪತ್ರೆಯಲ್ಲಿ ಮಾತ್ರ. ಕುಡಿತ ಬಿಟ್ಟ ನಾಲ್ಕೇ ದಿನಕ್ಕೆ ತಾಯಿಯ ಆರೋಗ್ಯ ಕೆಡುತ್ತಿತ್ತು. ಯಾವುದೇ ಆಹಾರ ಹೊಟ್ಟೆಯೊಳಗೆ ನಿಲ್ಲುತ್ತಿರಲಿಲ್ಲ. ಲಿವರ್ ಸಮಸ್ಯೆ, ಬಿ.ಪಿ., ಶುಗರ್, ಅಸ್ತಮಾ ಎಲ್ಲವೂ ಒಟ್ಟಾಗಿತ್ತು. ಆ ಸಮಯದಲ್ಲಿ ಕುಡಿತವಿಲ್ಲದ ಕಾರಣ ನನ್ನ ನಿಜವಾದ ತಾಯಿಯೊಂದಿಗೆ ಮಾತನಾಡುತ್ತಿದ್ದೆ. ಒಂದು ತಿಂಗಳು ಆಸ್ಪತ್ರೆಯಲ್ಲೇ ಕಳೆದು ಮನೆಗೆ ಹೋದಾಗ ಮತ್ತೆ ಅದೇ ಚಿಂತೆ, ಮತ್ತೆ ಕುಡಿಯುತ್ತಾಳೆ ಎಂಬ ಭಯ. ಅದು ನಿಜವೇ ಆಗುತ್ತಿತ್ತು.

ಹೀಗೆ ನಾನಾ ಕಾರಣಗಳಿಗೆ ಹಾಕಿದ ರಜೆಯಿಂದ ಅದೆಷ್ಟೋ ಕೆಲಸಗಳನ್ನು ಕಳೆದುಕೊಂಡೆ. ಮನೆಯಲ್ಲಿ ಅಕ್ಕಿ ಖಾಲಿಯಾದಾಗ ಉಪವಾಸ ಮಾಮೂಲಾಗಿತ್ತು. ಒಂದು ವರ್ಷದಲ್ಲಿ ಕೇವಲ ಮೂರು ಜೊತೆ ಬಟ್ಟೆ, ಹರಕಲು ಚಪ್ಪಲಿಯಲ್ಲೇ ದಿನ ಕಳೆದೆ. ಹೇಳಲು ಹೋದರೆ ಇನ್ನು ಸಾಕಷ್ಟು ವೇದನೆಗಳಿವೆ, ಕಥೆಯೊಳಗೆ ಕಥೆಗಳಿವೆ..

ಇದು ನನ್ನ ಕಥೆ. ಈ ಕಥೆ ಹೀಗೆ ಮುಂದುವರೆಯಬಹುದೆಂದು ಅಂದುಕೊಂಡಿದ್ದೆ.

ಆದರೆ ಇಲ್ಲ. ಇಂದು ನಾನು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದ ಒಬ್ಬ ಜರ್ನಲಿಸ್ಟ್. ಯಾವ ಸಂಬಂಧದ ಸಹಾಯವಿಲ್ಲದೆ, ಅನಿರೀಕ್ಷಿತವಾಗಿ ಸಿಕ್ಕ ಒಬ್ಬ ಅದ್ಭುತ ವ್ಯಕ್ತಿಯಿಂದ ನನ್ನ ಜೀವನ ಬದಲಾಯಿತು. ಕೆಲಸ, ಮನೆ ಎರಡನ್ನೂ ಕಳೆದುಕೊಂಡ ನಮಗೆ ದೇವರಂತೆ ಎದುರಾಗಿದ್ದು ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ. ಅವರು ನನಗೆ 7 ವರ್ಷದ ಶಿಕ್ಷಣವನ್ನು ಕೊಡುಗೆಯಾಗಿ ನೀಡಿದ ವ್ಯಕ್ತಿ. ತಾಯಿಯ ಕುಡಿತದ ಬಗ್ಗೆ ತಿಳಿದು ಅವರು ಬಾಳಿಗ ಆಸ್ಪತ್ರೆಗೆ ಸೇರಿಸಿದರು. ಒಂದು ತಿಂಗಳು ಅಲ್ಲಿ ಉಳಿದರೂ ಸರಿಹೋಗದ ಚಟಕ್ಕೆ ಉಳಿದ ಒಂದೇ ದಾರಿ ಆಶ್ರಮ.

ಅಂದೊಮ್ಮೆ ರಾಣಿಯಂತೆ ಕಾಲ ಕಳೆದವಳು ಆಶ್ರಮದಲ್ಲಿ ನನ್ನ ಹೆಸರು ಕೂಗಿ ಅತ್ತು ಕರೆದಾಗ ನನಗಾದ ನೋವನ್ನು ಹೇಗೆ ಹೇಳುವುದೋ ತಿಳಿಯದು. ಜೀವನದ ಅತೀ ದುಃಖದ, ಮರೆಯಲಾಗದ ದಿನ ಅದು.

ನಂತರ ನಾನೂ 5 ವರ್ಷಗಳ ಕಾಲ ಶಿಕ್ಷಣಕ್ಕಾಗಿ ಹಾಸ್ಟೆಲ್‌ನಲ್ಲಿ ಇದ್ದೆ. ಅನಿವಾರ್ಯತೆ, ಅವಶ್ಯಕತೆ ಎಲ್ಲವೂ ತಾಳ್ಮೆಯನ್ನು ಕಲಿಸಿತು. ಮಾನಸಿಕವಾಗಿ ಕುಗ್ಗಿ ಹೋದ ನಾನು ನಿದ್ದೆ ಮಾಡುವುದನ್ನೇ ಮರೆತಿದ್ದೆ. ಅದೇ ಆಸ್ಪತ್ರೆಯಲ್ಲಿ ನನಗೂ ಚಿಕಿತ್ಸೆ ಖಾಯಂ ಆಗಿತ್ತು. ನನ್ನನ್ನು ಮಾನಸಿಕವಾಗಿ ಬಲಪಡಿಸಿ, ಇಂದಿಗೂ ಯಾವುದಕ್ಕೂ ಕುಗ್ಗದೆ, ಬಗ್ಗದೆ ಧೈರ್ಯವಾಗಿ ಇದ್ದೇನೆಂದರೆ ಮುಖ್ಯ ಕಾರಣ ಅಲ್ಲಿನ ಮನೋವೈದ್ಯರು.

2 ವರ್ಷದ ನಂತರ ಓದುವ ಆಸೆ ಇದ್ದರೂ ಎರಡು ವಿಷಯಗಳಲ್ಲಿ ಫೇಲ್ ಆದೆ. ಇದು ನನಗೆ ದಕ್ಕಿದ ನೋವಿನ ಪರಿಣಾಮ. ಮನುಷ್ಯನಿಗೆ ಸಾಧ್ಯವಾಗದ್ದು ಯಾವುದೂ ಇಲ್ಲ ಎಂಬುದನ್ನು ಅರಿತು ಮತ್ತೊಮ್ಮೆ ಪ್ರಯತ್ನಿಸಿದೆ. ಸಹಾಯ ಮಾಡಿದವರನ್ನು ನೆನೆದು ಸಾಗಿದೆ. ಎಲ್ಲರಿಗೂ ಅಚ್ಚರಿಯಾಗುವಂತೆ ಆ ಫೇಲ್ ಆದ ಹುಡುಗಿ 2 ಪಿ.ಯು.ಸಿ.ಯಲ್ಲಿ ಡಿಸ್ಟಿಂಕ್ಷನ್‌ನಲ್ಲಿ ಪಾಸ್ ಆದಳು. ಹೌದು, ಕ್ಲಾಸ್‌ಗೆ ಫಸ್ಟ್!

ಇಲ್ಲಿಂದ ನನ್ನ ಕನಸಿನ ಓಟ ಪ್ರಾರಂಭವಾಯಿತು. ದೂರವಾಗಿದ್ದ ನನ್ನ ಅಣ್ಣ ಹಾಗೂ ಅತ್ತಿಗೆಯನ್ನು ಸೇರಿದೆ. ಜೀವನದ ಅತೀ ಹೆಚ್ಚಿನ ವರ್ಷ ನಾನು ಹಾಸ್ಟೆಲ್ ನಲ್ಲೆ ಕಳೆದೆ. ಈಗ ಗೂಡು ಸೇರಿದ್ದೇನೆ. ಎಲ್ಲಾ ಅನುಭವಗಳೊಂದಿಗೆ, ಎಲ್ಲಿಯಾದರು ಹೋಗಿ ಬದುಕಬಲ್ಲೆನೆಂಬ ಆತ್ಮವಿಶ್ವಾಸವನ್ನು ನಾನು ಇಂದಿಗೂ ಮರೆತಿಲ್ಲ. ಇದು ಹಲವು ವರ್ಷಗಳ ನಂತರ ನನಗೊಲಿದ ಅತ್ಯುತ್ತಮ ಧೈರ್ಯ.

ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ವ್ಯಾಸಂಗ ಮಾಡಿದೆ. ನಂತರ ಬೆಂಗಳೂರಿನಲ್ಲಿ ಸೋಷಿಯಲ್ ಮೀಡಿಯಾ ನಿರ್ವಹಿಸುವ ಸಂಸ್ಥೆಯಲ್ಲಿ ಕೆಲಸ ಮಾಡಿದೆ. ಈಗ ಮತ್ತೆ ಊರಿಗೆ ಮರಳಿದೆ. ಒಂದು ನ್ಯೂಸ್ ಚಾನಲ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ. ಇದು ನನ್ನ ದಾರಿ, ನನ್ನ ಕಥೆ.

ಈ ನಡುವೆ ಅಮ್ಮನ ಕಥೆ ಅಚ್ಚರಿಯಾಗಿದೆ. ಆಶ್ರಮದಲ್ಲಿ 2 ವರ್ಷ ತಂಗಿದ್ದ ಅವಳನ್ನು ಹೊರಗೆ ತರಲು ನಾನು ಹೋಗಿದ್ದೆ. ಈಗ ಅವಳು ಬದಲಾಗಿದ್ದಾಳೆ. ಆದರೆ ನಾನು ಅವಳೊಂದಿಗೆ ಇಲ್ಲ. ಎಲ್ಲೋ ಮನೆಯ ಕೆಲಸ ಮಾಡುತ್ತಾ ಅಲ್ಲೇ ಇದ್ದುಕೊಂಡು ದುಡಿಯುತ್ತಿದ್ದಾಳೆ. ಇಂದು ತನಗಾಗಿ ಒಂದು ಪುಟ್ಟ ಮನೆ ಕಟ್ಟಲು ಸಿದ್ಧಳಾಗಿ ನಿಂತಿದ್ದಾಳೆ. ಈ ಬಗ್ಗೆ ನನಗೆ ಅತ್ಯಂತ ಖುಷಿ ಇದೆ. ಈ ಬದಲಾವಣೆಯನ್ನು ನಾನು ಅಂದು ನಿರೀಕ್ಷಿಸಿದ್ದೆ. ಆದರೆ ತುಂಬಾ ತಡವಾಯಿತು.

ಮದ್ಯವ್ಯಸನ ನನ್ನ 6 ವರ್ಷಗಳನ್ನು ಕೊಂದುಹಾಕಿತು. ಎದ್ದು ನಡೆದಿದ್ದಕ್ಕೆ ಇಂದು ಫಲ ಸಿಕ್ಕಿತು. ಎದ್ದು ನಡೆಯದವರ ಪಾಡನ್ನು ನೀವೇ ಊಹಿಸಿಕೊಳ್ಳಿ. ತಂದೆ-ತಾಯಿ ಪ್ರೀತಿ ಮಕ್ಕಳಿಗೆ ಅವಶ್ಯ. ಆ ಪ್ರೀತಿಯನ್ನು ಕಸಿದುಕೊಳ್ಳುವ ಎಲ್ಲವನ್ನೂ ಕೊಂದುಬಿಡಿ. ಇಲ್ಲವಾದರೆ ಕಷ್ಟವನ್ನು ಹೆಗಲಿಗೇರಿಸಿ, ಅತ್ತು, ಇನ್ನಾರದ್ದೋ ಅಡಿಯಾಳಾಗುವ ಸಂದರ್ಭ ಮಕ್ಕಳಿಗೆ ಬರದಿರಲಿ.

ಈ ನೈಜ ಕಥೆಯು ವ್ಯಸನಿಗಳಿಗೆ ಮಾತ್ರವಲ್ಲ, ಅಂತಹವರಿಂದ ತಮ್ಮ ಕನಸುಗಳನ್ನು ಮಾರಿ ಕುಳಿತ ಮಕ್ಕಳ ಕಣ್ಣೀರಿನ ನೋವು ಕೂಡ ಹೌದು. ಸಮಾಜ ವ್ಯಸನಿಗಳ ಬಗ್ಗೆ ಯೋಚಿಸುತ್ತೆ, ಕುಡಿತದ ಚಟವನ್ನು ಬಿಡಿಸುವಲ್ಲಿ ತಲ್ಲೀನವಾಗಿದೆ. ಆದ್ರೆ ಒಂದು ಬಾರಿ ವ್ಯಸನಿಗಳಿಂದ ಮಕ್ಕಳ ಮೇಲಾದ ಪರಿಣಾಮ, ನೋವುಗಳ ಬಗ್ಗೆಯೂ ಯೋಚಿಸುವುದಿಲ್ಲ.

ನಾನೇನೋ ಬದುಕಿದೆ..

ಅವಕಾಶವೇ ದೊರಕದ ಅದೆಷ್ಟೋ ಜೀವಗಳ ಪಾಡೇನು? ಆ ಮಕ್ಕಳ ಭಾವನೆಯ ಕಥೆಯೇನು? ಶಿಕ್ಷಣದ ಪರಿಸ್ಥಿತಿಯೇನು? ಹೊಟ್ಟೆ ತುಂಬಿದೆಯೋ? ಮನೆ ಇದೆಯೋ? ಖುಷಿ ಇದೆಯೋ? ಇವುಗಳ ಬಗ್ಗೆ ಒಂದು ಬಾರಿ ಯೋಚಿಸಿ. ವ್ಯಸನಿಗಳೇನೋ ಕುಡಿತದ ಚಟವನ್ನು ಒಂದೊಮ್ಮೆ ಬಿಡಬಹುದೇನೋ.. ಆದ್ರೆ ಏನು ತಪ್ಪು ಮಾಡದ ಕಂದಮ್ಮಗಳಿಗೆ ಸಿಗಬೇಕಾದ ಸಮಯ ಮತ್ತೆ ಮರಳಿ ಸಿಗುವುದಿಲ್ಲ..

ಸಮಾಜ ಅದನ್ನು ಗುರುತಿಸಿ ನನ್ನಂತ ನೋವಿಗೆ ಮದ್ದಾಗ ಬೇಕು. ಆಗಲೇ ನಾನು ಬದಲಾದಂತೆ ಅವರು ಬದಲಾಗಲು ಸಾಧ್ಯ.