90ರ ದಶಕದಲ್ಲಿ ಹುಟ್ಟಿದ ಮಿಲೇನಿಯಲ್‌ಗಳ ಭಯ, ಭರವಸೆ, ಹೊಂದಾಣಿಕೆ ಹಾದಿ..
90ರ ದಶಕದಲ್ಲಿ ಹುಟ್ಟಿದ ಮಿಲೇನಿಯಲ್‌ಗಳು ಸಂಕ್ರಮಣ ಕಾಲದಲ್ಲಿದ್ದು, ಭಯ ಮತ್ತು ಭರವಸೆಗಳ ನಡುವೆ ಸಮತೋಲನ ಕಾಯ್ದುಕೊಳ್ಳುವ ಹೋರಾಟದಲ್ಲಿದ್ದಾರೆ. ಕೆಲಸ, ಸಂಬಂಧಗಳು, ಒಂಟಿತನ, ಸಾಮಾಜಿಕ ಒತ್ತಡಗಳಂತಹ ಭಯಗಳನ್ನು ಎದುರಿಸುತ್ತಿರುವ ಇವರು, ಆಂತರಿಕ ಬದಲಾವಣೆ ಮತ್ತು ಹೊಂದಾಣಿಕೆಯ ಮೂಲಕ ಭರವಸೆಯ ಹಾದಿಯನ್ನು ಕಂಡುಕೊಳ್ಳಬೇಕಿದೆ.
 )

- ಸಚಿನ್ ತೀರ್ಥಹಳ್ಳಿ
ಪ್ರತಿಯೊಂದು ತಲೆಮಾರಿಗೂ ಹಳತಾದ ಪೊರೆಯೊಂದನ್ನು ಕಳಚಿಕೊಂಡು, ಹೋಗುತ್ತಿರುವ ದಾರಿ ಸರಿಯಾಗಿದೆಯಾ ಎಂದು ನೋಡಿಕೊಂಡು, ಹೊಸದಿಕ್ಕಿನೆಡೆಗೆ ಹೊರಳಿಕೊಳ್ಳುವ ಸಂಕ್ರಮಣ ಕಾಲವೊಂದು ಬರುತ್ತದೆ. ಅದೊಂಥರ ಕಂಬಳಿಹುಳ ಚಿಟ್ಟೆಯಾಗುವಂತ ಕಾಲ. ಇಂತಹದೇ ಒಂದು ಸಂಕ್ರಮಣ ಕಾಲದಲ್ಲಿ ನಾವು ಮಿಲೇನಿಯಲ್‌ಗಳು ಇದ್ದೇವೆ. ಇದರಲ್ಲೂ ಜೆನ್ ಜೀಗಳಿಗೆ ಒತ್ತಿಕೊಂಡಂತೆ ಇರುವ ಆದರೂ ಅವರಿಂದ ಕೊಂಚ ದೂರವಿರುವ ಲೇಟ್ 80ರ ದಶಕ ಮತ್ತು ಅರ್ಲಿ 90ರ ದಶಕದಲ್ಲಿ ಹುಟ್ಟಿದ ಹುಡುಗ ಹುಡುಗಿಯರು, 28 ರಿಂದ ಮೂವತ್ತೈದು ವರ್ಷದ ಒಳಗಿರುವ ಒಂದಿಡೀ ತಲೆಮಾರು ಇದರೊಳಗೆ ಬರುತ್ತದೆ. ಅತ್ತ ಜಿನ್ ಜಿಯೂ ಅಲ್ಲದ , ಇತ್ತ ಬೂಮರ್ಗಳು ಅಲ್ಲದ ತ್ರಿಶಂಕು ಸ್ವರ್ಗದಲ್ಲಿ ನಾವಿದ್ದೇವೆ. ನಾವು ದಿನಕ್ಕೆ ನೂರು ಮೆಸೇಜು ಫ್ರೀ ಇದ್ದ ಕಾಲದಲ್ಲಿ ಬಟನ್ ಫೋನಿನಲ್ಲಿ ಪ್ರೀತಿಸಲು ಕಲಿತು, ಈಗ ಐಫೋನಿನಲ್ಲಿ ಬ್ಲಾಕ್ ಮಾಡಿ ಬ್ರೇಕಪ್ ಹೇಳುವ ಜಗತ್ತಿಗೂ ಸಾಕ್ಷಿಯಾದ ಏಕೈಕ ಜನರೇಶನ್.
ನಮ್ಮನ್ನು ಈಗ ಯಾರೂ ಸಣ್ಣ ಹುಡುಗರಂತೆ ಟ್ರೀಟ್ ಮಾಡಲ್ಲ. ಒಂದು ಕಾಲದಲ್ಲಿ ಹಗಲು ರಾತ್ರಿ ಜೊತೆಗಿರುತ್ತಿದ್ದ ಗೆಳೆಯರು ಈಗ ಫೇಸ್ಬುಕ್ ಪೋಸ್ಟುಗಳಲ್ಲಿ, ಇನ್‌ಸ್ಟಾ ಸ್ಟೋರಿಗಳಲ್ಲಿ , ಮದುವೆ ಮನೆಗಳಲ್ಲಿ ಮತ್ತು ಸಾವಿನ ಮನೆಗಳಲ್ಲಿ ಮಾತ್ರ ಸಿಗುತ್ತಾರೆ. ಭಾನುವಾರ ಬೆಳಗೆದ್ದು ಗ್ರೌಂಡಿಗೆ ಹೋಗಿ ವಿಕೇಟ್ ನೆಡುತ್ತಿದ್ದ ದಿನಗಳು ಹೋದ ಜನ್ಮದ ನೆನಪಿನಂತೆ ಭಾಸವಾಗುತ್ತದೆ, ಮೊದಲಿನಷ್ಟು ರಭಸವಾಗಿ ಬೌಲಿಂಗ್ ಮಾಡಲು ಹೋದರೆ ಮಾರನೆಯ ದಿನ ಕೈ ನೋಯಲು ಶುರುವಾಗುತ್ತದೆ. ಆನ್‌ಲೈನಲ್ಲಿ ಬಸ್ಸು, ಟ್ರೇನು ಬುಕ್ಕು ಮಾಡುವಾಗ ವಯಸ್ಸಿನ ಕಾಲಂ ಎದುರಾದರೆ ಏನೋ ಅವ್ಯಕ್ತ ಭಯ, ಮದುವೆಯಾದವರಿಗೆ ಜನ ಗುಡ್ ನ್ಯೂಸ್ ಯಾವಾಗ ಎಂದು ಕೇಳಿ ಹಿಂಸಿಸಿದರೆ, ಆಗದವರಿಗೆ ಹುಡುಗಿಯರ ಫೋಟೋ ವಾಟ್ಸ್‌ಆ್ಯಪಿಗೆ ಕಳಿಸಿ ಕಾಟ ಕೊಡುತ್ತಾರೆ. ಸೋಷಿಯಲ್ ಮೀಡಿಯಾ ತೆಗೆದರೆ ಹಳೆ ಗೆಳತಿಯರ ಬಾಣಂತನದ ಫೋಟೋಗಳು ಇಲ್ಲವೆ ಮಕ್ಕಳ ಬರ್ತಡೇ ಸೆಲೆಬ್ರೇಷನ್ನಿನ ರೀಲುಗಳು. ಅದರಲ್ಲಿ ಒಬ್ಬಳು ಅಪರೂಪಕ್ಕೆ ಮೆಸೇಜು ಮಾಡಿದರೂ ಉತ್ತರಿಸುವ ಉತ್ಸಾಹವಿಲ್ಲ.
ಆಲ್ಕೋಹಾಲಿನ ಜೊತೆ ಮೊದಲಿನಷ್ಟು ಗೆಳೆತನ ಗಾಢವಾಗಿಲ್ಲ. ಅಳತೆ ಮೀರಿ ಕುಡಿದರೆ ಮಾರನೆಯ ದಿನ ಬೆಳಗಿದ್ದು ನಿಂಬೆ ಹಣ್ಣಿನ ಜ್ಯೂಸ್ ಕುಡಿಯುತ್ತ, ಸಿಕ್ ಲೀವ್ ಹಾಕಲು ಕಾರಣ ಯೋಚಿಸುತ್ತ ಮ್ಯಾನೇಜರ್‌ಗೆ ಇಮೇಲ್ ಬರೆಯುತ್ತ ಕೂರಬೇಕಾಗುತ್ತದೆ. ಆಫೀಸಿನ ಲ್ಯಾಪಟಾಪನ್ನು ದಿಟ್ಟಿಸುತ್ತ ಬೇರೆ ಇನ್ನೇನಾದರೂ ಕೆಲಸ ಮಾಡಿದ್ದರೆ ಸಂತೋಷವಾಗಿ ಬದುಕಬಹುದಿತ್ತೆ ಎಂದು ಯೋಚಿಸುವಷ್ಟರಲ್ಲಿ ಇಎಂಐ ಬಾಕಿಯಿದೆ ಎಂದು ಬ್ಯಾಂಕಿನವರ ಮೆಸೇಜು ಬಂದು ಬೀಳುತ್ತದೆ. ಫೇಸ್‌ಬುಕ್ ಪ್ರತಿ ಬೆಳಿಗ್ಗೆ ಮೆಮೊರಿ ಎಂದು ಹಳೆ ಫೋಟೋಗಳನ್ನು ತೋರಿಸುವಾಗ ಮತ್ತೆ ಆ ಕಾಲಕ್ಕೆ ಹೋಗುವ ಆಸೆಯಾಗುತ್ತದೆ.
ಇದನ್ನೂ ಓದಿ: ಕನ್ನಡ ಲೋಕಕ್ಕೆ 3 ಪುಸ್ತಕ, ಬಿಡುಗಡೆ ಮಾಡಿದ್ದು ರಾಕಿಂಗ್ ಸ್ಟಾರ್
ಮತ್ತೆ ಪ್ರೀತಿಯಾಗುತ್ತದೆ ಎನ್ನುವ ನಂಬಿಕೆಯಿಲ್ಲ, ಚೆನ್ನಾಗಿರುವ ಹುಡುಗಿಯೊಬ್ಬಳು ಬಂದು ಮಾತಾಡಿಸಿದರೂ ಹಳೆ ಗಾಯಗಳ ನೆನದು ಹೃದಯ ಅಂಜುತ್ತದೆ. ಈಗ ಭಗ್ನಪ್ರೇಮವೂ ಮೊದಲಿನಷ್ಟು ತೀವ್ರವಾಗಿ ಕಾಡಲ್ಲ. ಹೇರ್ ಕಟ್ ಮಾಡಿಸಲು ಹೋದರೆ, ಏನ್ಸಾರ್ ಕೂದಲು ತೆಳುವಾಗುತ್ತಿದೆಯಲ್ಲ ಎಂದು ಹೇಳಿ ಶಾಪಿನವನು ಹೆದರಿಸುತ್ತಾನೆ, ಜ್ವರ ಬಂದಿದೆ ಎಂದು ಆಸ್ಪತ್ರೆಗೆ ಹೋದರೆ ಸುಖಾಸುಮ್ಮನೆ ಬೀಪಿ ಚೆಕ್ ಮಾಡಿ ಕೊಂಚ ಏರಿದ ಬೀಪಿ ತೋರಿಸಿ ನರ್ಸುಗಳು ಕಂಗಾಲು ಮಾಡುತ್ತಾರೆ. ಮೊದಲೆಲ್ಲ ಆಸ್ಪತ್ರೆಯ ಆವರಣಗಳಲ್ಲಿನ ವಾಸನೆಗೆ ಇರಿಟೇಟ್ ಆಗುತ್ತಿದ್ದವರು, ಈಗ ವಯಸ್ಸಾಗುತ್ತಿರುವ ಅಪ್ಪ ಅಮ್ಮನ ಜೊತೆ ಹೋಗಿ ಹೋಗಿ ಆ ವಾಸನೆ ಅಲ್ಲಿನ ಗದ್ದಲಕ್ಕೂ ಹೊಂದಿಕೊಳ್ಳಲು ಶುರುಮಾಡಿದ್ದೇವೆ.
ಹೀಗೆ ಮಾಡಿದ ತಪ್ಪುಗಳು, ಅರ್ಧಕ್ಕೆ ಬಿಟ್ಟುಕೊಟ್ಟ ಕನಸು ಕನವರಿಕೆಗಳು, ಮಾಡಲು ಬಾಕಿ ಉಳಿದಿರುವ ಕೆಲಸಗಳು ನಮ್ಮನ್ನು ನಿಲ್ಲಲು ಕೂರಲು ಬಿಡದೆ ಕಾಡುತ್ತಿರುವ ಹೊತ್ತಲ್ಲಿ, ಒಂದು ಕೈಯನ್ನು ಭಯ ಮತ್ತೊಂದು ಕೈಯನ್ನು ಭರವೆಸಗಳು ಹಿಡಿದು ಮುಂದೆ ನಡೆಸುತ್ತಿವೆ. ಯಾವುದೋ ಮಿಂಚೊಂದು ಸೋಕಿ ಮನಸ್ಸು ಮತ್ತೆ ಹಗುರಾಗುವ ಕ್ಷಣಕ್ಕೆ ನಾವು ಕಾಯುತ್ತಿದ್ದೇವೆ.
28 ರಿಂದ 34 ಎನ್ನುವುದು ಚೆಲ್ಲು ಹುಡುಗಿಯೊಬ್ಬಳು ಜವಾಬ್ದಾರಿಯುತ ಹೆಂಗಸಾಗುವ, ಪುಂಡ ಹುಡುಗನೊಬ್ಬ ಜವಬ್ದಾರಿಯುತ ಗಂಡಸಾಗುವ ಕಾಲ. ಹಿಂದೆ ಹೇಗಿತ್ತೋ ಗೊತ್ತಿಲ್ಲ ಆದರೆ ಇವತ್ತಿಗೆ ವಿದ್ಯೆ , ಉದ್ಯೋಗ ಎಲ್ಲದರಲ್ಲೂ ಗಂಡು ಹೆಣ್ಣು ಸರಿಸಮನಾಗಿದ್ದಾರೆ. ಅವರು ಸಂಬಂಧಗಳನ್ನು ನೋಡುವ ರೀತಿ ಬದಲಾಗಿದೆ. ಮದುವೆ ಅನಿವಾರ್ಯವೇ ಎಂಬ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಸಂತೋಷ ಹಣ ಮಾಡುವುದರಲ್ಲಿ ಇದೆಯೇ ಎಂಬ ಅನುಮಾನ ಅವರನ್ನು ಕಾಡುತ್ತಿದೆ. ಮಹಾನಗರದ ಒಂಟಿತನಕ್ಕೆ ನಿಧಾನಕ್ಕೆ ಹೊಂದಿಕೊಳ್ಳುತ್ತಿದ್ದಾರೆ.
ಇವತ್ತು ಈ ತಲೆಮಾರನ್ನು ಕಾಡುತ್ತಿರುವುದು ಭಯ ಮತ್ತು ತಮ್ಮ ಬಗ್ಗೆ ತಮಗೇ ಇರುವ ಅನುಮಾನಗಳು. ಕೆಲಸ ಹೋಗುವ ಭಯ, ಸಂಬಂಧ ಮುರಿದು ಹೋಗುವ ಭಯ, ಒಂಟಿತನದ ಭಯ, ಸಮಾಜದ ಕಣ್ಣಲ್ಲಿ ಸಣ್ಣವರಾಗುವ ಭಯ, ಕೆಟ್ಟ ನಿರ್ಧಾರಗಳ ಭಯ, ಪ್ರೀತಿಪಾತ್ರರನ್ನು ನೋಯಿಸುವ ಭಯ, ಒಟ್ಟಿನಲ್ಲಿ ನಾಳೆಯೆನ್ನುವುದು ದೊಡ್ಡ ಭಯದ ಮೊತ್ತದಂತೆ ಕಾಣುತ್ತಿದೆ.
ಒಂದು ದೊಡ್ಡ ಬದಲಾವಣೆಯ ಅಗ್ನಿಕುಂಡ ಹಾಯುತ್ತಿರುವ ಈ ತಲೆಮಾರಿನ ಭಾಗವಾಗಿ ಹೇಳುವುದಾದರೆ, ಈ ಭಯಗಳನ್ನೆಲ್ಲ ಮೀರುವುದಕ್ಕಿರುವ ಏಕೈಕ ದಾರಿ ಒಂದು ಸಣ್ಣ ಬ್ರೇಕ್ ತೆಗೆದುಕೊಂಡು ನಮ್ಮೊಳಗಿನ ಸಾಫ್ಟ್‌ವೇರ್ ಅಪ್‌ಡೇಟ್ ಮಾಡಿಕೊಂಡು ಹೊಸ ವರ್ಷನೊಂದಿಗೆ ಅಖಾಡಕ್ಕೆ ಇಳಿಯುವುದು. ನಮ್ಮ ಫೋನಿಗೇ ತಿಂಗಳಿಗೊಂದು ಅಪ್‌ಡೇಟ್ ಬರುವಾಗ, ಕಳೆದ ಎಂಟತ್ತು ವರ್ಷಗಳಿಂದ ಒಂದೇ ವರ್ಷನ್ ನಲ್ಲಿರುವ ನಮಗೊಂದು ಅಪ್‌ಡೇಟ್ ಬೇಡವೇ?
ಇದನ್ನೂ ಓದಿ: ಆಚೆ ನಿಂತು ಮನುಷ್ಯನ ಮನಸ ನೋಡಿದಾಗ ತಿಳಿಯೋ ಕಳ್ಳಾಟಗಳಿವು!
ಈ ಪ್ರಯಾಣದಲ್ಲಿ ಮನಸ್ಸು ಮತ್ತು ದೇಹವೆಂಬ ನಮ್ಮೆರೆಡು ಆಯುಧಗಳನ್ನು ಸದಾ ಶಾರ್ಪ್ ಆಗಿರುವಂತೆ ನೋಡಿಕೊಳ್ಳುವುದು ಇಡಬೇಕಾದ ಮೊದಲ ಹೆಜ್ಜೆ. ಇದರಲ್ಲಿ ನಮ್ಮ ಡಯಟ್ ಬದಲಿಸಿಕೊಳ್ಳುವುದು, ನಮ್ಮ ದೇಹಕ್ಕೆ ಒಗ್ಗದ ಆಹಾರವನ್ನು ಗುರುತಿಸುವುದು, ಆಲ್ಕೋಹಾಲ್ ಜೊತೆ ಒಂದು ಜವ್ದಾರಿಯುತ ಸಂಬಂಧ ಬೆಳೆಸಿಕೊಳ್ಳುವುದು, ಬೆಳಗೆದ್ದು ಜಿಮ್ಮಿಗೆ ಹೋಗಲು ಸೋಮಾರಿತನ ಮಾಡದೇ ಇರುವುದೆಲ್ಲ ಬರುತ್ತದೆ.
ಎರಡನೆಯದು ಸಮಾಜವನ್ನು ದಿಕ್ಕರಿಸುವ, ಅವರ ಭಂಡತನವನ್ನು ಪ್ರಶ್ನಿಸುವ ಮತ್ತು ಅವಶ್ಯಕತೆ ಬಂದರೆ ಅವರನ್ನು ಬಹಿಷ್ಕರಿಸುವ ಧಾರ್ಷ್ಟ್ಯ ಬೆಳೆಸಿಕೊಳ್ಳುವುದು. ನಾವು ಯಾವಾಗ ಮದುವೆಯಾಗಬೇಕು, ಎಷ್ಟು ಮಕ್ಕಳು ಮಾಡಿಕೊಳ್ಳಬೇಕು, ಎಷ್ಟು ಸಂಪಾದನೆ ಮಾಡಬೇಕು ಎಂದು ತೀರ್ಮಾನ ಮಾಡುವ ಎನ್ನುವ ಸದರವನ್ನು ಯಾರಿಗೂ ಕೊಡಬಾರದು.
28 ವರ್ಷ ಇವರು ಹೇಳಿದ್ದೆಲ್ಲ ಕೇಳಿದ್ದೇವೆ, ಇಷ್ಟು ವರ್ಷದ ಬದುಕಿನಲ್ಲಿ ನಮಗೂ ಕೆಲ ಸತ್ಯದ ದರ್ಶನವಾಗಿರುತ್ತದೆ. ಇದು ನಮಗೆ ಸತ್ಯ ಅನಿಸಿದ್ದನ್ನು ಗಟ್ಟಿ ದನಿಯಲ್ಲಿ ಹೇಳುವ ಮತ್ತು ಆ ದಾರಿಯಲ್ಲಿ ನಡೆಯುವ ಕಾಲ. ಅವರಿವರು ಏನಂದುಕೊಳ್ಳುತ್ತಾರೆ ಎಂದು ಮುಲಾಜಲ್ಲಿ ಬದುಕಿ ಅರ್ಥವಿಲ್ಲ ಎನ್ನುವುದು ಇಷ್ಟೊತ್ತಿಗೆ ನಮಗೆ ಗೊತ್ತಾಗಿರಬೇಕು. ನಿಜ ಹೇಳಬೇಕೆಂದರೆ ಎಲ್ಲರೂ ಅವರ ಬಗ್ಗೆ ಯೋಚಿಸುವುದರಲ್ಲಿ ಮುಳುಗಿ ಹೋಗಿರುತ್ತಾರೆ ವಿನಹ ಯಾರೂ ಇನ್ನೊಬ್ಬರ ಬಗ್ಗೆ ಯೋಚಿಸುತ್ತಿರುವುದಿಲ್ಲ.
ಇನ್ನೂ ಸೋಷಿಯಲ್ ಮೀಡಿಯಾದಿಂದ ಒಂದು ತಿಂಗಳು ದೂರವಿದ್ದರೆ ನಮಗೆ ಮನಃಶಾಂತಿ ಎಂದರೇನೆಂದು ಗೊತ್ತಾಗುತ್ತದೆ. ಒಂದು ಒಳ್ಳೆಯ ಪೋಸ್ಟ್ ಓದಿಸಲು ಐವತ್ತು ಜಂಕ್ ತುಂಬಿದ ಕಂಟೆಂಟನ್ನು ನಮಗೆ ಗೊತ್ತಿಲ್ಲದಂತೆ ನಮ್ಮೊಳಗೆ ತುಂಬಿಸುವ ವಿಷಕಾರಿ ಸರ್ಪ ಸಾಮಾಜಿಕ ಮಾಧ್ಯಮಗಳು.
ಜಂಕ್ ಫುಡ್ ಹೇಗೆ ದೇಹದ ಅಂದವನ್ನು ಬರ್ಬಾದು ಮಾಡುತ್ತದೋ ಸೋಷಿಯಲ್ ಮೀಡಿಯಾಗಳು ನಮ್ಮ ಮನಸ್ಸನ್ನು ಕೆಡಿಸುತ್ತದೆ. ಸಾಧ್ಯವಾದರೆ ಸಂಪೂರ್ಣವಾಗಿ ಅದರಿಂದ ದೂರವಿರುವುದು ಇಲ್ಲದಿದ್ದರೆ ಅದರ ಬಳಕೆಯನ್ನು ಮಿತಿಯಲ್ಲಿಟ್ಟುಕೊಂಡರೆ ನಮ್ಮ ಅರ್ಧಕರ್ಧ ಭಯಗಳು ಮಾಯಾವಾಗುತ್ತವೆ.
ಮೇಲಿನ ವಿಷಯಗಳನ್ನು ಸರಿಯಾಗಿ ಪಾಲಿಸಿದರೆ ಕೊನೆಯದು ಸುಲಭವಾಗತ್ತದೆ ಅನಿಸುತ್ತದೆ. ಅದು ನಾವು ಇಷ್ಟುವರ್ಷ ಮಾಡಿಕೊಂಡು ಬಂದ ಕೆಲಸವನ್ನು ಹೊಸ ರೀತಿಯಲ್ಲಿ ಮಾಡುವುದಕ್ಕೆ, ಹೊಸ ವಿಷಯಗಳನ್ನು ಕಲಿಯುತ್ತಾ ಹೊಸ ಅವಕಾಶಗಳನ್ನು ಅರಸುವುದಕ್ಕೆ ಧೈರ್ಯದಿಂದ ಮುನ್ನುಗುವುದು. ನಾವು ಸಂತೋಷ ಕೊಡುವ ಕೆಲಸವನ್ನು ಮಾಡಬೇಕು ಎನ್ನುವುದೇನೋ ನಿಜ. ಆದರೆ ನಮ್ಮ ಮನಸ್ಸು, ದೇಹ, ಆರೋಗ್ಯ, ಸೋಷಿಯಲ್ ಸರ್ಕಲ್‌ಗಳನ್ನು ಚೆನ್ನಾಗಿಟ್ಟುಕೊಂಡರೆ ನಾವು ಯಾವ ಕೆಲಸ ಮಾಡಿದರೂ ಅದರಲ್ಲಿ ಸಂತೋಷ ಕಾಣುತ್ತೇವೆ ಎನ್ನುವುದು ನಾನಂತೂ ಈ ಬದಲಾವಣೆಯ ಹಾದಿಯಲ್ಲಿ ಕಂಡುಕೊಂಡ ಸತ್ಯ.
ಅತ್ಯಂತ ವೇಗವಾಗಿ ಬದಲಾಗುತ್ತಿರುವ ಜಗತ್ತಲ್ಲಿ ನಮ್ಮ ಮುಂದಿರುವವರು ನಾವು ಅವರ ದಾರಿಯಲ್ಲಿ ನಡೆಯುತ್ತೇವೋ ಇಲ್ಲವೋ ಎಂದು ಭಯ ಹುಟ್ಟಿಸುವ ಅನುಮಾನದಲ್ಲಿ ನೋಡುತ್ತಿದ್ದಾರೆ, ನಮ್ಮ ಹಿಂದಿರುವ ಜೆನ್ ಜಿಗಳು ನಮ್ಮನ್ನು ಹಿಂದಿಕ್ಕುವ ಸ್ಪೀಡಲ್ಲಿ ಇವರು ಯಾಕೆ ದಾರಿ ಬಿಡುತ್ತಿಲ್ಲ ಎಂದು ಅಸಹನೆಯಿಂದ ನಮ್ಮತ್ತ ಬರುತ್ತಿರುವಂತೆ ಕಾಣುತ್ತಿದೆ. ಇಷ್ಟೆಲ್ಲದರ ಮಧ್ಯೆ ಸಮಚಿತ್ತ ಕಾಪಾಡಿಕೊಂಡು, ಸಾಫ್ಟ್‌ವೇರ್ ಅಪ್‌ಡೇಟ್ ಮಾಡಿಕೊಳ್ಳುತ್ತಾ ಭಯಗಳನ್ನು ಮೀರುತ್ತಾ ನಾಳೆಯ ಬಗ್ಗೆ ಭರವಸೆಯಿಟ್ಟು, ನಮ್ಮ ದಾರಿಯಲ್ಲಿ ಮುಂದೆ ನಡೆಯುವುದೇ ನಮಗೆ ಮೀಲೆನಿಯಲ್‌ಗಳಿರುವ ದಾರಿ.
ಇದನ್ನೂ ಓದಿ: ಹೋರಾಟದ ಕಥಾಪ್ರಸಂಗ; 'ಅಂಗುಲಿಮಾಲಾ' ಕೃತಿಯ ಎರಡು ಅಧ್ಯಾಯ
ಈ ಪ್ರಯಾಣದಲ್ಲಿ ಕೆಲವೊಮ್ಮೆ ಧೈರ್ಯಗೆಡಬಹುದು, ಒಂಟಿಯೆನಿಸಬಹುದು, ದಾರಿ ಕಾಣದೆ ಹೋಗಬಹುದು. ಆದರೆ ಕತ್ತಲೇ ತುಂಬಿರುವ ಟನ್ನಲಿನ ಕೊನೆಯಲ್ಲಿ ಬೆಳಕೊಂದು ನಮಗಾಗಿ ಖಂಡಿತಾ ಕಾಯುತ್ತಿರುತ್ತದೆ. ಜಗತ್ತಿನ ಶ್ರೇಷ್ಟ ತತ್ವಜ್ಞಾನಿ ಕಾರ್ಲ್ ಜಂಗ್ ಹೇಳುವಂತೆ, ಜಗತ್ತು ನಮ್ಮನ್ನು ಎಷ್ಟೇ ಪ್ರತ್ಯೇಕಿಸಿದರೂ ಒಂಟಿಯಾಗಿಸಿದರೂ ನಮ್ಮ ಕೆಲಸವನ್ನು ನಾವು ಸತ್ಯ ಮತ್ತು ಪ್ರಾಮಾಣಿಕತೆಯಿಂದ ಮಾಡಿದರೆ, ನಮಗೆ ಪರಿಚಯವೇ ಇಲ್ಲದ ಜನರು ನಮ್ಮ ಪ್ರಯಾಣದಲ್ಲಿ ಜತೆಯಾಗುತ್ತಾರಂತೆ.. ಯೂನಿವರ್ಸಿನ ಆ ಕಾರುಣ್ಯದ ಗುಣದ ಮೇಲೆ ನಂಬಿಕೆಯಿರಲಿ. ಚಿಯರ್ಸ್!